Wednesday, 22 March 2023

ಜೋಗಿ ನಾಥ ಪಂಥ ಪರಂಪರೆ

                   ಜೋಗಿ ನಾಥ ಪಂಥ - ಪರಂಪರೆ

" ನಾವು ಎಲ್ಲವನ್ನು ಅರಿಯುತ್ತೇವೆ.ಆದರೆ ನಮ್ಮ ಮೂಲವನ್ನು ನಾವು ಮರೆಯುತ್ತೇವೆ.ಆದ ಕಾರಣ ನಾಥ ಪಂಥದ ಬಗೆಗಿನ ಅರಿವು ಇನ್ನೂ ನಮಗಾಗಿಲ್ಲ." 

 ಪರಮಯೋಗಿ ಮಹಾರಾಜ್ ಸುಂದರನಾಥರು.ಕದ್ರಿ ಜೋಗಿ ಮಠ

         ಜಗತ್ತಿನ ಧಾರ್ಮಿಕ ನೆಲೆಗಟ್ಟಿನ ಆದ್ಯಾತ್ಮಿಕ ಯೋಗ ಪರಂಪರೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದ ನಾಥಪಂಥ ದಮನಿತ ವರ್ಗಗಳಿಗೆ ಆಪ್ಯಾಯಮಾನವಾದ ಒಂದು ಶ್ರೇಷ್ಠ ಪಂಥವಾಗಿದೆ. ಶೈವ, ವೈಷ್ಣವ, ಶಾಕ್ತೇಯ ಹೀಗೆ ಬಹಳಷ್ಟು ಧರ್ಮ ಪಂಥಗಳಿದ್ದರೂ ಅವೈದಿಕ ತಂತ್ರ ಸಿದ್ಧಿಯ ನಾಥಪಂಥ ಭಾರತದ, ಆ ಮೂಲಕ ಜಗತ್ತಿನ ಸಾಂಸ್ಕೃತಿಕ, ಧಾರ್ಮಿಕ ಪರಂಪರೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಸರ್ವ ಜಾತಿ, ಮತ, ಧರ್ಮಗಳನ್ನು ಒಳಗೊಂಡ ನಾಥಪಂಥ ಅಜ್ಞಾನ ಅಂಧಕಾರದಲ್ಲಿ ಮುಳುಗಿದ ಸಮಾಜವನ್ನು ಬೌದ್ಧಿಕ,ತಾತ್ವಿಕ ನೆಲೆಗಟ್ಟಿನಿಂದ ಮೇಲಕ್ಕೆತ್ತಿದ ಶ್ರೇಷ್ಠ ಪರಂಪರೆಯ ಪಂಥವೆಂದರೆ ತಪ್ಪಾಗಲಾರದು. ಅದೆಷ್ಟೋ ಕೆಳಸ್ಥರದ ಜಾತಿ-ಜನಾಂಗಗಳು ನಾಥ ಗುರುಗಳನ್ನು ತಮ್ಮ ಗುರುಗಳೆಂದು ಗೌರವಿಸಿದರು. ದೇವರ ಇರವಿನ ಗೋಜಿಗೆ ಹೋಗದೆ ಗುರುವಿನ ಅರಿವಿಗೆ ತಲೆಬಾಗಿದ ನಾಥಪಂಥ ಇಂದಿಗೂ ಸಮಾಜದಲ್ಲಿ ತನ್ನದೇ ಆದ ಛಾಪನ್ನು ಉಳಿಸಿಕೊಂಡಿದೆ. ಚಾತುರ್ವರ್ಣ ವ್ಯವಸ್ಥೆಯನ್ನು ಬಲವಾಗಿ ಖಂಡಿಸಿದೆ. ನಾಥಪಂಥ "ಜನ್ಮದಿಂದ ವರ್ಣವಾಗಲಿ ಜಾತಿಯಾಗಲಿ ಬರುವುದಿಲ್ಲ. ಯೋಗ್ಯತೆ, ಆಚಾರದಿಂದ ವ್ಯಕ್ತಿಯೊಬ್ಬ ಶಕ್ತಿಯಾಗಿ ಸಮಾಜದಲ್ಲಿ ಗುರುತಿಸಲ್ಪಡುತ್ತಾನೆ" ಎಂದು ನಂಬಿದ ಅವೈದಿಕ ಪಂಥವಾಗಿದೆ.ಜಾತಿರಹಿತ,ವರ್ಗರಹಿತ,ವರ್ಣರಹಿತ,ಶೋಷಣೆರಹಿತ,ಒತ್ತಾಯ ಪೂರ್ವಕವಾದ ದುಡಿಮೆ ಇಲ್ಲದಿರುವ,ಹೆಣ್ಣು ಮಕ್ಕಳಿಗೆ ಸಮಾನ ಸ್ಥಾನ ನೀಡಿದ ಪಂಥ ನಾಥ ಪಂಥ.ದತ್ತಪಂಥ,ನಾಥ ಪಂಥ,ಆರೂಢಪಂಥ,ಅನುಭಾವಿ ಪಂಥ,ಅಹಿರ್ಬೂತ್ಯ ಸಂಹಿತೆ,ಪಂಚರತ್ನ ಸಿದ್ಧಾಂತ ಇವೆಲ್ಲವೂ ಮೊದಲಿನಿಂದಲೂ ಜಾತಿ ಶ್ರೇಣೀಕರಣವನ್ನು,ಅಸಮಾನತೆಯನ್ನು ವಿರೋಧಿಸುತ್ತಾ ಬೆಳೆಯುತ್ತಾ ಬಂದವುಗಳು.ಬೌದ್ಧ ಧರ್ಮ ಮೂಲತಃ ಸಮಾನತೆಯ ಧರ್ಮ,ಜನತೆಯ ಧರ್ಮವಾಗಿತ್ತು.ನಾಥ ಪಂಥವೂ ಇದೇ ಪಥದಲ್ಲಿ ಸಾಗಿಕೊಂಡು ಬಂತು.

                 ಸುಂದರನಾಥ್ ಜಿ ಕದ್ರಿ ಜೋಗಿ ಮಠ

 ಭಾರತದ ಶ್ರೇಷ್ಠ ಯೋಗಪಂಥದ, ನಾಥಪಂಥದ ಆದಿನಾಥ ಅಂದರೆ ಶಿವ. ನಾಥಪಂಥದ ಗುರುಪರಂಪರೆಯ ಮೊದಲ ಕೊಂಡಿಯಾಗಿ ನಮಗೆ ಮತ್ಸ್ಯೇಂದ್ರನಾಥರು ಕಾಣಸಿಗುತ್ತಾರೆ. ಆದರೆ ನಾಥಪಂಥವನ್ನು ಅನಿಕೇತನ ಗೊಳಿಸಿದವರು ಅಂದರೆ ವಿಶ್ವವ್ಯಾಪಿಯಾಗಿ ಪ್ರಚುರಪಡಿಸಿದವರು ಮತ್ಸ್ಯೇಂದ್ರನಾಥರ ಪಟ್ಟ ಶಿಷ್ಯರಾದ ಶಿವಗೋರಕ್ಷನಾಥರು. ಮತ್ಸ್ಯೇಂದ್ರನಾಥರನ್ನು ಶಿವನ ಇನ್ನೊಂದು ಅವತಾರ ಎಂದು ಕರೆಯುತ್ತಾರೆ. ಶಾಬರೀ ವಿದ್ಯೆಯ ಜನಕರಾದ ಮತ್ಸ್ಯೇಂದ್ರನಾಥರು ಯಕ್ಷಿಣಿ ದಂಡ ಸಾಧಕರು, ಕಾಳಬೈರವ ದಂಡ ಸಾಧಕರು ಮತ್ತು ದಶಮಾ ವಿದ್ಯಾ ಸಾಧಕರು. ಅವರ ಕೈಯಲ್ಲಿ ಒಂದು ಮಂತ್ರದಂಡ ಇದ್ದು, ಅದನ್ನು 'ಯಕ್ಷಿಣಿ ದಂಡ' ಎಂದು ಕರೆಯುತ್ತಾರೆ. ಇಂತಹ ದಂಡಗಳು ಇಂದಿಗೂ ಕೆಲವೊಂದು ಮಠಗಳಲ್ಲಿ 'ದುನಿ'ಯ ಎದುರು ಗೋಚರಿಸುತ್ತದೆ. ಇದರ ತುದಿಯಲ್ಲಿ ಬಳೆಯಾಕಾರದ ಒಂದು ರಚನೆ ಇರುತ್ತದೆ. ಸ್ಪಟಿಕ ಲಿಂಗದ ಆರಾಧಕ ನಾಥಯೋಗಿಗಳು ನೇಪಾಳದ ಗಂಡಕೀ ನದಿಯಲ್ಲಿ ದೊರೆಯುವ ಸಾಲಿಗ್ರಾಮವನ್ನು ಆರಾಧಿಸುತ್ತಾರೆ. ಯಮ ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ - ಹೀಗೆ ಅಷ್ಟಾಂಗ ಯೋಗದ ಸಾಧಕ ಪಂಥ ನಾಥಪಂಥ. ನಾಥಪಂಥದಲ್ಲಿ ಅಷ್ಟ ಎನ್ನುವುದಕ್ಕೆ ಯೋಗ ಮಾರ್ಗದ ಸಿದ್ಧಿಯ ಕೊಂಡಿಯ ಜೊತೆ ಜೊತೆಗೆ ಅಷ್ಟ ಭೈರವರ ಪ್ರಧಾನ ಆರಾಧನೆಯೂ ಇದೆ. ಯೋಗ ಮಾರ್ಗದ ಸಾಧನೆಗೆ ಗುರುವನ್ನು ಅನುಸರಿಸಿ, ಅನುಕರಿಸಿ ಗುರುವಿನಲ್ಲಿ ಭಗವತ್ ಸಾನಿಧ್ಯವನ್ನು ಕಂಡ ನಾಥಪಂಥ ಗುರುಮುಖೇನ ಮಾಂತ್ರಿಕ, ತಾಂತ್ರಿಕ ಸಿದ್ಧಿಯನ್ನು ಪಡೆಯುವಲ್ಲಿ ಸಾಫಲ್ಯತೆಯನ್ನು ಕಂಡಿದೆ. ಯೋಗದ ಮೂಲಕ ಶಿವಶಕ್ತಿಯರ ಪಾರಮಾರ್ಥ ಐಕ್ಯವನ್ನು ಅನುಭವಿಸುವ ನಾಥ ಪಂಥೀಯರು ಒಂಭತ್ತು ಎಳೆಯ ಉಣ್ಣೆಯ ಜನಿವಾರ/ ದಾರವನ್ನು ಧರಿಸುತ್ತಾರೆ. ಭಸ್ಮಧಾರಣೆ, ಕರ್ಣಕುಂಡಲ, ಸಿಂಗ್ನಾಥ - ಇವುಗಳು ನಾಥ ಯೋಗಿಗಳನ್ನು ಬೇರೆ ಯೋಗ ಮಾರ್ಗದ ಸಾಧಕರಿಂದ ಬೇರೆಯಾಗಿಸುತ್ತದೆ. ಶಿವನ ಅಂಶವೇ ಕಾಳಬೈರವನಾಗಿ ನಾಥಪಂಥದ ಜೋಗಿಗಳಿಂದ ಆರಾಧಿಸಲ್ಪಡುತ್ತಾನೆ.

            ಮಂಜುನಾಥ ದೇವರು ವಿಟ್ಲ ಜೋಗಿ ಮಠ

         ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡನ್ನೊಳಗೊಂಡಂತೆ ತುಳುನಾಡಿನಲ್ಲಿರುವ ಜೋಗಿಗಳನ್ನು ಪುರುಷರು ಎಂದು ಕರೆಯುತ್ತಾರೆ. ನಾಥ, ಯೋಗಿ, ಜೋಗಿ, ಪುರುಷ ಶಬ್ದಗಳ ಅರ್ಥ ವ್ಯಾಪ್ತಿಯನ್ನು ಸಂಕ್ಷಿಪ್ತವಾಗಿ ನೋಡುವುದಾದರೆ, ನಾಥ ಎಂಬ ಎರಡು ಅಕ್ಷರಗಳಲ್ಲಿ ಎರಡು ಅರ್ಥ ಸಿಗುತ್ತದೆ. ನಾ ಎಂದರೆ ಅನಾದಿ; ಥ ಎಂದರೆ ಮೂರು ಲೋಕಗಳ ಸ್ಥಿತಿಗೆ ಕಾರಣನಾದ ಶಿವ ಎಂದರ್ಥ. ಯೋಗ ಮಾರ್ಗದ ಸಿದ್ಧಿ ಪುರುಷರನ್ನು ಯೋಗಿಗಳು ಎಂದರೆ ತನ್ನ ಬದುಕು ಸವೆಸುವುದಕ್ಕೋಸ್ಕರ ಜೋಗಿಗಳು ಭಿಕ್ಷೆಯ ಮೂಲಕ ತನಗೆ ಬೇಕಾದುದನ್ನು ಗಳಿಸಿಕೊಳ್ಳುತ್ತಾರೆ. ಜೋಗಿ ಮತ್ತು ಅವನ ಹೆಗಲಲ್ಲಿರುವ ಜೋಳಿಗೆಗೆ ಸಂಬಂಧವಿರುತ್ತದೆ. ಪುರುಷ ಎಂದರೆ ವ್ಯಕ್ತಿ. ವ್ಯಕ್ತಿ ಶಕ್ತಿಯಾದ ಪುರುಷನೆಂದರೆ ಶಿವ. ಇಲ್ಲಿ ಪಾರ್ವತಿ ಪ್ರಕೃತಿಯಾಗುತ್ತಾಳೆ. ನಾಥಪಂಥದ ಜೋಗಿಗಳ ಹೆಸರಿನ ಮುಂದೆ ನಾಥ ಎಂಬುದು ಸೇರಿಸುತ್ತಾರೆ. ಅದು ಆ ಪಂಥಕ್ಕೆ ಜೋಗಿಗಳು ನೀಡಿದ ಗೌರವವಾಗಿದೆ. ನವನಾಥರ ಸಂಕೇತವಾಗಿ ಜೋಗಿಗಳು ಒಂಭತ್ತು ಎಳೆಯ ಉಣ್ಣೆಯ ಜನಿವಾರವನ್ನು ಧರಿಸುತ್ತಾರೆ. ಸರ್ವರ ಬದುಕಿನ ಏಳಿಗೆಯನ್ನು ಬಯಸುವ ನಾಥಪಂಥ ಪುಸ್ತಕ ರಹಿತ ಗುರು ಬೋಧನೆಯ ಪಂಥವಾಗಿದ್ದು, ಇವರು ತ್ಯಾಗ ಜೀವನ ಸರಳ ಬದುಕಲ್ಲಿ ನೆಮ್ಮದಿಯನ್ನು ಕಂಡವರು. ಪರಧರ್ಮ ಸಹಿಷ್ಣುತೆಯಲ್ಲಿ ಎಲ್ಲರಿಗೂ ಹತ್ತಿರವಾದ ನಾಥಪಂಥದ ಸಿದ್ಧಸಾಧಕರಾಗಲೀ, ನಾಥಪಂಥಿಗಳಾಗಲಿ ಎಂದಿಗೂ ಪ್ರಚಾರದ ಗೋಜಿಗೆ ಹೋದವರಲ್ಲ. ಆದರೆ ಯಾರಿಗೂ ನೋವು ಕೊಡದೆ,ನೋವಲ್ಲಿ ಬಳಲಿದವರಿಗೆ ಸಾಂತ್ವನ ನೀಡುತ್ತಾ ಭಾರತೀಯ ಸಾಂಸ್ಕೃತಿಕ ಪರಂಪರೆಗೆ ನಾಥ ಪಂಥ ತನ್ನದೇ ಆದ ಕೊಡುಗೆಯನ್ನು ನೀಡಿದೆ.ನಾಥ ಪಂಥ ನಾಥ ಪರಂಪರೆಯ ಕೊಂಡಿಯಾಗಿ ಬೆಳೆದು ಬಂದಿದೆ.

  
ಆದಿನಾಥ ಶಿವ
            ಪುರುಷ ಎಂದು ಶಿವನನ್ನು ಕರೆಯುವುದರ ಜೊತೆಜೊತೆಗೆ ಪುರಾಣಗಳಲ್ಲಿ ಪುರುಷಮೃಗದ ವಿಚಾರ ಕಾಣಸಿಗುತ್ತದೆ. ಭೀಮ ಪುರುಷಾಮೃಗವನ್ನು ಬೆನ್ನಟ್ಟಿದ ವಿಚಾರ ಮಹಾಭಾರತದಲ್ಲಿ ನೋಡಲು ಸಿಗುತ್ತದೆ. ಅರ್ಜುನ ಜೋಗಿ ಸನ್ಯಾಸಿಯಾಗಿ ತಿರುಗಾಡಿದ ವಿಚಾರ ಮಹಾಭಾರತದಲ್ಲಿ ಕಂಡುಬರುತ್ತದೆ.ಮತ್ಸ್ಯೇಂದ್ರನಾಥರು ಬರಗಾಲದ ಹೊತ್ತಲ್ಲಿ ನೇಪಾಳದಲ್ಲಿ ತನ್ನ ಯೋಗಶಕ್ತಿಯಿಂದ ಮಳೆ ಬರಿಸಿದ ವಿಚಾರ ಅಲ್ಲಿನ ಜನರ ಮನದಲ್ಲಿ ಅಚ್ಚೊತ್ತಿ ನಿಂತಿದೆ. ಅಲ್ಲಿನ ಜನ ಗುರು ಮತ್ಸ್ಯೇಂದ್ರರನ್ನು (ಪುತ್ರ ಸಂತಾನ ಕರುಣಿಸುವ) ಫಲವಂತಿಕೆಯ ದೇವರಾಗಿ ಆರಾಧಿಸಿದ್ದಾರೆ. ನಾಥಪಂಥದ ಜೋಗಿ ಸಿದ್ಧಪುರುಷರು ಪುರುಷ ಸಂತಾನವನ್ನು ಕರುಣಿಸುವವರೆಂದು ಅವರನ್ನು ಪುರುಷ ಎಂಬ ಹೆಸರಿನಿಂದಲೂ ಜನ ಕರೆದಿದ್ದಾರೆ. ಬಾಯ್ದೆರೆಯಾಗಿ ಬಂದ ಮೌಖಿಕ ಪರಂಪರೆಯ ಪ್ರಕಾರ ಮನುಷ್ಯ ಮುಖ, ಪ್ರಾಣಿ ಶರೀರದ ಪುರುಷಮೃಗ ಪರಮ ಶಿವಭಕ್ತನಾಗಿದ್ದು ಒಂದು ಬಾರಿ ನೇಪಾಳದ ಪಶುಪತಿ ದೇಗುಲದ ಸರೋವರದ ನೀರಲ್ಲಿ ಅದರ ರೇತಸ್ಸು ಬಿದ್ದು ಅದು ಮೀನಿನ ಉದರ ಪ್ರವೇಶಿಸಿ ಮತ್ಸ್ಯೇಂದ್ರನಾಥರ ಉದಯವಾಯಿತು ಎಂಬ ವಿಚಾರ ತಿಳಿಯುತ್ತದೆ. ಆದರೆ ಸಾಹಿತ್ತಿಕವಾಗಿ ಈ ವಿಚಾರ ಎಲ್ಲೂ ಕಾಣಸಿಗುವುದಿಲ್ಲ. ನಾರದ ಪುರಾಣದಲ್ಲಿ ಉತ್ತರಭಾಗದ 69ನೇ ಅಧ್ಯಾಯದ, 25ನೇ ಶ್ಲೋಕದಲ್ಲಿರುವ ವರ್ಣನೆಯಂತೆ "ಮಾಣಿಕ್ಯ ದ್ವೀಪದ ಸಪ್ತ ಶೃಂಗಗಳಲ್ಲಿ ಭಗವಾನ್ ಆದಿನಾಥ ಪಾರ್ವತಿಗೆ ಜಗತ್ತಿನ ಸೃಷ್ಟಿ, ಸ್ಥಿತಿ, ಲಯದ ಬಗ್ಗೆ ರಹಸ್ಯ ಬೋಧನೆ ಮಾಡುತ್ತಿರುವಾಗ ಪಾರ್ವತಿಗೆ ನಿದ್ದೆ ಹತ್ತುತ್ತದೆ. ಆ ಹೊತ್ತಿನಲ್ಲಿ ಮೀನಿನ ಗರ್ಭದಲ್ಲಿದ್ದ ಮತ್ಸ್ಯೇಂದ್ರರು ರಹಸ್ಯ ಜ್ಞಾನದ ಉಪದೇಶವನ್ನು ಕೇಳುತ್ತಾರೆ. ಇದನ್ನು ತಿಳಿದ ಶಿವನು ಕೋಪಿಸಿಕೊಳ್ಳದೆ ಜಗದ ಕತ್ತಲೆಯನ್ನು ಕಳೆಯುವ ಯೋಗಿಯೋರ್ವ ಈ ರೀತಿಯಲ್ಲಿ ಉದಿಸುತ್ತಿದ್ದಾನೆಂದು ತಿಳಿದು ಮತ್ಸ್ಯೇಂದ್ರನಿಗೆ ಅನುಗ್ರಹ ನೀಡುತ್ತಾರೆ. ಮುಂದೆ ಮತ್ಸ್ಯೇಂದ್ರನಾಥ ಅವರ ಶಿಷ್ಯ ಗೋರಖರಿಂದ ನಾಥಪಂಥ ಪ್ರವರ್ಧಮಾನಕ್ಕೆ ಬರುತ್ತದೆ.
ಮಂಜುನಾಥ ದೇವರು ಕದ್ರಿ ಜೋಗಿ ಮಠ
    
           (ಹಿಂದೆ ಜೋಗಿ ಮಠಗಳಲ್ಲಿ ಹದಿನಾಲ್ಕು ವರ್ಷದ ಕೆಳಗಿನ ಮಕ್ಕಳಿಗೆ ಗುರು ದೀಕ್ಷೆ ಕೊಡುತ್ತಿದ್ದರು)

        ಶಿವನ, ಕಾಲಭೈರವನ, ದತ್ತಾತ್ರೇಯನ ಆರಾಧಕರಾದ ನಾಥಪಂಥೀಯರಿಗೆ ದೇವರಿಗಿಂತ ಗುರು ಪ್ರಧಾನವಾಗಿ ಕಾಣುತ್ತಾರೆ. ಇಲ್ಲಿ ಉಪದೇಶ ಕರ್ಣಭೇದ ಸಂಸ್ಕಾರದಿಂದ ಗುರುವಿನ ಬಾಯಿಯಿಂದ ಶಿಷ್ಯನ ಕಿವಿಗೆ ಕೇಳಿಸುವುದು ಮಾತ್ರ. ಹಠಯೋಗ ನಾಥಪಂಥದ ಮೂಲ ವಿಧಾನ. ದತ್ತಾತ್ರೇಯನನ್ನು ಗುರುಪರಂಪರೆಯ ಮೊದಲ ಗುರುವೆಂದು ಹೇಳುವುದೂ ಇದೆ, ದತ್ತನನ್ನು ಒಡನಾಡಿಯಾಗಿ, ಯೋಗಿಯಾಗಿ, ವಿಶೇಷ ಜ್ಞಾನವುಳ್ಳ ವಿಜ್ಞಾನಿಯಾಗಿ ಗುರುತಿಸಿದ್ದಾರೆ. ಭಗವಾನ್ ಶಂಕರ ಆದಿನಾಥನಾಗಿ, ವೈದ್ಯನಾಥನಾಗಿ ಕಾಣಸಿಕ್ಕರೆ ಗುರುಪರಂಪರೆಯಲ್ಲಿ ದತ್ತಾತ್ರೇಯನ ಹೆಸರು ಮೊದಲ ಪಂಕ್ತಿಯಲ್ಲಿ ಇರುತ್ತದೆ. ಶೈವ-ವೈಷ್ಣವ, ಸೃಷ್ಟಿ-ಸ್ಥಿತಿ-ಲಯ, ದೇವರು-ಗುರು ಎಲ್ಲವನ್ನೂ ಒಳಗೊಂಡ ಸಂಗಮ ದತ್ತಾತ್ರೇಯನೆಂದರೆ ತಪ್ಪಾಗದು. ಶೈವ ವೈಷ್ಣವ ಶಾಕ್ತ ಈ ಮೂರು ಪಂಥದ ಸಂಗಮವನ್ನು ತ್ರಿವೇಣಿ ಎಂದು ಕರೆಯುತ್ತಾರೆ. ಭಾರತದ ತ್ರಿಪುರಾ ರಾಜ್ಯದಲ್ಲಿ ಮೂರು ಪಂಥಗಳ ಸಭೆ ನಡೆಯುವ ಸ್ಥಳವಿದೆ. ತ್ರಿವೇಣಿಯ ಸಂಕೇತವಾಗಿ ದತ್ತಾತ್ರೇಯನ ಮೂರು ಮುಖಗಳು ಸಂಕೇತಿಸಲ್ಪಟ್ಟಿವೆ. ದತ್ತಾತ್ರೇಯನಲ್ಲಿ ಶೈವ- ವೈಷ್ಣವ -ಶಾಕ್ತಗಳ ಜೊತೆಜೊತೆಗೆ ತಂತ್ರ ,ನಾಥ, ದಶನಮಿ ಇವುಗಳೂ ಸೇರಿವೆ. ಭಗವಾನ್ ದತ್ತಾತ್ರೇಯರು ವೇದ ಮತ್ತು ತಂತ್ರ ಮಾರ್ಗವನ್ನು ವಿಲೀನಗೊಳಿಸಿ ಒಂದು ಪಂಥವನ್ನು ರೂಪಿಸಿದವರು. ದತ್ತಾತ್ರೇಯನ ಆರಾಧನೆಯಲ್ಲಿ ಶೈವ ತಂತ್ರಮಾರ್ಗ, ವೈಷ್ಣವ ತಂತ್ರಮಾರ್ಗಗಳು ಕಾಣಸಿಗುತ್ತವೆ. ಇಲ್ಲಿ ಹರಿ-ಹರರಲ್ಲಿ ಭೇದವಿಲ್ಲ ಎಂದು ಕಂಡರೂ ಶೈವ-ವೈಷ್ಣವ-ಶಾಕ್ತ ಪಂಥಗಳ ತಾತ್ವಿಕ ನೆಲೆಗಳು ಬೇರೆ ಬೇರೆಯಾಗಿವೆ. 

  

      ಮತ್ಸ್ಯೇಂದ್ರ ನಾಥರು (ಬೆಸ್ತರ ಕುಲದವರು  ಎಂದು ಗುರುತಿಸಿದ್ದಾರೆ).
      ( ಸಮುದ್ರ ಪೂಜೆಗೂ ನಾಥ ಪಂಥಕ್ಕೂ ಸಂಬಂದವಿದೆ) .
ಶಕ್ತಿ ಮತ್ತು ಯೋಗದಲ್ಲಿ ಪರಮೇಶ್ವರನಿಗೆ ಸರಿ ಸಮಾನರಾದ ಇವರು ದತ್ತಾತ್ರೇಯರಪರಮ ಶಿಷ್ಯರಾಗಿದ್ದರು.ಆದಿನಾಥ ಮತ್ತೆ ದತ್ತಾತ್ರೇಯರ ಬಳಿಕ ನಾಥ ಪಂಥವನ್ನು ಪುನರುಜ್ಜೀವನಗೊಳಿಸಿದವರು ಇವರು.

ದತ್ತಾತ್ರೇಯರು ಮುನಿ ಪುಂಗವರಿಗೆ ಅವಧೂತ ಮಾರ್ಗವನ್ನು ತೋರಿಸಿದವರು. ಗುರು ಗೋರಖನಾಥರು ಆಸನ, ಪ್ರಾಣಾಯಾಮ, ಮುದ್ರೆ ಮತ್ತು ಸಮಾಧಿ - ಈ ಚದುರಂಗ ಯೋಗ ವನ್ನು ಗುರು ದತ್ತಾತ್ರೇಯರಿಂದ ಕಲಿತಿದ್ದಾರೆ. ಕಾಶಿ ಮಣಿಕರ್ಣಿಕಾ ಘಾಟಿನ ದತ್ತ ಪಾದುಕೆ ದತ್ತಾತ್ರೇಯನ ಆರಾಧಕರ ಪವಿತ್ರ ತಾಣವಾಗಿದೆ. ಕರ್ನಾಟಕದ ಬೆಳಗಾವಿಯಲ್ಲಿ ದತ್ತಾತ್ರೇಯನ ಪಾದುಕೆಯಿರುವ ಮುಖ್ಯ ಸ್ಥಳವಿದೆ. ದತ್ತಾತ್ರೇಯನನ್ನು ಶೈವರು ಶಿವನೆಂದು, ವೈಷ್ಣವರು ವಿಷ್ಣುವೆಂದು; ದತ್ತಾತ್ರೇಯನ ಮೂರು ಮುಖಗಳಲ್ಲಿ ದೇವರನ್ನು, ಗುರುವನ್ನು, ಶಿವನನ್ನು ಕಂಡಿದ್ದಾರೆ. ಮಠ, ದೇಗುಲ, ಆಶ್ರಮಗಳಲ್ಲಿ ದತ್ತಾತ್ರೇಯನ ಆರಾಧನೆಯಿದೆ. ಗುರು ದತ್ತನ ಹಿಂದಿನ ಭಾಗದಲ್ಲಿ ಒಂದು ಗೋವಿದ್ದು, ಎದುರು 4 ನಾಯಿಗಳಿರುತ್ತವೆ. ಔದುಂಬರದ(ಅತ್ತಿ ಮರ) ಬುಡದಲ್ಲಿ ದತ್ತಾತ್ರೇಯನ ವಾಸವಿರುತ್ತದೆ.  ದತ್ತಾತ್ರೇಯ ಗುರುವೂ, ದೇವರೂ ಆಗಿ ಆತನನ್ನು ಪರಬ್ರಹ್ಮ ಮೂರ್ತಿ, ಸದ್ಗುರು ಶ್ರೀ ಗುರು ದತ್ತನೆಂದು ಕರೆಯುತ್ತಾರೆ. ಅತ್ರಿಮುನಿಯ ಮಗನಾದ್ದರಿಂದ ದತ್ತನಿಗೆ ದತ್ತಾತ್ರೇಯ ಎಂಬ ನಾಮಾಂಕಿತವಾಗಿದೆ. ಶಿವ ಪುರಾಣ, ರಾಮಾಯಣ, ಮಹಾಭಾರತದ ಕಥೆಗಳಲ್ಲಿ ನಾಥಪಂಥಕ್ಕೆ ಸಂಬಂಧಪಟ್ಟ ವಿಚಾರಗಳು ದೊರಕುತ್ತವೆ. ದತ್ತ, ನಾಥ, ಸೂಫಿ ಪಂಥಗಳಿಗೆ ಬಾಬಾಬುಡನ್‌ಗಿರಿಯಲ್ಲಿ ಯಾವುದೋ ಕಾಲಘಟ್ಟದಲ್ಲಿ ದಾರ್ಶನಿಕ ನೆಂಟಸ್ತಿಕೆ ಏರ್ಪಟ್ಟಿರಬೇಕು. ಇಂದಿಗೂ ಅಲ್ಲಿಗೆ ದತ್ತಮಾಲಾ ವೃತಧಾರಿಗಳು ಬಂದು ಆರಾಧನೆಯನ್ನು ಮಾಡುತ್ತಿದ್ದಾರೆ.ಶ್ರೀ ಶೈಲ ನಾಥ ಪಂಥದ ಒಂದು ಪೀಠ.ಅಕ್ಕಮಹಾದೇವಿ ಶ್ರೀ ಶೈಲದಲ್ಲಿರುವ ಮತ್ಸ್ಯೇಂದ್ರ ನಾಥರ ದೇಗುಲಕ್ಕೆ.ಪಂಚಾಚಾರ್ಯರ ಪೀಠವೆಂದು ವೀರಶೈವರು ಯಾವುದನ್ನು ಹೇಳುತ್ತಾರೋ ವಾಸ್ತವವಾಗಿ ಪೂರ್ವದಲ್ಲಿ ಅವುಗಳು ನಾಥ ಪೀಠಗಳು.ಕೇದಾರನಾಥ,ಉಜ್ಜಯಿನಿ,ಶ್ರೀ ಶೈಲ ಪೀಠಗಳು ಮೂಲದಲ್ಲಿ ನಾಥ ಪೀಠಗಳು.ನಾಥ ಪೀಠ ಪರಂಪರೆಯಲ್ಲಿ ಮತ್ಸ್ಯೇಂದ್ರನಾಥ ಪೀಠ ಪರಂಪರೆ ಸರ್ವ ಜನರನ್ನು ಪ್ರೀತಿಸುವ ದೊಡ್ಡ ಪ್ರೇಮ ಪರಂಪರೆಯನ್ನು ಕಟ್ಟಿತು ಎಂದು ಹಿರಿಯ ಸಾಹಿತಿ ಬಸವರಾಜ ಕಲ್ಗುಡಿಯವರು ತಮ್ಮ ಉಪನ್ಯಾಸವೊಂದರಲ್ಲಿ ಹೇಳಿದ್ದಾರೆ.

ಶ್ರೀ ಕ್ಷೀರೇಶ್ವರ್ ನಾಥ್ ಮಹಾದೇವ್.ಅಯೋದ್ಯಾದಾಮ್

     ಭಾರತದ ಪ್ರಾಚೀನ ಪಂಥಗಳಲ್ಲಿ ನಾಥ, ಕಾಳಾಮುಖ, ಶಾಕ್ತ ಸೂಫಿ, ಕಾಪಾಲಿಕಾ ಪಂಥಗಳು ಕರ್ನಾಟಕದ ಧಾರ್ಮಿಕ, ಸಾಮಾಜಿಕ, ರಾಜಕೀಯ ಬದುಕಿನಲ್ಲಿ ಆಳವಾದ ಪ್ರಭಾವ ಬೀರಿದೆ. ನೇಪಾಳ, ಟಿಬೇಟ್, ಅಪಘಾನಿಸ್ಥಾನ, ಪಾಕಿಸ್ತಾನ ದೇಶಗಳಲ್ಲಿ ನಾಥಪಂಥ ಚದುರಿಹೋಗಿದೆ. ನೇಪಾಳ ನಾಥಪಂಥದ ತೊಟ್ಟಿಲೆಂದೇ ಗುರುತಿಸಲ್ಪಟ್ಟಿದೆ. ದಕ್ಷಿಣ ಏಷ್ಯಾ ಖಂಡಗಳಲ್ಲಿ ಹರಡಿರುವ ನಾಥಪಂಥಕ್ಕೆ ಸಾವಿರಾರು ವರುಷಗಳ ಇತಿಹಾಸವಿದೆ. ಇಲ್ಲಿರುವ ಮಠಗಳು, ಕಾಪಾಲಿಕಾ, ಜೋಗಿ ಸಮುದಾಯಗಳು, ಜೋಗಿಸಿದ್ಧ, ಭೈರವನ ಹೆಸರುಗಳು, ಜೋಗಿಬೆಟ್ಟು, ಜೋಗಿಮಟ್ಟಿ ಊರ ಹೆಸರುಗಳು, ಗವಿ, ಬೆಟ್ಟ, ಕೊಳ್ಳ, ಕಣಿವೆ, ಗುಡಿಗಾರ, ಸಮಾಧಿಗಳು, ಶಿಲ್ಪಗಳು, ಶಾಸನಗಳು ಇದರ ಅಸ್ತಿತ್ವಕ್ಕೆ ಸಾಕ್ಷಿಯಾಗಿವೆ. ನಾಥಪಂಥ ಉತ್ತರಭಾರತದಲ್ಲಿ ಕೇಂದ್ರೀಕೃತವಾದ ಒಂದು ಪಂಥವಾಗಿದ್ದು, ನೇಪಾಳದ ಕಟ್ಮಂಡುವಿನಿಂದ ಕರ್ನಾಟಕದ ಕದ್ರಿಯವರೆಗೆ ನೂರಾರು ನಾಥ ಪಂಥದ ಮಠಗಳಿವೆ. ಆದರೆ ದಕ್ಷಿಣಭಾರತದಲ್ಲಿ ಹೈದರಾಬಾದಿನ ಒಂದುನಾಥ ಪಂಥದ ಮತವನ್ನು ಬಿಟ್ಟರೆ ಉಳಿದೆಲ್ಲಾ ಮಠಗಳು ಕರ್ನಾಟಕದಲ್ಲೇ ಇವೆ. ಹಿಮಾಚಲ ಪ್ರದೇಶದ ಕಾಂಗಾಡಾ ಜಿಲ್ಲೆಯ ಜ್ವಾಲಾಜಿ ಎನ್ನುವ ಸ್ಥಳದಲ್ಲಿ ಜ್ವಾಲಾಮಹಾಮಾಯಿ ಮಠವಿದ್ದು  ಅವಧೂತ ಯೋಗಿ ಮಹಾಸಭಾ ಭೇಖ್ ಬಾರಾಹ್ ಪಂಥ್ ಮುಖ್ಯಸ್ಥರು (ಪಂಚರು) ಅಲ್ಲಿ ನೆಲೆಸಿದ್ದಾರೆ.

  ಉಜ್ಜಾಲ್/ಉಯ್ಯಾಲೆ ಮೇಲೆ ಜುಮಾದಿ ದೈವ ವಿಟ್ಲಜೋಗಿ ಮಠ.ಪುರುಷ ಪಾಲನೆಯ ದೈವ ಜುಮಾದಿ.ಜೋಗಿ ಸನ್ಯಾಸಿಗಳ ಸಿದ್ಧಿಯ ದೈವ ಜುಮಾದಿ.ಜೋಗಿ ಸನ್ಯಾಸಿಗಳು ಪಾಂಡಿ ಬೈದ್ಯ ಮತ್ತು ಸಿದ್ಧ ಮರ್ದ ಬೈದ್ಯರಿಗೆ ಜುಮಾದಿ ದೈವದ ಸಿದ್ಧಿಯನ್ನು ನೀಡಿದವರು.ಜುಮಾದಿ ದೈವದ ಹೆಸರಲ್ಲೇ ಜೋಗಿಗಳ ಅಸ್ಥಿತ್ವವಿದೆ.ಕದ್ರಿ,ಮಳಲಿ ಮಠಗಳಲ್ಲೂ ಜುಮಾದಿಯ ಆರಾದನೆ.ಜೋಗಿಗಳಿಗೆ  ಯಾವುದೇ ಕಾರಣಕ್ಕೂ ಪಿಲ್ಚಂಡಿಯ (ಅಂದರೆ ಈಗಿನವರಿಟ್ಟ ಹೆಸರಿನ) ವ್ಯಾಘ್ರ ಚಾಮುಂಡಿಯ ಆರಾದನೆ ಇಲ್ಲ.ಪಿಲ್ಚಂಡಿ ದೈವ ಮಂಜು ಪೂಂಜರಿಗೊಲಿದ ಭಜನೆಯ ದೈವ.
      
             ಜುಮಾದಿ ದೈವ ವಿಟ್ಲ ಜೋಗಿ ಮಠ.

ಜೋಗಿಗಳ ಆರಾದ್ಯ ದೈವ ನಾಥ ಪಂಥದ ಸಿದ್ದಿ ಪುರುಷರ ಸಿದ್ದಿ ದೈವ ಜುಮಾದಿ.ಜೋಗಿ ಸನ್ಯಾಸಿಗಳಿಗೆ ಅನ್ಯಾಯವಾದಾಗ ಈ ದೈವದ ಸಿದ್ದಿಯಿಂದ ಅನ್ಯಾಯ ಮಾಡಿದವ ರಗೆ ಮತಿ ಭ್ರಮಣೆಯಾಗುತ್ತಿತ್ತು.ಆದ ಕಾರಣ ಜಮಾದಿ ದೈವವನ್ನು ಮರ್ಲ್ ಜುಮಾದಿಯಾಗಿಯೂ ನಾಥ ಪಂಥಿಗಳು ಆರಾದನೆ ಮಾಡಿಕೊಂಡು ಬಂದಿದ್ದಾರೆ

                    13ನೇ ಶತಮಾನದ ವೇಳೆಗೆ ನಾಥಪಂಥದ ಜಾಲಂದರನಾಥರಿಂದ ಪಂಜಾಬಿನ ಒಂದು ಊರಿಗೆ ಜಲಂಧರ್ ಎಂದು ಹೆಸರು ಬಂದರೆ ರವಳನಾಥರಿಂದ ರಾವಳಪಿಂಡಿ ಎಂಬ ಹೆಸರು ಒಂದೂರಿಗೆ ಬಂತು. ಇದು ಪಂಜಾಬಿನ ಪಕ್ಕದಲ್ಲಿದ್ದರೂ ಈಗ ಪಾಕಿಸ್ಥಾನದಲ್ಲಿದೆ. ಇದನ್ನು ಗಮನಿಸಿದಾಗ ಜನಸಾಮಾನ್ಯರು ನಾಥ ಯೋಗಿ ಸನ್ಯಾಸಿಗಳಿಗೆ ನೀಡಿದ ಗೌರವ ತಿಳಿಯುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ನಾಥಪಂಥದವರಿಂದಾಗಿ ದತ್ತ ಸಂಪ್ರದಾಯ ಪ್ರಸಿದ್ಧಿಗೆ ಬಂತು. ಕ್ರಿ.ಶ 15ನೇ ಶತಮಾನದ ಆರಂಭದಲ್ಲಿ ಗೋರಕ್ಷನಾಥರ ಶಿಷ್ಯರಾದ ಧರ್ಮನಾಥರು ಕಛ್ ಪ್ರದೇಶದಲ್ಲಿ ನಾಥಪಂಥದ ಮಠ ಸ್ಥಾಪಿಸಿ ನಾಥಪಂಥದ ತತ್ವಾದರ್ಶಗಳನ್ನು ಜನಪ್ರಿಯಗೊಳಿಸಿದರು. ಗೋರಖಪುರದ ಗೋರಖನಾಥರು ಆದಿಚುಂಚನಗಿರಿಯಲ್ಲಿ ಮಠ ಸ್ಥಾಪಿಸಿ ಅಲ್ಲಿ ತಪಸ್ಸನ್ನಾಚರಿಸಿದ್ದಾರೆ. ಶ್ರೀ ಮಠದಲ್ಲಿ ಭೈರವನ ಆರಾಧನೆ ಅಂದಿನಿಂದ ಇಂದಿನವರೆಗೆ ಮುಂದುವರೆದುಕೊಂಡು ಬಂದು ಅಲ್ಲಿನ ಮಠದ ಸ್ವಾಮಿಗಳ ಹೆಸರಿನ ಜೊತೆಗೆ ನಾಥ ಎಂಬ ಹೆಸರು ಸೇರಿಕೊಂಡಿದೆ. ಉದಾಹರಣೆಗೆ ಗಂಗಾಧರನಾಥ. ನಾಥಪಂಥದಲ್ಲಿ ನಾಥಿನಿಯರು ಅಂದರೆ ಯೋಗಿನಿಯರು ಇದ್ದರೆಂಬುದನ್ನು ತಿಳಿಸುವ 17ನೇ ಶತಮಾನದ ವರ್ಣಚಿತ್ರಗಳು ಕಾಣಸಿಗುತ್ತವೆ. ಕೇರಳ ರಾಜ್ಯದ ಮಹಾರಾಣಿಯಾಗಿದ್ದ ಪ್ರೇಮಲಾದೇವಿ ಮತ್ಸ್ಯೇಂದ್ರ ಗೋರಖರ ಶಿಷ್ಯೆಯಾಗಿ, ಯೋಗಿನಿಯಾಗಿ, ಪಿಂಗಳಾದೇವಿಯೆಂದು ನಾಮಾಂಕಿತಳಾಗಿ ಮುಂದೆ ಇವಳು ಮಂಗಳಾದೇವಿಯಾಗಿ ಮಂಗಳೂರಿನಲ್ಲಿ ನೆಲೆನಿಂತು ಆಕೆಯಿಂದ ಮಂಗಳಾಪುರ ಎಂಬ ಹೆಸರು ಮಂಗಳೂರಿಗೆ ಬಂತು. ಇಂದಿಗೂ ಕೇರಳಿಗರು ಮಂಗಳೂರನ್ನು ಮಂಗಳಾಪುರಂ ಎಂದು ಕರೆಯುತ್ತಾರೆ.

  ಜೀವಂತ ಸಮಾದಿಯಾದ ಜ್ವಾಲಾನಾಥರು ಕದ್ರಿ ಜೋಗಿ ಮಠ

           ನಾಥಪಂಥವು ಶೈವಧರ್ಮದ ಒಳಗಿರುವ ಒಂದು ಉಪ ಪಂಥವಾಗಿತದ್ದು ನವನಾಥರ ಆ ಧಾರದಲ್ಲಿ ನಾಥಪಂಥವನ್ನು ಗುರುತಿಸುತ್ತಾರೆ. ನಾಥಪಂಥವು ಚಳುವಳಿಯಾಗಿದೆ ಭಾರತದ ಅತ್ಯಂತ ಹಳೆಯ ಸಿದ್ಧ ಪಂಥದ ವಿಕಾಸದ ಹಂತವಾಗಿತದ್ದು, ಭೌತಿಕ ಮಾನಸಿಕ ಅಧ್ಯಾತ್ಮಗಳ ಮಿಳಿತದ ಯೋಗ ಪರಂಪರೆಯಾಗಿದೆ. ಕ್ರಿ.ಪೂ ಮೂರನೇ ಶತಮಾನದ ಹಿಂದಿನಿಂದಲೇ ಶಿವನ ಆರಾಧನೆ ಇದ್ದರೂ ಗಂಗರ (ಕ್ರಿ.ಶ 4 ರಿಂದ 10ನೇ ಶತಮಾನ) ಕಾಲದಲ್ಲಿ ಅವರು ಕಾಲಭೈರವನನ್ನು ದೇಗುಲದ ಗರ್ಭಗುಡಿಯಲ್ಲಿಟ್ಟು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು. ಶಿವನ ಜೊತೆಜೊತೆಗೆ ಕಾಲಭೈರವನ ಅದರೊಂದಿಗೆ ನಾಥಪಂಥದ ಪ್ರಾಚೀನತೆಯನ್ನು ತಿಳಿಯಬಹುದು. ಗುರು ಗೋರಖರ ಹುಟ್ಟಿನ ಸಂದರ್ಭದಲ್ಲಿ ಬಂಗಾಳ, ಉತ್ತರಭಾರತ, ಪಂಜಾಬ್ ಈ ಮೂರು ಸ್ಥಳಗಳನ್ನು ಉಲ್ಲೇಖಿಸಿದರೂ ನಿಖರವಾದ ಮಾಹಿತಿ ದೊರೆಯುವುದಿಲ್ಲ. ಅವರ ಗುರುಗಳಾದ ಮತ್ಸ್ಯೇಂದ್ರನಾಥರು ಬಹಳಷ್ಟು ಕಾಲ ಕರ್ನಾಟಕದ ಕರಾವಳಿಯ ಕದಿರೆ ಯಲ್ಲಿ ತಪಸ್ಸನ್ನಾಚರಿಸುತ್ತಿದ್ದು ಇಲ್ಲಿನ ಪ್ರಾದೇಶಿಕ ಗಂಡು ಕಲೆಯಾದ ಯಕ್ಷಗಾನದಲ್ಲಿ ಗೋರಖರ ಹುಟ್ಟಿನ ಸಂದರ್ಭವನ್ನು ವಿವರಿಸುತ್ತಾರೆ. ಮತ್ಸ್ಯೇಂದ್ರನಾಥರ ಕರೆಗೆ ಗೋಶಾಲೆಯಿಂದ ಓಗೊಟ್ಟು ಯೋಗಶಕ್ತಿಯಿಂದ ಉದಿಸಿದ ಗೋರಖನನ್ನು ಗಮನಿಸುವಾಗ ಅವರ ಹುಟ್ಟನ್ನು ಇಲ್ಲಿಗೂ ಅನ್ವಯಿಸಿ ನೋಡಬಹುದು. ಆದಿನಾಥ, ಪಶುಪತಿನಾಥ, ವೈದ್ಯನಾಥ, ಭೈರವ ನಾಥ ಗುರುಪರಂಪರೆಯನ್ನು ನೋಡುವಾಗ ಶಿವ ಮತ್ತು ನಾಥಪಂಥದ ಅವಿನಾಭಾವ ಸಂಬಂಧ ತಿಳಿಯುತ್ತದೆ.

       ವ್ಯಾಸನೆಂದು ಮರುನಾಮಕರಣಗೊಂಡ ಬುದ್ದನ ಪ್ರತಿಮೆ

        ನಾಥಪಂಥದ ವಿಚಾರವಾಗಿ ಆಂಗ್ಲ ಸಾಹಿತಿ ಜಾರ್ಜ್ ವೆಸ್ಟನ್ ಬ್ರಿಗ್ಸ್ (1938) ಹೇಳುವಂತೆ ಬೆಳಗಾವಿಯ ಕೆಲವೊಂದು ಭಾಗಗಳಲ್ಲಿ ನಾಥಯೋಗಿಗಳು, ಯೋಗಿನಿಯರು ಕಪ್ಪರ (ಭಿಕ್ಷೆಗೆ ಬೇಕಾದ ಒಂದು ರಚನೆಯ ವಸ್ತು) ತ್ರಿಶೂಲ ಹಿಡಿದು ಸಂಚರಿಸುವ ವಿಚಾರ ಇಲ್ಲಿ ತಿಳಿಯುತ್ತದೆ. ನಾಥಪಂಥದ ಚೌರಾಸಿ (84 ಜನ ಸಿದ್ಧಿ ಪುರುಷರು)ಸಿದ್ಧರಲ್ಲಿ ಕಣ್ಹಪಾ, ಅಲ್ಲಮ, ರೇವಣಸಿದ್ದರು, ಏಕನಾಥರು ಕನ್ನಡಿಗರಾಗಿ ಕಾಣಸಿಗುತ್ತಾರೆ. ಕನ್ನಡದ ಪ್ರಾಚೀನ ಪಠ್ಯಗಳಲ್ಲಿ ಅಲ್ಲಮ, ರೇವಣಸಿದ್ಧ, ಮರುಳಸಿದ್ಧ, ಶಂಕರ, ದಾಸಿಮಯ್ಯ, ತೋಂಟದ ಸಿದ್ಧಲಿಂಗರು ನಾಥರನ್ನು ಮುಖಾಮುಖಿಯಾಗುವ ಕಥಾನಕಗಳು ಕಾಣಸಿಗುತ್ತದೆ. ಕಿತ್ತೂರು ಬಾಳೆವಾಡಿಗಳಲ್ಲಿ ನಾಥಪಂಥದ ಮಠಗಳಿವೆ. ಬೆಳಗಾವಿಯ ಹಾಲ ಸಿದ್ದನಾಥ ಎಂಬ ಸಿದ್ಧಯೋಗಿಗಳು 18 - 19 ನೇ ಶತಮಾನದ ಅವಧಿಯಲ್ಲಿದ್ದು, ಇವರು ನಾಥಪಂಥೀಯರಾಗಿದ್ದರು. ಇವರು ಹುಟ್ಟಿನಿಂದ ಕುರುಬರು. ಆದರೆ ಪವಾಡ ಪುರುಷರು.

    ಕಾಲ ಬೈರವ ಆದಿಮೂಲ ಮೂರ್ತಿ ಕದಿರೆ ಜೋಗಿ ಮಠ

       ನಿಪ್ಪಾಣಿ ಬಳಿ ಅಪ್ಪಚಿನಾಡಿ (1812) ಎಂಬಲ್ಲಿ ಇವರ ಸಮಾಧಿ ಇದೆ. ಜಾತಿ ಬೇಧವಿಲ್ಲದ ನಾಥಪಂಥದಲ್ಲಿ ಹೈದರಾಬಾದ್ ಕರ್ನಾಟಕದ ಭೋಯಿಗಳು, ಚಿಕ್ಕೋಡಿ ತಾಲೂಕಿನ ಕುರುಬರೂ ಇದ್ದಾರೆ. ಮಂಗಳೂರು ತಾಲೂಕು ಮಡ್ಯಾರಲ್ಲಿ ಪರಾಶಕ್ತಿ ಕ್ಷೇತ್ರವಿದ್ದು ಇಲ್ಲಿನ ಕೆರೆಯ ದಂಡೆಯ ಸುತ್ತಲೂ ನಾಥ ಗುರುಗಳ ಮೂರ್ತಿಗಳಿವೆ. ಧಾರವಾಡ ಜಿಲ್ಲೆಯ ಹಿರೇಕೆರೂರು ತಾಲೂಕಲ್ಲಿ ಭೈರವನ ದೇವಾಲಯವಿದ್ದು, ಅಲ್ಲಿ ಮತ್ಸ್ಯೇಂದ್ರನಾಥರಾದಿಯಾಗಿ ನವನಾಥರ ಉಬ್ಬುಶಿಲ್ಪವಿದೆ. ಇದೇ ಮಾದರಿಯ ಕೆಲ ಶಿಲ್ಪಗಳು ಹಂಪಿಯ ಕೆಲ ದೇಗುಲಗಳಲ್ಲಿ, ಬೆಂಗಳೂರು ಹಲಸೂರಿನ ಸೋಮೇಶ್ವರ ದೇವಾಲಯದಲ್ಲಿ ಕಾಣಸಿಗುತ್ತವೆ. ಬೆಳಗಾವಿಯ ಸವದತ್ತಿ ಎಲ್ಲಮ್ಮ ದೇವಾಲಯದ ಎದುರು ನಾಥ ಪಂಥದ ಮಠವಿದ್ದು ಇಂದಿಗೂ ಅಲ್ಲಿ ನಾಥ ಪಂಥದ ಗುರುಗಳಿದ್ದಾರೆ. ಇಲ್ಲಿ ಏಕನಾಥ (ಎಕ್ಕಯ್ಯ), ಜೋಗಿನಾಥ (ಜೋಗಯ್ಯ) ಎಂಬ ನಾಥಪಂಥದ ಯೋಗಿಗಳು ಅನೇಕ ಪವಾಡಗಳನ್ನು ಮಾಡಿದ್ದು, ರೇಣುಕರಾಜನ ಮಗಳು ರೇಣುಕಾದೇವಿಯ ಶಾಪವಿಮೋಚನೆ ಇವರು ಮಾಡಿದರೆಂಬ ಜಾನಪದ ಕಥೆ ಇದೆ. ಇಲ್ಲಿನ ಜೋಗಿಮಠದಲ್ಲಿ ಅಕ್ಷಯ ಪಾತ್ರ ಅಂದರೆ ಪಾತ್ರದೇವತೆಯನ್ನಿಟ್ಟು ಇಲ್ಲಿ ಪೂಜಿಸಿ ಅದನ್ನು ಅಲ್ಲೇ ಬಿಟ್ಟು ಹೋದುದಕ್ಕೆ ಪುರಾವೆಗಳು ಇಲ್ಲಿನ ಸ್ಥಳ ಪುರಾಣದಲ್ಲಿ ಸಿಗುತ್ತವೆ. ತುಂಗಾಭದ್ರಾ ನದಿ ತಟದಲ್ಲಿ ಅವುಗಳು ಸಂಧಿಸುವ ನಡು ಗದ್ದೆಯಿದ್ದು, ಅಲ್ಲಿ ಗಟ್ಟಿ ವೀರಭದ್ರೇಶ್ವರ(ಗಟ್ಟಿ ಬಸವೇಶ್ವರ) ದೇಗುಲವಿದೆ. ವಿಜಯನಗರ ಸಾಮ್ರಾಜ್ಯದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕು ಅಂಬೂರು ಎಂಬ ಜಾಗದಲ್ಲಿ ತುಂಗಾಭದ್ರಾ ನದಿ ತಟದಲ್ಲಿ ಏಕನಾಥ, ಜೋಗಿನಾಥರು ತಪವನ್ನಾಚರಿಸಿದ ಬಗೆಗೆ ವಿವರಗಳು ದೊರೆಯುತ್ತವೆ. ಇವರು ಎಲ್ಲಮ್ಮನ ಗುಡ್ಡ ಸಿದ್ದರ ಪಳ್ಳದಲ್ಲಿ ಪವಾಡ ಮಾಡಿದ ವಿಚಾರ ತಿಳಿಯುತ್ತದೆ. 

