Saturday, 15 October 2011

ಹೆಣ್ಣನ್ನು ಮನೋದೌರ್ಬಲ್ಯದಿಂದ ದೂರವಿರಿಸಿ

          ಹೆಣ್ಣು ಕೇವಲ ಹೆರುವ ಯಂತ್ರವಲ್ಲ .ಆಕೆಗೂ ಒಂದು ಮನಸ್ಸಿದೆ .ಆದರೆ ಆಕೆಯ ಮನಸ್ಸು ಸೂಕ್ಷ್ಮವಾಗಿ ಭಾವನಾತ್ಮಕವಾಗಿರುತದೆ .ಆಕೆ ಆತ್ಮೀಯತೆಯನ್ನು ಬಯಸುತ್ತಾಳೆ, ಪ್ರೀತಿಯಿಂದ ಎಲ್ಲರನ್ನೂ ಗೌರವಿಸುತ್ತಾಳೆ . ತನ್ನ ಪೋಷಕರ ಆ ಮೇಲೆ ತನ್ನ ಗಂಡನ ತದನಂತರ ಮಕ್ಕಳ ಪ್ರೀತಿಗಾಗಿ ಹಂಬಲಿಸುತ್ತಾಳೆ .ಅವಳಿಗೆ ಐಶ್ವರ್ಯದ ಅಗತ್ಯವಿರುವುದಿಲ್ಲ ,ಹಣದ ಆಮಿಶವಿರುವುದಿಲ್ಲ ,ಆಕೆ ಬಯಸುವುದು ಮುಗ್ಧ ಪ್ರೀತಿಯನ್ನು.ಅವಳು ಸರ್ವಸ್ವವನ್ನೂ ಮರೆತು ಗಂಡ ಹಾಗೂ ತಾನು ಕಾಲಿಟ್ಟ ಮನೆ ಮಂದಿಯೆಲ್ಲ ತನ್ನವರೆಂದು ತಿಳಿದು ಬದುಕುತ್ತಾಳೆ.ಅವಳನ್ನು ಅರ್ಥೈಸಿ ಅವಳಿಗೆ ಧೈರ್ಯ ತುಂಬುವುದು ನಮ್ಮೆಲ್ಲೆರ ಆದ್ಯ ಕರ್ತವ್ಯವಾಗಿದೆ.ಯಾಕೆಂದೆ ತಂದೆ ತಾಯಿ ಕುಟುಂಬ ಸಂಸಾರವನ್ನು ತೊರೆದು ಆಕೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಬಹಳಷ್ಟು ಕಾಲ ಹಿಡಿಯುತ್ತದೆ.ತನ್ನ ಬಾಲ್ಯದ ಆ ಹಿಂದಿನ ಬದುಕಿನ ನೆನಪು ಅವಳ ಮನಸಲ್ಲಿ ಬಂದು ಹೋಗುತ್ತಿರುತ್ತದೆ.ಅಂತಹ ಒಳ್ಳೆಯ ಆರೋಗ್ಯಕರ ವಾತಾವರಣವನ್ನು ಗಂಡನ ಮನೆಯವರು ಕಲ್ಪಿಸಿಕೊಟ್ಟರೆ ಇಲ್ಲಿಗೆ ಹೊಂದಿಕೊಳ್ಳಲು ಆಕೆ ಪ್ರಯತ್ನಿಸುತ್ತಾಳೆ . ಅವಳ ಮನಸ್ಸಲ್ಲಿ ಶೂನ್ಯ ಭಾವನೆ ಬರಲು,ಏಕಾಂಗಿತನ ಕಾಡಲು ಗಂಡನ ಮನೆಯವರು ಬಿಡಬಾರದು .ಆಕೆ ಮಂಕಾಗಿರದಂತೆ ಅವಳನ್ನು ನೋಡಿಕೊಳ್ಳುವುದು ಆಕೆಯ ಮನೆಮಂದಿಯ ಆದ್ಯ ಕರ್ತವ್ಯ .                                              