           ಯೋಗಿನಿ ಮಾತಾ /ನಾಥಿನಿ ಕದ್ರಿ ಜೋಗಿ ಮಠ
  ( ಮತ್ಸ್ಯೇಂದ್ರ,,ಗೋರಖ ನಾಥರ ಅನುಯಾಯಿ ಶಿಷ್ಯೆ ಪಿಂಗಳಾದೇವಿ)(ಇನ್ನೊಂದು ಮೂಲದಲ್ಲಿ ನೋಡುವುದಾದರೆ ನಾಥ ಪಂಥದ ಪಂಚ ಪೀಠಗಳಲ್ಲಿ ಒಂದಾದ ಶ್ರೀ ಶೈಲ ಪೀಠದ ಮತ್ಸ್ಯೇಂದ್ರನಾಥ ದೇಗುಲಕ್ಕೆ ಶಿವ ಶರಣೆ ಅಕ್ಕ ಮಹಾದೇವಿ ಬರುತ್ತಾಳೆ.ಅಕ್ಕ ಮಹಾದೇವಿಯನ್ನು ಯೋಗಿನಿ ಎಂದು ಕರೆದಿದ್ದಾರೆ.ಹಾಗೆಯೇ ಕದ್ರಿ ಜೋಗಿ ಮಠಕ್ಕೂ ಬರುತ್ತಾಳೆ.ಈ ಯೋಗಿನಿ ಮಾತಾ ಅಕ್ಕ ಮಹಾದೇವಿ ಇರಬಹುದು.)
     
   ಮೂಲ ಕಾಲಭೈರವನ ಮೂರ್ತಿ.ಕದ್ರಿ ಜೋಗಿ ಮಠ

           ನಾಥರನ್ನು ನಾಥ ಯೋಗಿಗಳು, ಸಿದ್ದ ಯೋಗಿಗಳು, ಸಿದ್ಧಿ ಪುರುಷರು, ಅವಧೂತರು, ಕಾನ್‌ಘಟಿ ಯೋಗಿಗಳೆಂದು ಬೇರೆ ಬೇರೆಯಾಗಿ ಗುರುತಿಸಿದ್ದಾರೆ. ಕಾಪಾಲಿಕಾ ಹಾಗೂ ನಾಥಪಂಥಕ್ಕೆ ಸಹೋದರತೆಯ ಸಂಬಂಧವಿದೆ.ಹೇಗೆಂದರೆ ಕಾಪಾಲಿಕರ ಕಾಲ ಭೈರವ ನಾಥ ಪಂಥದ ಕುಲ ದೇವರಾದುದೆ ಇದಕ್ಕೆ ಸಾಕ್ಷಿ. ಕಬೀರ, ನಾನಕ, ದಾದು, ವಾಜಿದ್, ಫರೀದ್, ಮೀರಾ ಇವರೆಲ್ಲರನ್ನೂ ಗೋರಖರ ಮುಖಾಂತರ ಗುರುತಿಸುತ್ತಾರೆ. ಇವರೆಲ್ಲರ ಮೂಲಭೂತ ಆಧಾರವಾದ ಗೋರಕರು ಯೋಗಮಾರ್ಗದ ಆರಂಭಿಕ ಕೊಂಡಿಯಾಗಿದ್ದಾರೆ. ಪತಂಜಲಿ ಯೋಗ ಗುರುವಿನ ಮೂಲ ಯೋಗಗುರು ಗೋರಖನಾಥರಾಗಿದ್ದಾರೆ. ಭಾರತದ ಯೋಗ ಪರಂಪರೆಯ ಶ್ರೇಷ್ಠ ಗುರು ಗೋರಖರನ್ನು ನಾವಿಂದು ಮರೆತಿದ್ದೇವೆ. ನಾವಿಂದು ಅಡಿಪಾಯವನ್ನು ನೋಡದೆ ಅದರಮೇಲೆ ನಿಂತ ಗೋಡೆ ಛಾವಣಿಗಳನ್ನು ಮಾತ್ರ ವೈಭವೀಕರಿಸಿದ್ದೇವೆ. ನಾಥ ಪಂಥದ ಜೋಗಿಮಠದ ಸುತ್ತಮುತ್ತ ಪ್ರಕೃತಿ ರಮಣೀಯವಾದ ತಾಣಗಳಿರುತ್ತವೆ. ಶಿವನೆಂದರೆ ಪ್ರಕೃತಿ. ಅಂತಹ ಸುಂದರವಾದ ಪ್ರಕೃತಿಯೇ ನಾಥಪಂಥದ ಮಠಗಳ ಜೀವಾಳವಾಗಿರುತ್ತದೆ. ಜೋಗಿಮಠಗಳ ಸುತ್ತ ಸ್ಮಶಾನ, ಗುಡ್ಡಗಳು, ನೀರಿನ ಕೆರೆ ಬಾವಿಗಳು, ಗೋಶಾಲೆಗಳು, ಕೆಲವೊಂದು ಮಠಗಳಿಗೆ ಭತ್ತದ ಗದ್ದೆಗಳು, ತೆಂಗು ಕಂಗಿನ ತೋಟಗಳು ಇರುತ್ತವೆ. ಉದಾ: ವಿಟ್ಲ ಜೋಗಿಮಠ. ಸನಾತನ ನಾಥ ಪಂಥ ಇಂತಹುದೇ ಕಾಲಘಟ್ಟದಲ್ಲಿ ಉದಿಸಿತೆಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ವೈಷ್ಣವ ಪಂಥಕ್ಕೆ ದೊರೆತ ರಾಜಮನ್ನಣೆ ಅವೈದಿಕ ನಾಥಪಂಥಕ್ಕೆ ಲಭಿಸದ ಕಾರಣ ಇಂತಹುದೇ ಕಾಲಘಟ್ಟದಲ್ಲಿ ನಾಥ ಪಂಥ ಹುಟ್ಟಿತೆನ್ನುವುದು ಕಷ್ಟ. ಆದರೆ ಜನಸಾಮಾನ್ಯರು ಮಾತ್ರ ನಾಥಪಂಥದಿಂದ ಪ್ರಭಾವಕ್ಕೊಳಗಾಗಿರುವುದಂತೂ ಸ್ಪಷ್ಟ. ಶಿವನ ರೂಪಿ, ಶಿವನ ಅವತಾರವೇ ಆದ ಕಾಲಭೈರವ ಜೋಗಿಗಳ, ಜೋಗಿಮಠಗಳ ಆರಾಧ್ಯ ದೈವ. ಜೋಗಿಮಠಗಳಲ್ಲಿ ಭಸ್ಮದ ದುನಿಗಳಿದ್ದು ಸದಾಕಾಲ ಅದರಿಂದ ಸಣ್ಣಗಾತ್ರದ ಹೊಗೆ ಹೊರಬರುತ್ತಿರುತ್ತದೆ. ಉದಾ: ಕದ್ರಿ ಜೋಗಿಮಠ, ವಿಟ್ಲ ಜೋಗಿಮಠ.  ಸುಟ್ಟರೂ ಸುಡದ, ಸುಡಲಾರದ ಭಸ್ಮದ ಪರಿಮಳ ಆ ವಾತಾವರಣದ ತುಂಬೆಲ್ಲಾ ಇರುತ್ತದೆ. ನಾಥ ಪಂಥಕ್ಕೆ ಸಂಬಂಧಪಟ್ಟ ಕನ್ನಡ, ತುಳು, ಪಾರಸಿ ಭಾಷೆಯ ಶಾಸನಗಳು ದೊರೆತಿವೆ. ತುಳುಭಾಷೆಯಲ್ಲೂ ನಾಥಪಂಥದ ಬಹಳಷ್ಟು ಜಾನಪದ ಕಥಾನಕಗಳಿವೆ. ಇಲ್ಲಿನ ಮೂಲನಿವಾಸಿಗಳು ನಾಥಪಂಥವನ್ನು ಸಂಧಿಪಾಡ್ದನಗಳ ಮೂಲಕ ಹಾಡಿ ಹೊಗಳಿದ ವಿಚಾರಗಳು ತುಳುನಾಡಿನಲ್ಲಿ ಕಾಣಸಿಗುತ್ತವೆ. ನಾಥಪಂಥವನ್ನು ಅನುಸರಿಸುವ ಅನುಯಾಯಿಗಳಿಗೆ ಅದೊಂದು ಧರ್ಮವೂ ಹೌದು. ಇಂದು ನಾಥಪಂಥ ಒಂದು ಜಾತಿಯ ನೆಲೆಗಟ್ಟಿನಲ್ಲಿ ಮಾರ್ಪಾಡಾಗಿದೆ.

       ವಿಟ್ಲ ಜೋಗಿ ಮಠದ ಈಗಿನ ಜೋಗಿ ಅರಸರು
   
ವಿಟ್ಲ ಜೋಗಿ ಮಠದ ಮಂಜುನಾಥ ಗುಡಿಯ ನಾಲ್ಕು ಶಿವ ಲಿಂಗಗಳು.
ವಿಟ್ಲ ಜೋಗಿ ಮಠದ ಮಂಜುನಾಥ ಗುಡಿಯಲ್ಲಿ ನಾಲ್ಕು ಶಿವಲಿಂಗಗಳಿದ್ದರೆ ಹತ್ತಿರದ ಪಂಚ ಲಿಂಗೇಶ್ವರ ದೇಗುಲದಲ್ಲಿ ಐದು ಶಿವ ಲಿಂಗಗಳಿವೆ.ನಿಜವಾಗಿ ಪಂಚಲಿಂಗೇಶ್ವರ ದೇಗುಲದ ಸುತ್ತು ಪೌಳಿಯ ಒಳಗಡೆ ಕಾಲ ಭೈರವನ ಆರಾದನೆ ಇದ್ದಿರಬಹುದು.ಕಾಲಾನುಭಾಗದಲ್ಲಿ ಅದು ಮರೆಯಾಗಿದ್ದರೂ ಚಿಂತನೆಗಳಲ್ಲಿ ಅದು ಗೋಚರಕ್ಕೆ ಬರಬಹುದು.ಪಂಚಲಿಂಗೇಶ್ವರನ ಸಾನಿಧ್ಯದಲ್ಲಿ ಕೈಯಲ್ಲಿ‌ ತ್ರಿಶೂಲ ಹಿಡಿದ ಕಾಳಿಯ ಆರಾದನಯೂ ಇದ್ದಿರಬಹುದು.

        ನಾಥಪಂಥದ ನಾಥರನ್ನು ಕರ್ನಾಟಕದ ಕೆಲವೊಂದು ಭಾಗಗಳಲ್ಲಿ 'ಬಾವಾಜಿ' ಎಂದೂ ಕರೆಯುತ್ತಾರೆ. ಬಾವಾಜಿ ಎಂದರೆ ತಂದೆ ಎಂದರ್ಥ. ಮಂಟೇ ಸ್ವಾಮಿ ಕಾವ್ಯದಲ್ಲಿ ಗುರುವನ್ನು ಅಪ್ಪಾಜಿ ಎಂದು ಕರೆದಿದ್ದಾರೆ. ಇಲ್ಲಿ ಗುರುಶಿಷ್ಯರ ಸಂಬಂಧ ತಂದೆ ಮಗನ ಸಂಬಂಧದಂತೆ ಪವಿತ್ರವಾಗಿರುತ್ತದೆ. ಯೋಗ ಸಾಧನೆಯ ಚಟುವಟಿಕೆಯ ಗುರುಪಂಥವಾದ ನಾಥಪಂಥದಲ್ಲಿ ಯೋಗ ಎಂದರೆ ಮಿಲನ. ಅಂದರೆ ಗುರುಶಿಷ್ಯರ ಮಿಲನ ಎಂದರ್ಥ. ಇಲ್ಲಿ ಜಾತಿಯ ಕಟ್ಟುಪಾಡುಗಳ ಬಂಧನವಿರುವುದಿಲ್ಲ. ನಾಥ ಗುರುಪರಂಪರೆಯಲ್ಲಿ ಗುರುವು ಶಿಷ್ಯನನ್ನು ಹುಡುಕಾಡುತ್ತಾನೆ. ಹೊಸ ಶಿಷ್ಯನನ್ನು ಗುರುತಿಸಿದ ಗುರು ಶಿಷ್ಯನಿಗೆ ಕೆಲವೊಂದು ಸತ್ವ ಪರೀಕ್ಷೆಗಳನ್ನೊಡ್ಡುತ್ತಾನೆ. ಆತ ಯೋಗ್ಯನೆಂದು ತಿಳಿದ ಮೇಲೆ ಆತನಿಗೆ ಯೋಗಿ ದೀಕ್ಷೆ ಕೊಟ್ಟು, ಆತನಿಗೆ ಹೊಸ ಹೆಸರನ್ನಿಟ್ಟು, ಮುಂದೆ ಯೋಗಸಾಧನೆಯನ್ನು ಶಿಷ್ಯನಿಂದ ಮಾಡಿಸುತ್ತಾನೆ. ಹೆತ್ತವರು ಮಗನನ್ನು ಗುರುವಿನ ಕೈಗೊಪ್ಪಿಸುವಾಗ ಇಂದಿನಿಂದ ನೀನು ನನ್ನ ಮಗನಲ್ಲ ಎಂದು ಸಾಂಕೇತಿಕವಾಗಿ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಅವೈದಿಕ ನಾಥ ಪರಂಪರೆಯ ಛಾಯೆ ತುಳುನಾಡ ದೈವ ಬೂತಾರಾಧನೆಗಳಲ್ಲಿ  ಕಂಡುಬರುತ್ತದೆ. ಒಬ್ಬ ವ್ಯಕ್ತಿಯನ್ನು (ಪ್ರಾಯದಲ್ಲಿ ಪ್ರಬುದ್ಧರಾದ, ಹಿರಿಯರಾದ) ದೈವದ ಕೈಗೆ ಗಡಿಯೊಪ್ಪಿಸುವಾಗ ದೈವದ ಎದುರು ತಮ್ಮ ಸಂಬಂಧಗಳನ್ನು ಸಾಂಕೇತಿಕವಾಗಿ ಕಡಿದುಕೊಳ್ಳುತ್ತಾರೆ. ಇದು ಅವೈದಿಕ ತುಳುವರ ದೈವಾರಾಧನೆಗೆ ನಾಥಪಂಥದವರ ಕೊಡುಗೆಯಾಗಿದೆ. ದೀಕ್ಷೆ ಕೊಡುವ ಗುರು ಇಂದಿನಿಂದ ಮುಂದೆಗೆ ನೀನು "ಸಿಸುಮಗ" ಎಂದು ಹೇಳಿ ಗುರು ಪಿತೃತ್ವದ ಸಂಬಂಧವನ್ನು ಸ್ಥಾಪಿಸುತ್ತಾನೆ. ಗುರುದೀಕ್ಷೆ ಶಿಷ್ಯನಿಗೆ ಹೊಸದೊಂದು ಹುಟ್ಟನ್ನು ನೀಡಿ ಅವನಿಗೆ ಸಮಾಜ ತಲೆಬಾಗುತ್ತದೆ. ಜಾತಿ ಚೌಕಟ್ಟಿನಿಂದ ಹೊರತಂದು ಶಿಷ್ಯನಿಗೆ ನೀಡುವ ಗುರುದೀಕ್ಷಾ ಕ್ರೀಯೆಗೆ ಸಾಮಾಜಿಕವಾಗಿ ಬಹಳ ಮಹತ್ವವಿದೆ.  ಗುರು ಗೋರಖನಾಥರು ಅವಧೂತರ ಲಕ್ಷಣಗಳನ್ನು ಹೇಳುವಾಗ "ಅತ್ಯಾಶ್ರಮಿಗಳು" ಎನ್ನುತ್ತಾರೆ. ವರ್ಣಧರ್ಮವನ್ನು ಉಲ್ಲಂಘಿಸುವುದೇ ಅವಧೂತನಿಗಿರುವ ಮೊದಲ ಅರ್ಹತೆ. ಇಂದಿಗೂ ನಾಥ ಯೋಗಿಗಳು ತಮ್ಮ ಗುರುವಿನ ಹೆಸರಿನ ಜೊತೆಗೆ ತಮ್ಮನ್ನು ಪರಿಚಯಿಸುತ್ತಾರೆ. ಮೌಖಿಕ ವಿದ್ಯೆ ದೀಕ್ಷಾ ರೂಪದಲ್ಲಿ ಗೌಪ್ಯವಾಗಿ ಗುರುವಿನಿಂದ ಶಿಷ್ಯನಿಗೆ ಲಭಿಸುವುದರಿಂದಾಗಿ ನಾಥಪಂಥದಲ್ಲಿ ಪುಸ್ತಕ ವಿದ್ಯೆಗೆ ಅಷ್ಟೊಂದು ಪ್ರಾಶಸ್ತ್ಯವಿಲ್ಲ. "ವೇದಶಾಸ್ತ್ರ ಪುರಾಣಗಳನ್ನು ಹುಡುಕುವ ಯೋಗಿಗಳಿಗೆ ಮುಕ್ತಿ ಇಲ್ಲ" ಎಂಬುದನ್ನು ಗೋರಖರು ಹೇಳಿದ್ದಾರೆ. 

  

   ಹಠ ಯೋಗಿ,ಸಿದ್ಧಯೋಗಿ ಗುರು ಗೋರಖನಾಥರು
ಕಾನ್ ಫಟಾ ಎಂಬ ಪಂಥದ ಸ್ಥಾಪಕರು.ಆಸನ,ಶೋಧನ,ಪ್ರಾಣಾಯಾಮ ಸಿದ್ಧಿ ಪಡೆದವರು.ನೇಪಾಳದಲ್ಲಿ ಇವರನ್ನು ಸಂರಕ್ಷಕ ದೇವತೆಯೆಂದು ಆರಾಧಿಸುತ್ರಾರೆ.ಗೂರ್ಖಾಗಳು ಗೋರಖನಾಥರ ಅನುಯಾಯಿಗಳು.ಗೋರಖರ ಹೆಸರಲ್ಲಿ ಉತ್ತರ ಭಾರತದಲ್ಲಿ ಗೋರಖಪುರವೆಂಬ ಊರಿದೆ.ಕಾಳಿಯೊಂದಿಗೆ ಹೋರಾಡಿದ ಏಕೈಕ ಹಠಯೊಗಿ ಗೋರಖನಾಥರು.
ಗೋರಕ್ಷ ನಾಥರು(ಗೋವಳಿಗ  ಎಂದು ಗುರುತಿಸಿದ್ದಾರೆ)
ಆದಿ ಗುರು ಗೋರಖರು ಬದುಕಿಗಿಂತ ಸಾವಿನ ಬಗೆಗೆ ಹೆಚ್ಚಾಗಿ ತಿಳಿಸಿದ ಕಾರಣ ಜನರು ಅವರನ್ನು ಹೆಚ್ಚು ಗಣನೆಗೆ ತೆಗೆದುಕೊಳ್ಳಲಿಲ್ಲ.ನಾಥ ಪರಂಪರೆಯ ಆದಿ ಗುರು ಗೋರಖರು ಬದುಕಿದ್ದುದು ಇತಿಹಾಸಕಾರರ ಪ್ರಕಾರ ಕ್ರಿ.ಶ. ೨ನೇ ಶತಮಾನದಲ್ಲಿ ಎಂಬುದನ್ನು ನಾವು ಸ್ಪಷ್ಟವಾಗಿ ತಿಳಿದಿರಬೇಕು.ನಾಥ ಪಂಥವನ್ನು ಸ್ಥಾಪಿಸಿ,ಅದನ್ನು ಬೆಳೆಸಿ ಅದಕ್ಕೊಂದು ಭದ್ರ ಬುನಾದಿ ಹಾಕಿಕೊಟ್ಟು,ಹೊಸ ಆದ್ಯಾತ್ಮಿಕ ಚೌಕಟ್ಟನ್ನು ಕೊಟ್ಟು ಅಜ್ಞಾನದಲ್ಲಿರುವ ಜೀವ ಜ್ಞಾನದೆಡೆಗೆ ಹೋಗುವ ತತ್ವವನ್ನು ಕೊಟ್ಟಂಥವರು ನಾಥ ಪಂಥದ ಆದಿ ಗುರು ಗೋರಕ್ಷ ನಾಥರು. ೧೨ನೆ ಶತಮಾನದ ವಚನಕಾರರಾದ ಅಲ್ಲಮ ಪ್ರಭುವಿನ ಎದುರು ಬಂದ ಗೋರಖರಾಗಲಿ,೧೬ನೇ ಶತಮಾನದ ಕಬೀರರ ಮುಂದೆ ಬಂದ ಗೋರಖರಾಗಲಿ,ಗುರು ನಾನಕರ ಎದುರು ಬಂದ ಗೋರಕ್ಷನಾಥರಾಗಲಿ ೨ನೇ ಶತಮಾನದ ನಾಥ ಪಂಥಕ್ಕೆ ಅಡಿಪಾಯ ಹಾಕಿಕೊಟ್ಟ ಮೂಲ ಗುರು ಗೋರಖರಲ್ಲ ಎಂಬುದು ಸ್ಪಷ್ಟವಾಗಿ ನಮಗೆ ತಿಳಿದಿರಬೇಕು.ಆ ಆದಿಗುರು ಗೋರಖರೇ ಬೇರೆ.ಉಳಿದ ಕಾಲಘಟ್ಟದ ಗೋರಕ್ಷ ನಾಥ ಹೆಸರಿರಿಸಿಕೊಂಡವರೆ ಬೇರೆ.ಹೆಸರುಗಳು ಒಂದೇ ಆದರೂ ವ್ಯಕ್ತಿಗಳು ಬೇರೆ.ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ ಜೋಗಿ ಮಠದಲ್ಲಿ ಮತ್ಸೇಂದ್ರನಾಥ,ಗೋರಖನಾಥರು ತಪವಾಚರಿಸಿದ್ದರು.ತನ್ನ ಗುರುವಿನ ಸ್ತ್ರೀ ವ್ಯಾಮೋಹದಿಂದ ಮುಕ್ತಗೊಳಿಸಿದವರು ಗುರು ಗೋರಖರು.

ಶಿವಶರಣರು ನಾಥ ಪಂಥದ ಗುರುವೇ ಮೊದಲ ದೇವರು ಎಂಬ ವಿಚಾರವನ್ನೇ ಪುಷ್ಟೀಕರಿಸುತ್ತಾರೆ. ಗುರುವೇ ಪರ್ಯಾಯ ದೇವರಾದ ಕಾರಣ (ಗುರು ಬ್ರಹ್ಮ, ಗುರು ವಿಷ್ಣು, ಗುರು ಮಹೇಶ್ವರ, ದತ್ತಾತ್ರೇಯ) ನಾಥ ಗುರುಪರಂಪರೆ ಪುರಾಣದ ದೇವರ ಬಗ್ಗೆ ಚರ್ಚೆ ಮಾಡುವ ಗೋಜಿಗೆ ಹೋಗುವುದಿಲ್ಲ. ಅವಧೂತರ ಇನ್ನೆರಡು ಲಕ್ಷಣಗಳೆಂದರೆ ತನ್ನ ಬಗೆಗೆ ತಾನು ತಿಳಿದುಕೊಳ್ಳುವುದು. ಇನ್ನೊಂದು ಲೋಕವನ್ನು ತರತಮವೆಣಿಸದೆ ನೋಡುವುದು. ಆದುದರಿಂದ ನಾಥಪಂಥ ಸಮಾಜದ ಕೆಳಸ್ತರದ ಜಾತಿ ಜನಾಂಗಕ್ಕೂ ಆಧ್ಯಾತ್ಮ ಚಿಂತನೆಯನ್ನು ಉಣಬಡಿಸಿತು. ನಾಥ ಗುರು ಪಂಥ ಪರಂಪರೆಯ ಈ ಚಿಂತನೆಗಳು ಭಾರತದ ದರ್ಶನ ಸಮಾಜ ಮತ್ತು ಧರ್ಮಗಳಲ್ಲಿ ಕ್ರಾಂತಿಕಾರಿ ಪಲ್ಲಟನೆಯನ್ನುಂಟು ಮಾಡಿತು. ಭಾರತದ ಅನುಭಾವಿ ಪಂಥಗಳು ಧಾರ್ಮಿಕ,  ಪ್ರಾದೇಶಿಕ, ಸಾಮಾಜಿಕ, ಭಾಷಿತ ಗಡಿಗಳನ್ನು ದಾಟಿ ಯಾವುದೋ ಒಂದು ಸಮಾನ ಸಂಗತಿಗಾಗಿ (ಎಲ್ಲರನ್ನೂ ಒಂದೇ ರೀತಿ ತಾರತಮ್ಯ ಮಾಡದೆ ನೋಡುವುದು) ಬೆಳೆದುಕೊಂಡು ಬಂತು. ನಾಥ, ಕಾಪಾಲಿಕ, ಶಾಕ್ತ, ಕೌಳ ಹೀಗೆ ಯೌಗಿಕ/ಯೋಗಿಕ ತಾಂತ್ರಿಕ ಪಂಥಗಳು ಹುಟ್ಟಿನಿಂದಲೇ ಶ್ರೇಷ್ಠ-ಕನಿಷ್ಠವೆಂದು ಬೇರ್ಪಡಿಸುವ ವರ್ಣಾಶ್ರಮ ವ್ಯವಸ್ಥೆಯನ್ನು, ದೇವರು, ಆತ್ಮ, ಪುನರ್ಜನ್ಮ, ನರಕ ಇವುಗಳನ್ನು ಒಪ್ಪಲೇ ಇಲ್ಲ. ಅವೈದಿಕ ತುಳುವ ಆಚರಣೆಗಳಲ್ಲೂ ನಾಥಪಂಥದ ಪ್ರಭಾವವನ್ನು ಗುರುತಿಸಬಹುದು. ಹೇಗೆಂದರೆ ತುಳು ಧರ್ಮದಲ್ಲಿ ಸ್ವರ್ಗ-ನರಕ, ಮೋಕ್ಷ, ಪುನರ್ಜನ್ಮ, ಪಿಂಡ ಇಂತಹ ಕಲ್ಪನೆಗಳಿಗೆ ಅವಕಾಶವೇ ಇಲ್ಲ. ಆದರೆಈ ಕಲಗಪನೆಗಳು ಬೇರೆಯವರ ಒತ್ತಡದಿಂದಾಗಿ ಇಂದು ನಾವು ಒಪ್ಪಿಕೊಳ್ಳುವ ಅನಿವಾರ್ಯತೆಗೆ ಬಂದು ಅವೈದಿಕತೆ ವೈದಿಕ ಸಂಪ್ರದಾಯದತ್ತ ವಾಲುತ್ತಿದೆ.

       ಮತ್ಸ್ಯೇಂದ್ರ ನಾಥರ. ಸಮಾದಿ ಕದ್ರಿ  ಜೋಗಿ ಮಠ

          ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯನ್ನು ,ವರ್ಣಭೇದವನ್ನು ನಾಥ ಪಂಥದ ದಾರ್ಶನಿಕ ಸಾಹಿತ್ಯಗಳಲ್ಲಿ ನೋಡಿದರೆ ನಾಥಪಂಥ ಸಮಾನತೆಯ ಆಶಯವನ್ನಿಟ್ಟುಕೊಂಡಿರುವುದು ತಿಳಿಯುತ್ತದೆ. ಕರ್ನಾಟಕದ ಆರೂಢ ಪಂಥಗಳಲ್ಲಿ ಸಮಾಜದ ಕೆಳಜಾತಿಯ, ತಳಮಟ್ಟದ ಕಸುಬಿನ ಸಮುದಾಯಗಳು ಅಸ್ಮಿತೆಯನ್ನು ಕಂಡುಕೊಂಡವು. ಒಂದು ಬಗೆಯ ಸಮದರ್ಶನದಲ್ಲಿ ಆರಂಭಗೊಂಡ ಪಂಥಗಳು ಚಾರಿತ್ರಿಕ ಒತ್ತಡದಿಂದ ತನ್ನ ಗುಣವನ್ನು ಕೆಲವೊಮ್ಮೆ ಕಳೆದುಕೊಂಡು, ತಾರತಮ್ಯಗಳನ್ನಿರಿಸಿ ವೈದಿಕದತ್ತ ಮುಖ ಮಾಡಿದ್ದಿದೆ. ಆದರೆ ಯಾವುದೇ ಕಾರಣಕ್ಕೂ ನಾಥಪಂಥ ಅಂತಹ ರಾಜಿಮಾಡುವ ಗೋಜಿಗೆ ಹೋಗಿಲ್ಲ. ನಾಥದರ್ಶನ ಅಂದರೆ ಇಹದ ದರ್ಶನ ಅಂದರೆ ಭೌತ ದರ್ಶನ. "ನಮ್ಮ ಶರೀರ ಪವಿತ್ರವಾಗಿದ್ದು ಅದರ ಮೂಲಕವೇ ಅರಿವನ್ನು ಸಾಧನೆಯ ಮೂಲಕ ಪಡೆಯಬೇಕೆಂದು ಗೋರಕರು ತಿಳಿಸಿದ್ದಾರೆ.ಒಂದರ್ಥದಲ್ಲಿ ನಾಥಪಂಥದ ಯೋಗ ದರ್ಶನವೆಂದರೆ ಶರೀರ ಮತ್ತು ಮನಸ್ಸಿನ ಸಮನ್ವಯ ಸಿದ್ಧಾಂತವಾಗಿದೆ. ನಾಥಪಂಥದ ಆಳದಲ್ಲಿ ಬೌದ್ಧ ಧರ್ಮದ ಅನಾತ್ಮವಾದ, ಶೂನ್ಯವಾದವೂ ಇವೆ. ನಾಥದರ್ಶನ ಒಂದು ಪ್ರಬಲ ದೃಷ್ಟಿಯಾಗಿ ದುಡಿಯುವ ಕೆಳಜಾತಿ, ಜನಸಮುದಾಯದ ಜನರ ಬದುಕಿನ ಜೊತೆ ಗಾಡವಾದ ಸಂಬಂಧವನ್ನು ಹೊಂದಿತ್ತು. ತಾಂತ್ರಿಕ ನಾಥಪಂಥದಲ್ಲಿ ಹೆಣ್ಣಿಗೂ ಸಾಧನೆ ಮಾಡುವ ಅಧಿಕಾರವಿದೆ. ಕಾಪಾಲಿಕಾ, ತಾರಾ, ಭಗವತಿ, ಭೈರವನ ಹೆಸರಿನಲ್ಲಿ ಕರ್ನಾಟಕದಲ್ಲಿ ಕೆಲವೊಂದು ಕಟ್ಟೆಗಳು ಕಾಣಸಿಗುತ್ತವೆ. ಕರ್ನಾಟಕದ ನಾಥಪಂಥದ ಆಚರಣೆಗಳು ಕೃಷಿ, ನೇಕಾರಿಕೆ, ಪಶುಪಾಲನೆ, ದುಡಿಯುವ ವರ್ಗದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿತ್ತು. ಕೆಲವೊಂದು ಅವೈದಿಕ ಪಂಥಗಳನ್ನು ಜನ ವಿರೋಧಿಯಾಗಿಸಿ, ಮುಗಿಸುವ ಪ್ರಯತ್ನವನ್ನು ವೈದಿಕ ಪಂಥ ಮಾಡಿದರೂ, ಆಯಾ ಪಂಥಗಳ ತತ್ವಾದರ್ಶಗಳಿಂದ ಇಂದಿಗೂ ಅವುಗಳಲ್ಲಿ ಕೆಲವು ಜೀವಂತವಾಗಿ ಉಳಿದಿವೆ. ಅದಕ್ಕೆ ಸಾಕ್ಷಿ ನಾಥಪಂಥ. ನಾಥಪಂಥ ದಮನಿತ ಶೋಷಣೆಗೊಳಗಾದ ಸಮುದಾಯಗಳನ್ನು ಸಮಾಜದಲ್ಲಿ ಮತ್ತೆ ತಲೆಯೆತ್ತಿ ನಿಲ್ಲುವಂತೆ ಮಾಡಿದೆ.

  

  ನವರಾತ್ರಿಯ ಕೊನೆಯ ದಿನ ಅಂದರೆ ಒಂಬತ್ತನೆಯ ದಿನ ಜುಮಾದಿ ದೈವದ ಉಯ್ಯಾಲೆಯಲ್ಲಿ ಜೋಗಿ ಅರಸರನ್ನು ಕೂರಿಸಿ ಅವರಿಗೆ ಪೂಜೆ ಮಾಡಲಾಗುತ್ತದೆ.ಮಂಗಳೂರನ್ನು ಆಳುತ್ತಿದ್ದ ನಾಥ ಪಂಥದ ಮೊದಲ ಗುರು ಮಚ್ಛೇಂದ್ರನಾಥರ ಕುರುಹಾಗಿ ದೈವದ ಉಜ್ಜಾಲ್/ಉಯ್ಯಾಲೆಯಲ್ಲಿ ಯೋಗಿ ರಾಜರನ್ನು ಕುಳ್ಳಿರಿಸಿ ಆರಾದನೆ ನಡೆಯುತ್ತದೆ.ಮತ್ಸ್ಯೇಂದ್ರನಾಥರೇ ಶಿವನ ಅವತಾರವೆಂದು ನಂಬಿದ್ದಾರೆ.ನಾಥ ಪಂಥದ ಒಂದು ವಿಭಾಗ ಕಾಳಾಮುಖರನ್ನು ಅನುಸರಿಸಿ ಕಾಲಭೈರವನ ಆರಾದನೆ ಆರಂಭಿಸಿದರೆನ್ನಲಾಗುತ್ತಿದೆ.ಭಾರತ ದೇಶದಲ್ಲಿ ನಾಥ ಪಂಥದ ಕದ್ರಿ ಜೋಗಿ ಮಠದ ಗುರುಗಳನ್ನು ಮಾತ್ರ ಅರಸರು,ಮಹಾರಾಜರೆಂದು ಎಂದು ಕರೆಯುತ್ತಾರೆ.

         ‌  ಗುಹ್ಯ ಸಮಾಜ ತಂತ್ರ, ರಾಜಗುಹ್ಯ ( ಗೌಪ್ಯವಾದ; ಅಡಕವಾದ) ಹೀಗೆ ನಾಥಪಂಥದ ಪಠ್ಯಗಳಲ್ಲಿ ರಹಸ್ಯ, ಗುಹ್ಯ ಶಬ್ದಗಳು ಕಾಣಸಿಗುತ್ತವೆ. ಗುರುಮುಖೇನ ಕಲಿತು ಶಿಷ್ಯರಿಂದ ಸಮಾಜವನ್ನು ಉದ್ಧರಿಸುವ ನಾಥ ಯೋಗ ಪಂಥದಲ್ಲಿ ರಹಸ್ಯ ಅಂಶಗಳಿವೆ. ಯೌಗಿಕ ತಾಂತ್ರಿಕ ಪಂಥಗಳಲ್ಲಿ 'ಗುಪ್ತತೆ' ಒಂದು ಸಹಜವಾದ ಲಕ್ಷಣ. ಬಹುಮನಿ ನಿಜಾಂ ಶಾಹನ ಆಸ್ಥಾನದಲ್ಲಿ ನಿಜಾಮನಲ್ಲಿ ಕದಂ ರಾಮ್-ವ-ಪದಂರಾವ್ ಮಸ್ನವಾಡ್ ಅಖ್ಖರನಾಥ ಎನ್ನುವ ಯೋಗಿ ,"ಕಬ್ಬಿಣವನ್ನು ಸ್ವರ್ಣ ಮಾಡುವೆ. ಸತ್ತ ಹೆಣವನ್ನು ಜೀವಂತ ಮಾಡುವೆ" ಎನ್ನುವಲ್ಲಿ ಯೋಗಿಗಳಿಗೆ ತಂತ್ರ ಸಿದ್ಧಿಯ ಜೊತೆ ಜೊತೆಗೆ ವೈದ್ಯಶಾಸ್ತ್ರ, ಲೋಹಶಾಸ್ತ್ರದ ಪ್ರಾಯೋಗಿಕ ಜ್ಞಾನ ತಿಳಿದಿತ್ತು ಎಂಬುದು ಗೋಚರವಾಗುತ್ತದೆ.ಕಬ್ಬಿಣವನ್ನು ಚಿನ್ನ ಮಾಡಿದ್ದಾರಾ ಇಲ್ಲವ ಅದು ಪ್ರಶ್ನೆಯಲ್ಲ.ಅವರ ಸಿದ್ಧಿಯ ದೃಢತೆ ಪ್ರದಾನವಾಗುತ್ತದೆ.ಇದನ್ನು ನೋಡುವಾಗ ನಾಥ ಪಂಥದ ಗುರುಗಳು ಹೊಸ ಅನ್ವೇಷಣಕಾರು ಎಂಬುದನ್ನು ಅರ್ಥೈಸಬಹುದು. ಅಂತೆಯೇ ಇಂದಿನ ಸಿದ್ಧೌಷದ ಮೂಲದ ತಮಿಳ್ನಾಡಿನ ಸಿದ್ದತು ನಿಜವಾಗಿ ವಿಷವಾದ ಪಾದರಸದಿಂದಲೇ ಔಷದಿಯನ್ನು ಕಂಡು ಹಿಡಿದಿದ್ದಾರೆ.ವೈದಿಕೇತರರು ಇಂದಿಗೂ ಸಿದ್ಧೌಷದಿಗಳನ್ನು ತಮಿಳ್ನಾಡು,ಕರ್ನಾಟಕದ ಕೆಲವು ಬಾಗಗಳಲ್ಲಿ ಉಪಯೊಗಿಸುತ್ತಿದ್ದಾರೆ ನಾಥಪಂಥದ ಯೋಗಿಗಳ ಯೋಗಸಾಧನೆ, ಅವರು ತಿಳಿದಿದ್ದ ಅಂದರೆ ಅತೀಂದ್ರಿಯ ಶಕ್ತಿಯಿಂದ ಅರಿತಿದ್ದ ದೇಹರಚನೆ, ನರ ವಿಜ್ಞಾನವನ್ನು ಅವರು ತಿಳಿದಿದ್ದ ರೀತಿಯನ್ನು, ಅವರ ಜ್ಞಾನ ವಿಜ್ಞಾನವನ್ನು ಇಂದಿಗೂ ಅಧ್ಯಯನಕಾರರಿಗೆ ಅರ್ಥೈಸಲು ಸಾಧ್ಯವಾಗಿಲ್ಲ. ಬದುಕಿಸುವ, ನಿಂತಲ್ಲಿ ಸ್ಥಂಭನಗೊಳಿಸುವ, ಬದುಕಿ ಉಳಿಸುವ ಉಪಾಯಗಳು, ಸ್ಥಾಪಿತ ವ್ಯವಸ್ಥೆಯನ್ನು ಕಂಗೆಡಿಸುವ ಅದೆಷ್ಟೋ ಯುದ್ಧತಂತ್ರಗಳು ನಾಥಯೋಗಿಗಳಿಗೆ ತಿಳಿದಿತ್ತು. ಶ್ರೀಶೈಲದಲ್ಲಿ ಶಂಕರರಿಗೆ ಮತ್ತು ಉನ್ಮತ್ತ ಭೈರವನಿಗೆ ನಡೆಯುವ ಮುಖಾಮುಖಿ ಇದಕ್ಕೆ ನಿದರ್ಶನವಾಗಿದೆ. ಬ್ರಹ್ಮಶಿವನ 'ಸಮಯ ಪರೀಕ್ಷೆ' (ಕಾಲ ಕ್ರಿ.ಶ. 1100) ಕೃತಿಯಲ್ಲಿ ಕಟಕಟೆಯಲ್ಲಿ ನಿಂತು ವಿಚಾರಣೆಗೊಳಗಾದ ದರ್ಶನ ಪಂಥಗಳೆಂದರೆ ಜೋಗಿ, ನಾಥ, ಸನ್ಯಾಸಿ. ಆದರೆ ನಾಥಪಂಥದ ಯೋಗಮಾರ್ಗ, ತಾಂತ್ರಿಕ ಸಿದ್ದಿಯನ್ನು ಯಾರಿಂದಲೂ ಭೇದಿಸಲು ಸಾಧ್ಯವಾಗಿಲ್ಲ. ನಾಥಪಂಥದ ತಂತ್ರ ಸಿದ್ಧಿಯ ಜೊತೆಗೆ ಯಾವ ತಂತ್ರಗಾರಿಕೆಯೂ ನಿಲ್ಲುವುದಿಲ್ಲ. ಇದಕ್ಕೆ ಕದ್ರಿ ದೇಗುಲದಲ್ಲಿ ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯುವ ಜೋಗಿನಾಥ ಅರಸರು ರಥವನ್ನು ಕರೆಯುವ ತಂತ್ರಗಾರಿಕೆಯೇ ಸಾಕ್ಷಿ.

         ಪರ್ಪಲೆ ಗುಡ್ಡೆ ಕಾರ್ಕಳ ಜೋಗಿ ಸನ್ಯಾಸಿಗಳ ಗುಹೆ
                
 ಕ್ರಿ.ಶ ಏಳನೇ ಶತಮಾನದ ನೇಪಾಲದ ದೊರೆ ನರೇಂದ್ರ ದೇವನೊಂದಿಗೆ ಗೋರಕನಾಥರ ಕಥೆ ಕಂಡರೂ ಇಲ್ಲಿ ಗೊಂದಲವಿದೆ ಎಂದು ವಿದ್ವಾಂಸರು ತಿಳಿಸಿದ್ದಾರೆ. ಗೋರಖನನ್ನು ಶಿವನೆಂದೂ, ಶಿವಗೋರಕ್ಷಾ ಎಂದೂ ಕರೆಯುತ್ತಾರೆ. ಗೋರಖಪುರದಲ್ಲಿ ಗೋರಕನಾಥನ ದೇಗುಲವಿದೆ. ನೇಪಾಳದಲ್ಲಿ ನಾಥಪಂಥದ ಆದಿಪುರುಷ ಆದಿನಾಥನನ್ನು "ಆರ್ಯ ಅವಲೋಕೇಶ್ವರ" ಎಂದು ಗುರುತಿಸಿದ್ದಾರೆ. ಗೋರಕನಾಥ ಮತ್ತು ಅವರ ಶಿಷ್ಯರು ಮೂಲದಲ್ಲಿ ಬೌದ್ಧಾನುಯಾಯಿಗಳಾಗಿದ್ದು, ಮುಂದೆ ಶಿವಭಕ್ತ, ಶೈವಾರಾಧಕರಾದರೆಂದು ಟಿಬೆಟಿಯನ್ ಕಥೆಗಳು ಹೇಳುತ್ತವೆ. ಉತ್ತರ ಕರ್ನಾಟಕದ ಭಾಗದಲ್ಲಿ 'ಕಾಂಜೀರ' ( ಸಾಮೂಹಿಕ ನಾಥ ದೀಕ್ಷೆ )ಎಂಬ ಒಂದು ಪದ್ಧತಿ ಇದೆ. ಮತ್ಸ್ಯೇಂದ್ರನಾಥರನ್ನು ಶಿವನಂಶವೆಂದೂ, ಶಿವನೆಂದೂ ಕರೆಯುತ್ತಾರೆ. ಭಾರತೀಯ ಯೋಗ ಪರಂಪರೆಯಲ್ಲಿ ಗೋರಕ್ಷನಾಥರು ಧ್ರುವ ನಕ್ಷತ್ರವೆಂದು ಸಾಧಕರು ಗುರುತಿಸಿದ್ದಾರೆ.

೧೨ನೇ ಶತಮಾನದ ಶಂಕರರ ಅದ್ವೈತ ಬರುವ ಮೊದಲೇ ಎರಡನೇ ಶತಮಾನದಲ್ಲಿ ಗೋರಖರು ಅದ್ವೈತವನ್ನು ಪ್ರತಿಪಾದಿಸಿದ್ದಾರೆ.ಪ್ರತಿಪಾದಿಸಿದ ರೀತಿ ಬೇರೆ ಅಷ್ಟೆ‌.ಶಂಕರರ ಶಂಕರ ದಿಗ್ವಿಜಯದಲ್ಲಿ ಬರುವ ಒಂದು ಘಟನೆಯಲ್ಲಿ, ಒಮ್ಮೆ ಶಂಕರರು( 8ನೆ ಶತಮಾನ) ತಾವು ಬರೆದ ಪ್ರಸ್ಥಾನತ್ರಯಗಳಿಗೆ ಇನ್ನೊಬ್ಬ ಸಮಕಾಲೀನ ಗುರುವಿನ,ಪಂಡಿತನ,ವ್ಯಕ್ತಿಯ ಜೊತೆಯಲ್ಲಿ ಚರ್ಚೆಯಾಗಿ ಒಪ್ಪಿತವಾಗಿ ಸಮಾಜಕ್ಕೆ ಅದನ್ನು ಬಿಡಬೆಕಿತ್ತು.ಪ್ರಸ್ತಾನ ತ್ರಯಗಳ ಬಗ್ಗೆ ಶಂಕರರು ಮಂಡನಮಿಶ್ರನಲ್ಲಿ ಮಾಡಿದ ವಾದದಲ್ಲಿ ಗೆದ್ದರು.ಅದರೆ ಅವನ ಮಡದಿ ಭಾರತಿ ದೇವಿಯಲ್ಲಿ ಸೋಲುವ ಸಂದರ್ಭ ಅನುಭವಗಳನ್ನು ಪಡೆಯಲು ಮೃತ ಶರೀರದ ಪರಕಾಯಪ್ರವೇಶ ಮಾಡಲು ಶಂಕರರು ಯೋಚಿಸುತ್ತಾರೆ.ಆಗ ಶಿಷ್ಯರು ಬಹಳ ಶತಮಾನಗಳ ಹಿಂದೆ ನಾಥ ಪಂಥದ ಪ್ರವರ್ಥಕ ಗುರು ಮತ್ಸ್ಯೇಂದ್ರನಾಥರು ಹೆಣ್ಣೊಬ್ಬಳ ಮಾಯಾಜಾಲದಲ್ಲಿ ಬಿದ್ದು ಒದ್ದಾಡಿದಾಗ ಅವರ ಶಿಷ್ಯ ಗೋರಖರಂತೆ ನಿಮ್ಮನ್ನು ಆ ಮೃತ ದೇಹದಿಂದ ತರಲು ಗೋರಖನಾಥರಲ್ಲಿದ್ದಂಥಹ ಶಕ್ತಿ ನಮ್ಮಲ್ಲಿಲ್ಲ.ಆದುದರಿಂದ ಸತ್ತ ರಾಜನ ಪರಕಾಯ ಪ್ರವೇಶ ಮಾಡುವಾಗ ಒಮ್ಮೆ ಯೋಚಿಸಿ ಎನ್ನುತ್ತಾರೆ.ಅಂದರೆ ಶಂಕರರ ಕಾಲದಲ್ಲೂ ಗೋರಖರಿಗಿದ್ದ ಮೌಲ್ಯ ನಮಗೆ ತಿಳಿಯುತ್ತದೆ.ಶಂಕರರ ಅದ್ವೈತದಲ್ಲಿ " ಬ್ರಹ್ಮ ಸತ್ಯಂ,ಜಗನ್ಮಿಥ್ಯಂ,ಜೀವಾಹ ಬ್ರಹ್ಮಾ ಏವ,ನ ಅಪರಃ" .ಇಲ್ಲಿ ಬ್ರಹ್ಮ ಸತ್ಯ,ಚೈತನ್ಯ ಸತ್ಯ,ಕಾಣುವ ಜಗತ್ತು ಮಿಥ್ಯ,ಮಾಯೆಯಿಂದ ಕೂಡಿದ್ದು,ಅದನ್ನು ನಂಬಬೇಡಿ,ಜೀವ ಈ ಜಗತ್ತಿನದ್ದೇ ಆಗಿದ್ದರೆ ಜೀವ ಈ ಜಗತ್ತಿನ ಜೊತೆಗಿನ ಸಮ್ಮಂದ ಮತ್ತು ಪರಮಾತ್ಮ ಬ್ರಹ್ಮದ ಜೊತೆಗಿನ ಸಮ್ಮಂದ ಆದದ್ದೇ ಆದರೆ ಇಲ್ಲಿ ಕೂಡಾ ಶಂಕರರು ಜಗತ್ತನ್ನು ನಿರಾಕರಣೆ ಮಾಡಿದ್ದಲ್ಲ.ಶಂಕರರ ಮಾಯೆಯ ವ್ಯಾಖ್ಯಾನಕ್ಕೂ, ಗೋರಖರ ಮಾಯೆ ಅಲ್ಲದ ಜಗತ್ತಿನಲ್ಲಿ ಕೂಡಾ ಸತ್ಯ ಇದೆ ಎಂಬ ಒಂದು ಮಾತು ಬರುತ್ತದೆ.ಇಲ್ಲಿ ಮಾಯೆ ಎಂದರೆ ಇದ್ದು ಇಲ್ಲದಂತಾಗುವುದು,ಈ ದೇಹ ಇದೆ,ಈ ಕ್ಷಣಕ್ಕೆ ಸತ್ಯವಾಗಿದೆ, ಕಾಲ ಕಳೆದಂತೆ,ನಮ್ಮ ಕಣ್ಣ ಮುಂದೆ ನಮ್ನ ಅರಿವಿಗೆ ಬರುವಂತೆ ನಮ್ಮ ದೇಹವೇ ನಮ್ಮಿಂದ ಕಾಣದ ಹಾಗೆ -ಇದಕ್ಕೆ ನಾವು ಕೊಟ್ಟುಕೊಂಡ ಹೆಸರು ಮಾಯೆ.ಇದರಲ್ಲಿ ಪಂಚ ಭೂತದ ಜೊತೆಗೆ ಮನಸ್ಸು,ಬುದ್ಧಿ,ಅಹಂಕಾರ ಸೇರಿರುತ್ತದೆ.ತ್ರಿಕಾಲ/ಮೂರು ಕಾಲದಲ್ಲಿ ಅಬಾದಿತವಾದದ್ದು ನಿತ್ಯ,ತ್ರಿಕಾಲದಲ್ಲಿ ಬಾದಿತವಾದದ್ದು ಅನಿತ್ಯ,ಇದನ್ನು ಮಾಯೆ ಎಂದು ಶಂಕರರು ಹೇಳಿದರೆ ಈ ದೃಷ್ಠಿಯಿಂದ ಗೋರಖರು ಜಗತ್ತಿನ ನಿರಾಕರಣೆ ಮಾಡಬೇಡಿ,ಪ್ರಸ್ತುತ ನಮ್ಮ ಎದುರಿಗಿರುವ ದೇಹವನ್ನು,ಬದುಕನ್ನು ನಿರಾಕರಣೆ ಮಾಡಬೇಡಿ, ಇದನ್ನು ನೋಡುವ ನಾನು ಎನ್ನುವ ಸಾಕ್ಷಿ ಪ್ರಜ್ಞೆಯನ್ನು ನೀವು ಮರೆಯಬಾರದು,ಅದು ನೀವು ಎನ್ನುವ ಕಾರಣಕ್ಕೋಸ್ಕರ ಎಂಬುದು ಗೋರಖರ ವ್ಯಾಖ್ಯಾನ.

ಗೋರಖರು ತನ್ನ ಕಾಯವನ್ನು ವಜ್ರಕಾಯ ಮಾಡುತ್ತಿದ್ದರು.ಅಲ್ಲಮ ಮತ್ತು ಗೋರಖನ ನಡುವಿನ ದೊಡ್ಡ ಸಂವಾದದಲ್ಲಿ ವಜ್ರಕಾಯ ಮಾಡಿಕೊಂಡ ಗೋರಖನ ವಜ್ರಕಾಯವನ್ನು ಅಲ್ಲಮ ಗಾಳಿಯಂತೆ ಕತ್ತರಿಸಿದ ವಿಚಾರ ಬರುತ್ತದೆ.ಹನ್ನೆರಡನೆ ಸತಮಾನದ ಅಲ್ಲಮನ ಎದುರು ನಿಂತ ಗುರು ಗೋರಖರು ಎರಡನೇ ಶತಮಾನದ ನಾಥ ಪಂಥದ ಮೂಲ ಪ್ರವರ್ತಕರಲ್ಲ.ಅವರು ಸೋಲುವ ಪ್ರಶ್ಬೆಯೇ ಇಲ್ಲ.ಇಲ್ಲಿ ಬರುವ ಗೋರಖರೇ ಬೇರೆ.ಇಲ್ಲಿ ಇಲ್ಲಿ ಗುರುಗಳ ಪವಾಡ ವಿದ್ಯೆಯ ಅನಾವರಣವಾಗುತ್ತದೆ.ಪವಾಡ ಎಂಬುದು ಗುರುಗಳ ಹೊಸ ಅನ್ವೇಷಣೆ ಎನ್ನಬಹುದು. ನಾಥಪಂಥದ ಜೋಗಿಗಳು ಹುಟ್ಟುವಾಗಲೇ ಗುರುಸ್ಥಾನವನ್ನು ಪಡೆದುಕೊಂಡೇ ಜನಿಸುವವರು. ಯಾವ ಜಾತಿ, ಜನಾಂಗದಲ್ಲೂ 12 ವರ್ಷಗಳಿಗೊಮ್ಮೆ ಗುರು ದೀಕ್ಷೆ ನೀಡುವ, ಪಡೆಯುವ ವ್ಯವಸ್ಥೆ ನಾಥಪಂಥದಂತೆ ಇರುವುದಿಲ್ಲ. ನಾಥಪಂಥದ ಗುರು-ಶಿಷ್ಯರ ಕೊರಳಲ್ಲಿ ಧರಿಸುವ ಸಿಂಗ್ನಾಥದಲ್ಲೂ ನಾಥಪಂಥ ಎದ್ದು ಕಾಣುತ್ತದೆ. ಲಿಂಗಾಯತರಲ್ಲಿ ಎಲ್ಲರಿಗೂ ಲಿಂಗಧಾರಣೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಅಲ್ಲಿ ಲಿಂಗಾಯತ ಧಾರಣೆ ಮಾಡಿದವರು ಕೆಲವೊಂದು ಅನುಷ್ಠಾನಗಳನ್ನು ಮಾಡಬೇಕಾಗುತ್ತದೆ. ಆದರೆ ಗುರುವಿನಲ್ಲಿ ನಾಥ ದೀಕ್ಷೆ ಪಡೆದವರಿಗೆ ಕಠಿಣವಾದ ಅನುಷ್ಠಾನಗಳಿರುವುದಿಲ್ಲ. ನಾಥ ಗುರು ದೀಕ್ಷೆ ಜೋಗಿಗಳಿಗೆ ಆಗದಿದ್ದರೆ ಅವರ ಹುಟ್ಟಿಗೆ ಬೆಲೆ ಇಲ್ಲದಂತಾಗುತ್ತದೆ ಎಂಬ ಅಭಿಪ್ರಾಯವಿದೆ. ನಾಥದೀಕ್ಷೆ ಪಡೆದ ಮೇಲೆ ಗುರುಹಿರಿಯರು,  ಸಂಭಾವಿತರು ಎದುರುಗಡೆ ಸಿಗುವಾಗ ಆದೇಶ್, ಆದೇಶ್, ಆದೇಶ್ ಎಂದು ಮೂರು ಬಾರಿ ಹೇಳಬೇಕು. ಗುರುವಿನ ದೇವರ ಧ್ಯಾನದ ಮೊದಲು ಮತ್ತು ಕೊನೆಗೆ ಇದು ರೀತಿ 3-3 ಬಾರಿ ಆದೇಶ್, ಆದೇಶ್, ಆದೇಶ್ ಎಂದು ಹೇಳಬೇಕು.
   
ಚೌರಂಗಿ ನಾಥರು

     ಜೋಗಿಗಳು ಸಿಂಗ್ನಾಥವನ್ನು ಕೊರಳಲ್ಲಿ ದಾರದ ತುದಿಯಲ್ಲಿ ನೇತು ಹಾಕಿದರೆ ಮಾತ್ರ ಸಾಲದು. ಊದುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. 12 ವರ್ಷಗಳಿಗೊಮ್ಮೆ ಜುಂಡಿಯಲ್ಲಿ ಬರುವ ನಾಥ ಯೋಗಿಗಳು ಸಾವಿರಾರು ಜನಕ್ಕೆ ಗುರು ಉಪದೇಶ ನೀಡುತ್ತಾರೆ. ಆದರೆ ಹೆಚ್ಚಾಗಿ ದೀಕ್ಷೆ ಕೊಟ್ಟ ಬಳಿಕ ಯಾವ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕೆಂದು ಅವರು ಹೇಳಿಕೊಡುವುದಿಲ್ಲ. ನಿತ್ಯ ಕರ್ಮಾನುಷ್ಠಾನ ಹೇಗಿರಬೇಕು? ಆದೇಶವನ್ನು ಹೇಗೆ ಹೇಳಬೇಕು? ಆದೇಶದ ಅರ್ಥವೇನು? ಇದ್ಯಾವ ವಿಚಾರವನ್ನು ಅವರು ತಿಳಿಸುವುದಿಲ್ಲ. ಹಾಗಾಗಲು ಕಾರಣವೇನೆಂದರೆ.. ಹೆಚ್ಚಾಗಿ ಮಠಗಳಿಗೆ ನೇಮಕವಾಗುವ ಗುರುಗಳು ಉತ್ತರ ಭಾರತದವರಾಗಿದ್ದು, ಅವರಿಗೆ ಹಿಂದಿ ಭಾಷೆ ಬಿಟ್ಟು ಪ್ರಾದೇಶಿಕ ಭಾಷೆ ತಿಳಿದಿರುವುದಿಲ್ಲ. ಭಾಷೆಯ ಸಂವಹನ ಕೊರತೆಯಿಂದಾಗಿ ಈ ಸಮಸ್ಯೆ ಉದ್ಭವಿಸುತ್ತದೆ. ಸನ್ಯಾಸಿ ಜೋಗಿಗಳ ಸನ್ಯಾಸಿ ಜೋಗಿಮಠ ಬೇರಿದ್ದರೆ ಆ ಮಠದ ಪರಿಸರದಲ್ಲಿ ಬದುಕು ನಡೆಸುವ ಜೋಗಿಗಳು ಸಂಸಾರಿಗಳಾಗಿರುತ್ತಾರೆ. ಜೋಗಿನಾಥ ಸನ್ಯಾಸಿಗಳು ತಪವಾಚರಿಸುತ್ತಿದ್ದ ಸ್ಥಳದಲ್ಲಿ ನೀರಿನ ನಿಧಿ ಇರುತ್ತಿತ್ತು. ಬಂಟ್ವಾಳ ತಾಲೂಕಿನ ಪುದು ಎಂಬಲ್ಲಿನ ನಾಣ್ಯ ಎಂಬ ಜಾಗದಲ್ಲಿ ನಾಥಯೋಗಿಗಳು ತಪಸ್ಸು ಮಾಡಿದ ಬಗೆಗೆ ಸುಮಾರು ಸಾವಿರ ವರ್ಷಗಳ ಇತಿಹಾಸ ಇದೆ ಎಂದು ಅಲ್ಲಿನ ಹಿರಿ ತಲೆಮಾರಿನವರು ಹೇಳಿದುದನ್ನು ಈಗಿನವರು ನಮಗೆ ತಿಳಿಸುತ್ತಾರೆ. ಅದರ ಕುರುಹಾಗಿ ಅಲ್ಲಿ ಬತ್ತಿಹೋಗದ ನೀರಿನ ಕೆರೆ ಇಂದಿಗೂ ಇದೆ.
                     ಆದಿ ಮೂಲ ಕಾಲ ಬೈರವೆ ಕದಿರೆ ಜೋಗಿ ಮಠ

        ಸನಾತನ ನಾಥಪಂಥ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಗೋರಖಪುರ ಮಠ ಬಹಳಷ್ಟು ಸಾಧುಸಂತರಿಗೆ ಸಿದ್ದಿ ಪುರುಷರಿಗೆ ಆಶ್ರಯ ನೀಡಿದ ಮಠವಾಗಿದೆ. ಉತ್ತರಪ್ರದೇಶದ ಗೋರಖಪುರದ ಶಾಖಾ ಮಠವಾಗಿ ಸ್ವರ್ಣ ಕದಳಿ, ಕದ್ರಿ ಜೋಗಿಮಠ ಕಾಣಸಿಗುತ್ತದೆ. ಬಹಳಷ್ಟು ಸಿದ್ಧಿಪುರುಷರು ಇಲ್ಲಿ ಸಾಧನೆ ಮಾಡಿದ್ದು, ಜೀವಂತ ಸಮಾಧಿಯಾದ ಹಲವು ಸಾಧುಗಳ ಪುಣ್ಯ ಮಠವಿದಾಗಿದೆ. ಸನಾತನ ಸಂಸ್ಕೃತಿಯ ಒಳತಿರುಳನ್ನು ಜಗತ್ತಿಗೆ ಸಾರಿದ ನಾಥ ಯೋಗಿಗಳಿಗೆ ಲಕ್ಷಾಂತರ ಭಕ್ತರಿದ್ದಾರೆ. ದೇಶವ್ಯಾಪಿ ಸಾವಿರಾರು ನಾಥಪಂಥದ ಮಠಗಳಿದ್ದು ಮಠಗಳ ಪೀಠಾಧ್ಯಕ್ಷರನ್ನು ಬಾರಹ್ ಪಂಥಗಳ ಸಾಧುಗಳ ಸಮ್ಮುಖದಲ್ಲಿ ಗೋರಖಪುರ ಮಠದಲ್ಲಿ ನೇಮಕ ಮಾಡುತ್ತಾರೆ. ಪೀಠಾಧ್ಯಕ್ಷರನ್ನು ಅರಸರು, ಪೀಠಾಧ್ಯಕ್ಷರೆಂದು ಕರೆಯುತ್ತಾರೆ. ಮಹಾರಾಜ್, ಯೋಗಿ ಮಹಾರಾಜ್ ಎಂದು ಕರೆಯುತ್ತಾರೆ. ಕದ್ರಿ ಜೋಗಿಮಠ ದಕ್ಷಿಣ ಭಾರತದ ನಾಥಪಂಥದ ಪ್ರಮುಖ ಕೇಂದ್ರವಾಗಿದೆ. ಕದ್ರಿ ಯೋಗೇಶ್ವರ ಮಠದ ಮಹಾರಾಜರು ಕುದುರೆ ಏರಿ ಕದ್ರಿ ಮಂಜುನಾಥನ ರಥದ ಎದುರು ಬರುವಾಗ ಅವರನ್ನು ರಾಜಯೋಗಿ ಎಂದು ಕರೆಯುತ್ತಾರೆ. ನಗ್ನತೆ ಜೋಗಿ ಅವಧೂತರ ಲಕ್ಷಣವಾಗಿದ್ದು, ಅವರಿಗೆ ಅವರ ಕೇಶವೇ ಮಾನ ಕಾಯುವ ಬಟ್ಟೆಯಾಗಿತ್ತು. ಅಕ್ಕಮಹಾದೇವಿ ಕದಿರೆಗೆ ಕೇಶಾಂಬರೆಯಾಗಿ ಬಂದ ವಿಚಾರ ಇದಕ್ಕೆ ನಿದರ್ಶನವಾಗಿದೆ. ನಾಥಪಂಥದ ಬಾರಹ್ ಪಂಥಗಳಿಗೆ, 12 ವರ್ಷಗಳಿಗೊಮ್ಮೆ ಮಠಾಧೀಶರನ್ನು ನೇಮಕ ಮಾಡುವ ಜುಂಡಿಗೆ, 12 ವರ್ಷಗಳಿಗೊಮ್ಮೆ ದೇಗುಲಗಳಲ್ಲಿ ನಡೆಯುವ ಬ್ರಹ್ಮಕಲಶಗಳಿಗೆ, 12 ವರ್ಷಗಳಿಗೊಮ್ಮೆ ದೈವಸ್ಥಾನಗಳಲ್ಲಿ ನಡೆಯುವ ಧರ್ಮನೇಮಗಳಿಗೆ, 12 ವರ್ಷಗಳಿಗೊಮ್ಮೆ ನಡೆಯುವ ಮಸ್ತಕಾಭಿಷೇಕಕ್ಕೆ, ಅರವತ್ತು ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಮೇಲ್ನೋಟಕ್ಕೆ ಯಾವುದೋ ಕಾಲಘಟ್ಟದ ಧಾರ್ಮಿಕ ಚೌಕಟ್ಟಿನ ಸಂಬಂಧವಿರುವುದು ತಿಳಿದುಬರುತ್ತದೆ.ನಾಥ ಪಂಥದ ಗುರುಗಳ ಹೆಸರಿನ ಹಿಂದೆ ಒಂದು ಸಂಖ್ಯೆ(ಈಗಿನ ಗುರುಗಳ ಹಿಂದೆ ಶ್ರೀ ಶ್ರೀ 1008 ಶ್ರೀ ರಾಜಯೋಗಿ ನಿರ್ಮಲ್ ನಾಥ್ ಜಿ ಮಹಾರಾಜ್ ) ಇರುತ್ತದೆ.ಅದು ಇಷ್ಟು ಅರಸರು  ಶ್ರೀ ಮಠದಲ್ಲಿ ಬಂದ ಗುರುಗಳೆಂದು ಹೇಳಲಾಗದು‌.ತುಳುನಾಡಿನ ಸಾರತ್ತೊಂಜಿ ದೈವಗಳ ಕಲ್ಪನೆಗೂ,ದೈವಾರಾದನೆಯನ್ನು ಉಳಿಸಿ ಬೆಳೆಸಿದ ನಾಥ ಪಂಥದ ಗುರುಗಳ ಹಿಂದೆ ಬರುವ ಸಂಖ್ಯೆಗಳಿಗೂ ಏನಾದರೂ ಸಂಬಂದವಿರಬಹುದು.ಅಧ್ಯಯನದಿಂದ ತಿಳಿಯಬೇಕಷ್ಟೆ. ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ (ಕ್ರಿ.ಶ. 1832 - 1903)  ಬರೆದ ಶಬ್ದಕೋಶದಲ್ಲಿ ಜೋಗಿಯ ಬಗೆಗೆ ಹೀಗೆರಡು ಉಲ್ಲೇಖಗಳು ಸಿಗುತ್ತವೆ. 1. "ಜೋಗಿಗೆ ಜೋಗಿ ತಬ್ಬಿಕೊಂಡರೆ ಮೈಯೆಲ್ಲಾ ಬೂದಿ." ಅಂದರೆ ಜೋಗಿಗಳು ಭಸ್ಮಧಾರಣೆ ಮಾಡುತ್ತಿದ್ದುದು ಸ್ಪಷ್ಟ. 2. "ಜೋಗಿ ಜೋಗಿ ತಟ್ಯಾಡಿದರೆ ಬುರುಡೆ ಬುರುಡೆ ತಟ್ಯಾಡೀತು." ಕಿನ್ನರಿ ಜೋಗಿಯ ಕೈಯಲ್ಲಿರುವ ಕಿನ್ನರಿ ಬುರುಡೆಯ ಬಗೆಗೆ ಇದು ತಿಳಿಸುತ್ತದೆ. 


               ಜೋಗಿಗಳ ಆರಾಧನೆಯ ಕಾಲಭೈರವನಿಗೆ ಅರವತ್ತನಾಲ್ಕು ರೂಪಗಳಿದ್ದು, ಅದರಲ್ಲಿ ಪ್ರಧಾನವಾಗಿ ಅಷ್ಟ ಭೈರವರನ್ನು ಜೋಗಿಗಳು ಹೆಚ್ಚಾಗಿ ಆರಾಧಿಸುತ್ತಾರೆ. ಕೆಲವರು ಶಾಖಾಹಾರವಿರಿಸಿ ಆರಾಧಿಸಿದರೆ ಇನ್ನು ಕೆಲವರು ರಕ್ತತರ್ಪಣ ನೀಡಿ ಅಂದರೆ ಮಾಂಸಾಹಾರದ ಎಡೆಯಿಟ್ಟು ಅಂದರೆ ತುಳು ಭಾಷಿಕರ ಪ್ರಕಾರದ ಅಗೆಲು ಹಾಕಿ ವರ್ಷಕ್ಕೊಮ್ಮೆ ಆರಾಧಿಸುತ್ತಾರೆ. 64 ಭೈರವರ ಆರಾಧಕರಾದ ನಾಥ ಯೋಗಿಗಳು 64 ಮಂತ್ರ ತಂತ್ರ ಸಿದ್ಧಿ ಸಾಧಕರಾಗಿದ್ದಾರೆ. ಅಷ್ಟ ಭೈರವರಲ್ಲಿ ಅಸಿತಾಂಗ ಭೈರವ, ರುರು ಭೈರವ, ಚಂಡ ಭೈರವ, ಕ್ರೋಧ ಭೈರವ, ಉನ್ಮತ್ತ ಭೈರವ, ಕಪಾಲ ಭೈರವ, ಭೀಷಣ ಭೈರವ, ಸಂಹಾರ ಭೈರವರು ಕಾಣಸಿಗುತ್ತಾರೆ. ಈ ಭೈರವರ ಹೆಸರಿನ ಆರಂಭದಲ್ಲಿ ಓಂ ಸೇರಿಸಿ ಕೊನೆಗೆ ನಮಃ ಸೇರಿಸಿದರೆ ಅದು ಕಾಲಭೈರವನ ಬೀಜಮಂತ್ರವಾಗುತ್ತದೆ. ಉದಾ: "ಓಂ ಅಸಿತಾಂಗ ಭೈರವಾಯ ನಮಃ" ಹೀಗೆ. ಆದಿನಾಥನಾದ ಶಿವನ ಆರಾಧಕರಾದ ನವನಾಥರು ಜೋಗಿಗಳ ಪರಮಗುರುಗಳಾಗಿ ಕಾಣಸಿಗುತ್ತಾರೆ. ನವನಾಥರಾದಿಯಾಗಿ ಯೋಗಿ, ಜೋಗಿಗಳಿಗೆ ಸರ್ವವಂದ್ಯ ಶಿವ, ಭೈರವ ಆದಿಗುರುಗಳಾಗಿದ್ದಾರೆ. ಮತ್ಸ್ಯೇಂದ್ರನಾಥ (ಮೀನಾನಾಥ ,ಮಚ್ಛಂದರ್/ಮಚ್ಚೇಂದ್ರ, ಮಚ್ಚಘ್ನ, 9-10ನೇ ಶತಮಾನದ ಯೋಗ ಸಿದ್ದರು), ಗೋರಕ್ಷನಾಥ (ಗೋರಖ್ - 10 -11 ನೇ ಶತಮಾನ )ಮತ್ಸ್ಯೇಂದ್ರನಾಥರ ಶಿಷ್ಯರು ಜಾಲಂಧರನಾಥ (ಜಾಲಂಧರಿ - 13ನೇ ಶತಮಾನ), ಕಾನಿಷನಾಥ (10ನೇ ಶತಮಾನ), ಗಹಿನಿನಾಥ, ಭರ್ತೃಹರಿನಾಥ (ಯೋಗಿಯಾಗಲು ತನ್ನ ರಾಜ್ಯವನ್ನು ತ್ಯಜಿಸಿದ ಉಜ್ಜಯಿನಿಯ ರಾಜ), ರೇವನನಾಥ (ಮಧ್ಯಕಾಲೀನ ನೇಪಾಳ ಮತ್ತು ಪಂಜಾಬ್‌ನಲ್ಲಿ ಪೂಜಿಸಲ್ಪಟ್ಟ ಸಿದ್ಧ, 13ನೇ ಶತಮಾನ), ಚಾರ್ಪತಿನಾಥ (ಚರಪಟಿನಾಥ) ಮತ್ತು ಗಂಗಾನಾಥ. ಇವರುಗಳು ನಾಥ ಪಂಥದ ನವನಾಥರುಗಳಾಗಿದ್ದಾರೆ. ಅವರಲ್ಲದೆ ಚೌರಂಗಿನಾಥ (ಕೌರಂಗಿ, ಬಂಗಾಳದ ರಾಜ ದೇವಪಾಲನ ಮಗ, ರಾಜ್ಯ ತ್ಯಜಿಸಿದವ), ಕಾರ್ಪಾತ್ (ಹಿಮಾಲಯದ ಚಂಬಾ ಪ್ರದೇಶದಲ್ಲಿ ವಾಸವಾಗಿದ್ದರು), ಗೋಪಿಚಂದ್ (ಬಂಗಾಳದ ರಾಣಿಯ ಮಗ, ರಾಜ್ಯ ತ್ಯಜಿಸಿದ), ಧರ್ಮನಾಥ್ (15ನೇ ಶತಮಾನದಲ್ಲಿದ್ದ ನಾಥಸಿದ್ದ ಯೋಗಿ, ಕಛ್ ಪ್ರದೇಶದಲ್ಲಿ ಮಠ ಸ್ಥಾಪಿಸಿದ) ಮತ್ತು ಮಸ್ತನಾಥ್ (18ನೇ ಶತಮಾನದಲ್ಲಿ ಹರಿಯಾಣದಲ್ಲಿ ಸಿದ್ಧಮಠ ಸ್ಥಾಪಿಸಿದ). ಈ ನಾಥ ಶ್ರೇಷ್ಠರು ಕಾಣಸಿಗುತ್ತಾರೆ.
            ಗೋರಕ್ಷನಾಥ ಮಂದಿರ ಕದ್ರಿ ಜೋಗಿ ಮಠ

      ನವನಾಥರ ಕುರುಹಾಗಿ ಜೋಗಿಗಳು ಒಂಭತ್ತೆಳೆಯ ಜನಿವಾರ ಧರಿಸಿದರೆ ಸಕಲೇಶಪುರ ಮೂಡಿಗೆರೆ ಶೈವ ಒಕ್ಕಲಿಗರ ಮದುವೆಗಳಲ್ಲಿ 12 ಕಂಬಗಳ ಚಪ್ಪರ ಹಾಕಿ 12 ಐರಾಣಿ ಗಡಿಗೆಗಳನ್ನಿಟ್ಟು (ಐರಾಣಿ = ಮದುವೆ ಮನೆಗಳಲ್ಲಿ ಅಲಂಕಾರಿಕ ಚಿತ್ರ ಬರೆದಿರುವ ಗಡಿಗೆ) ಪೂಜಿಸುತ್ತಾರೆ. ಇದು ನಾಥಪಂಥದ ಬಾರಹ್ (12 = ಬಾರಹ್) ಪಂಥಗಳಿಗೆ ಅವರು ಕೊಡುವ ಗೌರವವಾಗಿದೆ. ಕೃಷಿ ಸಂಸ್ಕೃತಿಯ ಒಕ್ಕಲಿಗರಲ್ಲಿ ನಾಥಪಂಥದ ಛಾಯೆ ಕಾಣುತ್ತದೆ.ಅವರು ಸುಳ್ಯ ಭಾಗದಲ್ಲಿ ಸಿದ್ಧ ವೇಷ ಹಾಕಿ,ಬೆಳ್ತಂಗಡಿಯಲ್ಲಿ ಪುರ್ಸೆ ಕಟ್ಟುನಿ ಎಂದು ಪುರುಷ ವೇಷ ಹಾಕಿ ನಾಥ ಪಂಥದ ಪ್ರಚಾರ ಮಾಡುತ್ತಾರೆ . 64 ಭೈರವರಲ್ಲಿ ಹಾಗೂ ಕರ್ನಾಟಕದ ಕರಾವಳಿ ಭಾಗದ ತುಳುನಾಡಿನಲ್ಲಿ ಆರಾಧಿಸಲ್ಪಡುವ ಶಕ್ತಿಗಳಿಗೂ ಸಂಬಂಧ ಕಾಣಸಿಗುತ್ತದೆ. ಏಕೆಂದರೆ ಹೆಚ್ಚಿನ ದೈವೀಶಕ್ತಿಗಳನ್ನು ತುಳುನಾಡಿನ ಅದೇಷ್ಟೋ ಜಾತಿ ಜನಾಂಗದ ಹಿರಿ ತಲೆಮಾರಿನ ಧರ್ಮಿಷ್ಟರಿಗೆ ನಾಥಯೋಗಿಗಳು ತಾಂತ್ರಿಕ ಶಕ್ತಿಯನ್ನು ಭಸ್ಮದ ಮೂಲಕ ನೀಡಿದ್ದರು. 12ನೇ ಭೈರವ - ಪರಮ ಭೈರವ - ಕಾಳಾತ್ರಿ, 19 - ಕ್ಷೇತ್ರಪಾಲ ಭೈರವ/ಕ್ಷೇತ್ರಬಾಲ ಭೈರವ - ಸುಶ್ಕಾಮಿ, 23 - ಪ್ರೇಕ್ಷಕ ಭೈರವ - ಧೂಮ್ರಾಕ್ಷಿ, 28 - ಪ್ರಚಂಡ/ಪ್ರಖಂಡ ಭೈರವ - ವೀರ ಕೌಮಾರಿ, 30 - ಅಂತಖ ಭೈರವ - ವಾರಾಹಿ, 33 - ಸಂಹಾರ ಭೈರವ - ಭೈರವಿ (ಎಡೆ ಮಾಂಸಾಹಾರದ್ದು), 34 - ರುಂಡಮಾಲಾ ಭೈರವ - ಧೂಮ್ರಾಂಕಿ, 37 - ಪಿಂಗಳೇಕ್ಷ ಭೈರವ - ಖಡ್ಗಿನಿ, ಖಡ್ಗೇಶ್ವರಿ, 41 - ಕುಲ ಭೈರವ - ಕಾಳಿ ಹಾಗೂ 8 ನೇ ಭೈರವ ಸಂಹಾರ ಭೈರವನಿಗೆ (ಗಣೇಶ್ವರ ಯೋಗಿನಿ - ಗಣಗಳ ನಾಯಕ, ಯೋಗಿನಿ) ಎಡೆ ಮಾಂಸಾಹಾರದ್ದಾಗಿದೆ. 

                            ದುನಿ ಕದ್ರಿ ಜೋಗಿ ಮಠ

ಕಾಲಭೈರವನ ಆರಾಧಕರಾದ ನಾಥಯೋಗಿಗಳ ಜೊತೆಗೆ ಒಂದು ಕಪ್ಪು ನಾಯಿ ಇರುತ್ತಿದ್ದು, ಅವರು ಸಂಚಾರ ಮಾಡುವಾಗ ಆ ನಾಯಿಯನ್ನು ಹೆಗಲ ಮೇಲಿರಿಸಿ ನಡೆಯುತ್ತಿದ್ದರು ವಿನಃ ನಡೆಸುತ್ತಿರಲಿಲ್ಲ. ಅವರು ನೂರಾರು ಮೈಲಿ ನಡೆದು ಹೋಗುವಾಗ ನಾಯಿಯ ಜೊತೆಗೆ ಕೈಯಲ್ಲೊಂದು ದಂಟೆ ಇರುತ್ತಿತ್ತು. ಶೈವ ಸಿದ್ಧಾಂತದ ಮೂರು ತತ್ವಗಳೆಂದರೆ ಪಶು-ಪತಿ-ಪಾಶ. ಪಶು ಎಂದರೆ ಜೀವ, ಪತಿ ಎಂದರೆ ಶಿವ, ಪಾಶ ಎಂದರೆ ವಾತ, ಪಿತ್ತ, ಕಫಾದಿ ಮಲತ್ರಯಗಳು. ಶಿವ ಜಗತ್ತಿಗೆ ಮೂಲಕಾರಣವನಾದರೆ ಶಕ್ತಿ ಅಲ್ಲಿ ನಿಮಿತ್ತ ಕಾರಣ. ಮಾಯೆ ಉಪಾದಾನ ಕಾರಣ. ಉಪಾದಾನ ಎಂದರೆ ಉಸಿರು, ಪ್ರಾಣ. ಗಂಡು ಹೆಣ್ಣು ಸೇರಿ ಸೃಷ್ಟಿ ಹೇಗೆ ಎಂಬುದನ್ನು ಬ್ರಹ್ಮನಿಗೆ ಆರಂಭದಲ್ಲಿ ತೋರಿಸಿಕೊಟ್ಟವ ಶಿವ. ಇಲ್ಲಿ ಬ್ರಹ್ಮನಿಗೆ ಶಿವ ಅರ್ಧನಾರೀಶ್ವರ ರೂಪವನ್ನು ತೋರಿಸಿದ. ಮುಂದೆ ಬ್ರಹ್ಮ ಒಂದು ಹೆಣ್ಣಿನಿಂದ (ಹೆಣ್ಣಿನೊಡಗೂಡಿ) ಸೃಷ್ಟಿಯನ್ನು ಆರಂಭಿಸಿದ. ಮುಂದೆ ಗಂಡು ಹೆಣ್ಣಿನ ಮಾನಸಿಕ ಒಪ್ಪಿತವಾದ, ದೈಹಿಕ ಮಿಲನದಿಂದ ಮಾನವ ಜನಾಂಗ ಬೆಳೆಯತೊಡಗಿತು. ಹಾಗಾಗಿ ಗಂಡು ಹೆಣ್ಣು ಮಿಲನವಾದಾಗ ಬ್ರಹ್ಮನಂತೆ ಹೊಸತು ಜೀವಕ್ಕೆ ಸೃಷ್ಟಿಕರ್ತರಾಗುತ್ತಾರೆ. ಪಾಲನೆಯ ಜವಾಬ್ದಾರಿಯೂ ಅವರಿಗಿರುತ್ತದೆ.ಇದೇ ಶಿವ ತತ್ವದ ಮೇಲೆ ನಂಬಿಕೆ ಇರಿಸಿದ ಮತ್ಸ್ಯೇಂದ್ರನಾಥರು ಕೇವಲ ಪುರುಷ ಸಿದ್ದಿ ಮಾತ್ರ ಸಾಧನೆಯಲ್ಲ,  ಪುರುಷ ಮತ್ತು ಸ್ತ್ರೀ ತತ್ವಗಳು ಸೇರಿದಾಗ ಮಾತ್ರ ದೊಡ್ಡದೊಂದು ಲೋಕದ ಸಾಧನೆಯಾಗಲು ಸಾಧ್ಯ,ಇದರಿಂದ ಮಾತ್ರ ಲೋಕದ ಬದುಕನ್ನು ಕಟ್ಟಲು ಸಾಧ್ಯ ಎಂದು ತನ್ನ ಶಿಷ್ಯ ಗೋರಖನಿಗೆ ತಿಳಿಸಿದರೆ ಗೋರಖರು ಅದನ್ನು ಒಪ್ಪಲಿಲ್ಲ.ಇಲ್ಲಿಂದ ಮುಂದೆ ಮತ್ಸ್ಯೇಂದ್ರರ ಮತ್ತು ಗೋರಖರ ನಡುವೆ ತತ್ವ ಸಿದ್ಧಾಂತದ ಕವಲೊಡೆಯುತ್ತದೆ . 

       ಶಿವನ ತ್ರಿಶೂಲದ ಮೂರು ಮುಖಗಳು ಇಚ್ಛಾ, ಕ್ರಿಯಾ, ಜ್ಞಾನಶಕ್ತಿಗಳ ಸಂಕೇತಗಳು. ತುಳುನಾಡಿನ ಹೆಚ್ಚಿನ ಜನಾಂಗಗಳು ಭೈರವ ಭೈರವಿಯರನ್ನು ಆರಾಧಿಸುತ್ತಿದ್ದು, ವರ್ಷಕ್ಕೊಮ್ಮೆ ಗುಡ್ಡದ ಮರಗಳ ಬುಡದಲ್ಲಿ, ದನದ ಹಟ್ಟಿಯ ಬಾಗಿಲಲ್ಲಿ (ಭೈರವಿಗೆ) ಮಾಂಸಾಹಾರದ ಎಡೆ (ಅಗೆಲು) ಬಡಿಸುತ್ತಾರೆ. ಮನುಷ್ಯ ಶರೀರದ ಕುಂಡಲಿನೀ ಶಕ್ತಿಯನ್ನು ಚಾಲನಗೊಳಿಸಿ, ಆರು ಚಕ್ರಗಳ ಮೂಲಕ ಕೊಂಡೊಯ್ದು, ಏಳನೇ ಚಕ್ರವಾದ 'ಸಹಸ್ರಾರ ಚಕ್ರ'ದಲ್ಲಿ ನಿಲ್ಲಿಸುವ ಮೂಲಕ ಸಮಾಧಿ ಸ್ಥಿತಿಯಲ್ಲಿ ಪರಮಾತ್ಮನ ದರ್ಶನವನ್ನು ಮಾಡುವ ಯೋಗ ಮಾರ್ಗವನ್ನು ಕಲಿಸಿದ ನಾಥಪಂಥ ಜನಸಾಮಾನ್ಯರನ್ನು ಹೆಚ್ಚು ಆಕರ್ಷಿಸಿದೆ. ನಾಥಪಂಥದಲ್ಲಿ ಅಘೋರಿ ಪರಿವಾರ ಎನ್ನುವಂಥದ್ದು ಬಹಳ ಶ್ರೇಷ್ಠವಾದದ್ದು. ಗುರು ಗೋರಕ್ಷಸನಾಥರು ಒಬ್ಬ ಅಘೋರಿಯಾಗಿದ್ದರು ಎಂಬುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಮೂಲಾಧಾರ ಚಕ್ರ, ಸ್ವಾದಿಷ್ಟಾನ ಚಕ್ರ, ಮಣಿಪುರ ಚಕ್ರ, ಈ ಮೂರು ಚಕ್ರಗಳು ಅಧೋಮುಖವಾಗಿ ಹಾವುತಲೆ ಕೆಳಗೆ ಹಾಕಿದಂತೆ ಇದ್ದರೆ, ಅನಾಹತ ಚಕ್ರ, ವಿಶುದ್ದಿ ಚಕ್ರ, ಅಜ್ಞಾ ಚಕ್ರ ಮತ್ತು ಸಹಸ್ರಾರ ಚಕ್ರ ಊರ್ದ್ವ ಮುಖವಾಗಿರುತ್ತದೆ.

                    ಶಾಸನ ಕದ್ರಿ ಜೋಗಿ ಮಠ

       ಮೂಲಾಧಾರ ಚಕ್ರದಿಂದ ಸಹಸ್ರಾರ ಚಕ್ರದವರೆಗೆ 7 ನಿರ್ನಾಲ ಗ್ರಂಥಿಗಳಿರುತ್ತವೆ. ಮೂಲಾಧಾರ ಚಕ್ರ ಮೂತ್ರಕೋಶದ ಪಕ್ಕದಲ್ಲಿದ್ದರೆ, ಸ್ವಾಧಿಷ್ಠಾನ ಚಕ್ರ ಹೊಕ್ಕುಳ ಕೆಳಗಿರುತ್ತದೆ. ಮೂರನೆ ಚಕ್ರ ಮಣಿಪುರ ಚಕ್ರ ಹೊಕ್ಕುಳ ಕುಳಿಯಿಂದ ಎಡಬಲದಲ್ಲಿ ಕೇಂದ್ರೀಕೃತವಾಗಿದ್ದರೆ ಮುಂದಿನ ಊರ್ದ್ವಮುಖವಾದ ಅನಾಹತ ಚಕ್ರ ಹೃದಯದ ಬಳಿ ಇರುತ್ತದೆ. ಮುಂದೆ ಸಿಗುವ ವಿಶುದ್ಧಿ ಚಕ್ರ ಕುತ್ತಿಗೆಯ ಕಿರುನಾಲಿಗೆಯ ತುದಿಯಲ್ಲಿರುತ್ತದೆ. ಮುಂದಿನ ಅಜ್ಞಾ ಚಕ್ರ ಭ್ರೂಮದ್ಯೆ ಬಲಗಣ್ಣಿಗೆ ತಾಗಿರುತ್ತದೆ. ಮುಂದಿನದು ತಲೆಯಿಂದ12 ಅಂಗುಲದ ಮೇಲೆ ಸಹಸ್ರಾರ ಚಕ್ರವಿರುತ್ತದೆ. ಪ್ರಾಣಾಯಾಮದ ಪ್ರಾಣ ಶಕ್ತಿಯಿಂದ ಈ ಚಕ್ರಗಳನ್ನು ಜಾಗೃತಗೊಳಿಸಬೇಕೆಂಬುದನ್ನು ಅಷ್ಟಾಂಗ ಯೋಗದ ಯೋಗಗುರು, ಗುರು ಗೋರಖನಾಥರು ಸಿದ್ಧಿಯ ಮೂಲಕ ತಿಳಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರಲ್ಲಿ ದೈವಶಕ್ತಿ ನಿದ್ರಾವಸ್ಥೆಯಲ್ಲಿರುತ್ತದೆ. ಆ ಶಕ್ತಿಯನ್ನು ತಾಂತ್ರಿಕ ಶಾಸ್ತ್ರಗಳು ಕುಂಡಲಿನೀ ಶಕ್ತಿ ಎಂದು ಕರೆದಿವೆ. ನಿರಂತರ ಶಿವಾರಾಧನೆ, ಯೋಗ, ಧ್ಯಾನದಿಂದ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುವ ವಿಧಿವಿಧಾನವನ್ನು ನಾಥ ಯೋಗಪಂಥ ತಿಳಿಸಿದೆ. ಜನ್ಮಗಳ ಪುಣ್ಯಬಲ, ಸಾಧನೆ, ಮಮತೆ, ಪ್ರೀತಿ ತುಂಬಿದ ಹೃದಯ, ಫಲ ಬಯಸದೆ ಈ ಜನ್ಮದಲ್ಲಿ ಸಾಧನೆ ಆರಂಭಿಸಿ, ಪೂರ್ಣ ಮೋಕ್ಷಕ್ಕೆ ಪಾರ್ವತೀ ಸ್ವರೂಪವಾದ ಕುಂಡಲಿನೀ ಶಕ್ತಿಯೇ ಗತಿ ಎಂಬುದನ್ನು ನಾಥ ಯೋಗಿಗಳು ಅರಿತಿದ್ದರು. ಇಂದಿನ ಸಾಧನೆ ನಾಳಿನ ಫಲಿತವಾಗುವುದೆಂಬುದನ್ನು ಬಲವಾಗಿ ನಂಬಿದ್ದರು. ಸಮಾಧಿ ಸ್ಥಿತಿ ಏರಿದ ವ್ಯಕ್ತಿ ಆನಂದಪೂರ್ಣವಾಗಿ ಎಲ್ಲ ಬಂಧನದಿಂದ ದೂರವಾಗುತ್ತಾನೆ. ಈ ಶಕ್ತಿ ಶಿವನನ್ನು ಬಿಟ್ಟಿಲ್ಲ. ಈ ಸ್ಥಿತಿ ಮುಟ್ಟಬೇಕಾದರೆ, ಕುಂಡಲಿನೀ ಶಕ್ತಿ ಚಾಲನೆಗೆ ಬರಬೇಕಾದರೆ ಅದನ್ನು ಪ್ರೇರೇಪಿಸುವ ಆಸನ, ಪ್ರಾಣಾಯಾಮಗಳು ಬೇಕು.ಈ ಆಸನ, ಪ್ರಾಣಾಯಾಮಗಳಿಗೆ ನಾಥಪಂಥ ಹೆಚ್ಚು ಗಮನ ನೀಡಿದೆ. 32 ಲಕ್ಷಣದ ಶಿಷ್ಯ 36 ಲಕ್ಷಣದ ಗುರುವಿನಿಂದ ದೀಕ್ಷೆ ಪಡೆಯುತ್ತಾನೆ. ಜ್ಞಾನ, ವಿವೇಕ, ನಿರಾಲಂಬ, ಸಂತೋಷ, ಶೀಲ, ಸಹಜ, ಶೂನ್ಯ, ಸಮಾಧಿ - ಈ ಎಂಟು ಗುಣಗಳನ್ನು ನಾಲ್ಕು ನಾಲ್ಕು ವಿಭಾಗ ಮಾಡಿ, 32 ಲಕ್ಷಣಗಳನ್ನು (8×4=32, ಪ್ರತಿಯೊಂದು ಗುಣಗಳನ್ನು 4 - 4 ವಿಭಾಗ ಮಾಡಿ) ನಾಥ ಯೋಗಿಗಳು ತಿಳಿಸಿದ್ದಾರೆ. ವಟದ ಪೂಜೆ ಮಾಡಿ ವಟಸಿದ್ದ ನಾಗನಾಥರು ಉದಿಸಿದ್ದಾರೆ. ನಾಥರಲ್ಲಿ ಒಬ್ಬರಾದ ನಾಗನಾಥ ಅವರ ಬಗೆಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗುವುದಿಲ್ಲ. ಎರಡು ಅಂಗೈಗಳನ್ನು ಬಿಡಿಸಿ ಹಿಡಿದು ಸ್ವಲ್ಪ ಒಳಭಾಗಕ್ಕೆ ಬೆರಳುಗಳನ್ನು ಬಾಗಿಸಿ ಹಿಡಿಯುವುದನ್ನು 'ಗುರುಮುದ್ರೆ' ಎನ್ನುತ್ತಾರೆ. ಯೋಗಸಾಧನೆಯಲ್ಲಿ ಗುರುವಂದನೆಯನ್ನು ಇದೇ ಮುದ್ರೆಯಲ್ಲಿ ಮಾಡುತ್ತಾರೆ.
                ಕಾನ್ ಫಟ್-ಕೆಬಿಟ್  ಕರ್ಣ ಕುಂಡಲ
                              ನಿವೃತ್ತಿ ನಾಥ್ ಹಾವೇರಿ.ಮೊದಲು ಕಿವಿಯಲ್ಲಿ ಧರಿಸುವ ಇದನ್ನು ಮಣ್ಣಿನಿಂದ ಮಾಡಿದರೆ ಮುಂದೆ ಲೋಹದಿಂದ ಮಾಡುತ್ತಾರೆ 

        ಜೋಗಿಗಳನ್ನು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಕರ್ನಾಟಕದ ತುಳುನಾಡಿನಲ್ಲಿ ಜೋಗಿಗಳನ್ನು ಪುರುಸೆರ್, ಜೋಗಿಲು ಎಂದು ಕರೆಯುತ್ತಾರೆ. ಇಲ್ಲಿನ ಜೋಗಿಗಳು ಕೃಷಿ, ವ್ಯಾಪಾರ, ಸರಕಾರಿ-ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತಿದ್ದು, ದೈವ ದೇಗುಲಗಳಲ್ಲಿ ವಾದ್ಯ ಊದುವವರನ್ನು ಸೇರಿಗಾರನಕುಲು, ವಾದ್ಯದಕುಲು ಎಂದು ಕರೆಯುತ್ತಾರೆ.  ಬಾರ್ಕೂರು, ಪೆರ್ಡೂರು ಬಳೆ ವೃತ್ತಿ ಮಾಡುವ ಜೋಗಿಗಳನ್ನು ಬಳೆಗಾರ ಜೋಗಿಗಳು ಎಂದು ಕರೆಯುತ್ತಾರೆ. ಹಂದಿ ಸಾಕಿ ಜೀವನ ಸಾಗಿಸುವ ಜೋಗಿಗಳನ್ನು ಹಂದಿಜೋಗಿಗಳೆಂದು ಕರೆಯುತ್ತಾರೆ. ಒಂದು ಪ್ರಾಣಿಯ ಹೆಸರಿನೊಂದಿಗೆ ಒಂದು ಜಾತಿ ಜನಾಂಗವನ್ನು ಗುರುತಿಸುವುದು ನಾಥಪಂಥದ ಜೋಗಿ ಜಾತಿ ಸಮುದಾಯದಲ್ಲಿ ಮಾತ್ರ. ಬೆಂಗಳೂರು, ಹಾಸನ, ಮೈಸೂರು, ಮಡಿಕೇರಿಗಳಲ್ಲಿ ಹಂದಿ ಜೋಗಿಗಳು ಕಾಣ ಸಿಗುತ್ತಾರೆ. ಇವರನ್ನು ಹಂದಿಜೋಗಿ, ಹಂಡೆಜೋಗಿಗಳೆಂದು ಕರೆಯುತ್ತಾರೆ. ಹಂಡೆ/ಹಂಡಿ/ಹಂದಿ ಜೋಗಿ ಕಿನ್ನರಿ ಜೋಗಿಗಳ ಒಳಪಂಗಡ ಆಗಿದ್ದು, ಇನ್ನೆರಡು ಪಂಗಡಗಳಾಗಿ ಬಾಲ ಜೋಗಿ ಮತ್ತು ಎಣ್ಣೆ ಜೋಗಿಗಳು ಕಂಡುಬರುತ್ತಾರೆ. ಕಿನ್ನೂರಿ ನುಡಿಸುತ್ತಾ, ಹಾಡುವ ಕಿನ್ನರಿ ಅಥವಾ ಕಿಂದರಿಜೋಗಿಗಳನ್ನು ಹರಕೆ ಜೋಗಿಗಳು, ಅರ್ಜುನ ಜೋಗಿಗಳು, ಭೈರವ ಜೋಗಿಗಳು, ಜೋಗಯ್ಯ, ಜೋಗಪ್ಪ ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ನರ್ಸಣ್ಣ ಜನಾಂಗದವರು ತಾವು ಜೋಗಿಗಳು, ಪುರುಷರು ಎಂದು ನಾಥಪಂಥದ ಪ್ರಚಾರ ಮಾಡಿದರೂ, ಅವರು ಜೋಗಿ ಜಾತಿ ಪಂಗಡದೊಳಗೆ ಕಾಣಸಿಗುವುದಿಲ್ಲ. ಆದರೆ ಜನರು ಅವರನ್ನು ಜೋಗಿಯಣ್ಣ, ಪುರ್ಸಣ್ಣ ಎಂದು ಕರೆಯುತ್ತಾರೆ.

                  ಶಾಸನ ಕದ್ರಿ ಜೋಗಿ ಮಠ

        ಇವರು ಕರ್ನಾಟಕ-ಕೇರಳ ಗಡಿ ಭಾಗವಾದ ಕಾಸರಗೋಡು ಜಿಲ್ಲೆಯ ಪೈವಳಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಡುಕಲ್ಲು, ಮಂಜೇಶ್ವರ ತಾಲೂಕಿನ ಆನೆಕಲ್ಲು, ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಅಡ್ಕಸ್ಥಳದಲ್ಲಿ ವಾಸಿಸುತ್ತಿದ್ದಾರೆ. ಕಡುಬಡತನದಲ್ಲಿ ಇವರು ಬದುಕುತ್ತಿದ್ದರೂ, ತಮ್ಮ ಕಷ್ಟಗಳನ್ನು ಮರೆತು ಬೇರೆಯವರ ಕಷ್ಟಗಳಿಗೆ ಸಾಂತ್ವಾನ ನೀಡುತ್ತಾರೆ. ಬ್ರಹ್ಮಕಪಾಲ ಹಿಡಿದ ಶಿವನನ್ನು ಜೋಗಿ ಎಂದು ನಂಬಿದವರು ನಾಥಪಂಥಿಗಳು. "ಜೋಳಿಗೆ ಪಾಡ್ನಾಯೆ ಜೋಗಿ" ಎಂಬ ಮಾತು ಜೋಗಿಗಳ ಬಗೆಗೆ ತುಳುನಾಡಿನಲ್ಲಿ ಪ್ರಚಲಿತದಲ್ಲಿದೆ. ನಾಥಪಂಥದ ಯೋಗಿಗಳಿಗೆ ಶಿವಧ್ಯಾನವೇ ಆಹಾರ, ನೀರು. ಭಸ್ಮ.ಜಟೆಯೇ ಮಾನವನ್ನು ಕಾಯುವ ವಸ್ತ್ರ.

                  ‌‌‌    ಶಾಸನ ಕದ್ರಿ ಜೋಗಿ ಮಠ.
ವಿಜಯ ನಗರದ ಅರಸ ವಿಜಯ ಭೂಪತಿ ರಾಯರ ಗ್ರಾನೈಟ್ ಕಲ್ಲಿನ ಮೇಲೆ ಬರೆದ ಕನ್ನಡ ಶಾಸನ.ಈ ಶಾಸನವನ್ನು ಮಂಗಳೂರಿನ ದೊರೆ ನಾಗಣ್ಣ ಅವರು ಕ್ರಿ,ಶ.1423ರಲ್ಲಿ ಹೊರಡಿಸಿದ್ದಾರೆ.(ಶಾಸನ ಓದಿದವರು-ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ-ಪ್ಲೀಚ್ ಇಂಡಿಯಾ ಫೌಂಡೇಶನ್.ಹೈದರಾಬಾದ್ ನ ಇತಿಹಾಸ ಮತ್ತು ಪುರಾತತ್ವ ಸಂಶೋದಕ.)

   
                        12ನೇ ಶತಮಾನದ ಭೈರವ ಶಿಲ್ಪ

       ಜೋಗಿಗಳಲ್ಲಿ ಹುಟ್ಟಿನಿಂದ ಸಾವಿನವರೆಗೆ ಆಚರಣೆಗಳಲ್ಲಿ ಭಿನ್ನತೆ ಇದೆ. ನಾಥಪಂಥದ ಗುರುಗಳನ್ನು ಅವರ ದೇಹಾಂತ್ಯದ  ಬಳಿಕ ಪದ್ಮಾಸನ ಹಾಕಿ ಕುಳ್ಳಿರಿಸಿ, ಉಪ್ಪು, ಸಕ್ಕರೆ ಮಿಶ್ರಣ ಮಾಡಿ ಹೂಳು ಗುಂಡಿಯಲ್ಲಿ ಪದ್ಮಾಸನದ ಭಂಗಿಯಲ್ಲಿ ಹೂತಿಡುತ್ತಾರೆ. ಜನಸಾಮಾನ್ಯ ಜೋಗಿಗಳನ್ನು ಉತ್ತರ ದಕ್ಷಿಣಾದಿಯಾಗಿ ಹೂಳುತ್ತಾರೆ. ಯಾವುದೇ ಕಾರಣಕ್ಕೂ ದೇಹವನ್ನು ಚಿತೆಯಲ್ಲಿಟ್ಟು ಬೆಂಕಿ ಹಚ್ಚುವುದಿಲ್ಲ. ಆದರೆ ಪ್ರಾದೇಶಿಕವಾಗಿ ಭಿನ್ನತೆ ಇರಲೂಬಹುದು. ಸತ್ತ ಬಳಿಕ ಹೆಣದ ಬಾಯಿಗೆ ಚಿನ್ನದ ನೀರು ಬಿಟ್ಟರೆ, ಹೂಳುವಾಗ ಶಿವಲಿಂಗವನ್ನು ಜೋಳಿಗೆಯೊಳಗೆ ಇಟ್ಟು ಹೆಗಲಿಗೆ ನೇತು ಹಾಕಿರುತ್ತಾರೆ. ಜೋಗಿಯಾಗಿ ದೀಕ್ಷೆ ತೆಗೆದುಕೊಂಡರೆ, ಜೋಳಿಗೆ ಹಾಕಿಕೊಂಡು ವರ್ಷಕ್ಕೆ ಒಮ್ಮೆಯಾದರೂ "ಅಲಖ್ ನಿರಂಜನ್, ಸಬ್ ದುಃಖ್ ಭಂಜನ್" ಎಂದು ಹೇಳಿ ಮೂರು ಬಾರಿ ಆದೇಶ್ ಹೇಳಿ ತಮ್ಮ ಪಾಲಿಗೊದಗಿದ ಭಿಕ್ಷೆಯನ್ನು, ಭಿಕ್ಷೆ ಬೇಡಿದ ಮನೆಯಿಂದ ಸ್ವೀಕರಿಸಬೇಕು. ತುಳುನಾಡಿನಲ್ಲಿ ಓಲಗದ ಅಥವಾ ವಾಲಗದ ಜೋಗಿ ಪುರುಷರು ಅಷ್ಟಮಿ ಮತ್ತು ಚೌತಿಯ ಹಬ್ಬದ ದಿನ ಊರಿನಲ್ಲಿ ಸಂಚರಿಸಿ, ಮನೆಮನೆಗೆ ತೆರಳಿ ಕೊಂಬು ವಾದ್ಯ ಊದಿ, ಅಲ್ಲಿ ದೊರೆತ ಅಕ್ಕಿ ತೆಂಗಿನಕಾಯಿಯನ್ನು ಸ್ವೀಕರಿಸುತ್ತಾರೆ. ಜೋಗಿಗಳ ಭಿಕ್ಷೆಯ ಇನ್ನೊಂದು ರೂಪವಿದು. ಆದರೆ ಅವರು ಯಾವುದೇ ಕಾರಣಕ್ಕೂ ಸ್ವಜಾತಿ ಬಾಂಧವರ ಮನೆಯಲ್ಲಿ ಭಿಕ್ಷೆ ಬೇಡುವುದಿಲ್ಲ. "ಅಲಖ್ ನಿರಂಜನ್, ಸಬ್ ದುಃಖ್ ಭಂಜನ್" ಎಂದರೆ ಮನೆ ಮನದೊಳಗೆ ಅಡಗಿರುವ "ಕಣ್ಣಿಗೆ ಕಾಣದ ದುಷ್ಟಶಕ್ತಿಗಳು ಈಗಲೇ ಹೊರಟು ಹೋಗಲಿ" ಎಂದರ್ಥ. ಈ ಸಾಲುಗಳು ಜೋಗಿಗಳಿಗೆ ಮಂತ್ರ ಸಿದ್ದಿಯಷ್ಟೇ ಶ್ರೇಷ್ಠ. ಕಣ್ಣಿಗೆ ಕಾಣದ, ಕಳಂಕರಹಿತ, ಕಪ್ಪು ಚುಕ್ಕಿ ಇಲ್ಲದ ಎಂಬುದು ಒಳಾರ್ಥ. ಅಂಜನ ಶಬ್ದಕ್ಕೆ ಬೇರೆ ಬೇರೆ ಅರ್ಥಗಳಿವೆ. ಬಣ್ಣದ ಲೆಕ್ಕದಲ್ಲಿ ಕಪ್ಪು, ಕಣ್ಣಿನ ಬೊಂಬೆ ಕಪ್ಪು. ಅಂಜನ ಎಂದರೆ ಕಣ್ಣು. ಅಂಜನ ಎಂದರೆ  ಕವಡೆ. ಕವಡೆ ಜ್ಯೋತಿಷ್ಯವೂ ಪ್ರಾಮಾಣಿಕವಾಗಿದ್ದರೆ ಕಷ್ಟ ಕ್ಲೇಶಳನ್ನು ಕಳೆಯುವ ಒಂದು ವಿಧಾನವಾಗುತ್ತದೆ. ಈ ಸಾಲುಗಳನ್ನು ಹೀಗೆಲ್ಲ ಅರ್ಥೈಸಬಹುದು. 

    ಮಾತಿನ ಆರಂಭದಲ್ಲಿ ಮತ್ತು ಮಾತಿನ ಕೊನೆಗೆ ಜೋಗಿಗಳು ಮೂರು ಬಾರಿ ಅದೇಶ್ ಹೇಳಲೇಬೇಕು. "ಅದೇಶ್ ಇತಿ ಸದ್ವಾಣೀಂ,, ಸರ್ವ ದ್ವಂದ್ವ ಕ್ರಿಯಾಪದಾಂ; ಯೋಯೋ ಹ್ಯೇನಾಂ ಪ್ರತಿವದೇತ್, ಸರ್ವಾತ್ಮಾ ನಶ್ವರಂ ಭವೇತ್." ಇಲ್ಲಿ ಆತ್ಮ-ಜೀವಾತ್ಮ-ಪರಮಾತ್ಮನ ಅನುಸಂಧಾನ ಕಂಡುಬರುತ್ತದೆ. ನೋಡಲು ಈ ಸಾಲುಗಳು ಅದ್ವೈತ ತತ್ವದಂತೆ ಕಾಣುವುದು.ಶಂಕರಾಚಾರ್ಯರ ಅದ್ವೈತದಲ್ಲಿ ಅಹಂ ಬ್ರಹ್ಮಾಸ್ಮಿ, ತತ್ವಮಸಿ ತತ್ವಗಳು ಕಂಡುಬರುತ್ತದೆ. ಇಲ್ಲಿ ಆತ್ಮ- ಪರಮಾತ್ಮನ ಅನನ್ಯ ಸಂಬಂಧ ತಿಳಿಯುತ್ತದೆ. ಆದೇಶ್ ಎಂದು ಮೂರು ಬಾರಿ ಉಚ್ಚರಿಸುವಾಗ ನಮ್ಮ ಮನದಲ್ಲಿ ಅಡಗಿರುವ ದ್ವೇಷ, ಅಸೂಯೆ, ಕೋಪ, ಮತ್ಸರ ನಾಶವಾಗುತ್ತದೆ. ಶರೀರ ನಶ್ವರವಾದರೂ ಆತ್ಮ ಶಾಶ್ವತವಾಗಿರುತ್ತದೆ. ದೇವರಿಗೆ, ಗುರುಗಳಿಗೆ, ಸಜ್ಜನರಿಗೆ, ಜೋಗಿಗಳು ಜೋಗಿಗಳಿಗೆ ವಂದಿಸುವಾಗ 3 ಬಾರಿ ಆದೇಶ್ ಹೇಳಲೇಬೇಕು. "ಓಂ ನಮಃ ಕಾಲಭೈರವ ನಮಃ" ಎಂದು ಬೆಳಗಿನ ಹೊತ್ತು 108 ಬಾರಿ ಕಾಲಭೈರವನ ಬೀಜಮಂತ್ರ ಹೇಳಿದರೆ, ಮನೆ-ಮನಗಳಿಗೆ ಬರುವ ಸರ್ವ ದುರಿತಗಳು ನಾಶವಾಗುತ್ತವೆ. ಮಹಾಮೃತ್ಯುಂಜಯನ ಸ್ವರೂಪವಾದ ಕಾಲಭೈರವನ ಬೀಜಮಂತ್ರ ನಿತ್ಯ ಪಠಿಸಿದರೆ ಅಲ್ಲಿ ಮೃತ್ಯು ಬಾಧೆಯಾಗಲೀ ದುಷ್ಟಶಕ್ತಿ, ದಾರಿದ್ರ್ಯಗಳಾಗಲೀ ಸುಳಿಯುವುದಿಲ್ಲ.

                     ಈಗಿನ  ಕದ್ರಿ ಜೋಗಿ ಮಠ

          ಕಾಲಭೈರವನನ್ನು ಬೇರೆ ಬೇರೆ ಜಾತಿ ಜನಾಂಗದವರು ಆರಾಧಿಸಿದರೂ ಜೋಗಿಗಳಿಗೆ ಕಾಲಭೈರವ ದೇವರೂ ಹೌದು, ದೈವವೂ ಹೌದು. ಆದುದರಿಂದ ಅವನನ್ನು ಎರಡು ರೀತಿಯಾಗಿಯೂ ಆರಾಧನೆ ಮಾಡುತ್ತಾರೆ. ಈ ಹಿಂದೆ ಶೈವ ದೇಗುಲಗಳಲ್ಲಿ ಜೋಗಿ ಅರ್ಚಕರು ಇದ್ದು, ಕಾಲಾಂತರದಲ್ಲಿ ಅಲ್ಲಿಗೆ ವೈದಿಕ ಅರ್ಚಕವರ್ಗ ಬಂದು ಶಿವದೇಗುಲಗಳಲ್ಲಿ ಭಸ್ಮದ ಬದಲು ವೈಷ್ಣವಾರಾಧನೆಯ ಗಂಧ ಚಂದನ ಸೇರಿಕೊಂಡಿತು. ಶಿವನಿಗೆ ಅರ್ಚಿಸಬೇಕಾದ ಬಿಲ್ವಪತ್ರೆ ಮಾಯವಾಗಿ ಶಿವನ ಆರಾಧನೆಯಲ್ಲಿ ತುಳಸಿಯ ಉಪಯೋಗ ಕಂಡು ಬಂತು. ಎಲ್ಲಿಯವರೆಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆಯೆಂದರೆ ಇಂದು ವಿಷ್ಣುವಿನ ಆರಾಧನೆಯ ಗೋವಿಂದಾ, ಗೋವಿಂದಾ ಎಂದು ಗೋವಿಂದ ಕೂಗುವ ಕ್ರಮ, ದೈವಗಳ ಬಂಡಿ ಎಳೆಯುವಾಗ, ದೇವಿಯ ದೇಗುಲದ ಮಂಗಳಾರತಿಯ ಕೊನೆಗೆ, ಶಿವನ ಆರಾಧನೆಯ ಮಂಗಳಾರತಿಯ ವೇಳೆಗೆ ಗೋವಿಂದಾ, ಗೋವಿಂದಾ ಎನ್ನುತ್ತಿದ್ದೇವೆ. ನಮಗೆ ಅದರ ಅರ್ಥ ತಿಳಿಯದೆ, ನಾವು ಗುಂಪಿನೊಳಗೆ ನಮ್ಮದೂ ಇರಲಿ ಅಂದು ಗೋವಿಂದ ಅನ್ನಿ ಗೋವಿಂದಾ ಎಂದು ಕೂಗುತ್ತಿದ್ದೇವೆ. ಇಲ್ಲಿ ಪ್ರತಿಯೊಂದು ಆರಾಧನೆಯ ಮೇಲೆ ವೈಷ್ಣವತೆಯ ಪ್ರಭಾವ ನಮಗರಿವಿಲ್ಲದಂತೆ ಸೇರಿಕೊಳ್ಳುತ್ತಿದೆ. ಮಂಜುನಾಥನ ದೇಗುಲದಲ್ಲಿ ತೇರೆಳೆಯುವಾಗಲೂ ಶಿವನಾಮ ಹರಹರ ಮಹಾದೇವಾ ದ ಸ್ಮರಣೆಯ ಬದಲು, ದೇವಿಯ ದೇಗುಲದ ರಥ ಎಳೆಯುವಾಗಲೂ ದೇವಿಯ ನಾಮಸ್ಮರಣೆಯ ಬದಲು, ದೈವಗಳ ಬಂಡಿ ಎಳೆಯುವಾಗಲೂ ಆಯಾ ದೈವವನ್ನು ಕರೆಯುವ ಬದಲು ತಿಳಿದೋ ತಿಳಿಯದೆಯೋ ಗೋವಿಂದ ಹಾಕುತ್ತಿದ್ದೇವೆ. ಇದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. 