ಹೆಣ್ಣನ್ನು ಕನ್ಯಾದಾನ ಎಂದು ಧಾರೆಯೆರೆದು ಕೊಡುತ್ತಾರೆ.ದಾನ ಎಂಬುದಕ್ಕೆ ಅತ್ಯಂತ ಉನ್ನತವಾದ,ಉತ್ಕೃಷ್ಟವಾದ,ಸುಂದರವಾದ ಪವಿತ್ರವಾದ,ಸಂಭ್ರಮದ,ಸಂತೋಷದ ವಾತಾವರಣದ ಶ್ರೇಷ್ಠ ಅರ್ಥವಿದೆ.ಕನ್ಯಾದಾನವೆಂದರೆ ಹೆಣ್ಣಿಗೆ ಮಾಡುವ ದೊಡ್ಡ ಸನ್ಮಾನವೇ ಹೊರತು ಅವಮಾನವಲ್ಲ. ದಾನವನ್ನು ಒಂದು ವೃತದಂತೆ ನೋಡಿದವರು ಹಿರಿಯರು. ನಾವು ಏನ್ನಾದರೂ ದಾನವಾಗಿ ಕೊಟ್ಟು ಏನನ್ನಾದರೂ ಸ್ವೀಕರಿಸಿದಂತೆ ನಾವು ಕನ್ಯಾದಾನ ಮಾಡುವ ಮೂಲಕ ಹೊಸ ಸಂಬಂದಗಳನ್ನು ಸ್ವೀಕರಿಸೇಕು. ಮದುವೆ ಮಾಡಿಕೊಡುವಾಗ ಹೆಣ್ಣಿಗೆ,ಮದುವೆ ಮಾಡುವ ಮನೆ ಮಂದಿಗೆ,ಹೆಣ್ಣನ್ನು ಸ್ವೀಕಾರ ಮಾಡುವ ಗಂಡಿಗೆ,ಆತನ ಮನೆ ಮಂದಿಗೆ ಒಟ್ಟು ಎರಡು ಬಾಂಧವ್ಯಗಳು ಕೂಡಿದ ಮನೆ ಮಂದಿಗೆ ಸಂತೋಷದ ವಾತಾವರಣವೇರ್ಪಡುತ್ತದೆ.ಆಕೆಗೆ ಬಾಲ್ಯದಿಂದ ಸಂಸ್ಕಾರ,ನೈತಿಕ ಶಿಕ್ಷಣ ಕೊಟ್ಟು ಆಕೆಗೆ ಯೋಗ್ಯ ವರನನ್ನು ಆಯ್ಕೆ ಮಾಡಿ ಹೊಸ ಕುಟುಂಬಕ್ಕೆ ಸೊಸೆಯಾಗಿ ಕಳುಹಿಸಿಕೊಡುವದು ಜವಾಬ್ದಾರಿಯೊಂದಿಗೆ ಸಂತೋಷದಾಯಕವೂ ಆಗಿರುತ್ತದೆ..ದಾರೆ ಎರೆದು ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಂದು ಆಕೆಯನ್ನು ಬಿಟ್ಟು ಕೈತೊಳೆದು ಬಿಟ್ಟರೆ ಅದುವರೆಗಿನ ಆಕೆಯ ಸಂಸಾರ ಬಂಧನಕ್ಕೆ ಬೆಲೆಯೇ ಇಲ್ಲವೇ?.ಸ್ವಗೋತ್ರದಲ್ಲಿ ಮದುವೆಯಾದರೆ ಮುಂದೆ ವಂಶಾವಳಿ ಬೆಳೆಯಲು ಕಷ್ಟವಾಗುತ್ತದೆ .ಆದರೆ ರಕ್ತ ಸಂಬಂದ ಏಳೇಳು ಜನ್ಮ ಕಳೆದರೂ ಬಿಟ್ಟು ಹೋಗುವಂತದ್ದಲ್ಲ.  ಹೆಚ್ಹಾಗಿ ಮದುವೆಯ ಹೊಸದರಲ್ಲಿ ಮನೆಯವರು ನಮ್ಮ ಭಾರ ಕಳೆಯಿತೆಂದು ಹೆಣ್ಣನ್ನು ಗಂಡನ ಮನೆಗೆ ಕಳಿಸಿ ಕೊಡುತ್ತಾರೆ .