                                 ಕಾಲಭೈರವ

   ಉಡುಪಿ, ಕುಂದಾಪುರ, ಕೊಲ್ಲೂರಿನ ಬಳಿಯ ಮಾಸ್ತಿ ಕಟ್ಟೆಯಲ್ಲಿ, ಕೋಟದ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಇಂದಿಗೂ ಜೋಗಿ ಅರ್ಚಕರು ಪೂಜೆ ಮಾಡುತ್ತಿದ್ದಾರೆ.ಕೊಲ್ಲೂರು ಕೊಡಚಾದ್ರಿ ಬೆಟ್ಟದ ಮದ್ಯದಲ್ಲಿ ನಾಥ ಪಂಥದ ಕಾಳಭೈರವನ ಆರಾಧನೆಯಿದೆ. ವಿಟ್ಲ ಡೊಂಬಹೆಗ್ಗಡೆ ಅರಮನೆಯ ಆಡಳಿತದ ವಿಟ್ಲ ಪಂಚಲಿಂಗೇಶ್ವರ ದೇಗುಲದಲ್ಲೂ ಕಾಳಭೈರವನಿಗೆ ಆರಾಧನೆಯಿದೆ .

ನಾಥಪಂಥದ ಜೋಗಿಗಳು ತುಳುನಾಡಿನಲ್ಲಿ ಬಹಳ ಹಿಂದಿನಿಂದಲೂ ಬದುಕನ್ನು ಕಟ್ಟಿಕೊಂಡು ಬಂದಿದ್ದಾರೆ. ಈಗೀಗ ಒಳ್ಳೆಯ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಯಲ್ಲಿದ್ದರೂ, ಮೂಲದಲ್ಲಿ ಬಹಳಷ್ಟು ಬಡತನದಿಂದ ಬದುಕಿದ್ದರು. ಅವರಿಗೆ ತುಳುನಾಡನ್ನು ಪ್ರವೇಶಿಸುವಾಗ ಹೊಸದಾಗಿ ಬಂದ ಸ್ಥಳದ ಪರಿಚಯವಿಲ್ಲದ ಕಾರಣ ಊರಿನವರ ಕೂಲಿ ಕೆಲಸಕ್ಕೆ ಸೇರಬೇಕಾಯಿತು. ಆಗಿನ ಕಾಲದಲ್ಲಿ ಸರಿಯಾದ ವಿದ್ಯಾಭ್ಯಾಸ ಇಲ್ಲದ ಕಾರಣ, ಅವರು ಬದುಕಿಗಾಗಿ ವಾದ್ಯಗಳನ್ನು ಊದಿ ನಾಲ್ಕಾರು ಕಾಸು ಪಡೆಯುತ್ತಿದ್ದ ಕಾರಣ ಹಿಂದಿನ ದೈವಸ್ಥಾನಗಳ ಮುಖ್ಯಸ್ಥರು ದೈವದ ಸೇವೆಗೆಂದು ವಾದ್ಯ ಊದಲು ಅವರನ್ನು ನೇಮಿಸಿ, ಅವರಿಗೆ ಒಂದಷ್ಟು ಭೂಮಿಯನ್ನು ಉಂಬಳಿಯಾಗಿ ಕೊಟ್ಟರು. ಆ  ಭೂಮಿಯಲ್ಲಿ ವರುಷದ ಆರು ತಿಂಗಳು ದುಡಿದು ಬಂದುದೇ ಅವರಿಗೆ ಸಿಗುವ ಸಂಬಳವಾಗಿತ್ತು. ಉಳಿದಂತೆ ದೈವಸ್ಥಾನಗಳಲ್ಲಿ ದೈವ ನರ್ತನ ಆಗುವಾಗ ಅವರು ವಾದ್ಯಸೇವೆ ಮಾಡಿದಾಗ ಅವರಿಗೆ ಹಣದ ರೂಪದಲ್ಲಿ ಏನೂ ಸಿಗುತ್ತಿರಲಿಲ್ಲ. ಆದರೆ ಈಗ ಮಾತ್ರ ಅವರ ಸೇವೆಗೆ ಹಣ ಸಿಗುತ್ತದೆ. ತಂತ್ರ ಮಂತ್ರ ಸಿದ್ಧಿಯ ಯೋಗಿಗಳು ಪೂಜೆ ಪುನಸ್ಕಾರ ಮಾಡುವುದರಲ್ಲಿ, ದೋಷ ನಿವಾರಣೆ ಮಾಡುವಲ್ಲಿ ಅದೆಷ್ಟೋ ಕಷ್ಟ ಕಾರ್ಪಣ್ಯದಿಂದ ಬಳಲುತ್ತಿದ್ದವರನ್ನು ರಕ್ಷಿಸಿದ್ದಾರೆ. ತುಳುನಾಡನ್ನು ಆಳುತ್ತಿದ್ದ ಅರಸರು ವೈದಿಕ ಪೌರೋಹಿತ್ಯಕ್ಕೆ ಗಮನ ನೀಡಿದ ಕಾರಣ ಜೋಗಿ ಅರ್ಚಕ ವರ್ಗದವರು ದೈವ ದೇವಾಲಯದಿಂದ ದೂರವೇ ಉಳಿದು ಮಠಗಳಲ್ಲಿ ಮಾತ್ರ ಅರ್ಚಕ ವೃತ್ತಿಯಲ್ಲಿ ಮುಂದುವರಿಯುವಂತಾಯಿತು.ಶೈವ ನಾಥ ಪಂಥದ ಮಠಗಳಲ್ಲಿ ನಾಥ ಪಂಥದ ಮೂಲ ಕಾಲ ಭೈರವನಿಗೆ ಅರಸರು ನಿತ್ಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದರು.ಅಲ್ಲಿ ದೇವಾಲಯದಂತೆ ವರ್ಣಾಶ್ರಮ ಧರ್ಮದ ವೈಷ್ಣವ ವೈದಿಕರಿಂದ ವರ್ಣಾಸ್ರಮ ಪದ್ಧತಿಯನ್ನು ವಿರೋಧಿಸಿದ ಶೈವ ಶಿವ,ಕಾಲಭೈರವನಿಗೆ ಪುನಃ. ಪ್ರತಿಷ್ಠೆ,ಬ್ರಹ್ಮ ಕಲಶಗಳ ಆಚರಣೆ ಇರಲಿಲ್ಲ.ಆದರೆ ಒಂದಷ್ಟು ವರ್ಷಗಳ ಹಿಂದಿನಿಂದ ಜೋಗಿಗಳ ಮಠಕ್ಕೂ ವೈದಿಕತೆ ಪ್ರವೇಶಿಸಿದೆ. ತಾಂತ್ರಿಕ ವಿಧಿ ವಿಧಾನ, ಮಂತ್ರಸಿದ್ಧಿ ಅನುಷ್ಠಾನದಲ್ಲಿ ಹಿಂದಿನಿಂದಲು ಜೋಗಿ ಅರ್ಚಕರು ಯಾರಿಗೂ ಕಡಿಮೆಯಲ್ಲ ಎಂಬುದನ್ನು ಹಲವಾರು ದೇಗುಲಗಳಲ್ಲಿ ಅರ್ಚಕ ವೃತ್ತಿ ಮಾಡಿ ಜೋಗಿಗಳು ನಿರೂಪಿಸಿದ್ದಾರೆ. 

ಕುದುರೆ ಮೇಲೆ ಕುಳಿತ ಜೋಗಿ ಅರಸರು,ಕದಿರೆ ಜೋಗಿ ಮಠ.ಚಿತ್ರ-ಧರ್ಮದೈವ

       ಕೆಲವೊಂದು ಮೂಲಗಳ ಪ್ರಕಾರ ಊಟಿಯ ವನ್ಯಜೀವಿಧಾಮದಲ್ಲಿ ಗುರು ಮತ್ಸ್ಯೇಂದ್ರನಾಥರು ತಪಸ್ಸನ್ನಾಚರಿಸಿದ್ದರು. ಅಲ್ಲಿ ಬೆಟ್ಟದ ತುದಿಯಲ್ಲಿ ಎಲ್ಲಾ ಕಾಲಗಳಲ್ಲೂ ನೀರು ಬತ್ತಿಹೋಗದ ಕೆರೆಯೊಂದು ಬಂಡೆಯ ಮೇಲಿದೆ. ಮತ್ಸ್ಯೇಂದ್ರರು ಅಲ್ಲಿಂದ ನೀರನ್ನು ಒಯ್ದು ಶಿವನ ಆರಾಧನೆ, ಅಭಿಷೇಕ ಮಾಡುತ್ತಿದ್ದ ವಿಚಾರ ತಿಳಿದು ಬರುತ್ತದೆ. ಚಿತ್ರದುರ್ಗ ಪೇಟೆಯಿಂದ 10 ಕಿ.ಮೀ ದೂರದಲ್ಲಿ ಜೋಗಿಹಟ್ಟಿ(ಮಟ್ಟಿ) ಎಂಬ ಸ್ಥಳವಿದೆ. ಮತ್ಸ್ಯೇಂದ್ರರು ಅಲ್ಲಿರುವಾಗ ಕೇವಲ ನಾಥಪಂಥದ ಪ್ರಚಾರ ಮಾತ್ರ ಮಾಡದೆ, ಬೇರೆ ಬೇರೆ ಕಾಯಿಲೆಯಿಂದ ನರಳುತ್ತಿದ್ದ ಜನಸಾಮಾನ್ಯರಿಗೆ ಊಟಿಯ ವನ್ಯಜೀವಿಧಾಮದಿಂದ ತಂಡ ಗಿಡ ಬಳ್ಳಿಗಳಿಂದ ಸಿದ್ಧೌಷಧ ತಯಾರಿಸಿ ಸಾವಿನ ದವಡೆಯಿಂದ ಅಲ್ಲಿನ ಜನರನ್ನು ಬದುಕಿಸಿದ್ದಾರೆ. ಅಲ್ಲಿಯ ಜನ ಅವರನ್ನು ಪವಾಡ ಪುರುಷರೆಂದು ಕರೆದಿದ್ದಾರೆ. ಅಲ್ಲಿ ಅವರು ಬಹಳಷ್ಟು ದೇಗುಲಗಳನ್ನು ನಿರ್ಮಿಸಿ ದೇವರ ಆರಾಧನೆಯನ್ನು ಮಾಡಿದ್ದಾರೆ. ಬೆಟ್ಟದ ತುದಿಯಲ್ಲಿ ಅವರು ತ್ರಿಶೂಲ ಸ್ಥಾಪನೆ ಮಾಡಿದ್ದು, ಅದಿತ್ಯವಾರದಂದು ಜನರು ಆ ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಬಂಟ್ವಾಳ ತಾಲೂಕಿನ ಅನಂತಾಡಿ ಎಂಬಲ್ಲಿ ಜೋಗಿಬೆಟ್ಟು/ಜೋಗಿಬೊಟ್ಟು ಎಂಬ ಸ್ಥಳವಿದೆ. 

ಮರ್ಲ್ ಜುಮಾದಿದೈವ ಉಜ್ಜಾಲ್ ನ ಮೇಲೆ .ಕದ್ರಿ  ಜೋಗಿ ಮಠ

        ಜೋಗಿಗಳು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳ್ನಾಡು, ಕೇರಳ ಮತ್ತು ಗುಜರಾತ್ ರಾಜ್ಯಗಳಲ್ಲಿ ಕಂಡುಬರುತ್ತಾರೆ. ನಾಥ ಜೋಗಿಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬದುಕುವಾಗ ಅಲ್ಲಿನ ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡುತ್ತಾರೆ. ಗೋವಾದಲ್ಲಿ, ಮಾಡಗಾಂವ್ ಎಂಬ ಪಟ್ಟಣವು ಮಠ ಗ್ರಾಮದಿಂದ (ಮಠ - ಮಡ, ಗ್ರಾಮ - ಗಾಂವ್) ಉದಿಸಿರಬೇಕೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಕರ್ನಾಟಕದಲ್ಲಿ ಒಟ್ಟು 51 ನಾಥಪಂಥ ಮಠಗಳಿದ್ದು ಭಾರತದಾದ್ಯಂತ 36 ನಾಥಪಂಥದ ಪವಿತ್ರ ಕ್ಷೇತ್ರಗಳು ಕಾಣಸಿಗುತ್ತವೆ. ಗಿರಿನಾರ್, ತ್ರಯಂಬಕೇಶ್ವರ, ಅಂಜನೇರಿ ಪರ್ವತ, ಸಪ್ತಶೃಂಗಘಡ, ವಜ್ರೇಶ್ವರಿ, ವೃದ್ದೇಶ್ವರ್, ಗರ್ಭಗಿರಿ, ಬತ್ತೀಸಿರಾಳ, ಉಜ್ಜಯಿನಿ, ಆಲಂದಿ, ಅಯೋಧ್ಯಾ, ದ್ವಾರಕಾ, ಹರಿದ್ವಾರ, ಬದರೀನಾಥ, ಕೇದಾರನಾಥ, ವೃಂದಾವನ, ರಾಮೇಶ್ವರ, ನೇಪಾಳ, ಅಮರನಾಥ, ಹಿಂಗ್‌ಲಾಜಾ, ಪೇವಾ (ಕುರುಕ್ಷೇತ್ರ), ಪಾಲ್ವಾ, ನೇಹನ್ ಪಟ್ಟಣ, ಪೌಯ್ ಧೂನಿ, ಹಂಡಿಬಡಂಗ್, ಶ್ರೀ ಕದಳಿ (ಮಂಗಳೂರು, ಕರ್ನಾಟಕ), ಪಾತಾಳ ಭುವನೇಶ್ವರ್, ದುಡ್ಲು ದೇಲಕ್, ಚೌಕ್ ತಪ್ಪೆ/ಪಂಚೌರ್, ಗೋರಖ್‌ಟಿಲ್ಲ, ಮನಾಫರಾ/ಕಛ್, ರಥಾತೊಂಡ/ಅಜಮೀರ್, ಗಂಗಾಸಾಗರ್/ಬಂಗಾಳ, ಜೋಗಿಗುಫಾ/ದಿನಾಜ್‌ಪುರ್, ಅಭೂಹರ್/ಪಂಜಾಬ್, ಜಕ್ವಾರ್/ಗುರುದಾಸ್ ಪುರ್ - ಇವುಗಳೇ ಆ 36 ಪುಣ್ಯ ಸ್ಥಳಗಳು. ನಾಥಪಂಥವು ಯುಗಾಂತರಗಳ ಸಂಬಂಧವನ್ನು ಹೊಂದಿತ್ತೆಂಬುದು ನಾಥಪಂಥದ ಕೆಲವೊಂದು ಮೂಲ ಪ್ರವರ್ತಕರನ್ನು ನೋಡುವಾಗ ತಿಳಿಯುತ್ತದೆ. ಸತ್ಯಯುಗದಲ್ಲಿ ಬ್ರಹ್ಮಮೂಲ ಪ್ರವರ್ತಕನಾದ ಸತ್ಯನಾಥ್ ಪಂಥ, ತ್ರೇತಾಯುಗದಲ್ಲಿ ರಾಮಮೂಲ ಪ್ರವರ್ತಕನಾದ ರಾಮನಾಥ್, ಲಕ್ಷ್ಮಣ ಮೂಲ ಪ್ರವರ್ತಕನಾದ ನಟೇಶ್ವರಿ/ಧರಿಯಾನಾಥ್, ಹನುಮಾನ್ ಜೀ ಮೂಲಪ್ರವರ್ತಕನಾದ ದ್ವಜಾಪಂಥ್, ದ್ವಾಪರಯುಗದಲ್ಲಿ ಧರ್ಮರಾಯ ಮೂಲ ಪ್ರವರ್ತಕನಾದ ಧರ್ಮನಾಥ್, ಭೀಷ್ಮ ಮೂಲ ಪ್ರವರ್ತಕರಾದ ಗಂಗಾನಾಥ್ ಇವರುಗಳನ್ನು ನೋಡುವಾಗ ನಾಥಪಂಥದ ಅನಾದಿ ತಿಳಿದುಬರುತ್ತದೆ. 

ಮಂಜುಶ್ರೀ ಬೋದಿಸತ್ವ  ಹಾಗೂ ಬುದ್ದ ಕದ್ರಿ ಮಂಜುನಾಥ ದೇವಸ್ಥಾನ

ನಾಥಪಂಥದಲ್ಲಿ ಬಾರಹ್ ಪಂಥಗಳಿದ್ದು, ಅವುಗಳ ಮೂಲ ಪ್ರವರ್ತಕರು, ಅದು ಇದ್ದ ಸ್ಥಳಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಪಂಥ-ಸತ್ಯನಾಥ್-ಮೂಲಪ್ರವರ್ತಕ-ಬ್ರಹ್ಮ-ಇದ್ದ ಸ್ಥಳ-ಒರಿಸ್ಸಾದ ಪಾತಾಳ ಭುವನೇಶ್ವರ, ಧರ್ಮನಾಥ್-ಧರ್ಮರಾಯ-ನೇಪಾಳದ ದುಡ್ಲು ದೇಲಕ್, ರಾಮಾನಾಥ್-ಶ್ರೀ ರಾಮ, ಗೋರಖ್‌ಪುರದ ಚೌಕ್ ತಪ್ಪೆ ಪಂಚೌರ, ಧರಿಯಾನಾಥ್/ನಟೇಶ್ವರಿ-ಲಕ್ಷ್ಮಣ-ಪಂಜಾಬಿನ ಗೋರಖ್ ಟಿಲ್ಲಾ, ಕನ್ನಡಿ/ಕಂಥಡ್-ಶ್ರೀಗಣೇಶ್-ಕಛ್‌ನ ಮಾನಾಫರಾ, ಕಪಾಲಾನಿ-ಕಪಿಲಮುನಿ-ಬಂಗಾಳದ ಗಂಗಾಸಾಗರ್, ಭೈರಾಗ್-ರಾಜಾಭರ್ತೃಹರಿ-ಅಜಮೀರ್‌ನ ರಥಾದೊಂಡಾ ಪುಷ್ಕರ್, ಮಾನ್ ನಾಥ್-ರಾಜ ಗೋಪಿಚಂದ್-ರಾಜಸ್ಥಾನ್, ಆಯೀ ಪಂಥ್-ಭಗವತಿ ವಿಮಲಾದೇವಿ-ಬಂಗಾಳದ ಜೋಗಿಗುಫಾ ದೀನಾಜ್ ಪುರ್, ಪಾಗಲ್ ಪಂಥ್-ಚೌರಂಗಿನಾಥ್/ಪೂರಣ ಭಗತ್-ಪಂಜಾಬಿನ ಅಭೋಹರ, ದ್ವಜಾಪಂಥ್-ಹನುಮಾನ್ ಜೀ-ಸರ್ವತ್ರ ಅಂದರೆ ಎಲ್ಲಾ ಕಡೆ ಮತ್ತು ಗಂಗಾನಾಥ್-ಭೀಷ್ಮ ಪಿತಾಮಹ-ಪಂಜಾಬಿನ ಜಕ್ವಾರ್ ಗುರುದಾಸ್ ಪುರ.  ಇವುಗಳು ಬಾರಹ್ ಪಂಥ್ ಹಾಗೂ ಅದರ ಮೂಲ ಪ್ರವರ್ತಕರು ಮತ್ತು ಅದು ಇದ್ದ ಸ್ಥಳವಾಗಿದೆ.

  
     ‌‌‌‌‌‌‌‌‌ಕಾಲ ಬೈರವನ ಮೂಲ  ವಿಗ್ರಹ ಕದ್ರಿ ಜೋಗಿ ಮಠ

         ನಾಥ ಯೋಗಿಗಳ ಅತ್ಯಂತ ಪ್ರಾಚೀನ ಪ್ರತಿಮಾ ಶಾಸ್ತ್ರವು (ಪ್ರತಿಮೆ-ಆರಾಧನೆ) ಕೊಂಕಣ ಪ್ರದೇಶ ಅಂದರೆ ಮಹಾರಾಷ್ಟ್ರ, ಗೋವಾ, ಕರ್ನಾಟಕದ ಕರಾವಳಿಗಳಲ್ಲಿ ಕಂಡುಬರುತ್ತದೆ. ಆದಿನಾಥ ಸಂಪ್ರದಾಯವು ನಾಥ ಸಂಪ್ರದಾಯದ ಹಿಂದಿನ ದೊಡ್ಡ ಸಾಧು ಉಪ ಪಂಗಡವಾಗಿದ್ದು, ಈ ಸಂಪ್ರದಾಯದ ಅನುಯಾಯಿಗಳಿಗೆ ದೀಕ್ಷೆಯನ್ನು ನೀಡಲಾಯಿತು. ಇವರು ನಗ್ನ ಸಾಧುಗಳಾಗಿ ಗುಹೆ, ಗುಡಿಸಲು, ಪಾಳುಬಿದ್ದ ಮನೆಗಳಲ್ಲಿ ಯೋಗಸಿದ್ಧಿ ಮಾಡುತ್ತಿದ್ದರು. ಆದಿನಾಥ ಸಂಪ್ರದಾಯದ ಉಲ್ಲೇಖವನ್ನು ರಾಜ ಮೋಹನ್ (1964) ಅವರು ನಾಥಪಂಥದ ಬಾರಹ್ ಪಂಥದ ವಿಭಾಗಗಳಲ್ಲಿ ಪಟ್ಟಿಮಾಡಿದ್ದಾರೆ. ಜಾರ್ಜ್ ವೆಸ್ಟನ್ ಬ್ರಿಗ್ಸ್ ಹೇಳುವಂತೆ (1938) ಆದಿನಾಥನು ಮತ್ಸ್ಯೇಂದ್ರನಾಥರ ಹಿಂದಿನ ಯೋಗಿಯಾಗಿರಬಹುದು. ಆದಿನಾಥನ ಶಿಷ್ಯ ಮತ್ಸ್ಯೇಂದ್ರನಾಥರು ನಾಥಪಂಥದ ಸಂಸ್ಥಾಪಕರಾದರೆ ಮತ್ಸ್ಯೇಂದ್ರನ ಶಿಷ್ಯ ಗೋರಕನಾಥರು ನಾಥಪಂಥದ ಪ್ರವರ್ತಕರಾಗಿ ಕಂಡುಬರುತ್ತಾರೆ. ಆದಿನಾಥ ಸಂಪ್ರದಾಯದಲ್ಲಿ ಅಧಿಕೃತ ಗುರುಸ್ಥಾನವನ್ನು ಹೊಂದಿರುವ ಕೊನೆಯ ಸಾಧು ಶ್ರೀ ಗುರುದೇವ ಮಹೇಂದ್ರನಾಥ್ ಅವರು 1991ರಲ್ಲಿ ನಿಧನರಾಗಿದ್ದಾರೆ. ಆದರೆ ಆದಿನಾಥನೇ ವೈದ್ಯನಾಥ, ಶಿವನೆಂದು ಜೋಗಿಗಳು ನಂಬಿದ್ದಾರೆ. ಪಂಪ ಮಹಾಕವಿಯ 'ಆದಿಪುರಾಣ' ಮಹಾಕಾವ್ಯದಲ್ಲಿ ಆದಿನಾಥನ(ಇಲ್ಲಿನ ಆದಿನಾಥ ಶಿವ/ಶೈವ ಅದಿನಾಥನಾಗಿರಲು ಸಾಧ್ಯವಿಲ್ಲ.ಜೈನ ಆದಿನಾಥನಾಗಿರಬಹುದು) ಉಲ್ಲೇಖವಿದೆ. ಪಾರಸಿ ಮತ್ತು ಮರಾಠಿ ಆಕರಗಳಲ್ಲಿ ನಾಥಪಂಥದ ಮಾಹಿತಿ ಸಿಗುತ್ತದೆ.
      ತ್ರಿಲೋಕೇಶ್ವರ ಪ್ರತಿಮೆ ಕದಿರೆ ಮಂಜುನಾಥ ದೇವಸ್ಥಾನ

      ನಾಥಪಂಥಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟವರು ಗುರು ಗೋರಕ್ಷನಾಥರು. ನಾಥ ಪಂಥವನ್ನು ಅವರ ಹೆಸರಿನ ಜೊತೆಗೆ ಗುರುತಿಸುವುದುಂಟು. ನಾಥಪಂಥವನ್ನು ಗೋರಖ ಪಂಥವೆಂದು, ನಾಥಪಂಥದ ಅನುಯಾಯಿಗಳನ್ನು ಗೋರಖನಾಥಿಗಳೆಂದು ಕರೆಯುತ್ತಾರೆ. ನೇಪಾಳದ ಜನ ಗೋರಖನಾಥರನ್ನು ದೇವರೆಂದು ಪೂಜಿಸುತ್ತಾರೆ. ನೇಪಾಳದ ಇನ್ನೊಂದು ಹೆಸರು ಗೊರಖ ದೇಶ. ನೇಪಾಳದ ಪ್ರಜೆಗಳನ್ನು ಗೋರಖರೆಂದು ಕರೆಯುತ್ತಾರೆ. ಇಲ್ಲಿ ಅಂದರೆ ಭಾರತದಲ್ಲಿ ಅವರಲ್ಲಿ ಕೆಲವರು ರಕ್ಷಣೆಯ ಭಾಗವಾಗಿ ಗೂರ್ಖಗಳಾಗಿದ್ದಾರೆ. ನೇಪಾಳದ ಹಣ ಚಲಾವಣೆಯ ನೋಟುಗಳಲ್ಲಿ ಗೋರಖರ ಹೆಸರು ಮತ್ತು ಲಾಂಛನಗಳಿವೆ. ಅಂದಿನ ಕಾಲದಲ್ಲಿ ರಾಜರು ಅವರ ಕಿರೀಟದಲ್ಲಿ ಗೋರಕ್ಷನಾಥರ ಪಾದುಕೆಯ ಚಿತ್ರವನ್ನು ಕೆತ್ತಿಸಿ ಅಥವಾ ಅಚ್ಚು ಹಾಕಿಸಿ ತಲೆಯಲ್ಲಿ ಧರಿಸುತ್ತಿದ್ದರು. ನೇಪಾಳಿಗರು ಗೋರಕನಾಥರು ಇಲ್ಲಿ ಹುಟ್ಟಿದ್ದಾರೆಂದು ತಿಳಿದರೆ, ಕರ್ನಾಟಕದವರು ಗೋರಕರು ಇಲ್ಲಿ ಜನಿಸಿದ್ದಾನೆಂದು ಹೇಳುತ್ತಾರೆ. ಒಂದು ಮೂಲದ ಪ್ರಕಾರ ಗೋರಖರು ನೇಪಾಳದಲ್ಲಿ 10ನೇ ಶತಮಾನದಲ್ಲಿ ಹುಟ್ಟಿದ ವಿಚಾರ ತಿಳಿಯುತ್ತದೆ. ಆದರೆ ನಾಥಪಂಥದ ಕೃತಿಗಳಲ್ಲಿ ಸಿಗುವ ಮಾಹಿತಿಯಂತೆ ಗೋದಾವರಿ ಸಮೀಪದ ಚಂದ್ರಗಿರಿಯಲ್ಲಿ ಅವರ ಜನ್ಮಸ್ಥಳವೆಂದು ತಿಳಿಯುತ್ತದೆ. ಮರಾಠಿಗಳು ಮಹಾರಾಷ್ಟ್ರವೇ ಗೋರಖರ ಜನ್ಮಸ್ಥಳ ಎನ್ನುತ್ತಾರೆ. ಗುರು ಗೋರಖರಿಗೆ ದೀಕ್ಷೆಯನ್ನು ದತ್ತಾತ್ರೇಯರು ನೀಡಿದರೆಂಬ ಉಲ್ಲೇಖವು ಕೆಲವು ಕಡೆ ಸಿಗುತ್ತದೆ. ಗೋರಖರು "ಅವಧೂತರು ವೇದ ಸ್ಮೃತಿಗಳ ಕಾಡಲ್ಲಿ ಅಲೆಯಬಾರದು. ಪೂಜೆ ಧ್ಯಾನಗಳಲ್ಲಿ ತೊಡಗಬಾರದು ವರ್ಣಾಶ್ರಮದಲ್ಲಿ ನಂಬಿಕೆ ಇಡಬಾರದು" ಎಂದಿದ್ದಾರೆ. ನಾಲ್ಕು ವರ್ಣಗಳು ವ್ಯಕ್ತಿಯ ಸ್ವಭಾವಗಳನ್ನು ಅವಲಂಬಿಸಿವೆ. ಸದಾಚಾರ ,ಸನ್ನಡತೆಯಿಂದ ಕೂಡಿದಾತ ಬ್ರಾಹ್ಮಣ, ಧೈರ್ಯ ಶೌರ್ಯದಿಂದ ಇತರರ ರಕ್ಷಕನಾದ ಕ್ಷತ್ರಿಯ, ವ್ಯಾಪಾರ ವ್ಯವಹಾರ ಮಾಡುವ ವೈಶ್ಯ, ಬೇಸಾಯ ಮಾಡಿ ಇತರರಿಗೆ ಸಹಾಯ ಮಾಡುವವ ಶೂದ್ರ.ವರ್ಣಾಶ್ರಮ ಧರ್ಮ ವ್ಯಕ್ತಿಯ ಗುಣ ಸ್ವಭಾವಗಳನ್ನು ಹೊಂದಿರುತ್ತವೆ. ಆದರೆ ಯೋಗಿಯಾದವನು ಗಂಡು-ಹೆಣ್ಣೆಂಬ ಭೇದ ಮಾಡದೆ, ಜಾತಿಯ ಸಂಕೊಲೆಯಲ್ಲಿ ಸಿಲುಕದೆ, ಪ್ರತಿಯೊಂದು ಜೀವರಾಶಿಯನ್ನು ಪ್ರೀತಿಸುವ ಮೂಲಕ ಆತ ಯಾರನ್ನೂ ದ್ವೇಷಿಸುವುದಿಲ್ಲ. ಅವನ ದೇಹದಲ್ಲಿ ಸತ್ಸಂಪ್ರದಾಯದ ಪವಿತ್ರ ದಾರವಿರುತ್ತದೆ. ನಾಥ ಸನ್ಯಾಸಿಗಳ ಜೀವನ ಆಧ್ಯಾತ್ಮಿಕ ಸಿದ್ಧಿಗಾಗಿ, ಮೋಕ್ಷದ ಅನ್ವೇಷಣೆಗಾಗಿ. ಅವರು ವಾಸ ಮಾಡುವ ಸ್ಥಳವನ್ನು ಮಠಗಳೆಂದು ಕರೆಯುತ್ತಾರೆ. ಇಲ್ಲಿ ಗುರುಗಳು ಮತ್ತು ಅವರ ಶಿಷ್ಯರುಗಳು ಸಾಧನೆ-ಸಿದ್ಧಿಗಳನ್ನು ಮಾಡುತ್ತಾರೆ. ಗುರು ಗೋರಖರ ಪ್ರಕಾರ ನಾಥಪಂಥದಲ್ಲಿ ಗುರುಗಳೇ ಸರ್ವ ಶ್ರೇಷ್ಠ. ಗುರುವೇ ಅಂತಿಮ. ಗುರುವನ್ನೇ ನಾವು ಜೋಗಿಗಳು ಪೂಜಿಸಬೇಕು, ಆರಾಧಿಸಬೇಕು. ಅವರ ಆಶೀರ್ವಾದ ಬಲದಿಂದ ಮೋಕ್ಷ, ಜ್ಞಾನ, ಸಾಕ್ಷಾತ್ಕಾರ ಪಡೆಯಬೇಕು ಎಂದಿದ್ದಾರೆ. 

   

      ಮಚ್ಚೇಂದ್ರ ನಾಥ-ಶ್ರೀಮಂತಿ ಬಾಯಿ ಸರ್ಕಾರಿ ವಸ್ತು  ಸಂಗ್ರಹಾಲಯ ಮಂಗಳೂರು.
ಮತ್ಸ್ಯೇಂದ್ರ ನಾಥರು ಒಬ್ಬಾಕೆ ಹೆಣ್ಣಿನ ಪಾಶಕ್ಕೆ ಬಿದ್ದಾಗ ಅಲ್ಲಿಂದ ಗುರುವನ್ನು ಹೊರ ತಂದವರು ಗುರು ಗೋರಖನಾಥರು.

ಕ್ರಿಸ್ತ ಶಕ 7-8 ನೇ ಶತಮಾನದಲ್ಲಿದ್ದ ಕಾಪಾಲಿಕಾ ಪಂಥ ನಾಥಪಂಥಕ್ಕಿಂತ ಹಳೆಯ ಪಂಥ. ಕಪಾಲಿಕರು ಕಾಳಭೈರವನ ಆರಾಧಕರಾಗಿದ್ದರು. ಗುರು ಗೋರಖರಾಗಲಿ, ನಾಥಪಂಥದ ಸಂಸ್ಥಾಪಕ ಮತ್ಸ್ಯೇಂದ್ರನಾಥರಾಗಲೀ ಎಲ್ಲೂ ಕಾಳಭೈರವನ ಆರಾಧನೆಯ ಬಗ್ಗೆ ಉಲ್ಲೇಖಿಸಿಲ್ಲ. ಆದರೆ ನಮ್ಮ ನಾಥಪಂಥದ ಈರ್ವರು ಗುರುಗಳು ಹೇಳದೆ ಹೋದರೂ ನಾವು ಕಾಲಭೈರವನನ್ನು ಆರಾಧಿಸುತ್ತಿದ್ದೇವೆ. ಮತ್ಸ್ಯೇಂದ್ರನಾಥರು ಶಿವರೂಪಿ ಆದಿನಾಥನ ಬಗ್ಗೆ ಹೇಳುತ್ತಾರೆ ವಿನಹ ಕಾಳಭೈರವನ ಬಗ್ಗೆ ಎಲ್ಲೂ ಹೇಳುವುದಿಲ್ಲ. 7-8ನೇ ಶತಮಾನದಲ್ಲಿ ಪ್ರಬಲವಾಗಿದ್ದ ಕಾಪಾಲಿಕಾ ಪಂಥ ನಾಥಪಂಥವು ಪ್ರವರ್ಧಮಾನಕ್ಕೆ ಬರುತ್ತಿರುವಾಗ ತನ್ನ ಪ್ರಭಾವವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು. 12-13ನೇ ಶತಮಾನದಲ್ಲಿ ಶಿವಶರಣರು ಪ್ರಬಲರಾದಾಗ ಕಾಪಾಲಿಕ ಪಂಥ ಮುಂದೆ ನಾಥ ಪಂಥದೊಂದಿಗೆ ವಿಲೀನವಾಯಿತು. ಮುಂದೆ ಕಾಪಾಲಿಕರ ಕಾಲಭೈರವನನ್ನು ನಾಥಪಂಥದವರು ಕುಲ ದೇವರಾಗಿ ಆರಾಧಿಸತೊಡಗಿದರು. ಮುಂದೆ ಕಾಪಾಲಿಗಳು ನಾಥಪಂಥದ ಮಠಗಳಲ್ಲಿ ನಾಥಪಂಥದ ಗುರುಗಳ ಜೊತೆ ಇರುತ್ತಿದ್ದರು಼. ನಾಥಪಂಥದ ಜೋಗಿಗಳು ಕಾಳಬೈರವ, ಶಿವ, ಆದಿನಾಥ ಎಲ್ಲವೂ ಶಿವನ ಅವತಾರ ಎನ್ನುತ್ತಾರೆ. ಆದಿನಾಥ ಮತ್ತು ಕಾಳಭೈರವನ ಚಿತ್ರಣ ವಿಭಿನ್ನವಾಗಿದೆ. ಮಂದಿರಗಳನ್ನು ಕಟ್ಟುವುದು ಅರ್ಥಹೀನ ಎನ್ನುವ ಗುರು ಗೋರಕ್ಷನಾಥರು ದೇವರನ್ನು ಪೂಜೆ ಮಾಡುವುದನ್ನು, ಹರಕೆ ವೃತಗಳನ್ನು ವಿರೋಧಿಸುತ್ತಾರೆ.

ವಿಷ್ಣು ಎಂದು ಮರುನಾಮಕರಣಗೊಂಡ ಮಂಜುಶ್ರೀ ಬೋದಿಸತ್ವ ಕದ್ರಿ ಮಂಜುನಾಥ ದೇವಸ್ಥಾನ

   ಆದರೆ ನಾಥಪಂಥವು ಮೂರ್ತಿ ಪೂಜೆ ಮಾಡುವ ಮೂಲಕ ನಾಥ ಪಠ್ಯದಲ್ಲೇ ಪರ ವಿರೋಧಗಳಿವೆ. ಸ್ವ-ವಿರೋಧಗಳೂ/ಪರ ವಿರೋಧಗಳೂ ಇವೆ. ಉತ್ತರಭಾರತದ ಪಂಥಗಳ ಜೊತೆ ಸ್ಥಳೀಯ ನಾಥ ಸಮುದಾಯದ ಸಂಘರ್ಷವೂ ಇದೆ. ಮೇಲ್ನೋಟಕ್ಕೆ ಅದು ಕಾಣಿಸುವುದಿಲ್ಲ. ನಾಥಪಂಥದಲ್ಲಿ ಎಂತಹ ಸಿದ್ದಿಪುರುಷರು ಇದ್ದರೆಂದರೆ, ಗುರುವಿನ ಎದುರು ಕೇವಲ ತಾಂತ್ರಿಕ ವಿಧಿವಿಧಾನಗಳ ಜೊತೆಜೊತೆಗೆ ಮಾಂತ್ರಿಕ ಬಲದಿಂದ ದೀಪೋಜ್ವಲನೆ ಮಾಡಿದವರೂ ಇದ್ದಾರೆ. ಇಂತಹ ಸಾಧಕರಲ್ಲಿ ಮುಂಬಯಿಯಲ್ಲಿ ಈ ಹಿಂದೆ ಪೀಠಾಧಿಪತಿಗಳಾಗಿದ್ದ ಜನಕನಾಥರೇ ಇದಕ್ಕೆ ಸಾಕ್ಷಿಯಾಗಿದ್ದಾರೆ. ಮೂಲತಃ ಅವರು ನೇಪಾಲದವರಾಗಿದ್ದರು. ಅವರಿಂದಲೇ ನನ್ನ ತಂದೆ ಯಸ್.ಯನ್.ಕೆ ಯೋಗಿ (ಶಂಕರ್ ನಾಥ್ ಕೆ ಯೋಗಿ)ಯವರು ಜೋಗಿ ದೀಕ್ಷೆಯನ್ನು ಪಡೆದಿದ್ದರು. ಯೋಗಮಾರ್ಗ, ಸಿದ್ದಿಮಾರ್ಗ, ತಂತ್ರ ಮಾರ್ಗದ ಸಿದ್ಧ ಮಾಂತ್ರಿಕ ಸಾಧಕ ನಾಥ ಯೋಗಿಗಳು. ಅಘೋರಿ ನಾಥ ಪಂಥದ ಅನುಯಾಯಿಗಳಾದ ಜೋಗಿಗಳು ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ತನ್ನದೇ ಅನನ್ಯತೆಯನ್ನು ಉಳಿಸಿಕೊಂಡಿದ್ದಾರೆ. ಜೋಗಿಗಳು ದಿನಕ್ಕೊಂದು ಬಾರಿ ಅಹರ್ನಿಶಿ ಪ್ರಾಥಃ ಸಂಧ್ಯಾ ಕಾಲದಲ್ಲಿ "ಅಲಖ್ ನಿರಂಜನ್, ಅದೇಶ್ ಅದೇಶ್ ಅದೇಶ್, ಮಹಾರಾಜ್ ಕೀ ಅದೇಶ್ ಅದೇಶ್ ಅದೇಶ್" ಎಂದು ಮಂತ್ರೋಪಾದಿಯಲ್ಲಿ ಆದಿಗುರು ಮತ್ಸ್ಯೇಂದ್ರರನ್ನು ಸ್ಮರಿಸುತ್ತಾರೆ. 

       12ವರ್ಷಗಳಿಗೊಮ್ಮೆ ಬರುವ ನಾಥ ಪಂಥದ ಜುಂಡಿ

     ಬೇರೆಬೇರೆ ಲಭ್ಯವಿರುವ ಪಠ್ಯಗಳಲ್ಲಿ ನಾಥ ಗುರುಗಳ ಸಂಖ್ಯೆಯು 4ರಿಂದ 25 ಗುರುಗಳವರೆಗೆ ಸಿಗುತ್ತದೆ. ಆದರೆ ನವನಾಥರನ್ನು ಉಲ್ಲೇಖಿಸುವ ಅತ್ಯಂತ ಹಳೆಯ ಪಠ್ಯವೆಂದರೆ 15ನೇ ಶತಮಾನದ 'ನವನಾಥ ಚಾರಿತ್ರ' ತೆಲುಗು ಪಠ್ಯ. ಅದಕ್ಕಿಂತ ಹಿಂದಿನ ಪಠ್ಯಗಳಲ್ಲಿ ನಾಥ ಗುರುಗಳ ಕೆಲವೊಂದು ಹೆಸರುಗಳು ಕಾಣಸಿಗುತ್ತವೆ. ಅದ್ವೈತ ಮತ್ತು ಶೈವ ಪಂಡಿತ ಅಭಿನವಗುಪ್ತನ ಕ್ರಿಸ್ತಶಕ 10ನೇ ಶತಮಾನದ ತಂತ್ರ ಲೋಕದ ಪಠ್ಯದ 29ರಿಂದ 32ನೇ ವಿಭಾಗದಲ್ಲಿ ಗುರು ಮತ್ಸ್ಯೇಂದ್ರರನ್ನು ಸಿದ್ದ ಎಂದು ಉಲ್ಲೇಖಿಸಲಾಗಿದೆ. ನಾಥ ಹಠಯೋಗದ ಕುರಿತಾದ ಮೊದಲ ಗ್ರಂಥಗಳಾದ 'ವಿವೇಕ ಮಾರ್ತಾಂಡ' ಮತ್ತು 'ಗೋರಕ್ಷ ಶತಕಗಳು' ಅದರ ಹಸ್ತಪ್ರತಿಗಳು 13ನೇ ಶತಮಾನದಲ್ಲಿ ಮಹಾರಾಷ್ಟ್ರದಿಂದ ಬಂದವುಗಳಾಗಿವೆ. ಹಠಯೋಗದ ಬಗ್ಗೆ ಸಂಸ್ಕೃತದಲ್ಲಿ ರಚಿಸಲಾದ ಹಿಂದೂ ಸಂಪ್ರದಾಯದ ಹಲವಾರು ತಾಂತ್ರಿಕ ಗ್ರಂಥಗಳು ಗೋರಕ್ಷರಿಗೆ ಸಲ್ಲುತ್ತದೆ. ಆಂಗ್ಲ ವಿದ್ವಾಂಸ ಮಲ್ಲಿನ್ಸನ್ (ಮಲ್ಲಿನ್ಸನ್ 2012, ಪುಟ 410-412) ಪ್ರಕಾರ ಮಚ್ಚೇಂದ್ರ ಮತ್ತು ಗೊರಖರ ಆರಂಭಿಕ ಪಠ್ಯಗಳು, ಶಿಲಾಶಾಸನಗಳ ಉಲ್ಲೇಖಗಳು ಡೆಕ್ಕನ್ ಪ್ರದೇಶ ಮತ್ತು ಪರ್ಯಾಯ ಭಾರತದ ಇತರೆಡೆಗಳಿಂದ ಬಂದವುಗಳಾಗಿವೆ. ಟಿಬೆಟ್ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಕಾಣಸಿಗುವ ಬೌದ್ಧ ಗ್ರಂಥಗಳಲ್ಲಿ ನಾಗಸಾಧುಗಳ ಉಲ್ಲೇಖವಿದ್ದುದರಿಂದ ಕೆಲವೊಂದು ವಿದ್ವಾಂಸರು ನಾಥರು ಬೌದ್ಧ ಮೂಲವನ್ನು ಹೊಂದಿರಬಹುದೆಂದು ಪ್ರಸ್ತಾಪಿಸಲು ಕಾರಣವಾಯಿತು. ಆದರೆ ನಾಥ ಸಿದ್ಧಾಂತಗಳು ಮತ್ತು ದೇವತಾಶಾಸ್ತ್ರವು ಮುಖ್ಯವಾಹಿನಿಯ ಬೌದ್ಧ ಧರ್ಮಕ್ಕಿಂತ ಭಿನ್ನವಾಗಿದೆ. ಮಾ ಹುವನ್ ಎನ್ನುವ ಚೀನಿ ಯಾತ್ರಿಕ ಅವನ ಆತ್ಮಚರಿತ್ರೆಯಲ್ಲಿ ನಾಥಯೋಗಿಗಳನ್ನು ಉಲ್ಲೇಖಿಸಿದ್ದಾನೆ. ಹದಿನೇಳನೇ ಶತಮಾನದ ಹಿಂದಿನ ನಾಥಪಂಥದ ಉಲ್ಲೇಖಗಳು ಕಾಣೆಯಾಗಿವೆ. ಆದರೆ ನಾಥ ಶೈವ ಪರಂಪರೆಯ ಬಗ್ಗೆ ವ್ಯಾಪಕವಾದ ,ಪ್ರತ್ಯೇಕವಾದ ಉಲ್ಲೇಖಗಳು ಹಿಂದಿನ ಶತಮಾನಗಳಿಂದಲೂ ಇದ್ದು ಶಾಸನಗಳು, ಗ್ರಂಥಗಳು, ದೇವಾಲಯಗಳ ಪ್ರತಿಮಾಶಾಸ್ತ್ರ (ಪ್ರತಿಮೆ)ಗಳಲ್ಲಿ ಕಾಣಸಿಗುತ್ತವೆ. ಚಾಮರಸನ ಪ್ರಭುಲಿಂಗಲೀಲೆ ಕೃತಿಯಲ್ಲಿ ಗೋರಕ್ಷ ಎನ್ನುವುದು ಕಾಪಾಲ ಮಾರ್ಗ ಎಂದರೆ (ಕಾಲ ಸುಮಾರು ಕ್ರಿಸ್ತಶಕ 1430- ಪ್ರಭುಲಿಂಗಲೀಲೆ - ಭಾಮಿನಿ ಷಟ್ಪದಿ ಕಾವ್ಯ) ಮಲ್ಲಿಕಾರ್ಜುನ ಕವಿ ನಾಥಪಂಥವನ್ನು (ಕ್ರಿಸ್ತಶಕ 1240ರಲ್ಲಿ ಬರೆದ ಕಾವ್ಯ - ಸೂಕ್ತಿ ಸುಧಾರ್ಣವ) ಮತ ಎಂದು ಕರೆದಿದ್ದಾನೆ. ಬ್ರಹ್ಮಶಿವ (ಕ್ರಿಸ್ತಶಕ 1100) ಕವಿ ನಾಥ, ಕೌಳ, ಕಾಪಾಲಿಕ ಪಂಥಗಳನ್ನು ಸಮಯ ಎಂದು ಕರೆದಿದ್ದಾನೆ. ನಿಜಗುಣ ಶಿವಯೋಗಿಗಳು (ಕ್ರಿಸ್ತಶಕ 1600) ನಾಥಪಂಥವನ್ನು ಶಾಸ್ತ್ರ ಎಂದು ಕರೆದಿದ್ದಾರೆ. ಶಿವಶರಣರು ಯೋಗಿ/ಜೋಗಿ/ನಾಥರನ್ನು/ಮಹಾವ್ರತರನ್ನು ದರ್ಶನ ಎಂದು ಕರೆದಿದ್ದಾರೆ. ಆದಿಚುಂಚನಗಿರಿ ಸಾಹಿತ್ಯದಲ್ಲಿ ಕಾಪಾಲ ಮತ ಎನ್ನುವ ಪ್ರಯೋಗವಿದೆ. ನಾಥ ಪರಂಪರೆಯನ್ನು ಪಂಥ ಎಂದರೆ ಅರ್ಥ ಬೇರೆ. ಧರ್ಮ ಅಥವಾ ಜಾತಿಯೆಂದರೆ ಅರ್ಥ ಬೇರೆಯಾಗುತ್ತದೆ. ದೀಕ್ಷೆಯ ಮೂಲಕ ಸದಸ್ಯರು ಸಂಘಟಿತರಾದ ಗುಂಪುಗಳನ್ನು ದರ್ಶನ ಎಂದರೆ ಮೂರ್ತ (ಮೂರ್ತಿ) ರೂಪದಲ್ಲಿ ಆರಾಧನೆ ಮಾಡುವುದು ಪಂಥ. ವಜ್ರಯಾನ, ಸೂಫಿ, ನಾಥ, ಕಾಳಾಮುಖ, ಕಾಪಾಲಿಕ, ಲಕುಲೀಶ, ದತ್ತ, ವಾರಕರಿ, ಮಹಾನುಭಾವ ಇವುಗಳು ಪಂಥಗಳು .ಬೌದ್ಧ, ಸಿಖ್ಖ್, ಜೈನ, ಲಿಂಗಾಯತ ಧರ್ಮಗಳಾದರೂ, ದಾರ್ಶನಿಕ ಮತ್ತು ಪಂಥಗಳನ್ನು ಬಿಟ್ಟಿಲ್ಲ. ಕರ್ನಾಟಕದ ಶರಣ ಪಂಥದಲ್ಲಿ ಜಾತಿಯ ಆಯಾಮಗಳಿವೆ. ನಾಥಪಂಥ ಜೋಗಿ ಜಾತಿ, ಜನಾಂಗವಾಗಿ ಪರಿವರ್ತಿತವಾಗಿದೆ. ಸೂಪಿ ಪಂಥವನ್ನು ಇಸ್ಲಾಮಿನ, ವಜ್ರಾಯಾನವನ್ನು (ಮಹಾಯಾನದ ಒಂದು ಮುಂದುವರಿದ ಭಾಗ. ಹೀನಾಯಾನ ಬೇರೆ ಇದೆ) ಬೌದ್ಧಧರ್ಮದ, ನಾಥ ಕಾಪಾಲಿಕರನ್ನು ಶೈವಧರ್ಮದ ಭಾಗವಾಗಿ ಪರಿಗಣಿಸಲಾಗಿದೆ. ಕಾಪಾಲಿಕ ಅಥವಾ ಮಹಾವ್ರತ, ಕಾಳಾಮುಖ, ಪಾಶುಪತ, ಕೌಳ, ಶಾಕ್ತ, ನಾಥ, ವೀರಶೈವ, ಶರಣ ಇವೆಲ್ಲವುಗಳನ್ನು ವಿಶಾಲ ಶೈವವೆಂದು ಕರೆದಿದ್ದಾರೆ. 12ನೇ ಶತಮಾನದ ಶಿವಶರಣರು ವಿಶಾಲ ಶೈವದ ವಿಭಿನ್ನ ಪಂಥಗಳನ್ನು ವಿರೋಧಿಸಿದ್ದಾರೆ. ಅವುಗಳ ಬಗ್ಗೆ ಅವರಿಗೆ ಭಿನ್ನಮತವಿತ್ತು. ಭಾರತದ ಬಹುತೇಕ ಗುರುಪರಂಪರೆಗಳ ಹಿಂದೆ ಗೋರಖರಿದ್ದಾರೆ. ನಾಥಪಂಥವು ಸಾಂಖ್ಯ, ಯೋಗ, ರಸೇಶ್ವರ(ರಸ ವಿದ್ಯೆ-ಕಬ್ಬಿಣವನ್ನು ಚಿನ್ನ ಮಾಡುವ ಅನ್ವೆಷಣೆ,ಹಣ ಮಾಡುವ ಉದ್ದೇಶವಿಲ್ಲದ ಒಂದು ದೃಢತೆಯ ವಿದ್ಯೆ) ಹೀಗೆ ದರ್ಶನದ ಜೊತೆಯಲ್ಲಿ ವಜ್ರಾಯಾನ, ಕಾಪಾಲಿಕ, ಸೂಫಿ, ಶಾಕ್ತ, ದತ್ತ, ಕೌಳ, ವಾರಕರಿ, ಮಹಾನುಭಾವ ಪಂಥಗಳ ಜೊತೆಗೆ ಅನುಸಂಧಾನ ಮಾಡಿಕೊಂಡಿತು. 

           ಕದ್ರಿ ಜೋಗಿ ಮಠ ಮೂಲ ಕಾಲ ಭೈರವ ಮೂರ್ತಿ

          ಕರ್ನಾಟಕದ ನಾಥಪಂಥವನ್ನು ಕಾಪಾಲಿಕ, ಸೂಫಿ, ಶರಣ, ಶಾಕ್ತ, ಆರೂಢ, ಬೌದ್ದದ ಮಹಾಯಾನದ ಕವಲು ವಜ್ರಯಾನದ ಸಹಾಯವಿಲ್ಲದೆ ಅರ್ಥೈಸಲು ಸಾಧ್ಯವಿಲ್ಲ.  ಪ್ರಾಚೀನ ಬೌದ್ಧ ನೆಲೆಗಳಿದ್ದುದು ಪರ್ವತದ ಮೇಲೆ. ಹಾಗೆಯೇ ನಾಥಪಂಥದ ಮಠಗಳೂ ಇರುವುದು ಗುಡ್ಡಗಳ ಮೇಲೆಯೇ. ಮಹಾರಾಷ್ಟ್ರದಲ್ಲಿ ಗೋರಕನಾಥರ ಹೆಸರಿನಲ್ಲಿ ಗೋರಕನಾಥ ಬೆಟ್ಟವಿದೆ. ಕರ್ನಾಟಕದಲ್ಲಿ ನಾಥಪಂಥದ ಪ್ರಭಾವ ಕಡಿಮೆಯಾಗಲು ಶರಣರು ಎಂದು ಹೇಳಿರುವ ಮಾತು ಅಲ್ಲಗಳೆಯುವಂತಿಲ್ಲ. ಹನ್ನೆರಡನೇ ಶತಮಾನದಲ್ಲಿ ಅವರಲ್ಲಿ ಕೆಲವರು ನಾಥಪಂಥದ ಪ್ರಭಾವಕ್ಕೆ ಒಳಗಾಗಿದ್ದಾರೆ. 20ನೇ ಶತಮಾನದಲ್ಲಿ ಕೆಲವು ಲಿಂಗಾಯಿತರು ನಾಥಪಂಥದ ದೀಕ್ಷೆ ಪಡೆದದ್ದಿದೆ. ವಿಟ್ಲ ಜೋಗಿಮಠದ ಪೀಠಾಧಿಪತಿಯಾಗಿದ್ದ ಈಶ್ವರನಾಥರು ಧಾರವಾಡ ಮೂಲದ ಲಿಂಗಾಯತ ಸಮುದಾಯದವರು ಆಗಿದ್ದು, ಜೋಗಿ ಸನ್ಯಾಸಿ ದೀಕ್ಷೆ ಪಡೆದಿದ್ದರು. ಅಕ್ಕಮಹಾದೇವಿ ನಾಥಪಂಥದ ಕದಿರೆ ಮಠಕ್ಕೆ ಬಂದ ಉಲ್ಲೇಖವಿದೆ.ಆಕೆಯನ್ನು ಯೋಗಿನಿ ಎನ್ನುತ್ತಾರೆ. ಕದ್ರಿ ಜೋಗಿಮಠದ ಮಹಾರಾಜರಾಗಿದ್ದ ಸಂಧ್ಯಾನಾಥರು ರಾಜಸ್ಥಾನದ ರೇಬಾರಿಎನ್ನುವ ಸ್ಥಳದ ಪಶುಪಾಲಕ ಕುರುಬ ಸಮುದಾಯದವರು ಆಗಿದ್ದರು. ಇವರು ಕುರಿದಾರ ಅಥವಾ ಉಣ್ಣೆಯ ನೂಲಿನಲ್ಲಿ ನೇಯ್ದ ಜಡೆಯನ್ನು ತೊಟ್ಟು, ನಾಥರು ಪೂಜೆ ಮಾಡುವ ಪಾತ್ರದೇವತೆಯ ಕಂಠಕ್ಕೂ ಕುರಿದಾರದ ಒಂಭತ್ತೆಳೆಯ ದಾರವನ್ನು ಸುತ್ತುತ್ತಿದ್ದರು. ಅಲ್ಲದೆ ಒಂಭತ್ತೆಳೆಯ ಕುರಿದಾರದ ಜನಿವಾರವನ್ನು ನವನಾಥರ ಸಂಕೇತವಾಗಿ ಧರಿಸುತ್ತಿದ್ದರು. 

ತುಳುನಾಡ ಪುರುಷಣ್ಣನವರು /ಜೋಗ್ಯಣ್ಣನವರು.ಕೈಯಲ್ಲಿ ಜೋಗಿತಂಬುರಿ/ಕಿನ್ನೆರಿ-ವೆಂಕಪ್ಪ ಪುರ್ಸರು
ಚಿತ್ರ ಕೃಪೆ-ಕಲಾ ಕುಸುಮ ಯೂಟ್ಯೂಬ್

      ನಾಥಪಂಥದ ಬಗ್ಗೆ ಬೇರೆ ಬೇರೆ ವಿದ್ವಾಂಸರುಗಳು ಬರವಣಿಗೆಗಳಲ್ಲಿ ಮಾಹಿತಿ ನೀಡುವಾಗ ಹೆಚ್ಚಾಗಿ ಬೌದ್ಧಧರ್ಮದ ಮಹಾಯಾನದ ವಜ್ರಯಾನದಿಂದ ನಾಥಪಂಥ ಉದಿಸಿ ಬಂತೆಂದು ತಿಳಿಸುತ್ತಾರೆ. ನಾಥಪಂಥದ ಜೋಗಿಗಳು ವಜ್ರಸೂಚಿಕೋಪನಿಷತ್ತಿನ ಅನುಯಾಯಿಗಳಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಕ್ರಿಸ್ತಪೂರ್ವ ಎರಡನೇ ಶತಮಾನದಿಂದ ಕ್ರಿಸ್ತಶಕ 16ನೇ ಶತಮಾನದವರೆಗೆ ಕರ್ನಾಟಕದಲ್ಲಿ ಬೌದ್ಧಧರ್ಮ ಇದ್ದು, ಕ್ರಿಸ್ತಶಕ ಒಂದನೇ ಶತಮಾನದವರೆಗೆ ಹೀನಾಯಾನ, ಮುಂದೆ 6-7 ನೇ ಶತಮಾನದವರೆಗೆ ಮಹಾಯಾನ ಪ್ರಚಲಿತದಲ್ಲಿದ್ದು, ಏಳನೇ ಶತಮಾನದ ಬಳಿಕ ವಜ್ರಯಾನ ಪ್ರಚಲಿತದಲ್ಲಿತ್ತು. (ಡಾ ಚಿದಾನಂದಮೂರ್ತಿ). 84 ಜನ ಬೌದ್ಧಸಿದ್ದರಲ್ಲಿ ಗೋರಕ್ಷನ ಹೆಸರಿದೆ. ಅಲ್ಲಿ ಸಿದ್ದರ ಹೆಸರಿನ ಕೊನೆಗೆ 'ಪಾ' ಬರುತ್ತದೆ. ಪಾ ಎಂದರೆ 'ಪಾದ'ವೆಂದು ಉಚ್ಚರಿಸಬೇಕು. ಇಲ್ಲಿ ಬರುವ ಕೆಲವೊಂದು ಹೆಸರುಗಳು ನಾಥಪಂಥದ ನವನಾಥರಲ್ಲಿ ಕೂಡ ಕಾಣಸಿಗುತ್ತದೆ. 84 ಸಿದ್ದರಲ್ಲಿ 8ನೇ ಸಿದ್ದರಾಗಿ ಮೀನಾ ಪಾ - ನಾಥರ ಮೀನನಾಥ, 9ನೇ ಸಿದ್ದರಾಗಿ ಗೋರಖ ಪಾ - ಗೋರಖನಾಥ, (ಮೀನಾನಾಥ ಮಚ್ಚೇಂದ್ರನಾಥ ಇನ್ನೊಂದು ಹೆಸರು ಆಗಿರಬೇಕು) 10ನೇ ಸಿದ್ಧರಾಗಿ ಚೌರಂಗಿ ಪಾ - ಚೌರಂಗಿನಾಥ, 15ನೇ ಸಿದ್ದರಾಗಿ ಕಾನ್ಹ ಪಾ - ಕಾನೀಫನಾಥ, 36ನೇ ಸಿದ್ಧರಾಗಿ ಧರ್ಮ ಪಾ - ಧರ್ಮನಾಥ್,46ನೇ ಸಿದ್ಧರಾಗಿ ಜಾಲಂಧರಿ ಪಾ - ಜಾಲಂಧರಿ ನಾಥ, 82ನೇ ಸಿದ್ಧರಾಗಿ ಲಕ್ಷ್ಮೀಂಕರ ಪಾ - ಲಕ್ಷ್ಮೀನಾಥ. ಇದನ್ನು ಗಮನಿಸಿದಾಗ ಬೌದ್ಧ ಸಿದ್ದ ಪಂಥಕ್ಕೂ, ಶೈವನಾಥ ಪಂಥದ ಪರಂಪರೆಯ ತಾತ್ವಿಕ, ನಾಮಿಕ (ಹೆಸರುಗಳ), ಸಾಂಸ್ಕೃತಿಕ ವಿಚಾರಗಳಿಗೂ ಸಾಮ್ಯತೆಯನ್ನು ಗಮನಿಸಬಹುದು. ಶರಣ ಸಂಸ್ಕೃತಿಯ ಮೂಲ ಬೌದ್ಧ ಎಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ. "ಬುದ್ದಂ ಶರಣಂ ಗಚ್ಚಾಮಿ, ಧರ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ" ಈ ಸಾಲುಗಳಿಂದ ಅದನ್ನು ಅರ್ಥೈಸಿಕೊಳ್ಳಬಹುದು. ಬುದ್ಧ ಒಬ್ಬ ಧರ್ಮ ಪ್ರವರ್ತಕನಲ್ಲ ಅವನೊಬ್ಬ ಚಿಂತಕನೆಂದು ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಪ್ರೊ. ಶ್ರೀಪತಿ ತಂತ್ರಿಯವರು ತಿಳಿಸಿದ್ದಾರೆ. 

   

      ‌‌‌‌‌‌‌‌  ಮಂಗಳಾದೇವಿಗೆ ಹೂ ಹಣ್ಣುಗಳಿಂದ ಆರಾದನೆ

        ಶೈವರು, ವೈಷ್ಣವರು ಬುದ್ಧನನ್ನು ದೇವರಾಗಿ ಮಾಡುವ ಮೂಲಕ (ವಿಷ್ಣುವಿನ ದಶಾವತಾರದಲ್ಲಿ 9ನೇ ಅವತಾರವಾಗಿ ಬುದ್ಧನನ್ನು ಚಿತ್ರಿಸಿ " ಬತ್ತಲೆ ನಿಂತಿಹ ಬೌದ್ಧನಿಗೆ " ಎಂಬ ಸಾಲು ಭಜನೆಯ ಮಂಗಲ ಪದ್ಯದಲ್ಲಿದೆ.ಬುದ್ಧ ಎಲ್ಲೂ ಬೆತ್ತಲೆ ನಿಂತಿರುವ ಉಲ್ಲೇಖ ಬೌದ್ಧ ಸಾಹಿತ್ಯಗಳಲ್ಲಿ ಕಂಡು ಬರುವುದಿಲ್ಲ) ಅವನನ್ನು ಜನರು ಹೆಚ್ಚು ತಿಳಿಯುವಂತೆ ಮಾಡಿದರು. ವಿಷ್ಣುವನ್ನು ಬುದ್ಧನಾಗಿ ಕಲಿಗಾಲದಲ್ಲಿ ಚಿತ್ರಿಸಿ ಕಲಿಗಾಲದಲ್ಲಿ ಅಸುರರನ್ನು ನರಕಕ್ಕೆ ಕಳುಹಿಸಲು ವಿಷ್ಣು ಬುದ್ಧನ ಅವತಾರ ತಾಳಿದಂತೆ ಚಿತ್ರಿಸಿದರು. ವಿಷ್ಣುವಿನ ಮಾತನ್ನು ಕೇಳದವರು ನರಕಕ್ಕೆ ಹೋಗುತ್ತಾರೆ ಎಂದು ವಿಷ್ಣು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಭಾಗವತದಲ್ಲಿ ಇಂತಹ ಕಥೆಗಳಿದ್ದು ಶಂಕರಾಚಾರ್ಯರ ಆರಾಧಿಸಿದ ದಕ್ಷಿಣಾಮೂರ್ತಿ ಪ್ರಾಚೀನ ಕಾಲದ ಬುದ್ಧನೇ ಆಗಿದ್ದಾನೆ ಎಂದಿದ್ದಾರೆ ಪ್ರೊ. ಶ್ರೀಪತಿ ತಂತ್ರಿಯವರು, ಬುದ್ಧನ ಕಾಲದಲ್ಲಿ ಸ್ಥಾಪನೆಯಾದ ಸಂಘಗಳು ಮಠಗಳಾದವು, ಭಿಕ್ಷುಗಳು ಸನ್ಯಾಸಿಗಳಾದರು ಎಂದಿದ್ದಾರೆ. ಜಗತ್ತು ಅನಾಗರಿಕವಾಗಿ ನರಳುವಾಗ ಭಾರತ ಬುದ್ಧನ ಮೂಲಕ ಮೌಲ್ಯವನ್ನು ಸಾರಿತು. ಪಾಲಿ ಭಾಷೆ ಬಲು ದೊಡ್ಡ ವಿದ್ವತ್ ಆಗರ. ಇಂದು ಪಾಲಿ ಭಾಷೆಯ ಮೌಲಿಕ ಸಾಹಿತ್ಯವನ್ನು ತಿಳಿಯಬೇಕಾದರೆ ವಿದೇಶಕ್ಕೆ ಹೋಗುವ ಪರಿಸ್ಥಿತಿ ಬಂದಿದೆ. ಶ್ರೀಲಂಕಾದಲ್ಲಿ ಇಂದಿಗೂ ಪಾಲಿ ಸಾಹಿತ್ಯದ ಭಂಡಾರವಿದೆ ಎಂದು ಶ್ರೀಪತಿ ತಂತ್ರಿಗಳು ತಿಳಿಸಿದ್ದಾರೆ. ಸಿದ್ದಾರ್ಥ ಯಾವುದೋ ಒಂದು ಘಟನೆಯಿಂದ ವಿಚಲಿತನಾಗಿ ಮನೆಯನ್ನು ತೊರೆದುದಲ್ಲ. ಆತ ತರ್ಕಬದ್ಧವಾಗಿ ಸಂಸಾರವನ್ನು ತೊರೆದಿದ್ದಾನೆಂದು ಪಾಲಿ ಕೃತಿಯನ್ನು ಓದಿದಾಗ ತಿಳಿಯುವುದೆಂದು ವಿದ್ವಾಂಸರು ತಿಳಿಸಿದ್ದಾರೆ. (ತಾಳ್ತಜೆ ವಸಂತಕುಮಾರ). ಭಾರತೀಯ ಸನಾತನ ಧಾರ್ಮಿಕ ಸಂಸ್ಕೃತಿಯಲ್ಲಿ ಅವೈದಿಕ ಮತ್ತು ವೈದಿಕವೆಂಬ ಪರಂಪರೆಗಳಿದ್ದು,ಅವೈದಿಕ ಧರ್ಮ ಬಹಳಷ್ಟು ಹಿಂದಿನ ಮೂಲ ಧರ್ಮವಾಗಿತ್ತು. ವೈದಿಕ-ವೇದ-ಬ್ರಾಹ್ಮಣ, ಅವೈದಿಕ-ಸಗುಣ-ಶ್ರಮಣ. ಶ್ರಮಣವೇ ಮುಂದೆ ಶರಣ ಆಯಿತೆಂದು ಹಿರಿಯ ವಿದ್ವಾಂಸರುಗಳಾದ ಡಿ.ಎಲ್. ನಾಗರಾಜ್, ಡಾ.ಯಲ್ ಬಸವರಾಜ್, ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ತಾಳ್ತಜೆ ವಸಂತಕುಮಾರ್, ನಟರಾಜ್ ಬೂದಾಳು, ಲಕ್ಷ್ಮೀಪತಿ ಕೋಲಾರ, ಕೆ.ಬಿ ಸಿದ್ದಯ್ಯ ಇವರುಗಳೆಲ್ಲ ತಿಳಿಸಿದ್ದಾರೆ. ಯಾದಗಿರಿಯ ಶಹಾಪುರ ಬೆಟ್ಟ ದೂರದಲ್ಲಿ ನೋಡುವಾಗ ಬುದ್ಧ ಮಲಗಿದಂತೆ ನಿಸರ್ಗದತ್ತ ವೈಶಿಷ್ಟ್ಯದಿಂದ ಕೂಡಿದೆ. ಅಲ್ಲೂ ನಾಥ ಪಂಥದ ನೆಲೆಯಿದೆ. ಬಸವಣ್ಣ, ಅಲ್ಲಮಪ್ರಭುಗಳು ಮೂಲತಃ ನಾಥಪಂಥದ ಅನುಯಾಯಿಗಳಾಗಿದ್ದರೆಂದು ಕಪಟರಾಳು ಕೃಷ್ಣರಾಯರು ತಿಳಿಸಿದ್ದಾರೆ. ಶಹಾಪುರ ಬೆಟ್ಟದಲ್ಲಿ ನಾಥ ಪಂಥದ ಕುರುಹುಗಳಿದ್ದು, ಕಲ್ಯಾಣವು ಪೂರ್ವದ ಬೌದ್ಧ ನೆಲೆಯಾಗಿರುವ ಸಾಧ್ಯತೆಯಿದೆ. ಬೌದ್ಧ ಸಾಧಕರ, ತಾರದೇವಿಯ ವಿಗ್ರಹಗಳು ಬಳ್ಳಿಗಾವೆ, ಕೋಳಿವಾಡದಲ್ಲಿದ್ದವೆಂದು ವಿದ್ವಾಂಸರು ತಿಳಿಸಿದ್ದಾರೆ. ಡಂಬಳದ ಶಾಸನ ತಾರದೇವಿಯನ್ನು ವರ್ಣಿಸುತ್ತಾ"ಹರಿ, ಕರಿ, ಶಿಖಿ, ಫಣಿ, ತಸ್ಕರ, ಜಲ, ಆರ್ಣವ, ಪಿಶಾಚಿ"ಗಳ ಭಯವನ್ನು ಹೋಗಳಾಡಿಸುವವಳು. ಆಕೆ ಜ್ಞಾನ ಸಮುದ್ರ ಮಥಿಸಿದಾಗ ಜನಿಸಿದಳು. ಆಕೆಯನ್ನು ಪ್ರಜ್ಞಾ ಎಂದು ಕರೆಯುತ್ತಾರೆ. ಆಕೆ ಬುದ್ಧನಿಗೆ ವಿಭೂತಿ ಅಥವಾ ವೈಭವವನ್ನು ಕರುಣಿಸದವಳು. ಆಕೆ ಬೋಧಿಸತ್ವ ಸ್ವರೂಪಿಣಿಯಾಗಿ ತಥಾಗತನ ಹೃದಯಾಗಸದಲ್ಲಿ ನೆಲೆಯಾದವಳು. ಈ ರೀತಿಯಾಗಿ ಶಾಸನ ಆಕೆಯ ಬಗೆಗೆ ವಿವರಿಸುತ್ತಾ, ಶಾಸನದ ಕೊನೆಯಲ್ಲಿ ಜಗತ್ತಿನ ವಿಷಯದಲ್ಲಿ "ಕರುಣ ವ್ಯಾಪಾರ ಚಿಂತಾತುರ" ತಾರದೇವಿಯನ್ನು ಮತ್ತೆ ಮತ್ತೆ ಸ್ತುತಿಸಿದ್ದಾರೆಂದು ವಿದ್ವಾಂಸರಾದ ತಾಳ್ತಜೆ ವಸಂತಕುಮಾರರು ದಾಖಲಿಸಿದ್ದಾರೆ. ಹಾಗೆಯೇ ಕರ್ನಾಟಕದ ಕಡಲತಡಿಯ ಅನೇಕ ದುರ್ಗಾಭಗವತಿಯ ದೇಗುಲ, ಗುಡಿಗಳನ್ನು ಪರಿಶೀಲಿಸಿದಾಗ ಅದು ಈ ಹಿಂದೆ ಪ್ರಾಯಶಃ ತಾರಾಭಗವತಿಯ ಆರಾಧನಾ ಕೇಂದ್ರಗಳಾಗಿದ್ದಿರಬೇಕೆಂದು ಅವರು ತಿಳಿಸಿದ್ದಾರೆ. ಸಗರಾಪುರ ನಗರಕ್ಕೆ ಹೊಂದಿಕೊಂಡಿರುವ ಬೆಟ್ಟದ ಸಾಲುಗಳನ್ನು ಸಗರಾದ್ರಿ ಎಂದು ಕರೆಯುತ್ತಾರೆ. ಯಾದಗಿರಿಯ ಶಹರಾಪುರ ತಾಲೂಕು, ಕಲಬುರ್ಗಿ ಜಿಲ್ಲೆಯ ಜೇವರಗಿ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಸಿಂದಗಿ ತಾಲೂಕಿನ ಕೆಲವು ಭಾಗಗಳಲ್ಲಿ ಭೀಮಾ, ಕೃಷ್ಣಾ ನದಿಗಳ ನಡುವಿನ ಸ್ಥಳವನ್ನು ಸಗರನಾಡು ಎಂದಿದ್ದಾರೆ. ಬಳ್ಳಿಗಾವೆ, ಕೋಳಿವಾಡದ ತಾರವಿಗ್ರಹದ ಇತಿಹಾಸ, ಡಂಬಳದ ಶಾಸನ, ಮಂಗಳೂರಿನ ಮಂಗಳಾದೇವಿಯನ್ನು, ಶಹರಾಪುರದ ಸಗರಾದ್ರಿಯಲ್ಲಿ ನೆಲೆಯಾಗಿ ಅಸ್ತಿತ್ವ ಪಡೆದ ನಾಥಪಂಥದ ಒಳಹೊಕ್ಕು ನೋಡಿದಾಗ, ಗೋರಕ್ಷ ಪಂಥದ ತಾರಾದೇವತೆಯ ಪಳೆಯುಳಿಕೆಯಾದ ಗೊಗ್ಗಮ್ಮ/ಗೊಗ್ಗಾಂಬೆ, ಮಹಾಶರಣೆ ಗೋಗ್ಗಾಮಾಂಬೆ  ಕಾಣಸಿಗುತ್ತಾಳೆ. ಈ ಗುಹೆಯ ಆರಾಧಕರಾದ ಕುಂಬಾರ/ಕುಲಾಲ ಸಮಾಜದವರು ಕೂಡಾ ಶೈವ ನಾಥ ಪರಂಪರೆಯ ಚಹರೆ ಹೊಂದಿರುವುದು ಗಮನಾರ್ಹವಾಗಿದೆ ಎಂದು ಸಾಹಿತಿ, ಸಂಶೋಧಕರಾದ ಘೋಷ್, ದೇವೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟಿದ್ದಾರೆ. ಇದರ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದೆ.

                              ಕಿನ್ನರಿ/ಕಿಂದರಿ ಜೋಗಿ

         ನಾಥಪಂಥದ ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಕದಿರೆ ಜೋಗಿ ಮಠ ಚರಿತ್ರೆಯಲ್ಲಿ ಮಹೋನ್ನತ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಕದ್ರಿ ಜೋಗಿ ಮಠ ಕ್ರಿಸ್ತಪೂರ್ವದಲ್ಲಿ ಬೌದ್ಧ ನೆಲೆಯಾಗಿದ್ದು ಕೋಶರರು (ಕೊರಗ ಜನಾಂಗ) ಇಲ್ಲಿನ ಆರಾಧಕರಾಗಿದ್ದರು. ತುಳುನಾಡಿನಲ್ಲಿ ಕೊರಗತನಿಯ ಎಂಬ ವ್ಯಕ್ತಿ ಶಕ್ತಿಯಾಗಿ ಮಾಯೆಯ ದೈವವಾಗಿ ನಂಬಿದ ಜನರನ್ನು ರಕ್ಷಿಸುತ್ತಿದ್ದಾನೆ. ಅವನು ಮಾಯವಾದ ಜಾಗ ಇದೇ ಕದಿರೆಯ ದೇಗುಲ ಎಂಬ ವಿಚಾರಗಳು ಮೌಖಿಕವಾಗಿ ಸಂಧಿಗಳಲ್ಲೂ ( ದೈವದ ಆವೇಶದ ಹಾಡು) ಕಾಣಸಿಗುತ್ತವೆ.  ಮೂಲ ಬೌದ್ಧ ನೆಲೆಯಾಗಿದ್ದಾಗ ಕೋಶರರು ಇಲ್ಲಿನ ಆರಾಧಕರಾಗಿದ್ದರೆ, ಅವರು ಕುಲದೈವವಾಗಿ ಆರಾಧಿಸುವ ಕೊರಗ ತನಿಯನ ಇತಿಹಾಸವನ್ನು ಸುಮಾರು 2000 ವರ್ಷಗಳ ಹಿಂದಿನಿಂದಲೇ ಗುರುತಿಸಬಹುದು. ಅವರ ಅರಸ ಹುಬಾಷಿಕನಾಗಿದ್ದು, ಅವನನ್ನೂ ಮೋಸದಿಂದ ತುಳುನಾಡಿನ ರಾಜರು ಇಲ್ಲವಾಗಿಸಿದ್ದಾರೆ. ಅವನ ಆಡಳಿತದ ರಾಜದಂಡ ಈಗ ದೈವದ ಆರಾಧನೆಯಾಗುವಾಗ, ದೈವದ ಕೈಯಲ್ಲಿರುತ್ತದೆ ಎಂದು ಆ ಜನರು ನಂಬಿದ್ದಾರೆ. ಕದಿರೆ ಕ್ರಿಸ್ತಶಕ ಎಂಟನೇ ಶತಮಾನದವರೆಗೂ ಅದೊಂದು ದಕ್ಷಿಣಭಾರತದ ವಜ್ರಯಾನದ ತಾಂತ್ರಿಕ ಬೌದ್ಧ ನೆಲೆಯಾಗಿತ್ತು. ಹತ್ತನೇ ಶತಮಾನದ ವೇಳೆಗೆ ಮಹಾಯಾನದ ವಜ್ರಯಾನದ ಹಿನ್ನೆಲೆಯ ಶೈವಧರ್ಮ ನಾಥಪಂಥದ ಪ್ರಭಾವಕ್ಕೆ ಒಳಗಾಗಿರಬೇಕು. ಅಲುಪರು ಶೈವರಾದರೂ ಮೂಲ ಬೌದ್ಧಮತದ ಚಿಹ್ನೆಯನ್ನು ಅಳಿಸದಿರುವುದಕ್ಕೆ ಕದಿರೆಯ ಲೋಕೇಶ್ವರನೇ ಸಾಕ್ಷಿ. 13ನೇ ಶತಮಾನದ ವೇಳೆಗೆ ಬೌದ್ಧಧರ್ಮ ಮೂಲ ಕೊಂಡಿಯನ್ನು ಕಳಚಿಕೊಂಡು ಶುದ್ಧ ಶೈವವಾಗಿ ಸ್ಥಿತ್ಯಂತರ ಪಡೆಯಿತು. ಬೌದ್ಧಧರ್ಮ ತುಳುನಾಡಿನಿಂದ ಕ್ರಿಸ್ತಶಕ 7-8 ನೇ ಶತಮಾನದ ಬಳಿಕ ಅವಸಾನದಂಚಿಗೆ ಹೋಗಲು ಆರಂಭಿಸಿತು. ನಾಥಪಂಥ ಬೌದ್ಧಧರ್ಮದ ಮಹಾಯಾನ ಶಾಖೆಯಿಂದ(ಮಹಾಯಾನ,ಹೀನಾಯಾನ ಬೌದ್ಧ. ಧರ್ಮದ 2ಶಾಖೆಗಳು) ಹುಟ್ಟಿದ ಪಂಥವೆಂದು ವಿದ್ವಾಂಸರು ಗುರುತಿಸಿದರೂ ಬೌದ್ಧ ಧರ್ಮ ಹಾಗೂ ನಾಥಪಂಥದ ತಾತ್ವಿಕತೆಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಕೆಲವೊಂದು ನಾಥ ಸಾಹಿತ್ಯಗಳಲ್ಲಿ ಬುದ್ಧನ ನಿಂದೆಯಿದ್ದರೂ, ಚೌರಾಸಿ(೮೪) ಬೌದ್ಧ ಸಿದ್ಧರಲ್ಲಿ ಮತ್ಸ್ಯೇಂದ್ರ ಗೊರಖರಿದ್ದಾರೆ. ಮತ್ಸ್ಯೇಂದ್ರನಾಥರ ಶಿಷ್ಯೆಯಾದ ಪಿಂಗಳಾದೇವಿ ಮಂಗಳಾದೇವಿಯಾದರೂ ಅದೊಂದು ಹೆಂಗಸರಂತೆ ಮುಖಭಾವದ ಕರಿಕಲ್ಲೇ ಹೊರತು ಶಿಲ್ಪವಲ್ಲ ಎಂದು ವಿದ್ವಾಂಸರು ಹೇಳುತ್ತಾರೆ. ಮಂಗಳಾದೇವಿಯನ್ನು ತಾರಾಭಗವತಿ ಎನ್ನುತ್ತಾರೆ. ಕದಿರೆಯಲ್ಲಿ ಅವಲೋಕೇಶ್ವರನ ಆರಾಧನೆಯ ಕಾಲದಲ್ಲಿ ಬೋಳಾರದಲ್ಲಿ ತಾರದೇವಿಯ ಆರಾಧನೆ ಇದ್ದಿರಬೇಕು. ಬೌದ್ಧರ ಅವಲೋಕೇಶ್ವರ ಶೈವರ ಲೋಕೇಶ್ವರನಾದರೆ, ಬೌದ್ಧರ ತಾರದೇವಿ ಶೈವರ ಮಂಗಳಾದೇವಿಯಾಗಿದ್ದಾಳೆ. ಕದಿರೆಯಲ್ಲಿ ಲೋಕೇಶ್ವರನ ಆರಾಧನೆ ಆರಂಭವಾದಾಗ, ಗುರು ಗೋರಕ್ಷನಾಥರು ತಾರಾದೇವಿಯನ್ನು ಮಂಗಳಾದೇವಿಯಾಗಿಸಿ ಆರಾಧಿಸಿದರು. ಕೇರಳದಲ್ಲಿ ಬುದ್ಧನ ಮೂರ್ತಿ ಸಿಕ್ಕಿದಲ್ಲೆಲ್ಲ ತಾರಾಭಗವತಿ ಅಥವಾ ಭಗವತಿಯ ಸಾನಿಧ್ಯಗಳಿವೆ. ಅದಲ್ಲದೆ ಪೊಳಲಿಯ ರಾಜರಾಜೇಶ್ವರಿಗೆ 'ಹೊಳಲ ಭಟ್ಟಾರಕಿ' ಎಂಬ ಬೌದ್ಧ ಮೂಲದ ಹೆಸರು ಇತ್ತೆಂದು ಭಾರತದ ಪ್ರಸಿದ್ಧ ಇತಿಹಾಸಕಾರರಾದ ಬಿ.ಎ ಸಾಲೆತೊರೆ/ಸಾಲೆತ್ತೂರು ರವರು ಉಲ್ಲೇಖಿಸಿದ್ದಾರೆ. ( ಸಾಲೆತ್ತೂರು 1936 ಪುಟ 378 ರಿಂದ 381) ಹೊಳಲ ಭಟ್ಟಾರಕಿಯ ಮಣ್ಣಿನ ಮೂರ್ತಿ ಹಾಗೂ ತಾರಾಭಗವತಿಯ ಕರಿಕಲ್ಲಿನ ಶಿಲ್ಪಕ್ಕೆ ಸ್ವಲ್ಪ ಸಾಮ್ಯತೆ ಕಾಣಸಿಗುತ್ತದೆ. ಕೆಲವೊಂದು ದೇಗುಲಗಳ ಕೆರೆಗಳಲ್ಲಿ ಭಗ್ನಗೊಂಡ ಬುದ್ಧನ ಮೂರ್ತಿಗಳು ಕಾಣಸಿಗುತ್ತವೆ. ಕೆಲವು ದೇಗುಲಗಳ ಕಸದ ರಾಶಿಯಲ್ಲಿ ಭಗ್ನಗೊಂಡ ಬುದ್ದನ ಮೂರ್ತಿಗಳು ಸಿಕ್ಕಿತ್ತು. ಸನ್ನತಿಯಲ್ಲಿನ (ಗುಲ್ಬರ್ಗ) ತಾರಾಗುಡಿ ಚಂದ್ರಲಾಂಬ ದೇವಿಯಾಗಿ ಗುಡಿಯಲ್ಲಿ ಆರಾಧನೆ ನಡೆಯುತ್ತಿದೆ. ಇವಳಿಗೆ ಹಿಂಗುಳಾದೇವಿ ಎಂಬ ಹೆಸರೂ ಇದೆ. ಮಂಗಳೂರಿನ ಹೆಸರು ಬರಲು ಕಾರಣವಾದ ಮಂಗಳಾದೇವಿಯಾದ ಪಿಂಗಳಾದೇವಿಗೂ  ಹಿಂಗುಳಾದೇವಿಗೂ ಹೆಸರಿನಲ್ಲಿ ಸಾಮ್ಯತೆ ಕಂಡುಬರುತ್ತದೆ. ತಾರಾ ಟಿಬೆಟ್ಟಿನಿಂದ ಬಂದ ದೇವತೆ. ಡಾ. ಚಿದಾನಂದಮೂರ್ತಿಯವರು ಕಾಳಿ, ತಾಂತ್ರಿಕ ಸರಸ್ವತಿಯರೂ ಮೂಲದಲ್ಲಿ ಬೌದ್ಧ ದೇವತೆಗಳೆಂದು ಅಭಿಪ್ರಾಯಪಟ್ಟಿದ್ದಾರೆ. (ಡಾ. ಚಿದಾನಂದಮೂರ್ತಿ 1960 ಪುಟ 136) ಪಾಕಿಸ್ತಾನದ 4 ಪ್ರಾಂತ್ಯಗಳಲ್ಲಿ ಒಂದಾದ ಬಲೂಚಿಸ್ತಾನದ ಹಿಂಗ್ಲಾಜ್ ಒಂದು ಕಾಲದ ವಜ್ರಯಾನದ ಬೌದ್ಧ ನೆಲೆಯಾಗಿತ್ತು. ಹಿಂಗ್ಲಾಜ್ ಒಂದು ಶಕ್ತಿ ಪೀಠವಾಗಿದೆ. ಬಾರ್ಕೂರಿನಲ್ಲಿ ಬೌದ್ಧ ಹಿಂಗಳಾ ಗುಡಿ ಇದ್ದು, ಇಂದು ಶೈವ ದೇವತೆಯ ಆರಾಧನಾ ಕೇಂದ್ರವಾಗಿದೆ. ಕೆಲವು ಅಭಿಪ್ರಾಯಗಳ ಪ್ರಕಾರ ಮತ್ಸ್ಯೇಂದ್ರ, ಗೋರಖರನ್ನು ಹಿಂಬಾಲಿಸಿಕೊಂಡು ಬಂದ ಹಿಂಗಳೆಯೇ ಮಂಗಳಾದೇವಿ ಎಂದು ತಿಳಿಯುತ್ತದೆ. ಕದಿರೆಯ ಬೆಟ್ಟದಲ್ಲಿ ಗುಹೆಗಳಿದ್ದು ಬಹಳಷ್ಟು ನಾಥಪಂಥದ ಯೋಗಿಗಳು ಇದರೊಳಗೆ ತಪಸ್ಸು ಮಾಡಿದ್ದು ಅವರಿಗಿಂತ ಹಿಂದೆ ಅದರಲ್ಲಿ ಬೌದ್ಧ ಭಿಕ್ಷುಗಳು ವಾಸ ಮಾಡುತ್ತಿದ್ದರೆಂದು ಹ್ಯೂಯೆನ್ ತ್ಸಾಂಗ್ (ಕ್ರಿಸ್ತಶಕ 600ರಿಂದ 664 ಚೀನಾದ ಬೌದ್ಧ ಯಾತ್ರಿಕ) ದಾಖಲಿಸಿದ್ದಾರೆ. ಆ ದೃಷ್ಟಿಯಲ್ಲಿ ನೋಡಿದಾಗ ನಾಥಪಂಥದ ಹಿನ್ನೆಲೆ ಕ್ರಿಸ್ತಶಕ ಆರನೇ ಶತಮಾನಕ್ಕಿಂತಲೂ ಹಿಂದೆ ಹೋಗುತ್ತದೆ. ಅವರು ಹೇಳುವ ಪ್ರಕಾರ ಪೋತಲಕ ಪರ್ವತದಲ್ಲಿ (ತಮಿಳುನಾಡಿನ  ಪೋತಿಣೈಮಲೈ ಭಾರತದ ಮೂಲ ಪೋತಲಕ ಪರ್ವತ. ಬೌದ್ಧ ಬೋಧಿಸತ್ತ್ವ ಅವಲೋಕಿತೇಶ್ವರನ ಪೌರಾಣಿಕ ವಾಸಸ್ಥಾನವಾಗಿದ್ದು ಭಾರತದ ದಕ್ಷಿಣ ಸಮುದ್ರಗಳಲ್ಲಿ ಅಸ್ತಿತ್ವದಲ್ಲಿದೆ.) ನೆಲೆಯಾದ ಬೌದ್ಧ ಅವಲೋಕಿತೇಶ್ವರ ತನ್ನ ಭಕ್ತರಿಗೆ ಅಥವಾ ಅನುಯಾಯಿಗಳಿಗೆ ಪಾಶುಪತ, ತೀರ್ಥಕ ಅಥವಾ ಮಹೇಶ್ವರ ಹೀಗೆ ಸುಮಾರು ವೇಷ ಅಥವಾ ರೂಪಗಳಲ್ಲಿ ಕಾಣಸಿಗುತ್ತಿದ್ದು, ಇಲ್ಲಿ ಬದಲಾದ ಬೌದ್ಧ ಸಂಸ್ಕೃತಿಯ ಲಕ್ಷಣ ಅವಲೋಕಿತೇಶ್ವರನ ಗುಣಲಕ್ಷಣ ಮತ್ತು ಶಿವನ ಗುಣಲಕ್ಷಣಗಳಿಗೆ ಸಾಮ್ಯತೆಯಿದೆ. ಲೋಕೇಶ್ವರ ಶಿವನ ಹೆಸರಾಗಿದ್ದು ಬೌದ್ಧದಿಂದ ಶೈವವಾಗಿ ಪರಿವರ್ತನೆ ಹೊಂದುವುದು, ಬೌದ್ಧರ ಪ್ರಭಾವ ಕಡಿಮೆಯಾಗುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಬೌದ್ಧ ಧಾರ್ಮಿಕ ಕೇಂದ್ರಗಳು ,ಜೈನ ಅಥವಾ ಶೈವ ಕೇಂದ್ರಗಳಾಗಿ ಮಾರ್ಪಾಡಾಗಿರುವುದಕ್ಕೆ ಏಳರಿಂದ ಹತ್ತನೇ ಶತಮಾನದ ಕಾಲಘಟ್ಟದವರೆಗೆ ಸಾಕ್ಷಿಗಳು ಸಿಗುತ್ತವೆ ಎಂದು ಹಿರಿಯ ವಿದ್ವಾಂಸರಾದ ತಾಳ್ತಜೆ ವಸಂತಕುಮಾರರು ವಿವರಿಸಿದ್ದು, ಇದೇ ತರ್ಕ ಬೌದ್ಧರಿಂದ ಶೈವ ಸಾಂಸ್ಕೃತಿಕ ಪರಿವರ್ತನೆಯನ್ನು ತಿಳಿಸುತ್ತದೆ.

               ಮತ್ಸ್ಯೇಂದ್ರ ನಾಥರು ಕದಿರೆ ಜೋಗಿ ಮಠ

ಕದ್ರಿಯ ನಾಥಪಂಥದ ಮಂಜುನಾಥನ ದೇಗುಲವನ್ನು ನೋಡುವಾಗ, ನಾಥಪಂಥದ ಚರಿತ್ರೆಯನ್ನು ಅವಲೋಕಿಸುವಾಗ, ಬೌದ್ಧಧರ್ಮ ಅದರ ಮಹಾಯಾನದ ಶಾಖೆಯಾದ ವಜ್ರಯಾನವನ್ನು ತಿಳಿದುಕೊಳ್ಳಬೇಕಾಗುತ್ತದೆ. ಕದಿರೆ ಒಂದು ಕಾಲದಲ್ಲಿ ಬೌದ್ಧರ ವಿಹಾರ ಆಗಿದ್ದುದ್ದಕ್ಕೆ ಈಗಿನ ಕದ್ರಿ ದೇವಳದ ಎದುರಿರುವ  ಸ್ತೂಪವೇ ಸಾಕ್ಷಿ. ಬುದ್ಧನ ಮೂರ್ತಿ ಮಂಜುನಾಥನ ದೇಗುಲದ ಒಳಗಿದ್ದು ಅದನ್ನು ಇಂದು ವ್ಯಾಸಮುನಿ ಎಂದು ಕರೆಯುತ್ತಾರೆ. ದೇಗುಲದ ಒಳ ಪೌಳಿಯ ಹೊರಗೆ ಬುದ್ಧನ ಚಹರೆ ಇರುವ ಶಿಲಾಸ್ತಂಭ ವಿದ್ದು ಅದರ ನಾಲ್ಕೂ ಬದಿಗಳಲ್ಲಿ ಧ್ಯಾನಾಸಕ್ತ ಬುದ್ಧನ ಕೆತ್ತನೆಗಳಿವೆ. ನಿಜವಾಗಿ ಶಿವ ದೇವಾಲಯಗಳಲ್ಲಿ ಬುದ್ಧನ ಕೆತ್ತನೆಯಿರುವ ಸಂಪ್ರದಾಯವಿಲ್ಲ. ಆದರೆ ಕದಿರೆ ಮಂಜುನಾಥನ ದೇಗುಲದಲ್ಲಿ ಅದು ಇದೆ. ಕದ್ರಿ ಗುಡ್ಡದಲ್ಲಿರುವ ಈಗಿನ ಪಾಂಡವರ ಗುಹೆಯಲ್ಲಿ ಅಂದಿನ ಬೌದ್ಧರ ಅವಶೇಷಗಳಿವೆ. ಗುಡ್ಡದಲ್ಲಿ ಬೋಧಿಸತ್ವನ ಪಟ್ಟಿಕೆಯೊಂದು ದೊರಕಿದೆ. (ಡಾ. ಗುರುರಾಜ ಭಟ್ಟ 1975 ಪುಟ್ಟ 298) ಕದಿರೆ ದೇಗುಲದ ಕೆರೆಯ ಮೇಲ್ಭಾಗದ ಶಿವಲಿಂಗದ ಕಸದ ರಾಶಿಯಲ್ಲಿ ರುಂಡವಿಲ್ಲದ ಬುದ್ಧನ ಕೆತ್ತನೆಗಳಿತ್ತು. ದೇಗುಲದಲ್ಲಿ ಬೌದ್ಧ ಮಂಜುಘೋಷನ ಪ್ರತಿಮೆಯನ್ನು ಬ್ರಹ್ಮ ಎಂದು ಮರುನಾಮಕರಣ ಮಾಡಲಾಗಿದೆ. ಮಂಜುಘೋಷನೆನ್ನುವ ಬೋಧಿಸತ್ವನಿಗೆ ಮಂಜುನಾಥ ಎಂಬ ಹೆಸರು ಬೌದ್ಧರ ಮಹಾಯಾನ ಕೃತಿಯಲ್ಲಿದೆ. ನೇಪಾಳದ ಬೌದ್ಧ ಕವಿ ಅಮೃತಾನಂದನ ಕಲ್ಯಾಣ ಪಂಚವಿಂಶತಿಕಾ ಸ್ತೋತ್ರದ ಸ್ರಗ್ಧರೆಯೊಂದರಲ್ಲಿ "ಸ್ವಸ್ತೀ ಭೂತಾಬ್ಜ ಸಂಸ್ಥಮ್ ಸಕಲ ಜಿನವರಂ ಪ್ರಾಭಜನ್ ಮಂಜುನಾಥಃ" ಎಂಬ ಸಾಲಿದೆ. ದೇಗುಲದ ಒಳಭಾಗದ ಬಲಬದಿಯಲ್ಲಿ (ಅರ್ಚಕರು ವ್ಯಾಸಮುನಿ ಅನ್ನುತ್ತಾರೆ) ಕಂಚಿನ ವಿಗ್ರಹವಿದ್ದು ಕೇಶ ರಚನೆಯಲ್ಲಿ ಭಿನ್ನವಾದ, ಪ್ರಭಾವಳಿ ಇಲ್ಲದ ಆವರಣವಿಲ್ಲದ ಬುದ್ಧನ ಮೂರ್ತಿ ಇದೆ. ಶಿವನಿಗೆ ವಿಶ್ವನಾಥ, ಸೋಮನಾಥ, ಕೇದಾರನಾಥ, ವೈದ್ಯನಾಥ ಹೀಗೆಲ್ಲ ಹೆಸರುಗಳಿವೆ.ಮಂಜುನಾಥನೆಂಬ ಹೆಸರು ಹೊಸತಾಗಿ ಬಂದುದು. ಮಂಜುಶ್ರೀ ಅಥವಾ ಮಂಜುಘೋಷನ ಶ್ರೀ ಮತ್ತು ಘೋಷ ಹೆಸರುಗಳನ್ನು ತೆಗೆದು ಮಂಜುನಾಥ ಮಾಡಲಾಗಿದೆ. ಅರ್ಚಕರು ಈ ಮೂರ್ತಿಯನ್ನು ತ್ರಿಲೋಕೇಶ್ವರ ಎಂದು ಕರೆಯುತ್ತಾರೆ. ತಳದಿಂದ ಶಿರದವರೆಗೆ 150 ಸೆಂಟಿಮೀಟರ್ ಇರುವ ಈ ಮೂರ್ತಿಗೆ 3 ಮುಖ 6 ಕೈಗಳಿವೆ. ಕೈಗಳಲ್ಲಿ ಮಣಿ, ಪದ್ಮಾದಿಗಳಿವೆ. ಇದರ ಪೀಠದಲ್ಲಿ ಗ್ರಂಥ ಲಿಪಿಯ ಒಂದು ಸಾಲಿನ ಸಂಸ್ಕೃತ ಭಾಷೆಯ ಶಾಸನವಿದೆ. (ಲೋಕೇಶ್ವರ - ಕಂಚಿನ ಮೂರ್ತಿ ಪೀಠ ಶಾಸನ ಬರೆದ ವರ್ಷ ಕ್ರಿಸ್ತಶಕ 968) ಶ್ರೀ ಕುಂದವರ್ಮಾ ಗುಣವಾನಾಳುಪೇಂದ್ರೋ ಮಹಿಪತಿಃ| ಪಾದಾರವಿಂದ ಭ್ರಮರೋ ಬಾಲಚಂದ್ರ ಶಿಖಾಮಣೇಃ||6|| ಲೋಕೇಶ್ವರಸ್ಯ ದೇವಸ್ಯ ಪ್ರತಿಷ್ಠಾಮ ಕರೋತ್ಪ್ರಭುಃ| ಶ್ರೀ ಮತ್ ಕದರಿಕಾ ನಾಮ್ನಿ ವಿಹಾರೇ ಸುಮನೋಹರೇ||9|| ಮಂಗಳೂರನ್ನು ಆಳುತ್ತಿದ್ದ ಆಳುಪ ದೊರೆ ಪರಮ ಶಿವಭಕ್ತನಾಗಿದ್ದ. ಆತನ ಹೆಸರು ಶ್ರೀ ಕುಂದವರ್ಮ. ಮಚ್ಚೇಂದ್ರನಾಥ, ಗೋರಕ್ಷನಾಥರ ಅಣತಿಯಂತೆ ಕ್ರಿಸ್ತಶಕ 968 ರಲ್ಲಿ ಲೋಕೇಶ್ವರನ ವಿಗ್ರಹವನ್ನು ಸ್ಥಾಪಿಸಿದ. ಶಾಸನದ ಸಾಲುಗಳು ಶಿವನನ್ನು ಉದ್ದೇಶಿಸಿ ಸ್ತೋತ್ರ ಮಾಡಿದಂತಿದೆ. ವಿಹಾರ ಎಂಬುದು ಬೌದ್ಧ ಕೇಂದ್ರಗಳಿಗಿರುವ ಹೆಸರೇ ಹೊರತು ಶೈವ ದೇಗುಲಗಳದ್ದಲ್ಲ. ಶ್ರೀಲಂಕಾದಲ್ಲಿರುವ ಅವಲೋಕಿತೇಶ್ವರನನ್ನು ಲೋಕೇಶ್ವರನೆಂದೇ ಕರೆಯುತ್ತಾರೆ. ಕದ್ರಿಯ ಲೋಕೇಶ್ವರನ ಪ್ರತಿಮೆಯಲ್ಲಿ ಶಿವನ ಶರೀರದಲ್ಲಿರುವ (ಕುತ್ತಿಗೆ) ಸರ್ಪವಾಗಲಿ, ತಲೆಯ ಮೇಲಿರುವ ಅರ್ಧ ಚಂದ್ರನಾಗಲಿ ಕಾಣಸಿಗುವುದಿಲ್ಲ. ಆದುದರಿಂದ ಇದು ಬೌದ್ಧ ಅವಲೋಕಿತೇಶ್ವರನೆಂದು ರಾಷ್ಟ್ರಕವಿ ಗೋವಿಂದ ಪೈಗಳು ಹಾಗೂ ವಿದ್ವಾಂಸರಾದ ತಾಳ್ತಜೆ ವಸಂತ ಕುಮಾರರು ತಿಳಿಸಿದ್ದಾರೆ. ಯಾವುದೋ ಕಾಲಘಟ್ಟದಲ್ಲಿ ಅವಲೋಕಿತೇಶ್ವರ ಮೂರ್ತಿಯನ್ನು ಗರ್ಭಗುಡಿಯ ಹೊರಗೆ ತಂದು ದೇಗುಲದ ಆವರಣದ ಒಳಗೆ ತ್ರಿಲೋಕೇಶ್ವರನೆಂದು ಆರಾಧಿಸಿದರೂ, ಪ್ರತಿಮಾಶಾಸ್ತ್ರದ (ಪ್ರತಿಮೆಗಳ ಕುರಿತಾದ ಶಾಸ್ತ್ರದ) ಪ್ರಕಾರ ಅದು ತ್ರಿಲೋಕೇಶ್ವರ, ಲೋಕೇಶ್ವರನ ಮೂರ್ತಿ ಅಲ್ಲವೆಂದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಕದ್ರಿಯ ಮಂಜುನಾಥ ಎಂದು ಖ್ಯಾತಿಯಾದ ಕದಿರೆ ದೇಗುಲದ ಶಿವಲಿಂಗವನ್ನು ನಾಥ ಯೋಗಿಯಾದ ಮಚ್ಚೇಂದ್ರನಾಥರು ಸ್ಥಾಪಿಸಿದ್ದಾರೆ ಎಂದು ಐತಿಹ್ಯವಿದೆ ಎಂಬ ಅಭಿಪ್ರಾಯವನ್ನು ಗೋವಿಂದ ಪೈಗಳು ನೀಡಿದ್ದಾರೆ. ಹಾಗೆ ಬೌದ್ಧ ಧರ್ಮದ ಕೇಂದ್ರವಾಗಿದ್ದ ಕೊಪ್ಪಳ ಜಿಲ್ಲೆ ಅತ್ತಿಮಬ್ಬೆಯ ಕಾಲದಲ್ಲಿ (ಹತ್ತನೇ ಶತಮಾನದ ಉತ್ತರಾರ್ಧ ಮತ್ತು 11ನೇ ಶತಮಾನದ ಪೂರ್ವಾರ್ಧದಲ್ಲಿ ಇದ್ದವರು, ಕ್ರಿಸ್ತಶಕ 950) ಜೈನ ಕೇಂದ್ರವಾಗಿ ಮುಂದೆ ಶೈವ ಕೇಂದ್ರವಾಗಿ ತದನಂತರ ವೀರಶೈವ ಕೇಂದ್ರವಾಯಿತು.

              ನಾಥ ಪಂಥದ ದುನಿ ವಿಟ್ಲ ಜೋಗಿ ಮಠ

       ಕದ್ರಿ ಮಂಜುನಾಥನ ಬಗ್ಗೆ ಬೇರೆ ಬೇರೆ ಸಂಶೋಧಕರು, ವಿದ್ವಾಂಸರು ಅಧ್ಯಯನದ ಆಧಾರದಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ನಾಥಪಂಥದ ಸಂಸ್ಥಾಪಕರಾದ ಮತ್ಸ್ಯೇಂದ್ರನಾಥ ಕಾಲಾಂತರದಲ್ಲಿ ಮಚ್ಚೇಂದ್ರ ಅಥವಾ ಮಚ್ಚೀಂದ್ರನಾಗಿ ಮಂಜಿನಾಥ ಅಥವಾ ಮಂಜುನಾಥನಾಗಿ ಉದಿಸಿ ಬಂದರೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಮಂಜುನಾಥನೇ ಮಚ್ಚೇಂದ್ರಾದಿ ನವನಾಥರ ರೂಪ ತಾಳಿದರೆಂದು ಕದಲಿ ಕ್ಷೇತ್ರ ಮಹಾತ್ಮೆಯಲ್ಲಿ ಉಲ್ಲೇಖವಿದೆ. ಜನಪದ ನಂಬಿಕೆಯ ಟಪ್ರಕಾರ ಮಂಜು ಎಂಬ ಜೋಗಿ ಸನ್ಯಾಸಿ ಇದ್ದು ಆತ ತಪಸ್ಸನ್ನಾಚರಿಸಿ ಅವನ ಅಂತ್ಯವಾದ ಮೇಲೆ ಅವನಿಗೆ ಸಮಾಧಿ ಕಟ್ಟಿಸಿ ಮುಂದೆ ಆ ಸಮಾಧಿಯೇ ಮಂಜುನಾಥ ದೇವರು ಆಯಿತೆಂದು ಹಾಗೆಯೇ ಅವನಿಗೆ ದೇವರಾಗಿ ಆರಾಧನೆ ಆರಂಭವಾಯಿತು ಎಂದು ಹೇಳುತ್ತಾರೆ. ರಾಣಿ  ಪ್ರೇಮಲಾದೇವಿ ಪಿಂಗಳಾದೇವಿಯಾಗಿ ಮುಂದೆ ಮಂಗಳಾದೇವಿ ಆಗುವಾಗ (ನಾಥ ಸನ್ಯಾಸಿನಿ) ಮಂಜು ಎಂಬ ನಾಥ ಯೋಗಿ ಸನ್ಯಾಸಿ ಮಂಜುನಾಥ ದೇವರಾಗಿ ಆರಾಧನೆ ಪಡೆದರೆ ಅದು ಸಹಜವೇ ಆಗಿದೆ. ಹಿರಿಯ ಸಂಶೋಧಕ, ವಿದ್ವಾಂಸರಾದ ಗೋವಿಂದ ಪೈಗಳು ಹೇಳುವಂತೆ ಬೋಧಿಸತ್ವ, ಮಂಜುಶ್ರೀ ಅಥವಾ ಮಂಜುಘೋಷನಿಂದಾಗಿ ಕದಿರೆಯ ಶಿವಲಿಂಗಕ್ಕೆ ಮಂಜುನಾಥ ಎಂಬ ಹೆಸರಾಯಿತು ಎನ್ನುತ್ತಾರೆ. ಮಂಜು, ಮಂಜುಳ ಎಂಬ ಶಬ್ದಕ್ಕೆ ಸಂಸ್ಕೃತ ಭಾಷೆಯಲ್ಲಿ ಮನೋಹರವಾದ ಎಂಬರ್ಥವಿದೆ. ಮಂಜುಶ್ರೀ ಮೂಲಕಲ್ಪ ಮತ್ತು ಗುಹ್ಯ ಸಮಾಜ ತಂತ್ರಗಳಂತಹ ಬೌದ್ಧ ತಾಂತ್ರಿಕ ಕೃತಿಗಳಲ್ಲಿ ಮಂಜುಶ್ರೀಯ ವಿವರಗಳಿವೆ. ಚೀನಿ ಭಾಷೆಯ ಮಾನ್-ಚು ಎನ್ನುವುದು ಮಂಜುನಾಥ ಆಗಿದೆ ಎಂದು ಎಸ್ ಶ್ರೀಕಂಠಶಾಸ್ತ್ರಿಗಳು ಹೇಳುತ್ತಾರೆ. ಪಿಂಗಲ ಎನ್ನುವ ಸಂಸ್ಕೃತ ಶಬ್ದ ಕನ್ನಡಕ್ಕೆ ಬರುವಾಗ ಲಕಾರ ಳ ಕಾರವಾಗಿ ಪಿಂಗಳ ಆಯಿತೆಂದು ಕೆಲವು ವಿದ್ವಾಂಸರು ತಿಳಿಸಿದ್ದಾರೆ. ಶಿವನ ಸ್ತೋತ್ರಗಳಲ್ಲೂ ಪಿಂಗಲ ಎಂಬ ಶಬ್ದ ಕಂಡುಬರುತ್ತದೆ. ಗೋರಕ್ಷ ಪದ್ಧತಿ ಎಂಬ ಸಂಸ್ಕೃತ ಗ್ರಂಥದಲ್ಲಿ ಕದ್ರಿಯ ಸ್ಥಳಪುರಾಣ ಸಿಗುತ್ತದೆ. ಬೇರೆ ಬೇರೆ ಕ್ಷೇತ್ರಗಳ ಪುರಾಣಗಳಲ್ಲೂ ಕದ್ರಿಯ ಉಲ್ಲೇಖ ಇರುವುದನ್ನು ಗೋವಿಂದ ಪೈಗಳು ಕದಿರೆಯ ಮಂಜುನಾಥ ಎಂಬ ಲೇಖನದಲ್ಲಿ (ಗೋ. ಸಂ. ಸಂ.ಪು 659) ತಿಳಿಸಿದ್ದಾರೆ. ಅವರ ಪ್ರಕಾರ ಮಂಜೇಶ್ವರದ ಸ್ಥಳಪುರಾಣವಾದ ಮಂಜುಳಾ ಕ್ಷೇತ್ರ ಮಹಾತ್ಮೆ (ಸಂಸ್ಕೃತ)ಯ ಒಂದನೆಯ, ಮೂರನೆಯ ಅಧ್ಯಾಯದಲ್ಲಿ ವಿರೂಪಾಕ್ಷನೆನ್ನುವ  ದಕ್ಷಿಣಾತ್ಯ ಸಾರಸ್ವತ ಬ್ರಾಹ್ಮಣ ಗೋವೆಯಿಂದ ಹೊರಟು ದಕ್ಷಿಣಾಭಿಮುಖವಾಗಿ ತೀರ್ಥಯಾತ್ರೆ ಮಾಡುವ ವಿಚಾರ ಬರುತ್ತದೆ. ಆತ ನೇತ್ರಾವತಿ ನದಿಯ ಬಳಿ ಬರುವ, ಕದಿರೆಗೆ ಹೋಗಿ ಮಂಜುನಾಥನ/ಶಂಕರನ ಪೂಜೆ ಮಾಡಿ ಮುಂದಕ್ಕೆ ಹೋದ ವಿಚಾರ ಬರುತ್ತದೆ. ಮತ್ಸ್ಯೇಂದ್ರನಿಂದ ಮಂಜುನಾಥ ಹೆಸರು ಬಂದಿದೆಯೋ, ಮಂಜುಶ್ರೀಯಿಂದ ಮಂಜುನಾಥ ಹೆಸರು ಬಂದಿದೆಯೋ ಇದನ್ನು ತೌಲನಿಕ ಅಧ್ಯಯನ ಮಾಡಬೇಕಾಗಿದೆ. ಕದಿರೆಯಲ್ಲಿ ಶಿವನನ್ನು ಮಂಜುನಾಥ ಎಂಬುದಾಗಿ ಕರೆಯುವುದು ಬಿಟ್ಟರೆ ಶಿವಪುರಾಣದಲ್ಲಿ ಆಗಲಿ ಇನ್ನಿತರೆ ಯಾವುದೇ ಪುರಾಣಗಳಲ್ಲಿ ಆಗಲಿ ಮಂಜುನಾಥನ ಹೆಸರು ಕಾಣಸಿಗುವುದಿಲ್ಲ. ಕದಿರೆಯಿಂದ ಧರ್ಮಸ್ಥಳಕ್ಕೆ ಮಂಜುನಾಥನ ಶಿವಲಿಂಗವನ್ನು ಅಣ್ಣಪ್ಪ ತಂದು ವಾದಿರಾಜರಿಂದ ಪ್ರತಿಷ್ಠಾಪಿಸಿದ್ದರಿಂದ (ರಾತ್ರಿ ಬೆಳಗಾಗುವುದರ ಮೊದಲು) ಅಲ್ಲೂ ಶಿವನಿಗೆ ಮಂಜುನಾಥನಾಗಿ ಆರಾಧನೆ ಇದೆ. ಬೌದ್ಧ ಧರ್ಮದ ಮಂಜು ಹಾಗೂ ನಾಥಪಂಥದ   ನಾಥ ಸೇರಿ ಶಿವನಿಗೆ ಇಲ್ಲಿ ಮಂಜುನಾಥ ಎಂಬ ನಾಮಾಂಕಿತವಾಗಿದೆ. ಇಲ್ಲಿ ಬೌದ್ಧಧರ್ಮದ ಹಾಗೂ ನಾಥಪಂಥದ ನಡುವಿನ ಕೊಡುಕೊಳುವಿಕೆಯ ವಿಚಾರ ತಿಳಿದು ಬರುತ್ತದೆ. ಶಿವನನ್ನು ಬಿಟ್ಟು ಬೇರೆ ಯಾರನ್ನೂ ಲಿಂಗರೂಪದಲ್ಲಿ ಆರಾಧಿಸುವುದಿಲ್ಲ. ಆದಕಾರಣ ಶಿವಲಿಂಗದ ವಿಚಾರ ಬರುವಾಗ ಮತ್ಸ್ಯೇಂದ್ರನಾಥರೇ ಅದರ ಸ್ಥಾಪಕರಾಗಿ ನಮಗೆ ಕಾಣಸಿಗುತ್ತಾರೆ. ಇಲ್ಲಿ ಶಿವನ ಸಹಸ್ರನಾಮದಲ್ಲಿ ಕೂಡ ಮಂಜುನಾಥ ಎಂಬ ಹೆಸರಿಲ್ಲ. ಕದಿರೆಯ ಮಂಜುನಾಥನೇ ಮಂಜುನಾಥನ ಹೆಸರಿನಲ್ಲಿ ಇರುವ ಭಾರತದಲ್ಲಿನ ಏಕೈಕ ಶಿವಲಿಂಗ .