ಆದರೆ ಆಕೆ ಹೋಗುವುದು ಹೊಸ ಮನೆಗೆ .ಅಲ್ಲಿಗೆ ಹೊಂದಿಕೊಳ್ಳಲು ಆಕೆಗೆ ತುಂಬಾ ಕಾಲಾವಕಾಶ ಬೇಕಾಗುತ್ತದೆ .ಅಲ್ಲಿ ಎಷ್ಟೇ ಒಳ್ಳೆಯ ಅತ್ತೆ ಮಾವಂದಿರಿರಲಿ;ಗಂಡನಿರಲಿ ಆಕೆ ಪದೇ ಪದೇ ತವರನ್ನು ನೆನೆಯುತ್ತಿರುತ್ತಾಳೆ .ಆಗ ತಂದೆ ತಾಯಂದಿರು ಆಕೆಗೆ ಬಂದು ಸಮಾಧಾನ ಹೇಳಬೇಕಾಗುತ್ತದೆ .ಎಷ್ಟೇ ಸಿರಿವಂತ ಗಂಡ ಸಿಗಲಿ ಆಕೆ ಬಡ ತವರನ್ನು ಮರೆಯಲಾರಳು.ಅವಳಿಗೆ ಅತ್ತೆ  ಮಾವ ಎಷ್ಟೇ ಒಳ್ಳೆಯವರೇ ಸಿಗಲಿ  ಆಕೆ ತಂದೆ ತಾಯಿ,ಅಕ್ಕ ತಂಗಿ,ಅಣ್ಣ ತಮ್ಮಂದಿರನ್ನು ನೆನೆದು ಕೆಲವೊಮ್ಮೆ ಮಂಕಾಗಿ ಕೂರುವುದುಂಟು .ಕೆಲವು ಹೆಣ್ಣು ಮಕ್ಕಳು ತನ್ನ ನೋವನ್ನು ಇತರರಲ್ಲಿ ಹಂಚಿಕೊಂಡರೆ ಮತ್ತೆ ಕೆಲವು ಹೆಣ್ಣು ಮಕ್ಕಳು ಮನದಲ್ಲೇ  ಇಟ್ಟುಕೊಂಡು ಕೊರಗುತ್ತಿರುತ್ತಾರೆ .ಅದು ಅಪಾಯ .ಅಂತವರು ಮುಂದೆ ಮಾನಸಿಕ ಸ್ಥಿಮಿತ ಕಳಕೊಳ್ಳುವುದೂ ಇದೆ .ಹಾಗಾಗದಂತೆ ಮನೆಯವರು ಒಟ್ಟು ಕೂತು ಸಮಸ್ಯೆಯ ಪರಿಹಾರದ ಕಡೆ ಗಮನ ಹರಿಸಬೇಕು .                                                                                                                                                               ದಾನ ಎಂಬುದು ಸಂಸ್ಕೃತದ ಪದವಾದರೂ ಆ ಶಬ್ದಕ್ಕೆ ಒಂದು ಸಾಂಸ್ಕೃತಿಕ ಭವ್ಯ,ದಿವ್ಯ ಪರಂಪರೆಯಿದೆ.ಅದನ್ನು ಆಂಗ್ಲ ಬಾಷೆಯ ಗಿವಿಂಗ್ ಎವೇ ಎಂದರೆ ಸಾಗರವನ್ನು ಬಾವಿಯೊಳಗಿಳಿಸಿದಂತಾಗುತ್ತದೆ.  ಕೆಲವೊಂದು ಹೆಣ್ಣು ಮಕ್ಕಳನ್ನು ಹೊರತುಪಡಿಸಿ ಹೆಚ್ಹಿನ ಹೆಣ್ಣು ಮಕ್ಕಳು ಭಾವಜೀವಿಗಳೇ .