                        ಮಂಜುನಾಥ ಕದಿರೆ 
ಒಂದು ಮೂಲದ ಪ್ರಕಾರ  ಚಮೇಲಿ ನಾಥರ ಕಾಲದಲ್ಲಿ ಕದ್ರಿ ಮಂಜುನಾಥ ದೇವಾಲಯದ ಪೂಜೆ ಪುನಸ್ಕಾರಗಳು ವೈದಿಕರ ಪಾಲಾಯಿತು.ಒಂದು ಮೂಲದ ಪ್ರಕಾರ ಚಮೇಲಿ ನಾಥರ ಕಾಲದಲ್ಲಿ ವಯೋಸಹಜ ಸಮಸ್ಯೆಯಿಂದ ಅವರಿಗೆ ನ್ಯಾಯಾಲಯದ ವಿಚಾರಣೆಗೆ ಹೋಗಲು ಅನನುಕೂಲವಾದ ಕಾರಣ ಆದಿಚುಂಚನಗಿರಿ  ಮಠ ಜೋಗಿಗಳಿಂದ ಕೈ ತಪ್ಪಿ ಹೋಗಿ ಮುಂದೆ ಗೌಡ ಜನಾಂಗದವರು ಆ ಮಠವನ್ನು ಪಡೆದುಕೊಂಡು ನಾಥ ಪಂಥದ ಪರಂಪರೆಯನ್ನು ಅಲ್ಲಿ ಮುಂದುವರಿಸಿದರು.ಆದರೆ ಅಲ್ಲಿನ ಸ್ವಾಮೀಜಿಗಳು ನಾಥ ಪಂಥದ ಗೌರವಾರ್ಥವಾಗಿ ತಮ್ಮ ಹೆಸರಿನ ಕೊನೆಗೆ ನಾಥ ಎಂಬುದನ್ನು ಸೇರಿಸಿಕೊಂಡಿದ್ದಾರೆ.
    
                     ನಾಥ ಪಂಥದ ದೀಕ್ಷಾ  ವಿಧಿಗಳು

            ಸಾಮಾನ್ಯವಾಗಿ ನಾಥಪಂಥದ ಮಠಗಳಲ್ಲಿ ಮತ್ಸ್ಯೇಂದ್ರನಾಥರ ಮೂರ್ತಿಯಲ್ಲಿ ಜಡೆಯಲ್ಲಿ ಶಿವನ ಸಣ್ಣ ಮೂರ್ತಿಯನ್ನು ಕೆತ್ತಿರುತ್ತಾರೆ. ಕದ್ರಿ ಗುಡ್ಡದ ಮತ್ಸ್ಯೇಂದ್ರನಾಥರ ಮೂರ್ತಿಯಲ್ಲಿ ಕೂಡ ಇಂತಹ ರಚನೆಯಿದೆ. ಮತ್ಸ್ಯೇಂದ್ರನಾಥರಿಂದ ಸ್ಥಾಪನೆಯಾದ ಶಿವಲಿಂಗಕ್ಕೆ ಮುಂದೆ ಗುಡಿ ನಿರ್ಮಾಣವಾಗಿ ಅಲ್ಲಿ ನಾಥಪಂಥದವರು ಅರ್ಚಕ ವೃತ್ತಿ ಮಾಡುತ್ತಿದ್ದು, ಕಾಲಾಂತರದಲ್ಲಿ ಅಲ್ಲಿ ವೈದಿಕರಿಂದ ಪೂಜಾರಂಭವಾಯಿತು. ಹೀಗೆ ಕದಿರೆ ಮಂಜುನಾಥ ದೇಗುಲವು ನಾಥಪಂಥದ ನೇರ ಹಿಡಿತದಿಂದ ಬೇರ್ಪಟ್ಟು ಪ್ರತ್ಯೇಕ ಶೈವ ಕೇಂದ್ರವಾಗಿ ಬೆಳೆಯಿತು. ಆದರೂ ನಾಥ ಪಂಥದ ಜೋಗಿ ಮಠಕ್ಕೂ, ಕದಿರೆಯ ಮಂಜುನಾಥ ದೇಗುಲಕ್ಕೆ ಇಂದಿಗೆ ಅವಿನಾಭಾವ ಸಂಬಂಧವಿದೆ. ಕದಿರೆ ಮಠದ ಬಯಲು ಜಾಗದಲ್ಲಿ ವಿಲಕ್ಷಣ, ವೈವಿಧ್ಯತೆಗಳಿಂದ ಕೂಡಿದ ಬಾಗಿಲಿಲ್ಲದ ಸಣ್ಣ ಸಣ್ಣ ಗುಡಿಗಳಿದ್ದು, ಅದರಲ್ಲಿ ಜ್ವಾಲಾನಾಥ, ಗೋರಕ್ಷನಾಥ, ಚೌರಂಗಿನಾಥ, ಮತ್ಸ್ಯೇಂದ್ರನಾಥರ ವಿಗ್ರಹಗಳಿವೆ. ಹಾಗೂ ಮಠದೊಳಗಿನ ದುನಿಯನ್ನು ಪರಶುರಾಮ ದುನಿ ಎಂದು ಕರೆಯುತ್ತಾರೆ. ಒಂದು ಕಾಲದಲ್ಲಿ ನಾಥಪಂಥದ ಕದಿರೆ ಮಠ ಅತ್ಯಂತ ಪ್ರಭಾವಶಾಲಿಯಾಗಿದ್ದು, ಅದರ ಕೈ ಕೆಳಗಿದ್ದ ಕದಿರೆ ಮಂಜುನಾಥ ದೇಗುಲವು ಮತ್ಸ್ಯೇಂದ್ರರಿಂದ ಸ್ಥಾಪಿಸಲ್ಪಟ್ಟ ಶಿವ ಲಿಂಗದ ಆರಾಧನೆಯನ್ನು ಪಡೆಯುತ್ತಿತ್ತು. ಈಗ ನಾಥ ಹಿನ್ನೆಲೆಯಿಂದ ದೂರಾಗಿ ಲಿಂಗಾರಾಧನೆಯ ಶೈವ ದೇಗುಲ ಎಂದಾದರೂ ಮೂಲದ ನಾಥವನ್ನು ಇಂದಿಗೂ ಮಂಜುನಾಥ ಹೆಸರಲ್ಲಿ ಉಳಿಸಿಕೊಂಡಿದೆ. ಬೇರೆಬೇರೆ ಅರಸರ ಕಾಲದಲ್ಲಿ ನಾಥಪಂಥವು ಅರಸು ನಾಥ ಪೀಠದ ಗೌರವವನ್ನು ಪಡೆದಿದ್ದು ಕದಿರೆ ಮಠ ನಾಥಪಂಥದ ಅರಸು ಪೀಠವಾಗಿತ್ತು. ವಿಜಯನಗರದ ಅರಸರು ಆಡಳಿತದ ಸುರಕ್ಷತೆಗೋಸ್ಕರ ಕದ್ರಿ ಕ್ಷೇತ್ರದ ನಾಥ ಪೀಠಾಧಿಪತಿಗಳಿಗೆ 250 ಎಕರೆ ಭೂಮಿಯನ್ನು ದಾನ ನೀಡಿದ್ದು, ಭೂಮಿಯ ಆಡಳಿತವನ್ನು ತಾವು ನೋಡಿಕೊಳ್ಳಬೇಕೆಂದು ಜೋಗಿ ಅರಸರಿಗೆ ಒಪ್ಪಿಸಿ ಅಧಿಕಾರ ನಡೆಸಿದ ಪೀಠಾಧಿಪತಿಗಳಿಗೆ ರಾಯ, ರಾಜ, ಅರಸರೆಂದು ಯೋಗಿಗಳನ್ನು ಕರೆಯುತ್ತಾರೆ. ಕದಿರೆ ನಾಥಪಂಥದ ಯೋಗಿಗಳಿಗೆ ಅರಸರ ಸ್ಥಾನವಿದ್ದರೆ, ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥರು ಅವರು ಒಳ್ಳೆಯ ಆಡಳಿತವನ್ನು ನೀಡಿ ಅಪಾರ ಜನಮನ್ನಣೆ ಗಳಿಸಿದ್ದಾರೆ. ಪೂರ್ವಕಾಲದಿಂದಲೂ ಕದಿರೆ ಜೋಗಿಮಠದ ಆಡಳಿತದಡಿಯಲ್ಲಿ ಕದ್ರಿ ಮಂಜುನಾಥ ದೇಗುಲವಿದ್ದರೆ, ಮುಂದೊಂದು ದಿನ ಮತ್ತೊಮ್ಮೆ ನಾಥಪಂಥದ ಕದಿರೆ ಜೋಗಿ ಮಠಕ್ಕೆ ಅದರ ಆಡಳಿತ ದೊರೆಯುವ ನಿರೀಕ್ಷೆ ಇದೆ. ಕಾದುನೋಡಬೇಕು. ಉತ್ತರಭಾರತದ ಗೋರಖಪುರದ ಪೀಠಾಧ್ಯಕ್ಷರನ್ನು ಪ್ರಧಾನಮಂತ್ರಿ ಎಂದು ಕರೆದರೆ, ದಕ್ಷಿಣ ಭಾರತದ ಕದಿರೆ ಮಠದ ಜೋಗಿ ಅರಸರನ್ನು ಮಹಾರಾಜ ಎಂದು ಕರೆಯುತ್ತಾರೆ.

  

  
ಜ್ವಾಲಾ ಮಾಯಿ

        ಕದಿರೆ ಜೋಗಿ ಮಠಕ್ಕೂ ಕದ್ರಿ ಮಂಜುನಾಥ ದೇಗುಲಕ್ಕೂ ಮೂಲದಿಂದಲೂ ಸಂಬಂಧವಿದ್ದ ವಿಚಾರ ಕೆಲವೊಂದು ದೃಷ್ಟಾಂತಗಳಿಂದ ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಕದ್ರಿ ಮಂಜುನಾಥನ ಜಾತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯ ಆಗಮನಾಭಿಲಾಷಿಗಳಾಗಿ  ಜೋಗಿ ಮಹಾರಾಜರ ಹೆಸರಿರುತ್ತದೆ. ಇಂತಹ ದಿನದಿಂದ ಇಂತಹ ದಿನದವರೆಗೆ ನಡೆಯುವ ವರ್ಷಾವಧಿ ಜಾತ್ರೆಗೆ ...... ಆಗಮಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಮಂಜುನಾಥ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ ಶ್ರೀ ಶ್ರೀ ...... ನಾಥ್ ಜೀ, ಮಠಾಧಿಪತಿ, ಶ್ರೀ ಯೋಗೇಶ್ವರ ಮಠ, ಕದ್ರಿ ಎಂದು ಆಹ್ವಾನ ಪತ್ರಿಕೆಯಲ್ಲಿರುತ್ತದೆ. ಇದರಿಂದ ಜೋಗಿಮಠ ಕದಿರೆ ದೇಗುಲಕ್ಕೆ ಇದ್ದ ಮೂಲ ತಾಯಿಬೇರು ಅನಾವರಣಗೊಳ್ಳುತ್ತದೆ. ಕದ್ರಿ ಮಂಜುನಾಥ ದೇವರ ಜಾತ್ರೋತ್ಸವ ನಡೆಯುವ ಹಿಂದಿನ ದಿನ ಕದ್ರಿಮಠದ ಅರಸರು ಮಂಗಳಾದೇವಿ ದೇಗುಲಕ್ಕೆ ತರಲಿ, ಫಲ, ಪುಷ್ಪ, ಸೀರೆ ಕೊಟ್ಟು "ಕದಳಿ ಮಂಜುನಾಥ ಜಾತ್ರೆ ಉತ್ಸವಾದಿ ಮಹೋತ್ಸವಗಳು, ರಥ ಉತ್ಸವ ಚೆನ್ನಾಗಿ ಸಾಗಲಿ. ನಿರ್ವಿಘ್ನವಾಗಿ ಎಲ್ಲವೂ ನಡೆಯಲಿ" ಎಂದು ಇಂದಿಗೂ ಮಂಗಳಾದೇವಿಯಲ್ಲಿ ಪ್ರಾರ್ಥಿಸುವ ಪದ್ಧತಿ ಇದೆ. ಕದ್ರಿ ಮಂಜುನಾಥ ದೇವಾಲಕ್ಕೆ ಜೋಗಿ ಮಠದಿಂದಲೇ ನೈವೇದ್ಯ ಹೋಗುತ್ತದೆ. ಮಂಜುನಾಥನಿಗೆ ಜೋಗಿ ಅರಸರು ಪೂಜೆಮಾಡಿ ಮಂಗಳಾರತಿ ಎತ್ತುತ್ತಾರೆ. ಹಾಗೆಯೇ ಕದ್ರಿ ಮಂಜುನಾಥ ದೇಗುಲದ ಆಡಳಿತ ಸಮಿತಿಯವರು ವರ್ಷದ ಜಾತ್ರೆಗೆ ತೇರು ಎಳೆಯಲು ಜೋಗಿ ಮಹಾರಾಜರನ್ನು ಮೊದಲು ಆಹ್ವಾನಿಸುತ್ತಾರೆ. ಅರಸರು ತೇರಿನ ಎದುರಿಗೆ ಕುದುರೆ ಏರಿ ಬಂದಾಗ ತೆಂಗಿನಕಾಯಿ ತೇರಿನ  ಬಳಿ ಹೊಡೆದು "ಚಲೋ ಬೇಟಾ ಮಂಜುನಾಥ" ಅಥವಾ "ಆವೋ ಬೇಟಾ ಮಂಜುನಾಥ" ಎಂದು ಕರೆದಾಗ ರಥ ಮುಂದುವರಿಯುತ್ತದೆ. ಈ ಕ್ರಮ ಮತ್ಸ್ಯೇಂದ್ರನಾಥ, ಗೋರಕನಾಥರ ಕಾಲದಿಂದಲೇ ಅನೂಚಾನವಾಗಿ ಮುಂದುವರೆದುಕೊಂಡು ಬಂದಿದೆ. ಬಹಳಷ್ಟು ಕಾಲಗಳ ಹಿಂದೆ ರಥೋತ್ಸವಕ್ಕೆ ಕದಿರೆ ಮಂಜುನಾಥ ದೇಗುಲಕ್ಕೆ ಬಂದಿದ್ದ ನೀಲೇಶ್ವರ ತಂತ್ರಿಯೊಬ್ಬರು ಜೋಗಿ ಅರಸರನ್ನು ಕರೆಯುವುದು ಯಾಕೆ? ತಂತ್ರ ತೂಗಿದರಾಯಿತು. ರಥ ಎಳೆದರಾಯಿತು" ಎಂದು ಅರಸರನ್ನು ಕರೆಯದೆ ಯಾವ ತಂತ್ರ ತೂಗಿದರೂ ರಥ ಅಲ್ಲಾಡಲಿಲ್ಲ. ಇಲ್ಲಿನ ಜನರಿಗೆ, ಆಡಳಿತ ಮಂಡಳಿಗೆ ತಪ್ಪಿನ ಅರಿವಾಗಿ, ಅರಸರನ್ನು ಸಮಾಧಾನಪಡಿಸಿ ಜೋಗಿ ಮಹಾರಾಜರು ಎಂದಿನ ವಿಧಿವಿಧಾನಗಳನ್ನು ಮುಗಿಸಿ ರಥದ ಮಿಣಿಯನ್ನು ಹಿಡಿದಾಗ ರಥ ಮುಂದೆ ಚಲಿಸಿತು. ನಾನು ತಂತ್ರ ತೂಗಿ, ಬಲಿಹರಣ ಮಾಡಿ ಎಷ್ಟು ಗೋವಿಂದ ಕರೆದರೂ ಮಿಸುಕಾಡದ ರಥ ಜೋಗಿ ಸನ್ಯಾಸಿಯ ತಂತ್ರಕ್ಕೆ, ಒಂದು ಕರೆಗೆ ಮುಂದೆ ಚಲಿಸಿತು ಎಂದಾದರೆ ನನ್ನ ತಂತ್ರಕ್ಕೆ ಶಕ್ತಿ ಸಾಕಾಗಲಿಲ್ಲವೆಂದು ಕೋಪದಿಂದ ತಂತ್ರಿಗಳು ತಂತ್ರ ತೂಗುವ ಕೈಬಟ್ಟಲನ್ನು ಪಕ್ಕದಲ್ಲಿರುವ ಹೊಂಡ ಇರುವ ಜಾಗಕ್ಕೆ ಎಸೆದಾಗ, ಅಲ್ಲಿ ಕೆರೆ ನಿರ್ಮಾಣವಾಗಿ ಕೈಬಟ್ಟಲು ಕೆರೆಯೆಂದು ಹೆಸರಾಯಿತು. ಅದು ಇಂದಿಗೂ ಅಲ್ಲಿ ಇದೆ. ಅಂದಿನಿಂದ ಕದ್ರಿ ಮಂಜುನಾಥ ದೇವಾಲಯಕ್ಕೆ ನೀಲೇಶ್ವರ ತಂತ್ರಿಗಳು ಬರುವುದನ್ನು ನಿಲ್ಲಿಸಿ ಬಿಟ್ಟರು

  
ಮಂಗಳಾದೇವಿ

         ವಿಷ್ಣುವಿನ ಆರಾಧನೆಯಲ್ಲಿ ಗೋವಿಂದ ಕೂಗಿದರೆ, ಶಿವನ ಆರಾಧನೆಯಲ್ಲಿ ಹರಹರ ಮಹಾದೇವ ಎನ್ನಬೇಕು ವಿನಃ ಗೋವಿಂದ ಕೂಗಬಾರದು. ದೈವದ ಬಂಡಿ ಎಳೆಯುವಾಗ, ದೈವಸ್ಥಾನದ ಧ್ವಜಾರೋಹಣ ಆಗುವಾಗ, "ಸ್ವಾಮಿ ಸತ್ಯವೇ" ಎಂದು ಆ ದೈವದ ಹೆಸರನ್ನು ಕೂಗಬೇಕು ವಿನಹ ಎಲ್ಲದಕ್ಕೂ ಗೋವಿಂದ ಹೇಳುವುದು ಸರಿಯಲ್ಲ. ಜಾತ್ರೋತ್ಸವದ ಕಡೆಯದಿನ ಮಂಜುನಾಥ ದೇವರ ಅವಭೃತ ಸ್ನಾನದ ದಿನ ದೇವರು ಮೃಗಯಾ ವಿಹಾರಕ್ಕೆ ಹೋಗುವ ಕ್ರಮವಿದೆ. ಈಗ ಅದರ ಸಂಕೇತವಾಗಿ ಕದ್ರಿಮಠದ ಜೋಗಿ ಮಹಾರಾಜರು ಸಾಂಕೇತಿಕವಾಗಿ ಬೇಟೆಯಾಡುತ್ತಾರೆ. ಒಂದು ಕಂಬಕ್ಕೆ ಸಿಯಾಳದ ಗೊನೆಯನ್ನು ಕಟ್ಟಿ, ಅದಕ್ಕೆ ಮಹಾರಾಜರು ಬಾಣಬಿಟ್ಟು, ಒಂದು ಸೀಯಾಳವನ್ನು ಬೇಟೆಯ ಸಂಕೇತವಾಗಿ ಕೆಳಗೆ ಬೀಳಿಸುತ್ತಾರೆ. ಇದನ್ನೆಲ್ಲ ನೋಡಿದಾಗ ಕದ್ರಿ ಮಂಜುನಾಥ ದೇವಾಲಯವು ಕದ್ರಿ ಮಠಕ್ಕೆ ಸೇರಿದ್ದು ಎಂಬುದು ಸ್ಪಷ್ಟ. ಇತ್ತೀಚಿನ ಯಾವುದೋ ಕಾಲಘಟ್ಟದಲ್ಲಿ ಜೋಗಿ ಅರಸರ ಮೇಲೆ ದಾದಾಗಿರಿ ಮಾಡಿ ಎಲ್ಲವನ್ನೂ ಒಂದು ವರ್ಗ ಕಿತ್ತುಕೊಂಡದನ್ನು ಮೋಹನನಾಥ ಸ್ವಾಮೀಜಿಯವರ ಶಿಷ್ಯ ಅಲಕಾನಾಥರು ತಿಳಿಸಿದ್ದರು. ಈಗ ಕದ್ರಿ ಮಂಜುನಾಥ ದೇಗುಲದಲ್ಲಿ ಶಿವಳ್ಳಿ ತುಳು ಬ್ರಾಹ್ಮಣರು ಅರ್ಚಕ ವೃತ್ತಿ ಮಾಡುತ್ತಿದ್ದಾರೆ. ತುಳುನಾಡಿನ ಅದೆಷ್ಟೋ ಶಿವ ದೇಗುಲಗಳಲ್ಲಿ ವೈದಿಕ ಅರ್ಚಕರಿದ್ದು, ಶಿವನಿಗೆ ಭಸ್ಮದ ಬದಲು ಗಂಧಪ್ರಸಾದ ಹಾಕುತ್ತಿದ್ದಾರೆ. ಭಕ್ತರಿಗೆ ಭಸ್ಮದ ಬದಲು ಗಂಧ ಕೊಡ್ತಿದ್ದಾರೆ. ಬಿಲ್ವಪತ್ರೆಯ ಬದಲು ತುಳಸಿ ಉಪಯೋಗಿಸುತ್ತಿದ್ದಾರೆ. ಹರಹರ ಮಹದೇವ ಎಂದು ಕೂಗುವ ಬದಲು ಗೋವಿಂದ ಅನ್ನಿ ಗೋವಿಂದ ಎಂದು ಕೂಗುತ್ತಿದ್ದಾರೆ. ಇಂದಿಗೂ ಕದ್ರಿ ದೇವಳದ ಆಡಳಿತ ಸಮಿತಿಯಲ್ಲಿ ಒಬ್ಬ ಜೋಗಿ, ಒಬ್ಬ ಬ್ರಾಹ್ಮಣ, ಒಬ್ಬ ಶೆಟ್ಟಿ ಅಥವಾ ಬಂಟ ಜನಾಂಗದ ವ್ಯಕ್ತಿ, ಒಬ್ಬ ಪರಿಶಿಷ್ಟಜಾತಿಯವರು ಇರುತ್ತಾರೆ. ಮೂಲದಲ್ಲಿ ಕದ್ರಿ ದೇವಾಲಯದಲ್ಲಿ ಮಂಜುನಾಥನ ಪೂಜೆಯನ್ನು ಜೋಗಿಗಳು ಮಾಡುತ್ತಿದ್ದರು. ಅದು ಈಗ ವೈದಿಕರ ಪಾಲಾಗಿದೆ. ಈಗಲೂ ಕೋಟದ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಜೋಗಿಗಳು ಅರ್ಚಕರಾಗಿದ್ದಾರೆ. ಉರ್ವದ ಮಾರಿಯಮ್ಮನ ಪೂಜೆಯನ್ನು ಮೂಲದಲ್ಲಿ ಜೋಗಿಗಳು ಮಾಡುತ್ತಿದ್ದರೆಂದು ಕೆಲವೊಂದು ಹಿರಿತಲೆಗಳು, ಈಗ ಅಲ್ಲಿ ಬೇರೆ ಜಾತಿಯವರು ಪೂಜೆ ಮಾಡುತ್ತಿದ್ದಾರೆ. ಕದ್ರಿ ಜೋಗಿಮಠದ ದೇಗುಲದ ಸುತ್ತಮುತ್ತ ಹೆಚ್ಚಾಗಿ ಜೋಗಿಗಳ ಮನೆಗಳಿವೆ. ಹೆಚ್ಚಾಗಿ ಕದ್ರಿ ನಾಥಪಂಥದ ಮಠದ ಪೀಠಾಧಿಪತಿಗಳು ಉತ್ತರ ಭಾರತದವರಾಗಿದ್ದು, ಅವರು ಹಿಂದಿ ಭಾಷೆ ಬಲ್ಲವರಾದರೂ ಸ್ಥಳೀಯ ಜೋಗಿಗಳು ಪ್ರಾದೇಶಿಕ ತುಳು ಭಾಷೆಯನ್ನು ಮಾತನಾಡುತ್ತಾರೆ. ನಾಥಪಂಥದ ಪ್ರಭಾವಕ್ಕೊಳಗಾದ ಸ್ಥಳೀಯ ಒಂದು ಸಮುದಾಯದ ವ್ಯಕ್ತಿಗಳು ಮುಂದೆ ಜೋಗಿಗಳಾಗಿ ನಾಥ ಪಂಥದ ಪರಂಪರೆಯಾಗಿ ಜೋಗಿಗಳು, ಪುರುಷರು ಕಾಣಸಿಗುತ್ತಾರೆ. ಜೋಗಿ ಮಠಗಳಲ್ಲಿ ಪೀಠಾಧಿಪತಿಗಳು ಇದ್ದರೆ ಅಂತಹ ಮಠದಲ್ಲಿ ಶಿವೈಕ್ಯರಾದ ನಾಥ ಯೋಗಿಗಳ ಸಮಾಧಿಗಳು ಇರುತ್ತದೆ. ಕದಿರೆ ಮಠದ ಅನತಿ ದೂರದಲ್ಲಿ 'ಸೀತಾಕುಂಡ'ವಿದ್ದು, ಮಠದ ಕೆಳಭಾಗದಲ್ಲಿರುವ ಕದ್ರಿ ಮಂಜುನಾಥನ ದೇಗುಲದ 9 ತೀರ್ಥ ಕೆರೆಗಳಿಗೆ ಇದರಿಂದ ನೀರು ಹರಿದು ಹೋಗುತ್ತದೆ. ಜನಸಾಮಾನ್ಯರು ಕೆರೆಯ ಪಕ್ಕದಲ್ಲಿರುವ ಗಣಪತಿ ದೇಗುಲದ ಎದುರಿನ  ಗೋಮುಖದಿಂದ ಬರುವ ನೀರು ಕಾಶಿ ಭಾಗಿರಥಿಯದ್ದೆಂದು ಹೇಳುತ್ತಾರೆ. ಆದರೆ ಅದು ಬರುವುದು ಸೀತಾಕುಂಡದಿಂದಲೇ. ಮಠದ ಬಳಿ ಮಣ್ಣನ್ನು ಕೊರೆದು ಮಾಡಿದ ಪಾಂಡವರ ಗುಹೆಗಳೆಂದು ಕರೆಯುವ ಗುಹೆಯೊಳಗೆ ಇಳಿದು ಹೋದರೆ ಪಾತಾಳ ಬೈರವನ ಗುಡಿ ಇದ್ದು, ಗುಡಿಯೊಳಗೆ ಪ್ರವೇಶಿಸುವಾಗ ತಲೆಗೆ ವಸ್ತ್ರವನ್ನು ಸುತ್ತಿಕೊಂಡು ಹೋಗಬೇಕು. ಜೋಗಿ ಮಠಗಳಲ್ಲಿ ರೋಟ್ ಪೂಜೆ ಎಂಬ ಪೂಜೆಯಿದ್ದು, ಗೋಧಿ ಹುಡಿ, ದನದ ತುಪ್ಪ, ದ್ರಾಕ್ಷಿ, ಸಕ್ಕರೆ, ಬಾದಾಮಿ, ಗೋಡಂಬಿ ಹಾಕಿ ರುಚಿಕರವಾದ ಪ್ರಸಾದವನ್ನು ತಯಾರಿಸುತ್ತಾರೆ. ಬಹಳಷ್ಟು ತಲೆಯ ವ್ಯಾಧಿಗಳಿಗೆ ಬಳಸುವ, ಹಚ್ಚಿದರೂ ಹಚ್ಚಲಾಗದ ಭಸ್ಮವನ್ನು ಪ್ರಸಾದವಾಗಿ ಕೊಡುತ್ತಾರೆ.
                            ಮಂಜುನಾಥ ಕದಿರೆ

      ಮಂಜುನಾಥನ ಮೂಲ ಲಿಂಗ ಸೋಮಸೂತ್ರಗಳಿಲ್ಲದ ಅಂದರೆ ಪಾರ್ವತಿ, ಪಾಣಿಪೀಠಗಳಿಲ್ಲದ ಒಂದು ಶಿಲೆಯ ಲಿಂಗಾಕಾರದ ರೂಪವಾಗಿದೆ. ದೇಗುಲದ ಉತ್ಸವಮೂರ್ತಿಯ ಬಿಂಬವು ಧ್ಯಾನಾಸಕ್ತ ಸಮಭಂಗಿಯಲ್ಲಿದ್ದು, ಚತುರ್ಬಾಹು ಜಟಾ ಮುಕುಟವಿದೆ. ಜಟೆಯಲ್ಲಿ ಋಷಿಯ ರೂಪವಿದೆ. ಯಜ್ಞೋಪವೀತವಿದ್ದು, ಮೇಲಿನ ಎರಡು ಕರಗಳಲ್ಲಿ ಶಂಖ ಮತ್ತು ಅಕ್ಷಮಾಲೆ ಇದ್ದು, ಕೆಳಗಿನ ಎರಡು ಕೈಗಳು ಅಭಯಮುದ್ರೆಯಲ್ಲಿವೆ. ಮೂರ್ತಿ ಸಂಪೂರ್ಣ ನಾಥಪಂಥದ ಲಕ್ಷಣ ಹೊಂದಿದ್ದು, ಶಿವನ ಬಿಂಬದಂತೆ ಇಲ್ಲ. ಕದಿರೆಯ ಜಾನಪದ ಇತಿಹಾಸ ಪುರಾಣದ ಜೊತೆಜೊತೆಗೆ ಆರಾಧನೆ ಆಚರಣೆ-ನಂಬಿಕೆಗಳನ್ನು ಜೊತೆಗೆ ಪರಶುರಾಮನಿಂದ ಮೊದಲ್ಗೊಂಡು ಕದಿರೆ ದೇಗುಲದ ಎದುರಿಗಿರುವ ದೀಪದ ಕಂಬದವರೆಗೆ ಸಂಬಂಧ ಮುಂದುವರೆಯುತ್ತದೆ. ವಿಷ್ಣುವಿನ 6ನೇ ಅವತಾರವಾದ ಪರಶುರಾಮ ಕ್ಷತ್ರಿಯರನ್ನು ನಾಶ ಮಾಡಿ ಪಾಪ ಪರಿಹಾರಕ್ಕಾಗಿ ತಪೋಭೂಮಿಯನ್ನು ಹುಡುಕಿಕೊಂಡು ಹೊರಟಾಗ ನಾಸಿಕ್‌ನಲ್ಲಿ ಸಾಧು-ಸಂತರ ಕುಂಭಮೇಳ ನಡೆಯುತ್ತಿತ್ತು. ಅಲ್ಲಿ ನಾಥಯೋಗಿ, ಅಘೋರಿ ಗೋರಕ್ಷನಾಥರನ್ನು ಕಂಡ ಪರಶುರಾಮ ತಾನು ಮಾಡಿದ ಪ್ರಮಾದದ ವಿಚಾರವನ್ನು ತಿಳಿಸಿ, ಅದಕ್ಕೆ ಪರಿಹಾರವನ್ನು ಕೇಳುತ್ತಾನೆ. ಆಗ ಗೋರಖನಾಥರು ಅವನ ಕೈಗೆ ಪಾತ್ರ ದೇವತೆ ಅಥವಾ ಅಕ್ಷಯಪಾತ್ರೆಯನ್ನು ಕೊಟ್ಟು ಈ ಪಾತ್ರೆಯಲ್ಲಿ ಎಲ್ಲಿ ಅಗ್ನಿ ಅವಿರ್ಭವಿಸುವುದೋ ಅಲ್ಲಿ ಕುಳಿತು ತಪಸ್ಸನ್ನಾಚರಿಸು ಎಂದೂ, ಆಗ ನಿನ್ನ ಪಾಪ ಪರಿಹಾರವಾಗುವುದೆಂದು ದಕ್ಷಿಣದತ್ತ ಅವನನ್ನು ಕಳುಹಿಸಿದರು.(ಇಂದಿಗೂ ನಾಥ ಪಂಥದ ಝಂಡಿ/ಜುಂಡಿಯಾತ್ರೆ ಬರುವಾಗ ರಾಜರುಗಳು ಪಾತ್ರದೇವತೆಯನ್ನು ಹೊತ್ತು ತರುತ್ತಾರೆ.ಕುಂಭ ಮೇಳ ನಡೆದು ನಾಗರ ಪಂಚಮಿಯಂದು ತ್ರಯಂಬಕೇಶ್ವರದಿಂದ  ಜುಂಡೀ ಯಾತ್ರೆ ಹೊರಟು ಸುಮಾರು ಸಾವಿರದ ನೂರು‌ ಕಿ.ಮೀ ದೂರವನ್ನು  ಐನೂರಕ್ಕೂ ಮೆಲ್ಪಟ್ಟು ಸಾಧುಗಳು ಆರು ತಿಂಗಳಲ್ಲಿ ಶಿವರಾತ್ರಿಗೆ ಹತ್ತು ದಿನ ಮೊದಲು ಮಂಗಳೂರನ್ನು ತಲುಪುತ್ತಾರೆ.ಇದು ನವನಾಥ ಜಂಡೀ ಯಾತ್ರೆ. ಯಾರು ಮಠದ ಪೀಠಾಧಿಪತಿ ಆಗುತ್ತಾರೋ ಅವರಿಂದ ಪಾತ್ರ ದೇವತೆಗೆ ನಿತ್ಯ ಪೂಜೆ ನಡೆಯುತ್ತದೆ .ಸುಮಾರು ದಾರಿಯಲ್ಲಿ ಸಿಗುವ ನಾಥ ಪಂಥದ ಹದಿನೇಳು ಮಠಗಳು ಸೇರಿ ತೊಂಬತ್ತೆರಡು ಕಡೆ ತಂಗುತ್ತಾರೆ) ಅಲ್ಲಿಂದ ಹೊರಟ ಪರಶುರಾಮ ಪಶ್ಚಿಮಘಟ್ಟವಿಳಿದು ಮಂಗಳೂರಿನ ಈಗಿನ ಜೋಗಿ ಮಠವಿರುವ ಬೆಟ್ಟದ ಬಳಿ ಬಂದಾಗ ಪಾತ್ರ ದೇವತೆಯಲ್ಲಿ ಅಗ್ನಿ ಕಂಡುಬರುತ್ತದೆ. ಅದೇ ಸ್ಥಳದಲ್ಲಿ ಪರಶುರಾಮ ಅಗ್ನಿಕುಂಡ ರಚಿಸಿ ಅಲ್ಲಿ ತಪಸ್ಸು ಮಾಡಿದ್ದರ ಪ್ರತೀಕವಾಗಿ ಇಂದಿಗೂ ಬೂದಿಯೊಳಗಿಂದ ಹೊಗೆ ಹೊರಸೂಸುತ್ತಿರುವ ಅಗ್ನಿಕುಂಡ ಕಾಣಸಿಗುತ್ತದೆ. ಅದನ್ನು ದುನಿ ಎಂದು ಕರೆಯುತ್ತಾರೆ. ವಿಟ್ಲ ಜೋಗಿ ಮಠದಲ್ಲಿ ಕೂಡ ಇಂತಹುದೇ ಒಂದು ದುನಿ ಇದೆ. ಪ್ರಾಕೃತಿಕವಾದ ಭೂಭಾಗವನ್ನು ಮನುಷ್ಯನಿಂದ ಪುನರ್ ಸೃಷ್ಟಿಸಲು ಸಾಧ್ಯವಿಲ್ಲ. ಗೋರಖನಾಥರ ಕಾಲಘಟ್ಟಕ್ಕೂ ಪುರಾಣದ ಪರಶುರಾಮರಿಗೂ ಹೇಗೆ ಸಂಬಂಧ ಕಲ್ಪಿಸಲಾಯಿತು ಎಂಬ ವಿಚಾರ ತಿಳಿಯುವುದಿಲ್ಲ. ಗೋರಖರಿದ್ದುದಕ್ಕೆ ಚಾರಿತ್ರಿಕ ದಾಖಲೆಯಿದೆ. ಕಡಲು ಭೂಭಾಗವನ್ನು ನುಂಗುವುದು ಸಹಜ. ಬಿಟ್ಟುಕೊಡುವ ಪ್ರಮೇಯವೇ ಇಲ್ಲ. ಹಾಗಿದ್ದೂ ಕದಿರೆ ಜೋಗಿಮಠದ ಎದುರಿರುವ ಪರಶುರಾಮನ ಕಟ್ಟೆಯಿಂದ ಆತ ಕಡಲಿಗೆ ಬೆರಳು ತೋರಿಸಿ ಕಡಲನ್ನು ಹಿಂದೆ ಹೋಗುವಂತೆ ಮಾಡಿದ ಎನ್ನುವುದಕ್ಕೆ ಏನೆನ್ನಬೇಕು? ಕಡಲು ಭೂಮಿಯನ್ನು ನುಂಗಿರುವುದಕ್ಕೆ ದ್ವಾರಕೆಯೇ ಸಾಕ್ಷಿ. ಕದ್ರಿಮಠದ ನಾಥಪಂಥದ ಅರಸರು ಸಮುದ್ರದ ಬಳಿ ಹೋಗಿ ಪೂಜೆ ಮಾಡುವ ಕ್ರಮವಿದೆ. ಸಮುದ್ರ ಪೂಜೆಯನ್ನು ಬೆಸ್ತರು ಕೂಡ ಮಾಡುತ್ತಾರೆ. ಅವರಿಗೆ ಬದುಕು ಕೊಟ್ಟ ಸಮುದ್ರವನ್ನು ತಾಯಿಯ, ದೇವತೆಯ ಬೆಲೆಕೊಟ್ಟು ಅವರು ಪೂಜಿಸುತ್ತಾರೆ. ಕದ್ರಿಮಠದ ಆರಂಭದ ಗುರು ಪರಶುರಾಮರು ಎನ್ನುತ್ತಾರೆ. ವೈಷ್ಣವ ಪರಶುರಾಮ ಶೈವ ನಾಥಪಂಥದ ಯೋಗಿ, ನಾಥಪಂಥದ ಗುರುವಾಗಲು ಸಾಧ್ಯವೇ? ಪರಶುರಾಮ ಕಡಲು ಜಾರಿಸಿ ತುಳುನಾಡನ್ನು ಸೃಷ್ಟಿಸಿದ ಎನ್ನುವವರು ಆತ ತುಳುನಾಡಿಗೆ ಬರುವಾಗ ತುಳುನಾಡಿನಲ್ಲಿ ಕದಿರೆ ಎಂಬ ಜಾಗವಿತ್ತು ಎಂಬುದನ್ನು ಮರೆಯಬಾರದು. ಪರಶುರಾಮ 12 ವರ್ಷಗಳ ತಪಸ್ಸು ಆಚರಿಸಿದ, ಯಜ್ಞಕುಂಡ ನಿರ್ಮಿಸಿದ. ಆ ಯಜ್ಞಕುಂಡವನ್ನು ಪರಶುರಾಮ ದುನಿ ಎನ್ನುತ್ತಾರೆ. ಹನ್ನೆರಡು ವರ್ಷಗಳಿಗೊಮ್ಮೆ ಬರುವ ನಾಥರ ಜುಂಡಿಯನ್ನು ಪರಶುರಾಮ ಜುಂಡಿ ಎನ್ನುತ್ತಾರೆ. 

           ಕಾಲ ಬೈರವನ ವಿಗ್ರಹದ ಪ್ರಾಚೀನತೆಗೆ ಸಾಕ್ಷಿ

            ಬಾರಹ್ ಪಂಥದ ಒಂದು ಪಂಥದ ಪ್ರವರ್ತಕ ಶ್ರೀರಾಮನಾಗಿದ್ದು,   ಜೋಗಿ ಮಠಗಳಲ್ಲಿ ಒಂಬತ್ತು ದಿನ ರಾಮನವಮಿ ವಿಜೃಂಭಣೆಯಿಂದ ನಡೆಯುತ್ತದೆ. ಇದರಿಂದಾಗಿ ಕದ್ರಿ ಜೋಗಿಮಠ ಮತ್ತು ರಾಮನಿಗೆ ಇರುವ ಸಂಬಂಧ ತಿಳಿಯುತ್ತದೆ. ಕದಿರೆ ದೇಗುಲದ ಎದುರಿರುವ 25 ಅಡಿ ಎತ್ತರದ ದೀಪಸ್ಥಂಭಕ್ಕೆ ಕೆಳಗಿನಿಂದ ಒಬ್ಬ ದೀಪ ಉರಿಸಿಕೊಂಡು ಮೇಲಕ್ಕೆ ಹೋಗಿ ಇಳಿಯಲಾಗದೆ ಪಕ್ಕದ ಕೆರೆಗೆ ಹಾರಿ ಕಲ್ಲಾದ ಕಾರಣ ತಿಳಿದವರು ಇಂದಿಗೂ ಆ ಕೆರೆಯಲ್ಲಿ ಸ್ನಾನ ಮಾಡುವುದಿಲ್ಲ. ಕ್ರಿಸ್ತಶಕ 1277 ರಿಂದ 1292ರ ಆಳುಪ ಬಲ್ಲ ಮಹಾದೇವಿಯ ಶಾಸನದಲ್ಲಿ ಕದ್ರಿ ಮಂಜುನಾಥನ ಬಗೆಗೆ ಮೊದಲ ಉಲ್ಲೇಖ ಸಿಗುತ್ತದೆ. (ಡಾ. ಗುರುರಾಜ ಭಟ್ಟ 1975, ಪು 295) ಸುಮಾರು 12 - 13 ನೇ ಶತಮಾನದ ವೇಳೆಗೆ ಬೌದ್ಧರ ಅವಲೋಕಿತೇಶ್ವರ ಶೈವರ ಲೋಕೇಶ್ವರನಾಗಿ,ಮುಂದೆ ಸಂಪೂರ್ಣ ಶೈವ ದೇವಾಲಯವಾಗಿ ಮಾರ್ಪಾಡಾಗಿರಬೇಕು. ಕದ್ರಿಯಲ್ಲಿ ಪ್ರತಿಷ್ಠೆಯಾದ ಲೋಕೇಶ್ವರ ವಿಗ್ರಹ, ಶಾಸನದಲ್ಲಿರುವ ಕದಿರೆಯ ವಿಹಾರ ಸಾದಾ ಬೌದ್ಧ ಮತದಿಂದಲ್ಲ. ಉತ್ತರ ಭಾರತದಿಂದ ಬಂದು ಕದಿರೆಯ ಗುಡ್ಡದ ಮೇಲೆ ಮಠ ಸ್ಥಾಪಿಸಿರುವ ಸನಾತನ ಶೈವ ಧರ್ಮದ ನಾಥಪಂಥದಿಂದ ಲೋಕೇಶ್ವರ ವಿಗ್ರಹ ಸ್ಥಾಪಿತವಾಗಿರಬೇಕೆಂದು ಸಂಶೋಧಕ ಗೋವಿಂದ ಪೈಗಳು ತಿಳಿಸಿದ್ದಾರೆ. (ಗೋವಿಂದ ಪೈ ಪುಟ 601)

  

ಜ್ಲಾಲಾ ಮಾಯಿ ಕದ್ರಿ ಜೋಗಿ ಮಠ

       ಕೇರಳದ ಮಲಬಾರ್ ಪ್ರಾಂತ್ಯದಲ್ಲಿ ಅಹೆಪಾ ಸಾಮ್ರಾಜ್ಯವನ್ನು ರಾಣಿ ಪ್ರೇಮಲಾ ದೇವಿ ಅಥವಾ ಪ್ರಮೀಳಾ ದೇವಿ ಆಳುತ್ತಿದ್ದು ಒಮ್ಮೆ ಅವಳ ರಾಜ್ಯಕ್ಕೆ ನಾಥಪಂಥದ ಸಂಸ್ಥಾಪಕರಾದ ಮತ್ಸ್ಯೇಂದ್ರನಾಥರು ಮತ್ತು ಅವರ ಶಿಷ್ಯ ಗೋರಖನಾಥರು ಧರ್ಮಪ್ರಚಾರದ ಸಲುವಾಗಿ ಹೋಗಿದ್ದರು. ಅದರಿಂದ ಪ್ರಭಾವಿತರಾದ ಪ್ರೇಮಲಾದೇವಿ ಇಹಲೋಕದ ಸಕಲ ಸಂಪತ್ತಿನ ಮೇಲೆ ನಿರಾಸಕ್ತಿ ಹೊಂದಿ, ಸಿಂಹಾಸನ ತೊರೆದು, ಸರ್ವವನ್ನು ತ್ಯಾಗ ಮಾಡಿ, ಮತ್ಸ್ಯೇಂದ್ರನಾಥರ ಅನುಯಾಯಿಯಾಗಿ ನಾಥಪಂಥದ ಮೊದಲ ಯೋಗಿನಿಯಾಗಿ ದೀಕ್ಷೆ ಪಡೆಯುತ್ತಾಳೆ. ನಾಥಪಂಥದ ಮೂಲ ಗುರು ಮತ್ಸ್ಯೇಂದ್ರನಾಥ ಮಂಜುನಾಥನಾದರೆ ನಾಥಪಂಥದ ಮೊದಲ ನಾಥಿನಿ ಪಿಂಗಳಾದೇವಿ ಮಂಗಳಾದೇವಿಯಾಗುತ್ತಾಳೆ. ಪ್ರೇಮಲಾದೇವಿಗೆ ನಾಥ ದೀಕ್ಷೆಯಾದ ಬಳಿಕ ಹೆಸರು ಪಿಂಗಳಾದೇವಿ. ಕೇರಳದಿಂದ ಬಂದ ಮತ್ಸ್ಯೇಂದ್ರನಾಥ, ಗೋರಖನಾಥ, ಪಿಂಗಳಾದೇವಿಯರು ನೇತ್ರಾವತಿಯ ದಡಕ್ಕೆ ಬಂದು ದಡದಿಂದ ಈಚೆ ಪಿಂಗಳಾದೇವಿ ತಪಸ್ಸಿಗೆ ಕೂರುತ್ತಾಳೆ. ತನ್ನ ತಪೋಬಲದಿಂದ ಪ್ರಸಿದ್ಧಿಗೆ ಬಂದ ಆಕೆ ಜನಗಳ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿ ಪ್ರಜೆಗಳಿಗೆ ಮಂಗಳವನ್ನು ಕರುಣಿಸುತ್ತಾಳೆ. ಮುಂದೆಗೆ ಅನಾರೋಗ್ಯದಿಂದ ಅವಳ ದೇಹಾಂತ್ಯವಾದ ಮೇಲೆ ಆಕೆಯನ್ನು ಮಂಗಳಾದೇವಿ ಎಂದು ಕರೆದು ಆರಾಧಿಸುತ್ತಾರೆ. ಮುಂದೆ ಆಕೆಗೊಂದು ದೇಗುಲ ನಿರ್ಮಿಸಿ, ಕಾಲಾನುಭಾಗದಲ್ಲಿ ಆ ದೇಗುಲವನ್ನು ನವೀಕರಣಗೊಳಿಸಿ, ಮುಂದೆ ಆಕೆಯ  ಹೆಸರಿನಿಂದ ಮಂಗಳಾಪುರ ಎಂಬ ಹೆಸರಾಗಿ ಮಂಗಳೂರು ಎಂಬ ಹೆಸರು ಬಂತು (ಗಣಪತಿ  ಐಗಳ್). ಮತ್ಸ್ಯೇಂದ್ರರು ಪ್ರೇಮಲ ದೇವಿಯ ರಾಜ್ಯದಲ್ಲಿ ಬಹಳಷ್ಟು ಕಾಲ ಅವಳ ಜೊತೆಗೆ ಇದ್ದು, ಗುರುಗಳು ಬರದಿರುವಾಗ ಗೋರಖರು ಆ ರಾಜ್ಯಕ್ಕೆ ಹೋಗಿ, ಅವರು ಡಮರು ಶಬ್ದ ಮಾಡಿ ಗುರುಗಳನ್ನು ಎಚ್ಚರಿಸಿದ ವಿಚಾರ ಕೆಲವು ಮೂಲಗಳಿಂದ ತಿಳಿದರೆ, ಆಕೆಯನ್ನು ಮತ್ಸ್ಯೇಂದ್ರರ ಹೆಂಡತಿ ಎಂದು ಕೆಲವರು ಹೇಳುವುದುಂಟು. ಆದರೆ ಇದಕ್ಕೆ ಸ್ಪಷ್ಟವಾದ ಪುರಾವೆಗಳ ಸಿಗುವುದಿಲ್ಲ. ನೇತ್ರಾವತಿ ನದಿಯ ಮತ್ಸ್ಯೇಂದ್ರ, ಗೋರಖ, ಪಿಂಗಳಾದೇವಿಯವರು ದಾಟಿದ ಜಾಗವನ್ನು ಗೋರಖ ದಡ ಎಂದು ಕರೆಯುತ್ತಾರೆ. ಕೆಲವು ಹಿರಿತಲೆಗಳು ಹೇಳುವ ಪ್ರಕಾರ ಮಂಗಳೂರು ಮುಳಿಹಿತ್ತಲಿನ ಬಳಿಯಲ್ಲಿ ನೀರಿನ ದಂಡು ಅಥವಾ ಒರತೆಯ ಒಂದು ಬಾವಿ ಇತ್ತು. ಆ ಬಾವಿಯಿದ್ದ ಜಾಗವನ್ನು ಗೋರದಂಡ್ ಎಂದು ಕರೆಯುತ್ತಿದ್ದರು. ಆ ಬಾವಿಯನ್ನು ಮುಚ್ಚಿದಕಾರಣ ಅದರ ಅವಶೇಷಗಳು ನಮಗೀಗ ಕಾಣಸಿಗುವುದಿಲ್ಲ. ಇದನ್ನೆಲ್ಲ ನೋಡುವಾಗ ಮಂಗಳೂರಿನ ಯಾವುದೋ ಒಂದು ಪ್ರದೇಶದಲ್ಲಿ ಗೋರಖರು ಉದಯಿಸಿರಬಹುದೆಂದು ಚಿಂತಿಸಬಹುದು. ಆದರೆ ಇದಕ್ಕೆ ಕೂಡ ಸ್ಪಷ್ಟ ಪುರಾವೆಗಳು ದೊರೆಯುತ್ತಿಲ್ಲ. ಮಂಗಳೂರಿನ ಕಾರ್‌ಸ್ಟ್ರೀಟ್ ನ ಇಂದಿನ ವೆಂಕಟರಮಣ ದೇಗುಲವಿರುವ ಎದುರಿನ ಕಟ್ಟೆಯಲ್ಲಿ ಕುಳಿತಿದ್ದ ಜೋಗಿಯೊಬ್ಬರು ಜೋಳಿಗೆ ಚೀಲವನ್ನು ಅಲ್ಲೊಂದು ಕಂಬಕ್ಕೆ ನೇತುಹಾಕಿದ್ದರು. ಅಲ್ಲೇ ಪಕ್ಕದಲ್ಲಿದ್ದ ಗೌಡ ಸಾರಸ್ವತರೊಬ್ಬರು ಚೀಲದೊಳಗೆ ಇದೇನಿದು ಹೊಗೆ ಎಂದು ಸನ್ಯಾಸಿಯಲ್ಲಿ ವಿಚಾರಿಸಿದಾಗ ಜೋಳಿಗೆಯಿಂದ ಒಂದು ಕಲ್ಲನ್ನು ತೆಗೆದು ಅವರ ಕೈಗಿತ್ತರಂತೆ. ಅದೇ ವೆಂಕಟರಮಣ ದೇವರೆಂದು ಹಿರಿಯರು ನೆನಪು ಮಾಡುತ್ತಾರೆ. ಇದರ ಸತ್ಯಾಸತ್ಯತೆಗಳ ಬಗ್ಗೆ ಅಧ್ಯಯನವಾದ ಬಳಿಕವಷ್ಟೆ  ವಿಚಾರ ತಿಳಿಯಬಹುದು. ಎಲ್.ಐ. ವಡ್ಡೆಲ್ ಅವರು ಬಹಳಷ್ಟು ಹಿಂದೆಯೇ ತಾರಾ-ಮಂಗಳ ಪರ್ಯಾಯ ನಾಮಗಳೆಂದು ಹೇಳಿದ್ದರು. ಈ ವಾದವನ್ನು ಪೂರ್ವೋಕ್ತದಲ್ಲಿ ಬಿ.ಎ ಸಾಲೆತ್ತೂರು, ಗುರುರಾಜ ಭಟ್ಟರು ಎತ್ತಿ ಹಿಡಿದಿದ್ದರು.