ಇತರರ ನೋವನ್ನು ಕಂಡು  ಗಂಡಸರಿಗಿಂತ ಹೆಣ್ಣು ಮಕ್ಕಳೇ ಹೆಚ್ಚು ಕೊರಗುವುದು .ಹಿಂದಿನಂತೆ ಆಧುನಿಕ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಏಟು ಬೀಳುವುದು ಕಡಿಮೆ .ಆದರೂ ಮದುವೆಯಾದ ಹೊಸದರಲ್ಲಿ ಗಂಡ ತನ್ನಲ್ಲಿ ಅನ್ಯೋನ್ಯತೆಯಿಂದ ಇದ್ದು ಕೆಲ ದಿನ,ತಿಂಗಳಲ್ಲಿ  ಹೊರದೇಶಕ್ಕೆ ಹೋದರೆ ಏನೋ ಕಳಕೊಂಡಂತೆ ಆಕೆ ಮಂಕಾಗಿರುತ್ತಾಳೆ .ಅವಳಿಗೆ ಉದ್ಯೋಗವಿದ್ದರೆ ಅಷ್ಟು ಸಮಸ್ಯೆಯಾಗದು .ಹೋದ ಗಂಡ ದಿನಕ್ಕೆರಡು ಬಾರಿಯಾದರೂ ಫೋನಿನಲ್ಲಿ ಮಾತಾಡಿದರೆ ಸ್ವಲ್ಪ ನಿಟ್ಟುಸಿರು ಬಿಡುತ್ತಾಳೆ .ಆದರೆ ಗಂಡನ ಫೋನ್ ಬಾರದಿದ್ದರೆ ಮಂಕಾಗಿರುತ್ತಾಳೆ .ಮನೆಯಲ್ಲಿ ತಂದೆ ತಾಯಿಯ ಪ್ರೀತಿ ಪಡೆದ ಹೆಣ್ಣಿಗೆ ಅತ್ತೆ ಮನೆಯಲ್ಲಿ ಪ್ರೀತಿ ಸಿಗದಿದ್ದರೆ ಮನದಲ್ಲೇ ಕೊರಗುತ್ತಾ ಸಣ್ಣಗಾಗುತ್ತಾಳೆ .ಕೆಲವೊಮ್ಮೆ ದಾಂಪತ್ಯದಲ್ಲೂ ಹೆಣ್ಣಿಗೆ ಹೆಚ್ಚು ಅಂಜಿಕೆ ಇರುತ್ತದೆ. ಯಾಕೆಂದರೆ ಅವಳಿಗೆ ಬದುಕಲ್ಲಿ ಅದು ಹೊಸದು .ಆಕೆ ಹೊಂದಿಕೊಳ್ಳುವವರೆಗೆ ಗಂಡ ಆಕೆಯನ್ನು ಕಾಡದೆ ಕಾದು ಆಕೆಯೊಡನೆ ಸಂಸಾರ ಮಾಡಿದರೆ ಅಲ್ಲಿ ಮುಂದೆ ಪ್ರೀತಿಯ ಬಂಧ ಗಟ್ಟಿಯಾಗುತ್ತದೆ.  ಬಾಲ್ಯದಲ್ಲಿ ಅಣ್ಣ ತಮ್ಮಂದಿರೊಡನೆ  ಹಠಮಾರಿಯಾಗಿದ್ದ ಹೆಣ್ಣು  ಮದುವೆಯಾದ ನಂತರ ತುಂಬಾ ಮೃದುವಾಗುತ್ತಾಳೆ .ಯಾಕೆಂದರೆ ಆಕೆ ಎಷ್ಟೋ ವರ್ಷಗಳಿಂದ ತಂದೆ ತಾಯಿಯ ಬಳಿ ಇದ್ದವಳಲ್ಲವೇ?.                                                                                                                                                                   ಹೆಣ್ಣು ಕೆಲವೊಮ್ಮೆ ಗಂಡನನ್ನು ಅನಿವಾರ್ಯವಾಗಿ ಕಳಕೊಲ್ಲುವುದುಂಟು .ನಮ್ಮ ಗೆಳತಿ ಶಿಕ್ಷಕಿಯೊಬ್ಬರ ತಂದೆ ತಾಯಿ ಮಗಳಿಗೆ ಬರುವ ಗಂಡ ಶ್ರೀಮಂತನಾಗಬೇಕೆಂದು ಹಠ ಹಿಡಿದು ಒಬ್ಬ ಶ್ರೀಮಂತನನ್ನು ಮದುವೆ ಮಾಡಿದರು .ಆತ ಹಳದಿ ಕಾಯಿಲೆಯಿಂದ ನಾಲ್ಕೇ ತಿಂಗಳಲ್ಲಿ ಅಸು ನೀಗಿದ .ಆ ಹೆಣ್ಣು ಮಗಳು ಏನು ಮಾಡಬೇಕು ಹೇಳಿ ?.ಆಕೆ ಇಷ್ಟಪಟ್ಟ ಬಡ ಹುಡುಗ ಮದುವೆಯಾಗಿ ಚೆನ್ನಾಗಿದ್ದಾನೆ .ದುರಾದೃಷ್ಟವೆಂದರೆ ಇಬ್ಬರೂ ಒಂದೇ ಶಾಲೆಯಲ್ಲಿ ದುಡಿಯುವುದು .ಶಿಕ್ಷಕಿಯಾದ ಕಾರಣ  ತನ್ನ ನೋವನ್ನು ಶಾಲೆಯ ಮಕ್ಕಳ ಆಟಪಾಠಗಳನ್ನು ನೋಡಿ ಮರೆತರೆ ಹೆಚ್ಚಾಗಿ ರಜಾ ದಿನಗಳಲ್ಲಿ ಮಂಕಾಗಿರುತ್ತಾಳೆ .ಎಷ್ಟಾದರೂ ಹೆಣ್ಣು ಹೃದಯವಲ್ಲವೇ ?.ಬೇಕಾದಷ್ಟು ಆಸ್ಥಿಯಿದ್ದು ಗಂಡನ ಕಳಕೊಂಡ ಹೆಂಗಸಿನ  ನೋವು ಅದೆಷ್ಟು ಆಳ?.ಇಳಿವಯಸ್ಸಿನಲ್ಲಿ ಗಂಡ ಇಲ್ಲ ಎಂಬ ವ್ಯಥೆ ಒಂದೆಡೆಯಾದರೆ ,ಇದ್ದ ಮಗನೊಬ್ಬ ದೂರದಲ್ಲಿ  ಕೆಲಸಕ್ಕೆ ಹೋದರೆ ಆಕೆಯಲ್ಲಿ ಏಕಾಂಗಿತನ ಮನೆ ಮಾಡುತ್ತದೆ .ಆಕೆಗೆ ಯಾವುದರಲ್ಲೂ ಆಸಕ್ತಿ ಇರುವುದಿಲ್ಲ .ಕೆಲವೊಮ್ಮೆ ಬೇರೆಯವರನ್ನು ಕಂಡಾಗ ಹರಿ ಹಾಯುವುದೂ ಉಂಟು .                  ಹೆಣ್ಣಿಗೆ ಸ್ವಾತಂತ್ರ್ಯವಿದೆ ಎಂದು ಒಪ್ಪಬಹುದು ಆದರೆ ಎಷ್ಟರ ಮಟ್ಟಿಗೆ ಆಕೆಗೆ ಸ್ವಾತಂತ್ರ್ಯವಿದೆ?.ಇದನ್ನು ನಾವು ಗಮನಿಸಬೇಕು .ಆಫೀಸುಗಳಲ್ಲಿ  ದುಡಿಯುವ ಹೆಣ್ಣು ಅವಸರವಸರವಾಗಿ ಮನೆಗೆ ಹೋಗುತ್ತಿದ್ದರೆ ಯಾಕಮ್ಮಾ ಇಷ್ಟು ತರಾತುರಿ ಎಂದು ಕೇಳಿದರೆ ಅವ್ರು ಬಯ್ತಾರೆ ತಡವಾದ್ರೆ ಎಂಬುತ್ತರ . ಮನೆಗೆ ಬರುವುದು ತಡವಾದರೆ ಈವತ್ತು ಯಾರೊಟ್ಟಿಗೆ ಹೋಗಿದ್ದಿ ಎಂಬ ಕೆಟ್ಟ ಯೋಚನೆಯ ಮಾತು .