                   ಕಾಲ ಭೈರವ ಮಳಲಿ ಜೋಗಿ ಮಠ

      ‌ ಮತ್ಸ್ಯೇಂದ್ರನಾಥ, ಮಂಜುನಾಥ, ಮಂಗಳಾದೇವಿಯ ಆಂತರಿಕ ಸಂಬಂಧಗಳ ಬಗ್ಗೆ ಇನ್ನಷ್ಟು ವಿಚಾರಗಳನ್ನು ತಿಳಿಯ ಹೊರಟಾಗ ಇನ್ನೊಂದು ಪೌರಾಣಿಕ ಹಿನ್ನೆಲೆ ಕಾಣಸಿಗುತ್ತದೆ. ಪರಶಿವನ ಆಜ್ಞೆಯಂತೆ  ಸಹ್ಯಾದ್ರಿಯಿಂದ 10 ಯೋಜನಾ ದೂರದ ಕದಳೀವನದ ಮಧ್ಯಭಾಗದ ರಸ ಕೂಪ (ಕೂಪ ಅಂದರೆ ಬಾವಿ. ಇಲ್ಲಿ ರಸ ಎಂದರೆ ಒರತೆ ಅಥವಾ ವಸರು. ಒರತೆಯಿಂದ ಕೂಡಿದ ಕೆರೆ)ದ ಮಧ್ಯಭಾಗದಲ್ಲಿ ಉದ್ಭವ ಲಿಂಗ ರೂಪದಲ್ಲಿ ಪರಶುರಾಮನಿಗೆ ಮಂಜುನಾಥನಾಗಿ ಶಿವ ದೊರೆಯುತ್ತಾನೆ. ಶಿವನ ಆಜ್ಞೆಯಂತೆ ಭಾರ್ಗವರಾಮ ದೇವಶಿಲ್ಪಿ ವಿಶ್ವಕರ್ಮನಲ್ಲಿ ಮಂಜುನಾಥನಿಗೆ ಸುಂದರವಾದ ದೇಗುಲವನ್ನು ಕಟ್ಟಿಸಿ ನೇತ್ರಾವತಿಯ ಜಲದಿಂದ ದೇವರಿಗೆ ಅಭಿಷೇಕ ಮಾಡುತ್ತಾನೆ. ಮುಂದೆ ಧನ, ಧಾನ್ಯ, ಸಮೃದ್ಧಿ, ಸಕಲ ವೈಶಿಷ್ಟ್ಯದಿಂದ ಶೋಭಿಸುವ ತುಳುನಾಡನ್ನು ಅನುಗ್ರಹಿಸು ಎಂದು ಶಿವನಲ್ಲಿ ಪರಶುರಾಮ ಬೇಡುತ್ತಾನೆ. ಆಗ ಪರಮೇಶ್ವರನ ಅರ್ಧಾಂಗಿ, ವಿಂಧ್ಯಾಚಲವಾಸಿನಿ, ಲೋಕಪಾವನೆ, ಮಂಗಳಾದೇವಿ, ಕಲಿಯುಗದ ಪ್ರಥಮ ಪಾದ, ಆದಿ ಭಾಗದಲ್ಲಿ ದ್ವಿಬಾಹು ಸಮೇತ ಸ್ತ್ರೀ ಆಕಾರದ ಶಿವಶಕ್ತಿ ಬಿಂಬ ರೂಪದಲ್ಲಿ ತನ್ನ ಚೈತನ್ಯದ ಅಧಿಷ್ಠಾನವನ್ನು ಮಾಡಿಕೊಂಡು ಸಹ್ಯಾದ್ರಿಯ ದಕ್ಷಿಣಭಾಗದ ಕಡಲತಡಿಯ ಭೂಖಂಡದಲ್ಲಿ ಅಂದರೆ ಈಗಿನ ಮಂಗಳಾದೇವಿ ಸ್ಥಳದಲ್ಲಿ ಭಾರ್ಗವ ರಾಮನಿಗೆ ಒಲಿಯುತ್ತಾಳೆ. ಭಾರ್ಗವನಿಗೆ ಮಂಜುನಾಥನ ಅನುಗ್ರಹದಿಂದ ಸಮುದ್ರರಾಜ ಬಿಟ್ಟುಕೊಟ್ಟ ಭೂಭಾಗ ಸುಭಿಕ್ಷೆಯಿಂದ ಮೆರೆಯುವಾಗ ದೇವಿ ಮಂಗಳೆ ತನ್ನ ಸ್ವಾಮಿಯೊಂದಿಗೆ ಇರಬೇಕೆಂದು ಶಿವ ಸಮೇತರಾಗಿ ತೌಳವ ದೇಶಕ್ಕೆ ಅನುಗ್ರಹಿಸಿ ತೌಳವಾಧಿಪತಿ, ತೌಳವೇಶ್ವರ ಶಿವನ ಸಾಮ್ರಾಜ್ಯಕ್ಕೆ ಆತನ ಪಟ್ಟದರಸಿಯಾಗಿ ಬರುತ್ತಾಳೆ. ಇದನ್ನು ಗಮನಿಸುವಾಗ ಮತ್ಸ್ಯೇಂದ್ರನಾಥರು ಮಂಜುನಾಥನಾಗಿ ಪ್ರೇಮಲಾದೇವಿ ಪಿಂಗಳೆಯಾದವಳು, ಆತನ ಮಡದಿಯ ಸ್ಥಾನದ ಮಂಗಳಾದೇವಿಯಾಗಿ ನೆಲೆನಿಂತ ವಿಚಾರ ದೃಗ್ಗೋಚರಿಸುತ್ತದೆ. ಕಾಲಾಂತರದಲ್ಲಿ ಶ್ರೀಮಹಾಗಣಪತಿ ದೇವರು ಮಂಗಳಾಪುರದಲ್ಲಿ ತನ್ನ ತಾಯಿ ಮಂಗಳಾದೇವಿಯೊಂದಿಗೆ ನೆಲೆಯಾಗಬೇಕೆಂದು ಸಂಕಲ್ಪಿಸಿ ಶ್ರೀದೇವಿ ಆಜ್ಞೆಯಂತೆ ಪಶ್ಚಿಮ ಕಡಲ ಬದಿಯ ಶರಪುರದಲ್ಲಿ ಗೋಡೆಯಲ್ಲಿ ಅವತರಿಸಲೆಂದು ವಿಶೇಷ ವರ ಪಡೆದ. ತೌಳವ ದೇಶ ಮಂಗಳಾದೇವಿ ದೇಗುಲದಿಂದ ಕದಳಿ ಕ್ಷೇತ್ರದ ಭಾರದ್ವಜಾಶ್ರಮದವರೆಗೆ ವಿಸ್ತಾರವಾಗಿದ್ದು, ಮುಂದೆ ಪಶ್ಚಿಮ ಕಡಲ ದಂಡೆಯಿಂದ ತುಳುನಾಡು ನಾಲ್ಕು ದಿಕ್ಕುಗಳಲ್ಲಿ ಬೃಹತ್ತಾಗಿ ಬೆಳೆಯಿತು. ಸಹ್ಯಾದ್ರಿಯ ತಪ್ಪಲಿನ ತಳನಾಡು  ತುಳುನಾಡಾಯ್ತು. ಮಂಜುನಾಥನ ಪಟ್ಟದರಸಿ ಮಂಗಳೆ, ಶಿವ-ಪಾರ್ವತಿಯರ ಮಗನಾಗಿ ಗಣಪತಿ ಈ ಮೂವರೂ ಮಂಗಳಾಪುರದ ಮೂರು ಕಡೆಗಳಲ್ಲಿ ನೆಲೆನಿಂತು ಭಕ್ತರ ಹರಸುತ್ತಿದ್ದಾರೆ. ಇಲ್ಲಿ ಶೈವ-ಶಾಕ್ತ-ಗಾಣಪತ್ಯ ಪಂಥಗಳ ವಿಚಾರ ಮೇಲ್ನೋಟಕ್ಕೆ ಕಂಡುಬರುತ್ತದೆ. 

                               ‌‌‌ಪುರುಷ ದೈವ

        ಇನ್ನೊಂದು ಮೂಲದ ಪ್ರಕಾರ ನಾಥಪಂಥದ ಸಂಸ್ಥಾಪಕ ಮತ್ಸ್ಯೇಂದ್ರನಾಥರಿಗೂ ಮಂಜುನಾಥನಾದ ಶಿವನಿಗೂ ಗಾಢವಾದ ಸಂಬಂಧ ನಮಗೆ ತಿಳಿಯುವ ಒಂದು ವಿಚಾರ ಸಿಗುತ್ತದೆ. ಪರಮ ಶಿವನನ್ನು ಕಾಣಬೇಕೆಂಬ ಮಹದಾಸೆಯಿಂದ ಮತ್ಸ್ಯೇಂದ್ರನಾಥರು ಶಿವನ ಕುರಿತಾಗಿ ಹಠಯೋಗ ಮಾಡಲು ನಿರ್ಧರಿಸಿ ತನ್ನ ಶಿಷ್ಯನಾದ ಗೋರಕ್ಷನಾಥನನ್ನು ಶಿವನನ್ನು ಕಾಶಿಯಿಂದ ಕರೆತರಲು ಹೇಳಿ ಕಳಿಸುತ್ತಾರೆ. ದೇಹ ದಂಡನೆಯನ್ನು ಮಾಡಿ ಹಠಯೋಗದ ಮೂಲಕ ಶಿವನನ್ನು ಒಲಿಸುವುದೇ ಹಠಯೋಗ. ಘೋರ ತಪಸ್ಸು ಮಾಡಿದ ಮತ್ಸ್ಯೇಂದ್ರರಿಗೆ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ಕಾಲಭೈರವನ ರೂಪದಲ್ಲಿ ನಿನ್ನ ಜೊತೆಗೇ ನಾನಿರುತ್ತೇನೆ ಎಂದು ಆಶೀರ್ವದಿಸುತ್ತಾರೆ. ಕದ್ರಿಮಠ ಹಾಗೂ ಇತರ ಜೋಗಿ ಮಠಗಳಲ್ಲಿ ಕಾಳ ಭೈರವನ ಆರಾಧನೆ ಇದೆ. ಅಂತೆಯೇ ಶೈವಧರ್ಮ ಅನುಯಾಯಿಗಳಾದ ತೌಳವರು ಕೂಡ ಕಾಲಭೈರವನನ್ನು ಭೈರವನಾಗಿ, ಭೈರವಿಯಾಗಿ ಶಕ್ತಿಯಾಗುಆರಾಧಿಸುತ್ತಾರೆ. ಪ್ರತ್ಯಕ್ಷನಾದ ಶಿವ ಗೋರಖನನ್ನು ಕಾಶಿಗೆ ಯಾಕೆ ಕಳುಹಿಸಿದ್ದೀಯಾ ಎಂದು ಮತ್ಸ್ಯೇಂದ್ರನಲ್ಲಿ ಕೇಳಿದಾಗ ನಿಮ್ಮನ್ನು ಕಾಣಲು, ನಿಮ್ಮನ್ನು ಕರೆತರುವಂತೆ ಗೋರಖನ್ನು ಕಾಶಿಗೆ ಕಳುಹಿಸಿದೆ ಎಂದು ಮತ್ಸ್ಯೇಂದ್ರನಾಥರು ಹೇಳುತ್ತಾರೆ.ಒಂದು ದಿನ ಕನಸಲ್ಲಿ ಬಂದ ಶಿವನು ನಾನು ಕದಳಿಯ ರಸಕೂಪದ ಕೆರೆಯಲ್ಲಿ ಲಿಂಗಸ್ವರೂಪದಲ್ಲಿ ನೆಲೆಯಾಗಿದ್ದಾನೆ. ನೀನು ನನ್ನನ್ನು ಲಿಂಗ ರೂಪದಲ್ಲಿ ಪ್ರತಿಷ್ಠಾಪನೆ ಮಾಡು ಎಂದು ಶಿವನು ನುಡಿದಂತೆ ಮತ್ಸ್ಯೇಂದ್ರನಾಥರು ಅಲ್ಲಿ ಶಿವಲಿಂಗ ಸ್ಥಾಪನೆ ಮಾಡಿ ಆರಾಧನೆ ಆರಂಭಿಸುತ್ತಾರೆ. ಇನ್ನೊಂದು ಕಥೆಯ ಪ್ರಕಾರ ಒಂದು ದಿನ ಬ್ರಾಹ್ಮೀ ಮುಹೂರ್ತದಲ್ಲಿ ಶಿವನು ಮತ್ಸ್ಯೇಂದ್ರರಿಗೆ ದರ್ಶನ ಕೊಟ್ಟು, ನೀನು ಯಾವಾಗಲೂ ಸ್ನಾನ ಮಾಡುವ ಕೆರೆಯ ಜಾಗ ಮಂಜು ಕವಿದಿದ್ದು, ಅಲ್ಲಿ ನಾನು ನಿನಗೆ ಲಿಂಗದ ರೂಪದಲ್ಲಿ ಸಿಗುತ್ತೇನೆ. ಆ ಲಿಂಗವನ್ನು ನೀನು ಉತ್ತರದಲ್ಲಿ ಪ್ರತಿಷ್ಠಾಪಿಸು ಎಂದು ಹೇಳಿ ಅಂತಃದೃಶ್ಯನಾಗುತ್ತಾನೆ. ಅಂತೆಯೇ ಮಂಜು ಕವಿದಿರುವ ಕೆರೆಯ ಒಳಗಿದ್ದ ಶಿವಲಿಂಗವನ್ನು ಮತ್ಸ್ಯೇಂದ್ರನಾಥರು ಶಿವನ ಆಣತಿಯಂತೆ ಪ್ರತಿಷ್ಠಾಪಿಸುತ್ತಾರೆ. ಮಂಜಿನ ಒಳಗೆ ಸಿಕ್ಕ ಲಿಂಗವಾದ ಕಾರಣ ಮಂಜಿನಾಥ ಮುಂದಕ್ಕೆ ಮಂಜುನಾಥ ಆಯಿತೆಂದು  ಹೇಳುತ್ತಾರೆ. ಇತ್ತ ಕಾಶಿಗೆ ಹೋದ ಗೋರಖನಾಥರಿಗೆ ತನ್ನ ಗುರುವಾದ ಮತ್ಸ್ಯೇಂದ್ರರಿಗೆ ಶಿವದರ್ಶನ ನೀಡಿದ ವಿಚಾರ, ಲಿಂಗವನ್ನು ಅನುಗ್ರಹಿಸಿದ ವಿಚಾರ ದಿವ್ಯದೃಷ್ಟಿಯಿಂದ ತಿಳಿಯುತ್ತದೆ. ಆದರೆ ನಾನು ಇಲ್ಲಿಂದ ಬರಿಗೈಯಲ್ಲಿ ಹೋದರೆ ಗುರವಾಖ್ಯ ಪರಿಪಾಲನೆ ಮಾಡಿದಂತಾಗುವುದಿಲ್ಲ. ಹಾಗಾಗಿ ಶಕ್ತಿ ಸ್ವರೂಪಿ, ಸ್ವಯಂಭೂಲಿಂಗವನ್ನು ಗುರು ಗೋರಖರು ಕಾಶಿಯಿಂದ ಯೋಗಶಕ್ತಿಯಿಂದ ಕದಿರೆಗೆ ತರುತ್ತಾರೆ. ಹಾಗೆ ತಂದ ಲಿಂಗವನ್ನು ಒಂಭತ್ತು ಕೆರೆಗಳ ಪೈಕಿ ಒಂದು ಕೆರೆಯಲ್ಲಿ ಗೋರಖರು ಇಡುತ್ತಾರೆ. ಮುಂದೆ ಈ ಲಿಂಗವನ್ನು ಅಣ್ಣಪ್ಪ ಸ್ವಾಮಿ ಧರ್ಮಸ್ಥಳದಲ್ಲಿ ಪ್ರತಿಷ್ಟಾಪಿಸುತ್ತಾನೆ ಇದರಿಂದ ನಾಥಪಂಥ ಹಾಗೂ ಕದಿರೆ ಹಾಗೂ ಧರ್ಮಸ್ಥಳಕ್ಕೆ ಹಿಂದಿನಿಂದಲೂ ಇರುವ  ಅವಿನಾಭಾವ ಸಂಬಂಧ ನಮಗೆ ತಿಳಿಯುತ್ತದೆ. ಜೋಗಿಗಳು ಹುಂಡಿ ಕಟ್ಟುವಾಗ ತಿರುಪತಿಗೆ ಕಟ್ಟುವ ಅಗತ್ಯವಿಲ್ಲ. ಕದಿರೆ ಇಲ್ಲವೇ ಧರ್ಮಸ್ಥಳಕ್ಕೆ ನಾವು ಹುಂಡಿಯ ಹಣವನ್ನು ಸಮರ್ಪಿಸಬಹುದು.

               ಕಾಲ ಭೈರವ ಕೊಡಚಾದ್ರಿ ಕೊಲ್ಲೂರು

          ಮುಂದೆ ಗುರು ಮತ್ಸ್ಯೇಂದ್ರರ ಅಣತಿಯಂತೆ ಗೋರಖನಾಥರು ಹಿಮಾಲಯಕ್ಕೆ 14 ವರ್ಷಗಳ ಕಾಲ ತಪಸ್ಸನ್ನು ಆಚರಿಸಲು ತೆರಳಿದರು. ಆದರೆ ಅವರಿಗೆ ತನ್ನ ಗುರುವಿನ ಬಗೆಗಿನ ವ್ಯಾಮೋಹ ಅವರ ತಪಸ್ಸಿಗೆ ಅಡ್ಡಿಯೊಡ್ಡಿತು. ಎಷ್ಟು ಏಕಾಗ್ರತೆಯಿಂದ ತಪಸ್ಸಾಚರಿಸಲು ಪ್ರಯತ್ನಿಸಿದರೂ ಅವರಿಗೆ ಸಿದ್ಧಿ ಲಭಿಸಲಿಲ್ಲ. ಆದರೆ ತನ್ನ ಸಾಧನೆಯ ಬಗೆಗೆ ಗೋರಖರಿಗೆ ಅರಿವಿತ್ತು. ಗೋರಖನಾಥರು ತಪಸ್ಸು ಮಾಡಿದ ಬೆಟ್ಟಕ್ಕೆ ಗೋರಖ ಬೆಟ್ಟ ಎಂದು ಹೆಸರಾಯಿತು. ಇತ್ತ ಮತ್ಸ್ಯೇಂದ್ರನಾಥರು ಗೋರಖರನ್ನು ತಪಸ್ಸಿಗೆ ಕಳುಹಿಸಿದ ಮೇಲೆ ಯೋಗಸಾಧನೆಯ ಸಿದ್ಧಿಗಾಗಿ  ಒಂದು ಗುಹೆಯೊಳಗೆ ಪ್ರವೇಶಿಸಿದರು. ಪ್ರವೇಶಿಸುವ ಮುನ್ನ ಶಿಷ್ಯನೊಬ್ಬನನ್ನು ಕರೆದು ನಾನು ಒಳಗೆ ತಪವಾಚರಿಸುವಾಗ ಒಳಬರಲು ಯಾರನ್ನು ಬಿಡಬೇಡ ಎಂದು ಹೇಳಿ ನೇಮಿಸಿದರು. ಗುರುವನ್ನು ನೋಡಲು ಬಂದ ಗೋರಖರನ್ನು  ಮತ್ಸ್ಯೇಂದ್ರನಾಥರ ಶಿಷ್ಯ ಒಳಹೋಗಲು ಬಿಡದಾಗ ಕೋಪಗೊಂಡ ಗೋರಖರು ಆತನನ್ನು ದೂರ ತಳ್ಳುತ್ತಾರೆ. ಒಳಹೋಗಿ ಗೋರಕರು ನೋಡಿದರೆ ತನ್ನ ಗುರು ಮತ್ಸ್ಯೇಂದ್ರನಾಥರು ಅಲ್ಲಿರಲಿಲ್ಲ. ಹೊರಬಂದು ಮತ್ಸ್ಯೇಂದ್ರರ ಶಿಷ್ಯರಲ್ಲಿ ಕೇಳಿದಾಗ, ನೀವು ಮತ್ತೆ 14ವರ್ಷ ತಪಸ್ಸಿಗೆ ತೆರಳಬೇಕೆಂದು ಗುರುವಿನ ಆಜ್ಞೆಯಾಗಿದೆ ಎಂದು ಮತ್ಸ್ಯೇಂದ್ರನಾಥರ ಶಿಷ್ಯರು ಗೋರಖರಲ್ಲಿ ಹೇಳಿದರು. ಯಾಕೆಂದರೆ ನಾನು ಈ ಮೊದಲು ಗೋರಖನಿಗೆ ಸಾಧನೆ ಮಾಡಲು ಕೊಟ್ಟ ಸಿದ್ಧಿಯನ್ನು ಆತ ದುರುಪಯೋಗ ಪಡಿಸಿದ್ದಾನೆ. ಪರಕಾಯ ಪ್ರವೇಶ ಮಾಡುವ ಮೂಲಕ ಇನ್ನೊಬ್ಬರ ಮನಸ್ಸಿನಲ್ಲಿರುವುದನ್ನು ತಿಳಿಯಲು ಪ್ರಯತ್ನಿಸಿದ್ದಾನೆ. ಯಾವ ಯೋಗಿಯೂ ಹಾಗೆ ಮಾಡಬಾರದು.  ಅದನ್ನು ಗೋರಖ ಮಾಡಿದ್ದಾನೆ ಎಂದು ಪುನಃ 14ವರ್ಷ ತಪಸ್ಸು ಆಚರಿಸಲು ಗೋರಖನಿಗೆ ಹೇಳಲು ಮತ್ಸ್ಯೇಂದ್ರನಾಥರು ತನ್ನ ಶಿಷ್ಯರಿಗೆ ಹೇಳುತ್ತಾರೆ. ತನ್ನ ತಪ್ಪಿನ ಅರಿವಾದ ಗೋರಖರು ತನ್ನ ಗುರುವಿನಲ್ಲಿ ಹದಿನಾಲ್ಕು ವರ್ಷಗಳ ತಪಸ್ಸಿನ ಅವಧಿಯನ್ನು ಕಡಿಮೆ ಮಾಡಲು ಬೇಡಿಕೊಂಡಾಗ ಏಳು ವರ್ಷಗಳ ಕಾಲ ಅಸಾಧರಣ ಭಂಗಿಯಲ್ಲಿ ನಿಂತು ತಪವಾಚರಿಸು ಎಂದು ಹೇಳುತ್ತಾರೆ. ಎಡಕಾಲಿನ ಬೆರಳಲ್ಲಿ ಹಿಮ್ಮಡಿ ಕುಳಿತು, ಎಡಕಾಲ ಮೇಲೆ ಬಲಕಾಲನ್ನು ಇಟ್ಟು, ಎಡ ಕಾಲಿನ ಬೆರಳು ಎಡ ಕಾಲಿನ ಹಿಮ್ಮಡಿಯ ಮೂಲಾಧಾರದಲ್ಲಿಟ್ಟು ಗುರು ಗೋರಖರು 7 ವರ್ಷ ಕಠಿಣ ತಪವನ್ನು ಆಚರಿಸುತ್ತಾರೆ. ಈ ಭಂಗಿಗೆ ಗೋರಕನಾಥ ಆಸನ ಎಂದು ಹೆಸರು. ಗೋರಕ್ಷನಾಥರ ಸಾಮರ್ಥ್ಯ ಗುರು ಮತ್ಸ್ಯೇಂದ್ರನಾಥರಿಗೆ ತಿಳಿದಿತ್ತು. ಯೋಗಗುರು ಗೋರಖರನ್ನು ತಿದ್ದಲು ಗುರು ಮತ್ಸ್ಯೇಂದ್ರನಾಥರು ಈ ರೀತಿಯ ಕಠಿಣ ಭಂಗಿಯಲ್ಲಿ ತಪವನ್ನು ಆಚರಿಸಲು ಹೇಳಿದ್ದರು. ಸರಿಯಾದ ಮಾರ್ಗದರ್ಶನದಿಂದ ಗೋರಖ ಇಡೀ ಜಗತ್ತನ್ನು ತಿದ್ದಲು ಸಾಧ್ಯ ಎಂದು ತಿಳಿದ ಗುರು ಮತ್ಸ್ಯೇಂದ್ರನಾಥರು ಮುಂದೆ ತನ್ನ ಪಟ್ಟಶಿಷ್ಯ ಗೋರಖರನ್ನು ವಿಶ್ವಪರ್ಯಟನೆಗೆ ಕಳುಹಿಸಿದರು. ಗುರು ಮತ್ಸ್ಯೇಂದ್ರನಾಥರು ಸಮಾಧಿಯಾದ ಬಳಿಕ ಗೋರಖನಾಥರು ಇಡೀ ಜಗತ್ತಿಗೆ ಯೋಗ ಮಾರ್ಗದ ಗುರುವಾಗಿ ಅಧ್ಯಾತ್ಮದ ಸಾಧನೆಯಲ್ಲಿ ಮಹೋನ್ನತ ಸ್ಥಾನಕ್ಕೇರಿದರು.

       ಕಾಲ ಭೈರವನ ಮೂಲ ವಿಗ್ರಹ ಕದ್ರಿ ಜೋಗಿ ಮಠ

ಈ ಕಾಲ ಭೈರವನ ಮೂರ್ತಿಯನ್ನು ಗಮನಿಸುವಾಗ ಕಾಲ ಭೈರವನ ಒಂದು ರೂಪವಾದ ಸಂಹಾರ ಭೈರವನ ಕಲ್ಪನೆಯ ಮೂರ್ತಿಯಂತಿದೆ.ಸಂಹಾರ ಭೈರವನಿಗೆ ನಾಲ್ಕು ಕೈಗಳಿದ್ದು ಒಂದರಲ್ಲಿ ಖಡ್ಗ,ಇನ್ನೊಂದರಲ್ಲಿ ರುಂಡ,ಮತ್ತೊಂದರಲ್ಲಿ ತ್ರಿಶೂಲ,ಮಗದೊಂದು ಕೈಯಲ್ಲಿ ಭಿಕ್ಷಾ ಪಾತ್ರೆಯಿದೆ.ಸಂಹಾರ ಭೈರವನ ತಲೆಯ ಮೇಲೆ ಒಂದು ರುಂಡವಿರುತ್ತದೆ.ಕಪ್ಪು ನಾಯಿ ವಾಹನ.ಆರಾದನೆಯಿಂದ ಸರ್ವ ಪಾಪ ಪರಿಹಾರವಾಗುತ್ತದೆ.

       ಕರ್ನಾಟಕದ ಕಡಲ ತಡಿಯ ತುಳುನಾಡಿನಲ್ಲಿ ಕದಿರೆ ಪ್ರದಾನ ಜೋಗಿ ಮಠವಾಗಿದ್ದು ಅದರ ಸುಪರ್ಧಿಯಲ್ಲಿ ವಿಟ್ಲ, ಮಳಲಿ, ಸೂಡಾ, ಮರ್ಕಂಜ ಹೀಗೆ ಜೋಗಿಮಠಗಳು ಕಾಣಸಿಗುತ್ತವೆ. ವಿಟ್ಲ ಜೋಗಿ ಮಠದಲ್ಲಿ ಕದ್ರಿ ಜೋಗಿ ಮಠದಂತೆ ಅರಸರು ಇದ್ದಾರೆ‌. ಕದ್ರಿ ಜೋಗಿ ಮಠದಲ್ಲಿ  ಮರ್ಲ್ ಜುಮಾದಿ (ನಿಜವಾಗಿ ಜುಮಾದಿ ದೈವ) ಇದ್ದಂತೆ ವಿಟ್ಲ ಜೋಗಿ ಮಠದಲ್ಲಿ ಸಾರಾಳ ಜುಮಾದಿ (ಸೇನಾಧಿಪತಿಯ ಸಂಕೇತ) ದೈವವಿದೆ. ಬಂಟವಾಳದ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿ ಬದಿಯಲ್ಲಿ ಒಂದು ಜೋಗಿ ಮಠವಿದ್ದು, ಅದು ನೇತ್ರಾವತಿಯಲ್ಲಿ ನೆರೆ ಬಂದಾಗ ಅದರಲ್ಲಿ ಲೀನವಾಗಿ ಹೋದದ್ದನ್ನು ಅಲ್ಲಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ. ನಾಥಪಂಥದ ಯೋಗಿಗಳ ಜೋಗಿಮಠದ ಸುತ್ತ ಸಂಸಾರಿಗಳಾದ ಜೋಗಿ /ಪುರುಷರು, ಅವರು ನೆಲೆಸಿದ ಪ್ರದೇಶಕ್ಕನುಗುಣವಾಗಿ ಬೇಸಾಯ, ಹೈನುಗಾರಿಕೆ, ವೃತ್ತಿಪರ ಕೆಲಸಗಳನ್ನು ಮಾಡುತ್ತಿದ್ದಾರೆ. ದೈವಾರಾಧನೆಯ ಸೇವೆಗೋಸ್ಕರ ವಾದ್ಯ ಪರಿಕರಗಳ ಮೂಲಕ ದೈವವನ್ನು ಆರಾಧಿಸುವ ಜೋಗಿಗಳಿಗೆ ದೈವಸ್ಥಾನದ ಕಡೆಯಿಂದ ಉಂಬಳಿಯಾಗಿ ಭೂಮಿ ದೊರೆತಿದ್ದು,ಅಲ್ಲಿ ಬೇಸಾಯ,ಕಂಗಿನ ತೋಟ ಮಾಡಿ ಅವರು ಸಂಸಾರ ಜೀವನವನ್ನು  ನಡೆಸುತ್ತಿದ್ದಾರೆ. ಶಿವನನ್ನು ಆರಾಧಿಸುವ ಶೈವ ಜೋಗಿಗಳು ಕಾಲಭೈರವನನ್ನು ಆರಾಧಿಸುತ್ತಾರೆ. ಅಂತೆಯೇ ಹೆಚ್ಚಿನ ಜೋಗಿಗಳ ಮನೆಯಲ್ಲಿ ಗುರು ಗೋರಖನಾಥರ ಭಾವಚಿತ್ರವಿದ್ದು ಅದಕ್ಕೆ ಪೂಜೆಯನ್ನು ಮಾಡುತ್ತಾರೆ. ಅವರ ಪೂರ್ವ ಹಿರಿಕರು ನಡೆದುಕೊಂಡು ಬಂದಂತೆ ಶಾಖಾಹಾರ ಅಥವಾ ಮಾಂಸಾಹಾರಿ ಅಡುಗೆಯನ್ನು ಮಾಡಿ ಕಾಲಭೈರವನನ್ನು ಆರಾಧಿಸುತ್ತಾರೆ. ವಿಟ್ಲದ ಬಳಿ ಕನ್ಯಾನದ ಬಾಳೆಕೋಡಿ ಎಂಬಲ್ಲಿ ಕಾಲಭೈರವನಿಗೆ ದೈವವಾಗಿ ಸೇವೆಯನ್ನು ನಡೆಸುತ್ತಾರೆ. ಶಿವನನ್ನು ಕಾಲ ಭೈರವನಾಗಿ, ವೈದ್ಯನಾಥನಾಗಿ, ಅರಸು ದೈವವಾಗಿ, ಮುಡದಾಯ/ಮೂಡದಾಯನಾಗಿ ( ಅದು ಮುಂಡತ್ತಾಯ/ತ್ತಾಯಿ - ಮುಂಡದಲ್ಲಿ ಅಂದರೆ ಹಣೆಯಲ್ಲಿ ಕಣ್ಣುಳ್ಳವನಾಗಿ) ಆರಾಧಿಸುತ್ತಾರೆ. ಕಾಸರಗೋಡು ಮಂಗಲ್ಪಾಡಿಯ ಪೊಸಡಿ ಗುಂಪೆ ಎಂಬಲ್ಲಿ ಜೋಗಿಮಠ ಒಂದಿದ್ದು, ಅದನ್ನು ಕೆಲವು ಹಿರಿಯರು ನೆನಪಿಸಿದರೂ ಅದರ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುವುದಿಲ್ಲ. ಬಂಟ್ವಾಳ ತಾಲೂಕಿನ ಕಲ್ಲಡ್ಕ - ಮಾಣಿ ರಸ್ತೆಯಲ್ಲಿ ಚಲಿಸುವಾಗ ಸಿಗುವ ಸುಳ್ಳಮಲೆ ಎಂಬಲ್ಲಿ ಬಲ್ಲುಬೈರ ಸಿಂಗಂದರದೆರ್,  ಸಿರಿ ಅರದೆರೆಂಬ ಇಬ್ಬರು ನಾಥಯೋಗಿಗಳು ಇದ್ದು, ಅವರನ್ನು ಭೈರಶೃಂಗಿ, ಸೂರ್ಯ ಶೃಂಗಿಗಳೆಂದು ಕರೆಯುತ್ತಿದ್ದರು. ತಕ್ಷಣ ಮಾಯವಾಗುವ ತಾಂತ್ರಿಕ ವಿದ್ಯೆಯನ್ನು ಅವರು ಅರಿತಿದ್ದರು. ಅಲ್ಲೇ ಪಕ್ಕದ ಊರಿನಲ್ಲಿ ಶಂಭೂರ ಮಂಟಮೆ (ಮಂಟಮೆ ಎಂದರೆ ಮಂಟಪ)ಯಲ್ಲಿ ಅವರು ಶಿವನನ್ನು ಧ್ಯಾನಿಸುತ್ತಿದ್ದರು. ಸ್ವಯಂಭೂ ಶಂಭುವಿನ ಆರಾಧನೆಯನ್ನು ನಾಥಯೋಗಿಗಳು ಅಲ್ಲಿ ಮಾಡಿದ್ದರಿಂದ ಅಲ್ಲಿಗೆ ಶಂಭುಗ ಎಂದು ಹೆಸರು ಬಂದಿರಬಹುದು. ಶಂಭುವಿನ ಮೊಗ ಅಂದರೆ ಶಂಭುವಿನ ಮುಖ. ಶಿವನಿಂದಾಗಿ ಅಲ್ಲಿಗೆ ಈ ಹೆಸರು ಬಂದಿರಬೇಕು. ಶೃಂಗ ಎಂದರೆ ಬೆಟ್ಟದ ತುದಿ. ಶೃಂಗದಲ್ಲಿದ್ದ ಯೋಗಿಗಳು ಶೃಂಗಿಗಳು. ಸುಳ್ಳಮಲೆಯಲ್ಲಿದ್ದ ನಾಥಯೋಗಿ ಸನ್ಯಾಸಿಗಳನ್ನು ಜನಪದರು ಅರದೆರ್/ಅರದರು ಎಂದು ಪ್ರೀತ್ಯಾದರ ಗೌರವದಿಂದ ಕರೆದಿದ್ದಾರೆ. ಜೋಗಿಗಳನ್ನು ಜೋಗಿ ಅರಸರು ಎಂದು ಕರೆದಂತೆ, ಅರಸರನ್ನು ಅವರು ಜೋಗಿ ಅರದೆರ್, ಜೋಗಿ ಅರದರು, ಜೋಗಿ ಅರಸರು ಹೀಗೆ ಕರೆದಿದ್ದಾರೆ.

  

         ಕಾಲ ಭೈರವ ಮೂಲ ಮೂರ್ತಿ ಕದ್ರಿ ಜೋಗಿ ಮಠ

    ನಾಥಪಂಥದ ಸಾಧು ಸನ್ಯಾಸಿಗಳು ತಮ್ಮ ಬಳಿಯಲ್ಲಿದ್ದ ಧೂಮಾವತಿ ಎಂಬ ತಾಂತ್ರಿಕ ಶಕ್ತಿಯನ್ನು ತುಳುನಾಡಿನ ಅನೇಕ ಧರ್ಮಿಷ್ಠರಿಗೆ ನೀಡಿದ್ದಾರೆ. ಆದರೆ ತುಳುನಾಡಿನ ಕೆಲವರು ರಕ್ಷಣೆಯ ಸೈನ್ಯಾಧಿಕಾರಿ, ದಂಡನಾಯಕನ ಸ್ಥಾನ ಹೊಂದಿದ್ದ ಜುಮಾದಿಯನ್ನು ಧೂಮಾವತಿ ಎಂದು ಕರೆದಿದ್ದಾರೆ. ಆದರೆ ತಾಂತ್ರಿಕ ಸಿದ್ದಿಯ ನಾಥಪಂಥದ ಧೂಮಾವತಿಗೂ, ಸೈನಿಕನ ದಂಡಿನ ದಳವಾಯಿಯ ಸ್ಥಾನದ ಜುಮಾದಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ನಾಥಪಂಥದ ಕೆಲವು ಯೋಗಿಗಳು ಈಶ್ವರನ ಗಣಮಣಿ, ಗಣಗಳನ್ನು ಘಟ್ಟದ ಮೇಲಿಂದ ನಾಗರ ಜನಾಂಗದ ತುಳುನಾಡಿಗೆ ತಂದಿದ್ದಾರೆ. ಅದರಲ್ಲಿ ಕೆಲವೊಂದು ಶಕ್ತಿಗಳನ್ನು ತುಳುವರು ದೈವವಾಗಿ ಆರಾಧಿಸುತ್ತಿದ್ದಾರೆ. ಇಲ್ಲಿ ಗಟ್ಟ ಎಂಬುದನ್ನು ನೋಡುವಾಗ ಮೂಡಾಯಿ ಗಟ್ಟ ಎಂದರೆ ಬೆಳ್ಳಿಬೆಟ್ಟ ಅಂದರೆ ಹಿಮವತ್ಪರ್ವತ ಅಥವಾ ಕೈಲಾಸವೆಂದು ಅರ್ಥೈಸಬಹುದು.ತುಳುವರ ಘಟ್ಟ ಎಂದರೆ ಗುಡ್ಡ ಎಂದರ್ಥ. ಗ್ರಾಮ ದೈವಗಳಾಗಲೀ, ರಾಜನ್ ದೈವಗಳಾಗಲೀ ನಾಥಪಂಥದ ಶೈವ ಅವೈದಿಕ ಪಂಥಕ್ಕೆ ಆರಾಧನೆಗೆ ಒಲಿದ ಕಾರಣ ದೈವಗಳಿಗೆ ಹಣೆಗೆ 3 ಅಡ್ಡನಾಮ, ಕೈಯಲ್ಲಿ ತ್ರಿಶೂಲ, ಶಿವನ ಕಾಲಗೆಜ್ಜೆ (ತಾಂಡವ ನೃತ್ಯ)ಗೆ ಸಾಕ್ಷಿಯಾಗಿ ದೈವಗಳ ಕಾಲ ಗಗ್ಗರ, ತ್ರಿಶೂಲ (ಗುಳಿಗ ದೈವ), ಶಿವನಿಗೆ ಮಂತ್ರ, ಶಿವ ಶಕ್ತಿಗಳಾದ ದೈವಗಳಿಗೆ ಸಂಧಿ, ದೈವಗಳ ಕೈಯಲ್ಲಿ ಅಗ್ನಿ ಪಾತ್ರೆ (ಜುಮಾದಿ ದೈವದ ಕೈಯಲ್ಲಿ ಕೊಂಡೆಬಲಿ,  ಜಠಾಧಾರಿಯ ಕೈಯಲ್ಲಿ ಅಗ್ನಿ ಪಾತ್ರೆ), ಅರ್ಧನಾರೀಶ್ವರ ಕಲ್ಪನೆ (ದೈವಗಳಲ್ಲಿ ಸೊಂಟದಿಂದ ಮೇಲೆ ಹೆಣ್ಣು ಸೊಂಟದಿಂದ ಕೆಳಗೆ ಗಂಡು) ಈ ಅಂಶಗಳಿಂದ ಅರ್ಥೈಸಿಕೊಳ್ಳಬಹುದು. ಸಂಧಿಗಳಲ್ಲಿ ಅಗಿನ ಗಟ್ಟ (ಅಗ್ನಿಪರ್ವತ), ಬೂದಿನ ಗಟ್ಟ (ಹಿಮಪರ್ವತ/ಬೂದಿಯ ಪರ್ವತ/ಬಸ್ಮ) ಕಡೆಕಂಚಿ, ಮೇಲ್ಕಂಚಿ, ಬಡಕಾಯಿ ಗಂಗೆ (ಕಾರವಾರದ ಕಾಳಿನದಿ ಎಂದು ಹೇಳುತ್ತಾರೆ. ಅಂದರೆ ತುಳುನಾಡ ವ್ಯಾಪ್ತಿ ಅಲ್ಲಿವರೆಗೆ ಇದ್ದಿರಬಹುದು) ಎಂಬ ವಿಚಾರ ನೋಡುವಾಗ ಅವೈದಿಕ ಶೈವ ಧರ್ಮಕ್ಕೂ ತುಳುನಾಡಿನ ದೈವಾರಾಧನೆಗೂ ಇರುವ ಸಂಬಂಧ ತಿಳಿಯುತ್ತದೆ. ಶಿವನನ್ನು ಲಿಂಗದಲ್ಲಿ ಆರಾಧಿಸಿದರೆ, ತುಳುನಾಡಿನಲ್ಲಿ ದೈವಗಳನ್ನು ಪ್ರಕೃತಿಯಲ್ಲಿ ದೊರೆಯುವ ಆಕಾರವಿಲ್ಲದ ಕಲ್ಲಲ್ಲಿ (ಕಾಟ್ ಕಲ್ಲ್)ಗಳಲ್ಲಿ ನಂಬಿ ಆರಾಧಿಸುತ್ತಾರೆ. ಅವೈದಿಕ ತುಳುವರು ಶಿವನ ಆರಾಧಕರು, ನಾಗಾರಾಧಕರು. ಪ್ರಕೃತಿಯ ಪಂಚಭೂತ ತತ್ವಗಳು ನಾಗ, ಶಿವನಲ್ಲಿ ಅಡಕವಾಗಿವೆ. ಸೋಮಸೂತ್ರದ ಶಿವ-ಪಾರ್ವತಿ ಮಿಥುನ ಲಿಂಗ ದೈವಾರಾಧನೆಯಲ್ಲಿ ಗಂಡು-ಹೆಣ್ಣಿನ ಗುಣಸ್ವಭಾವ ಒಂದು ಶರೀರದಲ್ಲಿ ವಿಲೀನಗೊಂಡಿರುವುದರಲ್ಲಿ ಅಡಕವಾಗಿದೆ. ಇಲ್ಲೆಲ್ಲ ಪ್ರಕೃತಿ ಆರಾಧಕ ತುಳುವರಿಗೆ, ಶಿವನಿಗೆ, ದೈವಗಳ ನಡುವೆ ಇರುವ ಸಂಬಂಧ ತಿಳಿಯುತ್ತದೆ. ಶಿವನೆಂದರೆ ಆರಂಭ, ಶಿವನೆಂದರೆ ಅಂತ್ಯ. ಆದಕಾರಣ ಶಿವನಿಗೆ ಮತ್ತೆ ಸುಡಲಾರದ ಭಸ್ಮ ಲೇಪನ. 12 ವರ್ಷಗಳಿಗೊಮ್ಮೆ ನಡೆಯುವ ಧರ್ಮನೇಮಗಳಿಗೂ, ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಪೈಚಿಲ್ ನೇಮಕ್ಕೂ, ಹನ್ನೆರಡು ವರ್ಷಗಳಿಗೊಮ್ಮೆ ಬರುವ ನಾಥಪಂಥದ ಜುಂಡಿಗೂ ಸಂಬಂಧವನ್ನು ಹಿರಿಯರು ಕಲ್ಪಿಸಿದ್ದಾರೆ. ಹೆಚ್ಚಾಗಿ ನಾಥಪಂಥದ ಗುರುಗಳು ತುಳುನಾಡಿನಲ್ಲಿ ದೈವಗಳ ಮೂಲ ಆರಾಧಕರಾಗಿದ್ದ ಪೂಜಾರಿ ಜನಾಂಗಕ್ಕೆ ಮಂತ್ರ-ತಂತ್ರ ಸಿದ್ಧಿಗಳನ್ನು ಕರುಣಿಸಿದ್ದರು. ಹಾಗೆಯೇ ವೈದ್ಯವೃತ್ತಿಯ ಮಂತ್ರ ಸಿದ್ಧಿಯನ್ನು ಅವರಿಗೆ ನೀಡಿದ್ದರು. ವೈದಿಕತೆಯ ಪ್ರಭಾವದಿಂದ ಮೂಲೆಗುಂಪಾಗಿದ್ದ ದೈವಗಳನ್ನು ಮತ್ತೆ ತುಳುನಾಡಿನಲ್ಲಿ ಅಸ್ಥಿತ್ವಕ್ಕೆ ತಂದ ನಾಥಪಂಥ ಒಂದು ಕಡೆಯಾದರೆ, ಅವೈದಿಕ ನಾಥಪಂಥದ ಜೋಗಿ ಪುರುಷರು ಅದೇ ದೈವದ ವಾದ್ಯ ಸೇವೆಗೆ ನಿಯುಕ್ತಿಗೊಂಡರು. ಊರೂರು ಸುತ್ತುವ ಅಲೆಮಾರಿ ಜನಾಂಗ ಜೋಗಿಗಳಿಗೆ ದೈವದ ಕೆಲಸದಿಂದಾಗಿ ಒಂದು ಸ್ಥಳದಲ್ಲಿ ನೆಲೆನಿಂತು ಬದುಕುವ ಅವಕಾಶ ತುಳುನಾಡಲ್ಲಿ ಸಿಕ್ಕಿತು. ಜೋಗಿ ಪುರುಷರ ಹೆಸರಿನಲ್ಲಿ ಪುರುಷ ಭೂತದ ಆರಾಧನೆ ತುಳುನಾಡಿನಲ್ಲಿದೆ. ದೈವದ ಕ್ಷೇತ್ರಕ್ಕೆ ಚೆಂಡೆ, ಕೊಳಲು, ಬ್ಯಾಂಡ್, ವಾದ್ಯ, ಕ್ಲಾರೋನೆಟ್ ವಾದ್ಯಗಳು ಬಂದರೂ, ದೈವ ನರ್ತನಕ್ಕೆ ಜೋಗಿಗಳ ತಾಸೆ, ಡೋಲು,ಕೊಂಬು ನಾಗಸ್ವರ ವಾದನಗಳು ಪ್ರಮುಖವಾಗಿಬೇಕು. ಚೆಂಡೆಯ ವಾದನಕ್ಕೆ ದೈವದ ಕುಣಿತದ ಹೆಜ್ಜೆ ತಪ್ಪುತ್ತದೆ. ದೇವರ ಆರಾಧಕರು ದೈವಾರಾಧನೆಯನ್ನು ನಾಶದಂಚಿಗೆ ಕೊಂಡೊಯ್ಯುವಾಗ ದೈವಾರಾಧನೆಯನ್ನು ತುಳುನಾಡಿನಲ್ಲಿ ಪುನಶ್ಚೇತನಗೊಳಿಸಿದ ನಾಥಪಂಥದ ಜೋಗಿಗಳ ಹೆಸರಲ್ಲಿ ಇಲ್ಲಿನ ಮೂಲ ನರ್ತಕರು ಬೇರೆ ಬೇರೆ ಹೆಸರುಗಳಿಂದ ಜೋಗಿಗಳನ್ನು ಕರೆದು ನಾಡಿನೆಲ್ಲೆಡೆ ನಾಥಪಂಥದ ಪ್ರಚಾರ ಮಾಡಿದರು. ಕುಣಿತಕ್ಕೆ ತಕ್ಕಂತೆ ಸಂಧಿಯನ್ನು ಕೂಡ ಅಳವಡಿಸಿಕೊಂಡರು. ಉತ್ತರ ಭಾರತದಿಂದ ನಾಥಯೋಗಿಗಳು ಪಶ್ಚಿಮ ಘಟ್ಟ ಇಳಿದು, ಕದಿರಿಗೆ ಬರುವ ಮೊದಲು ಅವರು ಬಂದು ತಂಗಿದ್ದ ಸ್ಥಳದಲ್ಲಿ ಕುರುಹುಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಘಟ್ಟ ಇಳಿದು ಸುಬ್ರಹ್ಮಣ್ಯ, ಪಂಜ, ಮರ್ಕಂಜ, ನರಿಮೊಗರು, ಪುರುಷರಕಟ್ಟೆ, ವಿಟ್ಲ, ಅನಂತಾಡಿ, ಸುಳ್ಳಮಲೆ, ಶಂಭೂರು, ನರಿಕೊಂಬು, ಕಮ್ಮಾಜೆ, ಮಳಲಿ, ಮಟ್ಟಿ, ನಾಣ್ಯ, ಸುಜೀರ್, ಅತ್ತಾವರ ಹೀಗೆ ಮುಂದುವರೆದು ಕದಿರೆಯನ್ನು ನಾಥ ಯೋಗಿಗಳು ಸೇರಿದ್ದಾರೆ. ಶಂಭೂರು ಡಿಂಡಿಗೆರೆಯಲ್ಲಿ ವೈದ್ಯನಾಥನ ದೈವಸ್ಥಾನ, ನರಿಕೊಂಬುವಿನಲ್ಲಿ ಕಾಡೆದಿ ಭದ್ರಕಾಳಿಯ ಬೆಟ್ಟ, ನಾಣ್ಯದಲ್ಲಿ ನೀರಿನ ಕೆರೆ ಅಥವಾ ತೀರ್ಥಬಾವಿ, ಕಮ್ಮಾಜೆಯಲ್ಲಿ ಒರತೆ ಎಬ್ಬಿಸಿದ ತೋಡು, ಪುರುಷರು ಕುಳಿತ ಪುರುಷರಕಟ್ಟೆ, ಸುಳ್ಳಮಲೆಯ ಮಕ್ಕಳಕಟ್ಟೆ, ಬಾಬನಕಟ್ಟೆ, ಗಣಗಳಕಟ್ಟೆ, ಸಂಕಯಕಟ್ಟೆ ಹೀಗೆ ನಾಥಯೋಗಿಗಳು ಬರುವ ಹಾದಿಯಲ್ಲಿ ಕುರುಹುಗಳನ್ನು ಇರಿಸಿಕೊಂಡೆ ಬಂದಿದ್ದಾರೆ. ಪಣಂಬೂರಿನ ಜೋಗಿಕಟ್ಟೆ ಅಥವಾ ಇಂದಿನ ಜೋಕಟ್ಟೆ, ಅನಂತಾಡಿಯ ಜೋಗಿಬೆಟ್ಟು ಜೋಗಿಗಳ ಹೆಸರಿನಿಂದ ಉಲ್ಲೇಖಿತವಾಗಿದೆ.

ಕದ್ರಿ ಜೋಗಿ ಮಠದಲ್ಲಿ ಹೊಸದಾಗಿ ಸ್ಥಾಪನೆಯಾದ ಕಾಲಭೈರವನ ಮೂರ್ತಿ

 ಸಾಂಸಾರಿಕ ಬಂಧನದ ಜೋಗಿಗಳು ಹೆಚ್ಚಾಗಿ ವೈದ್ಯನಾಥನ, ಜುಮಾದಿ, ಮಲರಾಯನ ದೈವಾಲಯಗಳ ಸುತ್ತಮುತ್ತಲಲ್ಲಿ ಬದುಕು ಕಟ್ಟಿಕೊಂಡಿರುತ್ತಾರೆ. ನಾಥಪಂಥದ ಜೋಗಿ ಸನ್ಯಾಸಿಗಳು ಬೆಟ್ಟದ ಮೇಲೆ, ಬೆಟ್ಟದ ಕೆಳಗೆ ತಪಸ್ಸು ಮಾಡಿದ ಸಾಕ್ಷ್ಯಗಳು ಸಿಗುತ್ತವೆ. ಕಾಶಿಮಠ, ಕಾಡುಮಠ ಇದು ಜೋಗಿ ನಾಥಪಂಥದ ಕಲ್ಪನೆಯ ಊರುಗಳಾಗಿವೆ. ಪುರುಷಭೂತ, ಮಾಯಿದ ಪುರುಷೆರ್, ಸೋಣದ ಜೋಗಿ, ಕಾವೇರಿ ಪುರುಷೆರ್, ಸಿದ್ದವೇಷ ಹೀಗೆ ನಾಥಪಂಥದ ಬಗೆಗೆ ಇಲ್ಲಿನ ಮೂಲ ಜನಾಂಗ ಸಂಧಿಗಳನ್ನು ಕಟ್ಟಿ, ಕುಣಿತಗಳನ್ನು ಮಾಡಿ ನಾಡಿನೆಲ್ಲೆಡೆ ನಾಥಪಂಥವನ್ನು ಪ್ರಚಾರ ಮಾಡಿದರು. ಪ್ರತಿಯೊಂದು ದೈವದ ನೇಮ ಕೋಲ ನಡೆಯುವಾಗ ಸೇವೆಯ ಮಧ್ಯದಲ್ಲಿ ವಾದ್ಯ ಊದುವ ಜೋಗಿಗಳಿಗೆ ಹೂವನ್ನು, ತೆಂಗಿನಕಾಯಿಯನ್ನು ಪ್ರಪ್ರಥಮವಾಗಿ ನೀಡಿ ಗೌರವಿಸುತ್ತದೆ. ಇಂದು ದೈವಕ್ಕೆ ನೇಮ ಕಟ್ಟುವವರು ಸಿಕ್ಕಿದವರಿಗೆಲ್ಲಾ ಹೂವಿನ ಮಾಲೆ ಹಾಕುವುದಿದೆ. ಒಂದು ಮೂಲದ ಪ್ರಕಾರ ವಾದ್ಯ ಸೇವೆ ನಡೆಸುವವರು ಜೋಗಿ ಮಠಕ್ಕೆ ತಪ್ಪು ಕಾಣಿಕೆ ಕೊಡಬೇಕಂತೆ. ತುಳುನಾಡಿನ ಯಾವುದೇ ಭಾಗದಲ್ಲೂ ದೈವದ ನೇಮ, ಕೋಲಗಳು ನಡೆಯುವಾಗ ನಡೆಸುವವರು ಕದಿರೆಯ ಕಾಲಭೈರವನ ದೇಗುಲಕ್ಕೆ ಹೋಗಿ ಎಣ್ಣೆ ಸಮರ್ಪಿಸಿ, ಜೋಗಿ ಮಹಾರಾಜರಲ್ಲಿ ಹೇಳಿ ಬರುವ ಅವರ ಆಶೀರ್ವಾದ ಪಡೆಯುವ ಕ್ರಮವಿತ್ತು. ಹಿಂದೆ ದೈವದ ನೇಮ, ಕೋಲ ಮಾಡಿಸುವವರು ಕದಿರೆ ದೇಗುಲಕ್ಕೆ ವರುಷದ ಯಾವುದಾದರೂ ಒಂದು ಸಂದರ್ಭದಲ್ಲಿ ಹೋಗಿ, ಎಣ್ಣೆ ಕೊಟ್ಟು ಬರುತ್ತಾರೆ. ಅಷ್ಟೇ ವಾದ್ಯ ನುಡಿಸುವವರಿಗೆ ದೈವವು ಗೌರವದ ಸಂಕೇತವಾಗಿ ಹೂವು, ತೆಂಗಿನಕಾಯಿ ಕೊಟ್ಟರೂ, ಅದು ದೈವವು ನಾಥಪಂಥದ ಗುರುಗಳಿಗೆ, ಕಾಲಭೈರವನಿಗೆ ಕೊಡುವ ಗೌರವ ಆಗಿದೆ. ನಾಥಪಂಥದ ಜೋಗಿ ಸನ್ಯಾಸಿಗಳು 12 ವರ್ಷಗಳಿಗೊಮ್ಮೆ ಜುಂಡಿ ಬರುವಾಗ, ಅವರಿಗೆ ವಿಶ್ರಾಂತಿಗೆಂದು ಕೆಲವೆಡೆ ಒಂದೊಂದು ಎಕರೆ ಭೂಮಿಯನ್ನು ವಿಜಯನಗರದ ಅರಸರು ನೀಡಿದ್ದು, ಯಾವ ಕಾಲದಲ್ಲೂ ಯಾರಿಗೂ ಆ ಸ್ಥಳ ವರ್ಗಾವಣೆಯಾಗದಂತೆ ಅವರು ಕಾನೂನು ರಚಿಸಿದ ಸ್ಥಳಗಳು ತುಳುನಾಡಿನಲ್ಲಿವೆ. ಆ ಸ್ಥಳದಲ್ಲಿ ಯಾರು ಎಷ್ಟು ಕಾಲ ವಾಸ್ತವ್ಯವಿದ್ದರೂ, ಆ ಸ್ಥಳ ಯಾರಿಗೂ ವರ್ಗಾವಣೆಯಾಗುವುದಿಲ್ಲ. ಇಂತಹ ಒಂದು ಸ್ಥಳ ಬಂಟ್ವಾಳ ತಾಲೂಕಿನ ಕೆಲಿಂಜ ದೈವಸ್ಥಾನದ ಬಳಿಯಲ್ಲಿ ಇರುವ ಒಂದು ತೆಂಗಿನ ತೋಟ. ಇಂತಹ ಅದೆಷ್ಟೋ ದಾಖಲೆ ಇಲ್ಲದ ಭೂಮಿಗಳು ವಿಜಯನಗರದ ಅರಸರು ಜೋಗಿ ನಾಥ ಸನ್ಯಾಸಿಗಳಿಗೆ ನೀಡಿದ ಭೂಮಿಯಾಗಿದೆ. ಮಲೆಕುಡಿಯರು ಪುರುಷ ವೇಷ ಹಾಕಿದರೆ, ಗೌಡ ಜನಾಂಗದವರು ಸಿದ್ದವೇಷ, ಪುರುಷಭೂತ, ಕೆಂಚಿರಾಯನ ಆರಾಧನೆ ನಡೆಸುತ್ತಾರೆ.ತುಳು ನಾಡಲ್ಲಿ ತುಳು ತಿಂಗಳಾದ  ಸೋಣ ತಿಂಗಳ್ಲಿ ಜೋಗಿ ಕುಣಿತ ಕಾಸರಗೋಡು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿಯಲ್ಲಿ ಕಾಣಸಿಗುತ್ತದೆ. ಕಾಸರಗೋಡಿನಲ್ಲಿ ಸೋಣದ ಜೋಗಿ ಎಂದು ಕರೆದರೆ, ವಿಟ್ಲದಲ್ಲಿ ಜೋಗಿಪುರುಷರೆಂದು ಕರೆಯುತ್ತಾರೆ.ತುಳು ತಿಂಗಳು ಮಾಯಿಯ ಪುರುಷರ ಆರಾಧನೆ ಕಾರ್ಕಳದಲ್ಲಿ ಕಾಣಸಿಗುತ್ತದೆ. ಕಾಂತಗ ಎಂಬ ವಾದ್ಯ ನುಡಿಸುತ್ತಾ, ಕೇರಳದ ಕಾಸರಗೋಡು ತಾಲೂಕಿನ ಕಾಟುಕುಕ್ಕೆ ಪರಿಸರದಲ್ಲಿ ಕಾಂತಗ ಜೋಗಿಗಳ ಬಗೆಗೆ ವಾದ್ಯ ನುಡಿಸುತ್ತಿದ್ದ ವಾದ್ಯಕಾರರು ಈಗ ಕಾಣ ಸಿಗುತ್ತಿಲ್ಲ.