ಇದಕ್ಕಾಗಿ ಅವಸರವಸರವಾಗಿ ಮದುವೆಯಾದ ಹೆಚ್ಚಿನ ಹೆಣ್ಣು ಮಕ್ಕಳು ಮನೆಗೆ ಅವಸರವಸರವಾಗಿ ಹೋಗುತ್ತಾರೆ.ಒಬ್ಬಾಕೆ ಶಿಕ್ಷಕಿಯ ಕಷ್ಟಗಳನ್ನು ಒಬ್ಬಾತ ಶಿಕ್ಷಕನಿಗೆ ಮಾತ್ರ ಅರ್ಥೈಸಲು ಸಾಧ್ಯ.ಹಾಗಾಗಿ ಶಿಕ್ಷಕಿ ಆದಷ್ಟು ಶಿಕ್ಷಕರನ್ನು ಬಾಳ ಸಂಗಾತಿಯಾಗಿ ಆರಿಸಿದರೆ‌ಒಳಿತು .ಹೆಣ್ಣನ್ನು ಕೇವಲವಾಗಿ ನೋಡದೆ ಆಕೆಗೂ ಒಂದು ಹೃದಯವಿದೆ ಎಂಬುದನ್ನು ಅರ್ಥೈಸಬೇಕು .ಬಂಜೆತನ ಹೆಣ್ಣಿಗೆ ಶಾಪವಲ್ಲ .ಪ್ರತಿಯೊಬ್ಬ ಹೆಣ್ಣಿಗೂ ತಾಯಾಗಬೇಕೆಂಬ ಆಸೆ ಇರುತ್ತದೆ .ಆದರೆ ಗಂಡನಲ್ಲಿ ಸಮಸ್ಯೆ ಇದ್ದು ಮಕ್ಕಳಾಗದಿದ್ದರೂ ಅದನ್ನು ಹೆಣ್ಣಿಗೆ ಆರೋಪಿಸುತ್ತಾರೆ .ಉನ್ನತ ಸ್ಥಾನದಲ್ಲಿರುವ ಮಹಿಳೆಗೆ ಅಂಗರಕ್ಷಕರಿದ್ದರೆ ಜನಸಾಮಾನ್ಯ ಮಹಿಳೆ ಧೈರ್ಯದಿಂದ ಓಡಾಡುವುದೂ ಕಷ್ಟವಾಗುತ್ತಿದೆ .ಎಳೆಯ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಹಿಂಸಿಸುವುದು ,ಕೊಲ್ಲುವುದು ,ಅಪಹರಿಸಿ ಮಾರುವುದು ದಿನ ನಿತ್ಯ ಪತ್ರಿಕರ ಓದುವಾಗ ಕಾಣ ಸಿಗುತ್ತದೆ .ಹದಿಹರೆಯದ ಹೆಣ್ಣು ಮಕ್ಕಳು ಒಂದಲ್ಲ ಒಂದು ರೀತಿಯಿಂದ ಮಾನಸಿಕ ,ಲೈಂಗಿಕ ಹಿಂಸೆ ಅನುಭವಿರುತ್ತಾರೆ .ಮುಜುಗರದಿಂದ ಕೆಲವೊಮ್ಮೆ ಮನಸ್ಸಲ್ಲೇ ಅದುಮಿಟ್ಟು ಆತ್ಮ ಹತ್ಯೆ ಮಾಡಿ ಕೊಳ್ಳುವುದೂ ಇದೆ .ಸ್ತ್ರೀವಾದಿಗಳು ಎಂದು ಹೇಳಿಕೊಳ್ಳುತ್ತಿರುವವರಿಗೆ, ಮಹಿಳಾ ಸಂಘಟನೆಗಳಿಗೆ ಗಮನಕ್ಕೆ ಬರುವುದು ಹೆಣ್ಣಿನ ಬದುಕಿನ ದುರಂತವಾದ ಕೊನೆಯ ಕ್ಷಣದಲ್ಲಿ .ಆದರೆ ಮೊದಲೇ ಆಕೆಗೆ ಜಾಗೃತಿಯ ಪಾಠ ಹೇಳಿ ಕೊಟ್ಟರೆ ಹೆಣ್ಣೊಬ್ಬಳು ಮಾನಸಿಕವಾಗಿ ಸಮಾಜಕ್ಕೆ  ತೆರೆದುಕೊಳ್ಳಬಲ್ಲಳು.                                                                                                                                                                   ಹೆಣ್ಣಿಗೆ ಆಧುನಿಕ ಸಮಾಜದಲ್ಲಿ ಸಹನೆಗಿಂತ ಬದುಕುವ  ರೀತಿ ಮುಖ್ಯ .ಆಕೆಗೆ ಯೋಗ್ಯ ರೀತಿಯ ಶಿಕ್ಷಣ ನೀಡುವುದರ ಜೊತೆಗೆ ಸಂಘಜೀವಿಯಾಗಿ ಬದುಕಲು ಕಲಿಸಬೇಕು .ತಂದೆ ತಾಯಂದಿರು ಗಂಡು ಮಕ್ಕಳಂತೆ ಹೆಣ್ಣು ಮಗಳನ್ನೂ ಪ್ರೀತಿಸಬೇಕು .ಅಣ್ಣ ತಮ್ಮಂದಿರ ಜೊತೆ ,ನೆರೆಕರೆಯ ಸಭ್ಯ ವ್ಯಕ್ತಿಗಳ ಜೊತೆ ,ಗೆಳೆಯ ,ಗೆಳತಿಯರ ಜೊತೆ ಬೆರೆಯುವಂತೆ ಅವಕಾಶ ಮಾಡಿಕೊಡಬೇಕು .ಆಗ ಆಕೆ ಮನಸ್ಸು ಬಿಚ್ಚಿ ಮಾತನಾಡಬಲ್ಲಳು .ಆಕೆಗೆ ಎಂದೂ ಮನೋದೌರ್ಬಲ್ಯ ಬರದು .ಉತ್ತಮ ಶಿಕ್ಷಣದ ಜೊತೆಗೆ ,ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಆಕೆಯ ಬಂಧುಗಳು ,ಪರಿಸರ ಒದಗಿಸಬೇಕು .ಹೆಣ್ಣೊಬ್ಬಳು ಶಕ್ತಿಯುತಳಾಗಿ ಯೋಚಿಸುತಿದ್ದರೆ ಭವ್ಯ ಭಾರತ   ಸಂಕಷ್ಟದಿಂದ ದೂರವಾದೀತು .

Friday, 14 October 2011

ನಾಥ ಪಂಥದ ಜೋಗಿಗಳು /natha panthada jogigalu

  ನಾಥ ಪಂಥದ  ಜೋಗಿಗಳು /natha panthada jogigalu
       
                                     ನವನಾಥರು