  
ಮೂಲ ಕಾಲ ಬೈರವ ಮೂರ್ತಿ ಕದ್ರಿ ಜೋಗಿ ಮಠ

       ಮ್ಯಾನರ್ ಸಂಗ್ರಹ ಮಾಡಿದ "ಮುಡದೇರ ಕಾಲಭೈರವ ಪಾಡ್ದನ"ದಲ್ಲಿ (ಪಾಡ್ದನೊಳು,  ಬಾಸೆಲ್ ಮಿಶನ್ ಮಂಗಳೂರು, 1886) ನಾಲ್ಕು ಮಂದಿ ಜೋಗಿ ಪುರುಷರು ಮೂಡು ಸಮುದ್ರವನ್ನು ನೋಡಿ, ಪಡು ಸಮುದ್ರದ ಸಂದರ್ಶನಕ್ಕಾಗಿ ಗಟ್ಟವಿಳಿದು ತುಳು ರಾಜ್ಯಕ್ಕೆ ಬರುವಾಗ, ನಾಥಪಂಥದ ಕುಲದೈವ ಕಾಳಬೈರವ ಅವರೊಂದಿಗೆ ಕಪಿಲೆ ದನವಾಗಿ ಬಂದ ನಂಬಿಕೆಯಿದೆ. ಜೋಗಿ ಪುರುಷನೊಬ್ಬನ ಮುಂಡಾಸಿನಲ್ಲಿ ಸೇರಿಕೊಂಡು ಕಾಲಭೈರವ ತುಳುನಾಡಿಗೆ ಬಂದದ್ದರಿಂದ, ಮುಂಡತ್ತಾಯ ಎಂಬ ಹೆಸರಾಯಿತೆಂದು ಒಂದು ಪಾಡ್ದನ ಹೇಳುತ್ತದೆ. ಇನ್ನೊಂದು ಪಾಡ್ದನದ ಪ್ರಕಾರ ವೈದ್ಯನಾಥನೆಂಬ ಮಾನವನ ಜೊತೆ ಕಾಲಭೈರವ ಎಂಬ ಭೂತ ಹಿಂಬಾಲಿಸಿಕೊಂಡು ಬಂದು, ವೈದ್ಯನಾಥನ ಕೈಯಲ್ಲಿ ವಿಭೂತಿಯ ಉಂಡೆ ಮತ್ತು ಸಂಜೀವಿನಿ ಬೇರು ಇತ್ತೆಂದು ತಿಳಿದುಬರುತ್ತದೆ. ಇನ್ನೊಂದು ಕಥೆಯ ಪ್ರಕಾರ ಈಶ್ವರನ ಹಣೆಯ ಬೆವರಿನಿಂದ ಜನಿಸಿದ ಶಕ್ತಿಯಾದ್ದರಿಂದ ಮುಂಡತ್ತಾಯ ಎಂಬ ಹೆಸರಾಗಿದೆ. ಹೆಚ್ಚಿನ ವೆಂಕಟರಮಣ ದೇಗುಲಗಳಲ್ಲಿ ಕಾಳಭೈರವನ ಆರಾಧನೆ ನಡೆಯುತ್ತಿದ್ದು, ಕೆಲವೊಂದು ದೇಗುಲಗಳಲ್ಲಿ ಮನುಷ್ಯನ ಮೇಲೆ ಆವೇಶವಾಗುವ ದೇವರು ವೆಂಕಟರಮಣನಲ್ಲ, ಅವನ ಆಪ್ತ ಕಿಂಕರ ಕಾಲಭೈರವನೆಂದು ಹೇಳಲಾಗಿದೆ. ತಿರುಪತಿಗೆ ಮುಡಿಪು ಕಟ್ಟುವಾಗ ಪಾನಕ ಪೂಜೆ ನಡೆಯುವ ಸಂದರ್ಭದಲ್ಲಿ ಊರ ದಾಸಯ್ಯನ ಮೈಮೇಲೆ ಆವೇಶವಾಗಿ ಬರುವವನೂ ಕಾಲಭೈರವನಾಗಿದ್ದಾನೆ. ದಾಸಯ್ಯನ ಮೇಲೆ ಆವೇಶ ಬಂದ ದೇವರು ಕೊಂಕಣಿ, ಕನ್ನಡದಲ್ಲಿ ನುಡಿಕೊಡುವ ಸ್ವಾಮಿ ವೆಂಕಟರಮಣ ಎಂದು ಜನಸಾಮಾನ್ಯರು ನಂಬಿದ್ದಾರೆ. ಇದಕ್ಕೆ ಪೂರಕವಾಗಿ ಪಾಡ್ದನದಲ್ಲಿ ಒಂದು ಸಾಕ್ಷಿ ಸಿಗುತ್ತದೆ. "ಮೂಡಾಯಿ ತ್ಯಾಂಪ ದೇವೆರ್ಂದ್ ಪನ್ಪವೊಂಡೆ. ಮುಡಿಪು, ಮುದ್ರೆ, ದುಡ್ಡು, ದುಗ್ಗಾಣಿ ಸಂದಾವೊಂಡೆ. ಕಾಸಿ ಕಾಳಬೈರವೆಂದ್ ಪನ್ಪಾವೊಂಡೆ." ಇಲ್ಲಿ ಕಾಲಭೈರವ ವೆಂಕಟರಮಣ ಅಭಿನ್ನರು ಎಂದು ಹೇಳಿದಂತಾಯಿತು. ವೆಂಕಟರಮಣನ ಮೂರ್ತಿಯನ್ನು ವೀರಭದ್ರನ ಮೂರ್ತಿ ಎಂದೂ ಹೇಳುವವರಿದ್ದಾರೆ. ರಾಮಾನುಜಾಚಾರ್ಯರು ವೀರಭದ್ರ ಮೂರ್ತಿಯನ್ನು ರೂಪಾಂತರಿಸಿ ವಿಷ್ಣು ಮೂರ್ತಿಯಾಗಿಸಿದರೆಂದು ಶ್ರೀಪತಿ ಪಂಡಿತರು ಶ್ರೀಕರ ಭಾಷ್ಯದಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ. (ರಾಮಚಂದ್ರ ಚಿಂತಾಮಣಿ ಢೇರೆ, ಶ್ರೀ ವಿಠಲ ಒಂದು ಮಹಾ ಸಮನ್ವಯ, ಪುಟ 61) ದೇವರಾದ ವೀರಭದ್ರನನ್ನು ಅಲ್ಲಗಳೆಯಲಾಗದೆ ಆತನನ್ನು ಕಾಲಭೈರವನೆಂದು ಕರೆದು. ವೆಂಕಟರಮಣನ ಕಿಂಕರನೆಂದು ಮಾರ್ಪಡಿಸಲಾಯಿತು ಎಂಬ ಅಭಿಪ್ರಾಯವಿದೆ. ಪುರಾಣಗಳಲ್ಲಿ ವಿಷ್ಣುವಿಗೆ ಎಲ್ಲೂ ವೆಂಕಟನೆಂದು ಕರೆದ ಉಲ್ಲೇಖಗಳಿಲ್ಲ. ವೆಂಕಟನನ್ನು ಮೂಡಲಗಿರಿ ಸ್ವಾಮಿ ಎಂದರೆ ಮೂಡಲಗಿರಿಯಿಂದ ಬಂದ ಕಾಲಭೈರವನನ್ನು ಬೂತವಾಗಿಸಿ ಮೂಡದಾಯ ಎಂದು ತುಳುನಾಡಿನಲ್ಲಿ ಕರೆದುದು ಸಹಜವಾಗಿದೆ. ಇಲ್ಲಿ ಮುಡದೇರ ಅಂದರೆ ಮೂಡಾಯಿದ ಜೇರದ ದೇವೆರ್ ಎಂದರೆ ಕಾಲಭೈರವನೆಂದು ಅರ್ಥೈಸಬಹುದು.

  

    ಹಳೆಯ ಕಾಲದ ತ್ರಿಶೂಲ ಡಮರುಗ ಕದ್ರಿ ಜೋಗಿ ಮಠ

      ತುಳುನಾಡಿನ ದೈವಾರಾಧನೆಗೆ ವೈಷ್ಣವ ಪುರೋಹಿತಶಾಹಿ ವ್ಯವಸ್ಥೆಯಿಂದ ಪೆಟ್ಟು ಬಿದ್ದಾಗ ಇಲ್ಲಿ ದೈವಾರಾಧನೆಯನ್ನು ನಂಬಿ ಬದುಕಿದವರಿಗೆ ದಿಕ್ಕಿಲ್ಲದಂತಾಯಿತು. ತುಳುನಾಡಿನಲ್ಲಿ ವೈದಿಕ ವಿಧಿವಿಧಾನಗಳು ಬಂದಾಗ ಗ್ರಾಮದೈವಗಳನ್ನು ಅವರು ಕ್ಷುದ್ರ ಶಕ್ತಿಗಳೆಂದು ಕರೆದರು. ಜನರು ದೈವಗಳಿಗೆ ಅಗೆಲು ಅಂದರೆ ಮಾಂಸಾಹಾರದ ಎಡೆ ಬಡಿಸುತ್ತಿದ್ದುದನ್ನು ನಿಲ್ಲಿಸಿದರು. ಅಷ್ಟ ದಿಕ್ಪಾಲಕರನ್ನು, ಬ್ರಹ್ಮ, ವಿಷ್ಣು, ಶಿವನನ್ನು ನಂಬಿ ಎಂದರು. ರಾಮಾಯಣ, ಮಹಾಭಾರತ, ವೇದ, ಪುರಾಣಗಳನ್ನು ಓದುವಂತೆ ಜನರನ್ನು ಪ್ರೇರೇಪಿಸಿ ಜನಗಳಿಗೆ ಅದು ಅರ್ಥವಾಗದಿದ್ದರೂ ನಿಧಾನವಾಗಿ ಜನಗಳು ಒಪ್ಪಿಕೊಳ್ಳತೊಡಗಿದರು. ದೈವದ ಸೇವೆ ಮಾಡುವ ಕೆಲವೊಂದು ಜಾತಿ ವರ್ಗಗಳನ್ನು ಅವರು ಅಸ್ಪೃಶ್ಯರೆಂದು ದೂರವಿಟ್ಟರು. ಇದರಿಂದಾಗಿ ವೈದಿಕ ಅರ್ಚಕರಿಗೆ ಎರಡು ರೀತಿಯ ಉಪಯೋಗವಾಯಿತು. ದೇಗುಲದ ದೇವರ ಅರ್ಚನೆಗೆಂದು ಅವರಿಗೆ ಭೂಮಿ ಉಂಬಳಿ ಸಿಕ್ಕುತು. ದೇವಾಲಯದ ಅರ್ಚಕ ವೃತ್ತಿಗೆ ಜನರಿಂದ ದಕ್ಷಿಣೆ ದೊರೆಯಿತು. ಆ ಹೊತ್ತಿಗಾಗುವಾಗ ವೈದಿಕ ಪುರೋಹಿತಶಾಹಿ ವ್ಯವಸ್ಥೆಗೆ ವಿರುದ್ಧವಾದ ತಂತ್ರ ಮಂತ್ರ ಸಿದ್ದಿಗಳಲ್ಲಿ ನಿಪುಣರಾದ ನಾಥ ಯೋಗಿಗಳು ಸಮಾಜದ ಕೆಳಸ್ತರದ ಜಾತಿ ಜನಾಂಗಗಳ ಜನರನ್ನು ಪ್ರೀತಿ ವಾತ್ಸಲ್ಯದಿಂದ ನೋಡುವುದರ ಜೊತೆಜೊತೆಗೆ ಈ ಅವೈದಿಕ ಜನಾಂಗ ಆರಾಧಿಸುತ್ತಿದ್ದ ದೈವಗಳಿಗೆ ಮತ್ತೊಮ್ಮೆ ನೆಲೆಯನ್ನು ಕಲ್ಪಿಸಿದರು. ದೈವಸ್ಥಾನಗಳು ದೇವಸ್ಥಾನಗಳಾಗುವ ಹೊತ್ತಿಗೆ, ದೈವಗಳನ್ನು ದೇವರು ಮಾಡುವ ಹೊತ್ತಿಗೆ ಬಂದ ನಾಥಪಂಥ ಮೂಲ ದೈವಾರಾಧನೆಯನ್ನು ಪುನಃಶ್ಚೇತನ ಗೊಳಿಸಿತು. ಇಲ್ಲಿನ ಅವೈದಿಕ ತುಳುವರು ನಾಥ ಯೋಗಿಗಳನ್ನು ತಮ್ಮ ಗುರುಗಳೆಂದು ಕರೆದರು. ತುಳುನಾಡಿನ ಮೊಗವೀರರು, ಪೂಜಾರಿಗಳು, ಗೌಡರು, ಮೂಲ ದೈವನರ್ತನ ಮಾಡುವ ವರ್ಗಗಳಿಗೆ ನಾಥಪಂಥ ತುಂಬಾ ಹತ್ತಿರವಾದ ಕಾರಣ ದೈವಾರಾಧನೆ ತುಳುನಾಡಿನಲ್ಲಿ ಬೆಳಗಿ ತುಳುವರು ಇಂದಿಗೂ ದೈವಾರಾಧನೆಯನ್ನು ಮುಂದುವರೆಸುವಂತಾಯಿತು. ಆ ನೆನಪಿಗಾಗಿ ದೈವಗಳು ನಾಥಪಂಥದ ಆರಾಧ್ಯ ದೈವವಾದ ಕಾಲಭೈರವನಿಗೆ ತನ್ನ ವಾದ್ಯ ಸೇವೆ ಮಾಡುವವರ ಮೂಲಕ ಹೂ, ತೆಂಗಿನಕಾಯಿಯನ್ನು ಕೊಟ್ಟು ಗೌರವಿಸುತ್ತದೆ. ದೈವದ ಕೋಲ, ನೇಮ ನಡೆಸುವವರು ಆರಂಭದಲ್ಲಿ ಕದ್ರಿ ಮಠದ ಕಾಲಭೈರವನ ದರ್ಶನ ಮಾಡಿ ಮುಂದೆ ಮಂಜುನಾಥನ ದರ್ಶನ ಮಾಡಿ ಕೋಲ ಸೇವೆಯನ್ನು ನಡೆಸುತ್ತಾರೆ. ಇಂದು ಮತ್ತೊಮ್ಮೆ ದೈವಸ್ಥಾನಗಳು ದೇವಸ್ಥಾನಗಳಾಗುತ್ತಿವೆ. ದೈವಗಳು ದೇವರಾಗುತ್ತಿದ್ದಾರೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದೈವಾರಾಧನೆ ನಾಶವಾದೀತು. ಎಚ್ಚರ!!!

                ಕಾಲ ಭೈರವ ಸ್ವಾಮಿ ವಿಟ್ಲ ಜೋಗಿ ಮಠ

          ನಾಥ ಜೋಗಿ ಪರಂಪರೆಯಲ್ಲಿ ಬೇರೆ ಬೇರೆ ಪಂಗಡಗಳಿದ್ದು, ಜೋಗಿಗಳೆಂದರೆ ಸಾಕ್ಷಾತ್ ಶಿವನೆಂದು ನಂಬಿದವರು ಒಂದು ಕಡೆಯಾದರೆ, ಅರ್ಜುನನು ಜೋಗಿಗಳ ಮೂಲ ಪುರುಷ ಎನ್ನುವವರೂ ಇದ್ದಾರೆ. ಅರ್ಜುನ ತೀರ್ಥಯಾತ್ರೆ ಮುಗಿಸಿ ತಾಯಿಯ ಬಳಿಗೆ ಬರುವಾಗ ಜೋಗಿಯ ರೂಪದಲ್ಲಿದ್ದ. ತನ್ನ ಶಿಷ್ಯಂದಿರಿಗೆ ಪಾಂಡವರ ಕಥೆಗಳನ್ನು ಎಲ್ಲೆಡೆ ಪ್ರಚಾರ ಮಾಡುವಂತೆ ಎಲ್ಲಾ ದಿಕ್ಕುಗಳಿಗೆ ಕಳುಹಿಸಿದ. ಕುಂಬಳೆ ಸೀಮೆಯಲ್ಲಿ ಇಂತಹ ವಿಚಾರಗಳಿದ್ದವೆಂದು ಹಿರಿಯ ಜನಪದ ವಿದ್ವಾಂಸರಾದ ಡಾ. ಪಾಲ್ತಾಡಿ ರಾಮಕೃಷ್ಣ ಅಚಾರ್ ತಿಳಿಸಿದ್ದಾರೆ. (ತುಳುನಾಡಿನ ಪಾಣರರು. ಪು-257). ಕಾವೇರಿ ಪುರುಷರ ಆರಾಧನೆ ಸುಳ್ಯದಾಚೆ ಇದ್ದು, ತಲಕಾವೇರಿ ಮತ್ತು ಕಾವೇರಿ ಪುರುಷರಿಗೆ ಏನಾದರೂ ಸಂಬಂಧವಿರಬಹುದು. ಕಿನ್ನರಿ ನುಡಿಸಿಕೊಂಡು ಪಾಂಡವರ ಕಥೆಗಳನ್ನು ಹಾಡಲ್ಲಿ ಹೇಳಿಕೊಂಡು, ನಾಥಪಂಥವನ್ನು ಅಂದಿನಿಂದ ಇಂದಿನವರೆಗೆ ಪ್ರಚಾರಮಾಡಿಕೊಂಡು ಸಮಾಜದ ತಪ್ಪುಗಳನ್ನು ತಿದ್ದುವಂತೆ ಮಾಡಿದ ನಾಥ ಜೋಗಿ ಸಮುದಾಯ ಎಂದರೆ ಕಿನ್ನರಿ/ಕಿಂದರಿ ಜೋಗಿಗಳು. ಇವತ್ತು ಅವರು ತುಂಬಾ ಅಪರೂಪವಾಗಿದ್ದಾರೆ. ಕರಾವಳಿಯ ಗೌಡ ಜನಾಂಗ, ಜೈನ ಅಜಿಲರಲ್ಲಿ, ಕೊಡಗಿನ ಮಲೆಕುಡಿಯರಲ್ಲಿ ನಾಥಪಂಥದ ಪ್ರಭಾವ ಕಾಣಸಿಗುತ್ತದೆ. ಬಹಳಷ್ಟು ಜಾತಿ ಸಮುದಾಯಗಳು ನಾಥಪಂಥವನ್ನು ಗೌರವಿಸಿವೆ. ಮಂಗಳೂರು ಜವುಳಿ ವ್ಯಾಪಾರದ ಸಿಂಧ್ ಪ್ರಾಂತ್ಯದ ಗೋಕುಲ್ ದಾಸ್ ಕದ್ರಿ ಜೋಗಿಮಠದ ಶಿಷ್ಯರಾಗಿದ್ದು, ಕದ್ರಿ/ಕದಳಿ ಮಂಜುನಾಥ ಮಹಾತ್ಮೆಯನ್ನು 30 ಸಾವಿರ ರೂಪಾಯಿ ಖರ್ಚು ಮಾಡಿ ಪುಸ್ತಕ ಪ್ರಕಟಿಸಿದ್ದರು. ಗೌಡ ಸಾರಸ್ವತರಾದ ಪುತ್ತು ವೈಕುಂಠ ಶೇಟ್‌ರವರು ಕದ್ರಿ ನಾಥ ಜೋಗಿಮಠದ ಭಕ್ತರಾಗಿದ್ದು, ಅವರ ಬೀಡಿ ಉದ್ಯಮ ಆರಂಭಿಸಲು ನಾಥಯೋಗಿ ಸುಂದರನಾಥರು ಪ್ರೇರಣೆಯಾದರೆಂಬ (1908-1921) ಮಾಹಿತಿ ಸಿಗುತ್ತದೆ. ಹೊಗೆಸೊಪ್ಪನ್ನು ಸೇದುತ್ತಿದ್ದ ಸುಂದರನಾಥರು ಶೇಟ್ ಅವರಿಗೆ ಬೀಡಿಯ ಒಂದು ಎಲೆ ಕೊಟ್ಟು, ಇದರಿಂದ ಬೀಡಿ ಉದ್ಯಮ ನಡೆಸೆಂದು ಅದೇಶಿಸಿದಾಗ ಅವರು ಆ ಉದ್ಯಮ ನಡೆಸಿ ಯಶಸ್ವಿಯಾದರು. ಇಂದಿಗೂ ಶ್ರೀಮಠಕ್ಕೆ ಬರುವಾಗ ಅವರ ಮನೆತನದವರು ತಂಬಾಕನ್ನು ಭಕ್ತಿ ಶ್ರದ್ಧೆಯಿಂದ ತಂದುಕೊಡುತ್ತಾರೆ. ಕದಿರೆ ಬೆಟ್ಟದಲ್ಲಿ ನವನಾಥ ಕೆರೆಯ ಮೇಲೆ ಸಂಚಾರಿ ನಾಥ ಸಂತರ ವಸತಿಗಾಗಿ ಅವರು ಛತ್ರವನ್ನು ಕಟ್ಟಿಕೊಟ್ಟಿದ್ದಾರೆ. ನಾಥ ಪಂಥದ ಜುಂಡಿ ಬರುವಾಗ ಅಶ್ವತ್ಥಕಟ್ಟೆಯಲ್ಲಿ ಅವರನ್ನು ಸ್ವಾಗತಿಸಿ ಪಾನಕ ಕೊಡುವ ಪದ್ಧತಿಯನ್ನು ಅವರು ಉಳಿಸಿಕೊಂಡಿದ್ದಾರೆ. ಕುಂದಾಪುರ ತಾಲೂಕು ಕಮಲಶಿಲೆಯ 'ಎಡಮೊಗೆ'ಯ ಬಳಿಯಿರುವ 'ಹಲವರಿ ಮಠ' ಬಹಳ ಪ್ರಸಿದ್ದಿಯಲ್ಲಿತ್ತು. ಬಾರ್ಕೂರು, ಬಸ್ರೂರು, ಕೋಟೇಶ್ವರದವರೆಗೆ ಈ ಮಠದ ಖ್ಯಾತಿ ವ್ಯಾಪ್ತಿ ಇತ್ತು. ಈ ಮಠದ ಸುತ್ತಮುತ್ತ ಬಳೆಗಾರ ಜೋಗಿಗಳ ವಾಸಸ್ಥಾನವಿದೆ.

ಮರ್ಲ್ ಜುಮಾದಿ ಕದ್ರಿ ಜೋಗಿ ಮಠ

        ಭಾರತದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಕುಂಭಮೇಳ ನಡೆಯುತ್ತದೆ. ಕುಂಭಮೇಳ ಅಂದರೆ ಒಂದು ಪ್ರಮುಖ ತೀರ್ಥಯಾತ್ರೆ ಮತ್ತು ಹಬ್ಬವಾಗಿದೆ. 1. ಉತ್ತರಪ್ರದೇಶದ ಗಂಗಾ ಯಮುನಾ ಸರಸ್ವತಿ ನದಿಗಳ ಸಂಗಮದ "ಪ್ರಯಾಗ್" (ಮೊದಲು ಪ್ರಯಾಗದ ಹೆಸರು ಅಲಹಾಬಾದ್) 2. ಉತ್ತರಾಖಂಡದ ಗಂಗಾನದಿ ತಟದ "ಹರಿದ್ವಾರ" 3. ಮಧ್ಯಪ್ರದೇಶದ ಕ್ಷಿಪ್ರಾ ನದಿ ತಟದ "ಉಜ್ಜಯಿನಿ" ಮತ್ತು 4. ಮಹಾರಾಷ್ಟ್ರದ ನಾಸಿಕ್‌ನ ಗೋದಾವರಿ ತಟದ "ತ್ರಯಂಬಕೇಶ್ವರ" ಇವೇ ಕುಂಭಮೇಳ ನಡೆಯುವ ನಾಲ್ಕು ಪ್ರಮುಖ ಸ್ಥಳಗಳು. ಒಂದು ಸ್ಥಳದಿಂದ ಇನ್ನೊಂದು ಸ್ಥಳದಲ್ಲಿ ನಡೆಯುವ ಕುಂಭಮೇಳಕ್ಕೆ ಮೂರು ಮೂರು ವರ್ಷಗಳ ಅಂತರವಿರುತ್ತದೆ. ಅರ್ಧಕುಂಭಮೇಳ ಆರು ವರ್ಷಗಳಿಗೊಮ್ಮೆ ಹರಿದ್ವಾರ ಮತ್ತು ಪ್ರಯಾಗದಲ್ಲಿ ನಡೆಯುತ್ತದೆ. 13 ವರ್ಷಗಳಿಗೊಮ್ಮೆ ಪೂರ್ಣಕುಂಭಮೇಳ ಮೇಲೆ ತಿಳಿಸಿದ ನಾಲ್ಕು ಸ್ಥಳಗಳಲ್ಲಿ ನಡೆಯುತ್ತದೆ. ಗುರು ಗ್ರಹದ ಚಲನೆಯ ಆಧಾರದಲ್ಲಿ 12 ರಾಶಿಗಳಲ್ಲಿ ಗುರು ಮೂರು ವರ್ಷಗಳಿಗೊಮ್ಮೆ ನಿರ್ದಿಷ್ಟ ರಾಶಿಯಲ್ಲಿರುವಾಗ ಆಯಾಕ್ಷೇತ್ರದಲ್ಲಿ ಕುಂಭಮೇಳ ನಡೆಯುತ್ತದೆ. ಉತ್ತರಭಾರತದ ನಾಥಪಂಥದ ಕೇಂದ್ರದಿಂದ 12 ವರ್ಷಗಳಿಗೊಮ್ಮೆ12 ಪಂಥಗಳ ಯೋಗಿಗಳ ಸಮ್ಮುಖದಲ್ಲಿ ದೇಶದ ಎಲ್ಲಾ ಜೋಗಿಮಠಗಳಿಗೆ ಸನ್ಯಾಸಿಗಳನ್ನು ನೇಮಕ ಮಾಡುತ್ತಾರೆ. ಸುಮಾರು ಆರು ತಿಂಗಳ ಕಾಲ ನಾಥಯೋಗಿಗಳು ಕಾಲ್ನಡಿಗೆಯಲ್ಲೇ ಸಂಚರಿಸಿ  ಬಂದು ತಂಗಿದ ಮಠಕ್ಕೆ ಒಬ್ಬ ನಾಥಯೋಗಿಯನ್ನು ನಾಥ ಪರಂಪರೆಯ ವಿಧಿವಿಧಾನಗಳೊಂದಿಗೆ ಪೀಠಾಧ್ಯಕ್ಷರರಾಗಿಸಿ ಬಂದವರು ಆಯಾಸ ಪರಿಹಾರಕ್ಕೋಸ್ಕರ ಶ್ರೀಮಠದಲ್ಲಿ ರಾತ್ರಿ ತಂಗಿ ಪೂಜಾ ವಿಧಿವಿಧಾನ ಮುಗಿಸಿ ಪುನಃ ಮುಂದಿನ ಮಠದತ್ತ ಕಾಲ್ನಡಿಗೆಯಲ್ಲೇ ಸಾಗುತ್ತಾರೆ. ವಿಟ್ಲ ಮಠದಲ್ಲಿ ಅರಸರ ಅನುಪಸ್ಥಿತಿಯಿದ್ದರೆ, ಕದ್ರಿ ಜೋಗಿಮಠವೇ ಹಿಂದೆ ವಿಟ್ಲಮಠದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿತ್ತು. 

                 ನಾಥ ಪಂಥದ ಗುರುಗಳ ಸಮಾಲೋಚನೆ

     ನಾಥಪಂಥವನ್ನು ಜೈನರಿಗಿಂತಲೂ ಹೆಚ್ಚು ಕಟುವಾಗಿ ವಿಮರ್ಶೆ ಮಾಡಿದವರು ಶರಣರು ಮತ್ತು ವೀರಶೈವರು .ನಾಥಪರಂಪರೆಯ ಸಾಂಸ್ಕೃತಿಕ ಜಗತ್ತಿನ ಪರಿಚಯವಿಲ್ಲದ ಕೆಲವೊಂದು ವಿದ್ವಾಂಸರು ಜೋಗಿಗಳ ಲೈಂಗಿಕ ನೈತಿಕತೆಯು ಸಾಮಾನ್ಯವಾಗಿ ಸಡಿಲ ಎಂದಿದ್ದಾರೆ. ಕೆಲವರು ನಾವು ಮಾತ್ರ ನಾಗರಿಕರೆಂದು ಭ್ರಮಿಸಿ ಉಳಿದವರನ್ನು ಅನಾಗರಿಕರೆಂದು ಚಿತ್ರಿಸುವ ಕೆಲಸ ಮಾಡಿದ್ದಾರೆ. ಮೈಥುನ ಸಾಧನೆ ಇರುವ  ಪಂಥಗಳಲ್ಲಿ ಕೆಲವೊಂದು ಆಚರಣೆಗಳು ಗುಟ್ಟಾಗಿ ನಡೆಯುತ್ತವೆ. ಸಭ್ಯರೆಂದು ನಟಿಸುವ ನಾಗರಿಕರೂ ಇರುಳಲ್ಲಿ ಹೆಣ್ಣುಮಕ್ಕಳನ್ನು ತಮಗೆ ಬೇಕಾದಂತೆ ಬಳಸಿ ಹಗಲಲ್ಲಿ ಅವಳನ್ನು ಕೆಟ್ಟವಳಾಗಿ ಬಿಂಬಿಸುತ್ತಾರೆ. ಆದರೆ ನಾಥಯೋಗಿಗಳು ಹಾಗೆ ಮಾಡುವುದಿಲ್ಲ. ತನಗೆ ಗೊತ್ತಿಲ್ಲದ್ದನ್ನು ದೂರವಿಡುವ, ಆ ಪಂಥವನ್ನು ತಿರಸ್ಕರಿಸುವ ಬರಹಗಾರರೂ ಇದ್ದಾರೆ. ಬಹಳಷ್ಟು ಮಂದಿ ವಿದ್ವಾಂಸರುಗಳು ಬಹಳಷ್ಟು ನಾಥಪಂಥದ ಲೇಖನಗಳನ್ನು ಬರೆದರೂ, ಬಗೆದಷ್ಟೂ ಮುಗಿಯದ ಒರತೆಯಂತಿರುವ ನಾಥಪಂಥದ ಬಗೆಗೆ ಸಮಗ್ರವಾದ ಅಧ್ಯಯನ ನಡೆಯಲಿಲ್ಲ. ಜೋಗಿ ನಾಥಪಂಥದ ಯೋಗಿಗಳು ಮಠಗಳಲ್ಲಿ, ಬೆಟ್ಟಗುಡ್ಡಗಲ್ಲಿರುವವರೆಂದು ಇತರ ಧರ್ಮದವರು ನಾಥಗುರುಗಳನ್ನು ಚಿತ್ರಿಸಿ ಯೋಗಿ ನಾಥಪಂಥವನ್ನು ಜನರಿಂದ ದೂರವಿಡುವ ಹುನ್ನಾರವನ್ನು ಅಂದಿನಿಂದಲೇ ಮಾಡುತ್ತಾ ಬಂದಿದ್ದಾರೆ. ಆದರೂ ಜನಸಾಮಾನ್ಯರು ಅವೈದಿಕ ನಾಥ ಗುರುಗಳ ಬಗೆಗೆ ಗೌರವವನ್ನು ಇಟ್ಟುಕೊಂಡಿದ್ದಾರೆ. ಹೆಚ್ಚಿನ ಪಂಥಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ ಚಾರಿತ್ರಿಕ ಒತ್ತಡದಿಂದಾಗಿ ಕೆಲವೊಮ್ಮೆ ತಮ್ಮ ಬೇಳೆ ಬೇಯುವುದಿಲ್ಲ ಎಂದು ತಿಳಿದಾಗ ಹೊಂದಿಕೊಂಡು, ಸೇರಿಕೊಂಡು ಹೋದದ್ದೂ ಇದೆ. ಮೇಲುಕೋಟೆಯ ರಾಮಾನುಜಾಚಾರ್ಯರು (ವಿಶಿಷ್ಟಾದ್ವೈತ ಮತ) ಕಾಪಾಲಿಕರನ್ನು ಕಟುವಾಗಿ ಟೀಕಿಸಿದ್ದೂ ಇದೆ. ದೇವರುಗಳು ಬದಲಾದಂತೆ ಆರಾಧನಾ ಕ್ಷೇತ್ರಗಳ ಹೆಸರು , ದೇವರ ಹೆಸರು ಬದಲಾದದ್ದೂ ಇದೆ. ಒಂದು ದೇವರ ವಿಗ್ರಹಕ್ಕೆ ಇನ್ನೊಂದು ದೇವರ ಬಣ್ಣ ಬಳಿದು ಸಮರ್ಥನೆಗಾಗಿ ಚಿತ್ರ ವಿಚಿತ್ರ ಕಥೆಗಳನ್ನು ಸೃಷ್ಟಿಸಿದ್ದೂ ಇದೆ. ರಾಮಾನುಜಾಚಾರ್ಯರಿಂದ ವೆಂಕಟನಾದ ವಿಗ್ರಹ, ಶಂಕ ಚಕ್ರಧಾರಣೆ, ಅವರ ಚಾತುರ್ಯದಿಂದಾಗಿ ಪವಾಡ ಸದೃಶವಾದ ಕಥೆ ಸೃಷ್ಟಿಯಾಗಿ ವೈಷ್ಣವ ಭಾವದ ಸಿದ್ಧೀಕರಣವಾದ ಐತಿಹ್ಯ ದೊರೆತಾಗ, ಕಾಲಭೈರವನ ಆರಾಧಕರಾದ ಕಾಪಾಲಿಕರನ್ನು ಅವರು ಕಟುವಾಗಿ ಟೀಕಿಸಲೇ ಬೇಕು ತಾನೇ?ವೆಂಕಟನ ಮೂರ್ತಿ  ಕಾಲಭೈರವನ ಮೂರ್ತಿಯದು ಎನ್ನುವವರೂ ಇದ್ದಾರೆ. ವೀರಭದ್ರನ ಮೂರ್ತಿಯದು ಎನ್ನುವವರೂ ಇದ್ದಾರೆ. (ತುಳುವ ಜಾನಪದ ಲೋಕ ಕೆಲವು ನೋಟಗಳು - 18 ಮೂಡದಾಯ ಯಾರು? ಕಣಜ). ಪುರಾಣದ ಪ್ರಕಾರ ವಿಷ್ಣು ನರಸಿಂಹನಾಗಿ ಶಿವಭಕ್ತರನ್ನು ಕೊಂದರೆ, ಶಿವ ಜಿಂಕೆ ರೂಪದಲ್ಲಿದ್ದ ವಿಷ್ಣುವಿನ ತಲೆ ತುಂಡಾಗಿ ಬಿದ್ದಾಗ ಸಿಂಗನಾದ ಅಥವಾ ಸಿಂಗ್ನಾತ ಮಾಡಿಸಿದನೆಂಬ ಐತಿಹ್ಯವೂ ಇದೆ. ಅದೇನೇ ಇರಲಿ ಶೈವ ನಾಥಪಂಥವನ್ನು ತುಳಿಯುವ ಪ್ರಯತ್ನ ಅಂದಿನಿಂದಲೂ ನಡೆಯುತ್ತ ಬಂದಿದೆ

                ಮರ್ಲ್ ಜುಮಾದಿ ದೈವ ಕದ್ರಿ ಜೋಗಿ ಮಠ

      ಕರ್ನಾಟಕದ ಮಾರ್ವಾಡಿಗಳು (ರಾಜಸ್ಥಾನದಿಂದ ಇಲ್ಲಿ ಬಂದು ನೆಲೆಸಿದವರು)ಹಾಗೂ ಶ್ವೇತಾಂಬರ ಜೈನರು ಭೈರವನ ಆರಾಧಕರಾಗಿದ್ದರು. ರಾಜಸ್ಥಾನ ನಾಕೊಡ್‌ನ ಭೈರೂನಾಥ ಮಾರ್ವಾಡಿಗಳ ಕುಲ ಅಥವಾ ಮನೆ ದೇವರು.ಈಗಿನ ಕದಿರೆಯ ಅರಸರಾದ ನಿರ್ಮಲನಾಥ್ ಜೀಯವರು ರಾಜಸ್ಥಾನ ಮೂಲದವರಾಗಿದ್ದು ಜೋಗಿಗಳಿಗಿಂತ ಅವರಿಗೆ ರಾಜಸ್ಥಾನಿ ಮಾರ್ವಾಡಿಗಳೇ ಹತ್ತಿರವಾಗಿದ್ದಾರೆ.ಇವರ ಕಾಲದಲ್ಲಿ ಮಠವು ರಾಜಸ್ಥಾನಿ ಶೈಲಿಯಲ್ಲಿ ಜೀರ್ಣೋದ್ಧಾರಗೊಂಡಿದ್ದು ತುಳುನಾಡಿನ ಮೂಲ ಶೈಲಿ ಇಲ್ಲಿ ಯಾವುದೂ ಉಳಿದಿಲ್ಲ.ದೇಗುಲಕ್ಕೆ ಕಲಶದ ಜೊತೆಗೆ ಪತಾಕೆ ಸೇರಿಕೊಂಡಿದೆ.ಅನಾದಿ ಕಾಲದಿಂದ ಆರಾದಿಸಿಕೊಂಡು ಬಂದ ಕಾಲ ಭೈರವನ ಮೂರ್ತಿಯನ್ನೂ ಜೋಗಿಗಳ ಗಮನಕ್ಕೆ ತರದೆ ಹೊರಗಿಟ್ಟು ಮಾರವಾಡಿಗಳು ಕೊಟ್ಟ ಹೊಸ ಮೂರ್ತಿಯನ್ನು ದೇಗುಲದ ಒಳಗಿಟ್ಡು ಜೋಗಿ ಮಠದ ಜೋಗಿಗಳಿಗೆ ಅನ್ಯಾಯ ಮಾಡಲಾಗಿದೆ.ಇಲ್ಲಿನ ಮೂಲ ಕಾಲ ಭೈರವನ ಮೂರ್ತಿಯನ್ನು ಹೊರಗಿಟ್ಟದ್ದು ನಮ್ಮ ಜೋಗಿಗಳನ್ನೇ ಮಠದಿಂದ ಹೊರಗಿಟ್ಟಂತಾಗಿದೆ.ಆದರೂ ಇಲ್ಲಿನ ಜೋಗಿ ಸಮುದಾಯದವರು ಆ ಕಾಲ ಭೈರವನ ಮೂಲ ಮೂರ್ತಿಯ ಬಗೆಗೆ ಮಾತನಾಡುತ್ತಿದ್ದಾರೆಂದರೆ ಆ ಮೂರ್ತಿಯ ಶಕ್ತಿ ಎಷ್ಟಿದೆಯೆಂದು ನಮಗೆ ತಿಳಿಯುತ್ತದೆ.ನಮ್ಮ ಮಠದ ಈಗಿನ ಗುರುಗಳು ಮೂಲ ಕಾಲ ಭೈರವನ ಮೂರ್ತಿಯನ್ನು ಹೊರಗಿಟ್ಟು ಜೋಗಿ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡಿದ್ದಾರಲ್ಲದೆ ಇಲ್ಲಿನ ಜೋಗಿಗಳ  ಅಸ್ಥಿತ್ವವನ್ನು ಮೂಲೆಗುಂಪು ಮಾಡಿ  ಮಾರವಾಡಿಗಳಿಗೆ ಮಠದಲ್ಲಿ ಅಸ್ಥಿತ್ವ ಕೊಟ್ಟಂತಾಗಿದೆ.ಮಠ ಇರುವುದು ರಾಜಸ್ಥಾನದಲ್ಲಲ್ಲ,ತುಳುನಾಡಿನಲ್ಲಿ.ಮಠಕ್ಕೆ ಸಂಬಂದಿಸಿ ಸಂಘಟನೆಗಳಿದ್ದು ಅದರ ನಾಯಕರು ಸುಮ್ಮನೆ ಕುಳಿತದ್ದು ದುರಂತವೇ ಸರಿ.ನಾಯಕರು ಇಲ್ಲಿಯವರು ತಾನೆ?.ಮಠ ಇಲ್ಲಿರುವುದು ತಾನೆ?.ನಿಜವಾಗಿ ಮಠಾದೀಶರು ಅರಾದಿಸಿಕೊಂಡು ಬರುವ ಮೂಲ ಮೂರ್ತಿಯನ್ನು ಬದಲಿಸುವ ಹಾಗಿಲ್ಲ.ಅದಕ್ಕೆ ವೈದಿಕ ಬ್ರಹ್ಮ ಕಲಶವೂ ಇಲ್ಲ.ಯಾಕೆಂದರೆ ಆ ಮೂಲ ಕಾಲ ಭೈರವನ ಮೂರ್ತಿ ಜೋಗಿಗಳಿಗೆ ಮಾತ್ರ ಸೀಮಿತವಲ್ಲ.ಅದು ನಮ್ಮ ದೇಶದ ರಾಷ್ಟ್ರೀಯ ಸಂಪತ್ತು

                                ಸೋಣದ ಜೋಗಿ
          ನಾಥಪಂಥದ ಜೋಗಿಗಳು ತಮ್ಮ ಧಾರ್ಮಿಕ ಪರಂಪರೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸದ ಕಾರಣ ಇವರಿಂದ ನಾಥಪಂಥದ ಪರಂಪರೆ ಕಳೆದುಹೋಗುತ್ತಿದೆ. ಅದನ್ನು ಮರಳಿ ಪಡೆಯುವ ಪ್ರಯತ್ನವನ್ನು ಮಾಡುತ್ತಿಲ್ಲ. ಪಂಥದೊಳಗೆ ಹೀಗಾದರೆ ಬಾಹ್ಯದಲ್ಲಿ ಒಂದು ಪಂಥದ ವಿಚಾರಧಾರೆಯನ್ನು ಒಪ್ಪದ ಇನ್ನೊಂದು ಪಂಥ ಆ ಪಂಥವನ್ನು ದುಷ್ಟೀಕರಿಸಿದೆ. ಶಿವ ಭಕ್ತರೆಲ್ಲ ವಿಷ್ಣುವಿನ ಕೈಯಲ್ಲಿ ಹತರಾಗುವುದೇ ಇದಕ್ಕೆ ಸಾಕ್ಷಿ. ಭಾರತದ ಅವೈದಿಕ ಪಂಥಗಳನ್ನು ವೈದಿಕ ಪುರಾಣಗಳು ವಿರೋಧಿಸಿ ಅಲ್ಲಿನ ವ್ಯಕ್ತಿಗಳನ್ನು ರಾಕ್ಷಸರನ್ನಾಗಿ ಚಿತ್ರಿಸಿ ಅವರನ್ನು ವಧೆ ಮಾಡುವ ಚಿತ್ರಣದ ಮೂಲಕ ತನ್ನ ಪಂಥದ ಶ್ರೇಷ್ಠತೆಯನ್ನು ತೋರಿಸಿಕೊಂಡರು. ನಿಜವಾಗಿ ಹಾಗೆ ಆಗಲೇ ಇಲ್ಲ. ವೈದಿಕ ದಾರ್ಶನಿಕರು ಅವೈದಿಕ ಭೌತವಾದಿ (ಇಹದ ಕುರಿತಾದ) ದರ್ಶನ ಪಂಥಗಳನ್ನು ವಿಕೃತವಾಗಿ ಚಿತ್ರಿಸಿ ದಾರ್ಶನಿಕದ ಅವನತಿಗೆ ಕಾರಣರಾದರು. ಕದ್ರಿ ಮಂಜುನಾಥ ದೇಗುಲದಲ್ಲಿ ವಜ್ರಯಾನದ ಬೌದ್ಧರ ಅವಲೋಕಿತೇಶ್ವರ ಶೈವರ ಲೋಕೇಶ್ವರನಾಗಿ ವೈಷ್ಣವರಿಂದ ಅರ್ಚಿಸಲ್ಪಡುತ್ತಿದ್ದಾನೆ. ಧ್ಯಾನಿ ಬುದ್ಧನ ಮೂರ್ತಿಯೂ ಇದೆ. ದೇಗುಲದೊಳಗೆ ಮಚ್ಚೇಂದ್ರನಾಥ, ಗೋರಕನಾಥ, ಚೌರಂಗಿ ನಾಥಾದಿ ನಾಥರುಗಳ ಮೂರ್ತಿ ಇದ್ದು, ಅಲ್ಲಿ ದೀಪವನ್ನು ಹಚ್ಚಿಡುತ್ತಿದ್ದಾರೆ. ನಾಥಪಂಥದವರು ಅದನ್ನು ಸರಳುಗಳೆಡೆಯಿಂದ ನೋಡುವ ಅನಿವಾರ್ಯತೆ ಬಂದಿದೆ. ಆಗಮೋಕ್ತ ಶಿವಲಿಂಗದ ಪೂಜೆಯೂ ಇಲ್ಲಿದೆ.  
     
     ಜೋಗಿ ಗಣ.ಶ್ರೀಮದನಂತೇಶ್ವರ ದೆವಸ್ಥಾನ ಮಂಜೇಶ್ವರ
      
ಬೆಮ್ಮೆರ್ ಬೈದರ್ಕಳ ಗರಡಿಗಳಲ್ಲಿ ಆರಾದನೆ ಪಡೆಯುವ ಜೋಗಿ ಪುರುಷ ದೈವ.ಶ್ರೀ ಕೋಟಿ ನಾಥೇಶ್ವರ ಬ್ರಹ್ಮ ಬೈದರ್ಕಳ ಗರಡಿ ಪಾಂಡುಕಲ್ಲು.ಕೋಟಿ ಚೆನ್ನಯರ ಅಕ್ಕ ಕಿನ್ನಿದಾರು ಮತ್ತು ಅವರ ಗಂಡ ಪಯ್ಯ ಬೈದ್ಯರನ್ನು ಪಂಜ ದೋಲ ಬರ್ಕೆಗೆ ಬಂದ ಉಲ್ಲಾಕುಲು ಮತ್ತು ಜೋಗಿ ಪುರುಷ ದೈವಗಳು ಮಾಯಮಾಡಿ ಮಾಯವಾದ ಅವರನ್ನು ಕಾಜುಕುಜುಂಬ ಮತ್ತು ದೆಯ್ಯಾರು ದೈವಗಳೆಂದು ಕರೆಯುತ್ತಾರೆ.(ದೇಯಿ ಬೈದ್ಯೆದಿಯ ದೆ ಮತ್ತು ಅವಳ ಮಗಳು ಕಿನ್ನಿದಾರುವಿನ ದಾರು ಹೆಸರು ಸೇರಿ ದೆಯ್ಯಾರು ಎಂದಾಗಿರಬೇಕು)

     ಕೆಲವೊಂದು ಆಧುನಿಕ ವಿದ್ವಾಂಸರು ಗೋರಖನನ್ನು ಚರ್ಚಿಸುವುದಿಲ್ಲ. ಭಾರತದ ಪಂಥಗಳ ಬಗೆಗೆ ಅಧ್ಯಯನ ಮಾಡಿದ ಭಂಡಾರ್ಕರ್‌ರವರು ವೈಷ್ಣವ ಪಂಥದ ಬಗ್ಗೆ ಸವಿಸ್ತಾರವಾಗಿ ಬರೆಯುವಾಗ, ಕಾಪಾಲಿಕ ಪಂಥದ ಬಗ್ಗೆ ಸ್ವಲ್ಪ ಬರೆದಿದ್ದಾರೆ. ಕಾಪಾಲಿಕ ವಿರೋಧಿಗಳು ವೈಷ್ಣವ ಪಂಥವನ್ನು ಹೊಗಳಿ ಉಳಿದ ಪಂಥಗಳು ಭಯಾನಕ, ರಾಕ್ಷಸಿಯವಾಗಿತ್ತೆಂದು ಬರೆದಿದ್ದಾರೆ. ಕನ್ನಡದ ಮಧ್ಯಕಾಲೀನ ಪಠ್ಯಗಳಲ್ಲಿ ನಾಥರ ಬಗೆಗಿನ ಹೆಚ್ಚಿನ ಉಲ್ಲೇಖಗಳು ರಾಕ್ಷಸೀಕರಣದ ಭಾವದಿಂದಲೇ ಕೂಡಿದೆ. ಇಲ್ಲೆಲ್ಲ ಕಾಪಾಲಿಕ, ಕೌಳ, ನಾಥಪಂಥೀಯರನ್ನು ಅತಿಮಾರ್ಗಿಗಳು ಎಂದಿದ್ದಾರೆ. ಭಾರತದ ದಾರ್ಶನಿಕ ಪರಂಪರೆಯಲ್ಲಿ ಉನ್ನತ ಸ್ಥಾನದಲ್ಲಿ ಆರಾಧಿಸಲ್ಪಡುವ ಗೋರಖ ಕನ್ನಡ ಪಠ್ಯಗಳಲ್ಲಿ ಸಿದ್ಧರಿಗೆ ಎದುರಾಳಿಯಾಗುತ್ತಾನೆ. ಹೀಗೆ ಅವೈದಿಕ ಪಂಥಗಳನ್ನು ದುಷ್ಟೀಕರಿಸಿದ ಕಾರಣ ಕೆಲವೊಂದು ಪಂಥಗಳು ನಾಶವಾಗಿ ಹೋಗಿವೆ. ಗ್ರಾಮೀಣ ಭಾಗದಲ್ಲಿ ಅಲ್ಪಸಂಖ್ಯಾತರಾಗಿರುವ ಜೋಗಿಗಳು ಬಲಿಷ್ಠ ಜಾತಿಯವರಿಗೆ ತಗ್ಗಿಬಗ್ಗಿ, ಬಲಿಷ್ಠ ಸಮಾಜದ ಜೀವನ ಪದ್ಧತಿಯನ್ನು ಅಳವಡಿಸಿಕೊಂಡು ತಮ್ಮ ಪಂಥದ ಪುನರುಜ್ಜೀವನಗೊಳಿಸುವ ಆಸಕ್ತಿಯಿಂದ ದೂರಾನೇ ಉಳಿದಿದ್ದಾರೆ. ನಾಥಪಂಥದ ಜೋಗಿಗಳು ಹಿಂದುಳಿಯುವಿಕೆಗೆ ಬಡತನ ಕಾರಣವಲ್ಲ. ಅವರ ಕುಲ ಎಷ್ಟು ಶ್ರೇಷ್ಠ? ತಾವೆಷ್ಟು ಶ್ರೇಷ್ಟ ಸಂಸ್ಕೃತಿಗೆ ಉತ್ತರಾಧಿಕಾರಿಗಳು? ಎಂಬುದನ್ನು ಅವರು ಮರೆತಿದ್ದಾರೆ. ನಾಥಪಂಥದ ಜೋಗಿಗಳು ಒಬ್ಬೊಬ್ಬರು ಒಂದೊಂದು ವೃತ್ತಿ, ಜಾತಿ ಎಂದು ಬರೆಸದೆ ಎಲ್ಲರೂ ಜೋಗಿ ಎಂದು ಬರೆಸಬೇಕು. ಆಗ ನಮ್ಮಲ್ಲಿನ ಭೇದ ಭಾವ ದೂರವಾಗುತ್ತದೆ. ನಾಥಪಂಥದ ಬಗೆಗಿನ ನಿರ್ಲಕ್ಷ್ಯ ಮಾಡಿದ ಬರಹಗಳನ್ನು ನಾವು ವಿಮರ್ಶಿಸದೆ, ವೈಷ್ಣವ ಪಂಥಾಭಿಮಾನಿಗಳು ತಮ್ಮ ಬರಹಗಳಲ್ಲಿ ಪುರಾಣಗಳನ್ನು ವೈಭವೀಕರಿಸಿದರಿಂದ ಮೂಲೆಪಾಲಾಗುತ್ತಿರುವ ನಾಥಪಂಥವನ್ನು ಉಳಿಸಿ ಬೆಳೆಸ ಬೇಕಾಗಿರುವುದು ನಾಥಪಂಥಿಗಳಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. "ಆಗಮ್  ಅಗೋಚರ್ ನಾಥ ತುಮ್, ಪಾರಬ್ರಹ್ಮ ಅವತಾರ್, ಕಾನನ್ ಕುಂಡಲ್ ಶಿರ್ ಜಠಾ ಅಂಗ್ ವಿಭೂತಿ ಅಪಾರ್, ಸಿದ್ಧ್ ಪುರುಷ್ ಯೋಗೇಶ್ವರೋ, ದೋ ಮಝ್‌ಕೋ ಉಪದೇಶ್, ಹರ್ ಸಮಯಾ ಸೇವಾ ಕರೂಂ ಸುಬಹ್ ಶ್ಯಾಮ್ ಆದೇಶ್ ಆದೇಶ್ ಆದೇಶ್" ನಮ್ಮೆಲ್ಲ ಜೋಗಿನಾಥ ಪಂಥೀಯರ ಪೂಜಾ ವೇಳೆಯಲ್ಲಿ ಈ ಸಾಲುಗಳು ಅನುರಣಿಸಲಿ. ನನ್ನ ತಿಳುವಳಿಕೆಗೆ ಎಟುಕಿದ ಮಟ್ಟಿನಲ್ಲಿ ವಿಚಾರಗಳನ್ನು, ನಾನು ಈ ಬರಹವನ್ನು ನಾಥ ಜೋಗಿ ಪಂಥದ ನಾಥಯೋಗಿ ಜೋಗಿಗಳಿಗೆ ಅರ್ಪಿಸುತ್ತಿದ್ದೇನೆ.
  
ಕದ್ರಿ ಮಠದ ಈಗಿನ ಗುರುಗಳಾದ ನಿರ್ಮಲನಾಥ್ ಜೀ ಕಪ್ಪು ವಸ್ತ್ರ ಧರಿಸಿ ಶಬರಿ ಮಲೆಯಲ್ಲಿ(ಎಡ).
ನಿಜವಾಗಿ ಯೋಗಿಗಳು,ಸ್ವಾಮೀಜಿಗಳು ಸರ್ವ ಸಂಗ ಪರಿತ್ಯಾಗದ ಸಂಕೇತವಾದ ಕಾವಿ ಬಟ್ಟೆಯನ್ನು ಧರಿಸಿದ ಮೇಲೆ ಬೇರೆ ಬಣ್ಣದ ವಸ್ತ್ರಸಂಹಿತೆಯನ್ನು ಪಾಲಿಸಬೇಕಾಗಿಲ್ಲ.ಅವರು ಜಗತ್ತಿನ ಯಾವ ಮೂಲೆಗೆ ಹೋಗುವಾಗಲೂ ಕಾವಿಧಾರಿಗಳಾಗಿಯೇ ಹೋಗುವ ಕ್ರಮ.
                      

ಲೇಖಕರು: ತುಳು ಸಾಹಿತ್ಯ ರತ್ನ, ಜೋಗಿ ಸಾಹಿತ್ಯಶ್ರೀ, ಕೆ. ಮಹೇಂದ್ರನಾಥ್ ಸಾಲೆತ್ತೂರು ಎಂ.ಎ