        "ಆತ್ಮ ಯಾವ ಕುಲ ?,ಜೀವ ಯಾವ ಕುಲ?"; ಎಂದು ಪ್ರಶ್ನಿಸಿದ ಕನಕದಾಸರು ಸಮಾಜದ ಕ್ರಾಂತಿಗೆ ಕಾರಣರಾದರೆ ಅದನ್ನು ಪ್ರಶ್ನಿಸುವ ಅನಿವಾರ್ಯತೆ ಬಂದದ್ದು ಅವರು ಸಮಾಜದ ಕೆಳಸ್ತರ ಕುಲದಲ್ಲಿ ಜನಿಸಿದ್ದರಿಂದ .ಅಂತೆಯೇ ಸಮಾಜದಲ್ಲಿ ಬ್ರಾಹ್ಮಣ ,ಕ್ಷತ್ರಿಯ ,ವೈಶ್ಯ ಮತ್ತು ಶೂದ್ರ ಎಂದು ವೇದ ಕಾಲದಿಂದಲೂ ವರ್ಣಾಶ್ರಮ ವಿಂಗಡಣೆಯಿತ್ತು . ಪ್ರತಿಯೊಬ್ಬನೂ ಆಯಾ ಕುಲದ ,ಆಯಾ ವರ್ಣಾಶ್ರಮ ಧರ್ಮವನ್ನು ಪಾಲಿಸಬೇಕಿತ್ತು.ಒಂದು ವರ್ಣದವರ ಕೆಲಸವನ್ನು ಇನ್ನೊಂದು ವರ್ಣದವರು ಮಾಡುವಂತಿರಲಿಲ್ಲ . ಬಹಳ ಹಿಂದಿನಿಂದಲೂ ಶೈವರು ,ವೈಷ್ಣವರು ಎಂಬ ಎರಡು ಪಂಥಗಳು ಅಸ್ತಿತ್ವದಲ್ಲಿತ್ತು .ವೈಷ್ಣವರು ವಿಷ್ಣುವಿನ ಆರಾಧಕರಾದರೆ ಶೈವರು ಶಿವನ ಆರಾಧಕರು . ಬ್ರಾಹ್ಮಣರು ವಿಷ್ಣುವನ್ನು ಪೂಜಿಸಿದರೆ ಶೈವರು ಶಿವನನ್ನೇ ದೇವರೆಂದು ನಂಬಿದವರು .ಪ್ರಪಂಚ,ಪಂಚಬೂತಾತ್ಮಕ ಪರಪಂಚ,ಪರಮಾತ್ಮ,ಪರಮ ಆತ್ಮ,ಪರಮೇಶ್ವರ,ಪರಮ ಈಶ್ವರ,ಪರ ದೈವ ಇಲ್ಲಿ ಇಹದಲ್ಲಿದ್ದುಕೊಂಡು ಪರದಲ್ಲಿರುವ ಆತ್ಮವನ್ನು ಆರಾದನೆ ಮಾಡುವುದು.ಶಿವ ಪಾರ್ವತಿಯರು ನೇರ ಸೃಷ್ಠಿ ಯ ನಿರಂತರ ಹರಿವಾದರೆ ಜ್ಞಾನದ ನಿರಂತರ ಚಲನೆಯ ರೂಪವೇ ಶಿವ,ಸೃಷ್ಟಿಸುವ,ಲಯವಾದುದನ್ನು ಮರು ಸೃಷ್ಟಿಸುವ ಸಾಮರ್ಥ್ಯವಿರುವುದು ಶಿವನಿಗೆ.ಎಲ್ಲವನ್ನೂ ಸುಡಬಹುದು.ಭಸ್ಮವನ್ನು ಸುಟ್ಟರೆ ಸಿಗುವುದು ಅದೇ ಭಸ್ಮ.ಯಾವುದನ್ನು ಸುಡಲಾಗುವುದಿಲ್ಲವೊ,ಸುಟ್ಟುದು ಅಂತಿಮವೋ ಅದೇ ಶಿವ. ಉತ್ತರ ಕರ್ನಾಟಕದಲ್ಲಿ ಶಿವಶರಣರು ಶಿವನ ಆರಾಧಕರದರೆ ,ಲಿಂಗಾಯತರು ಕೂಡ ಶಿವನನ್ನೇ ನಂಬಿದವರು .ಅವರವರ ನಂಬಿಕೆ ,ಆಚರಣೆಗಳು ಬೇರೆ ಬೇರೆಯಾದರೂ ಮೂಲ ಸೆಲೆಯೊಂದೆ,ಭಕ್ತಿ -ಪಾರಮಾರ್ಥ .ಭಾರತದಲ್ಲೂ ಶೈವರು ಅಧಿಕವಾಗಿದ್ದಾರೆ ಎಂಬುದಕ್ಕೆ ಜೋಗಿ -ಯೋಗಿ -ನಾಥ ಪಂಥದ ಸಂಪ್ರದಾಯದವರೇ ಸಾಕ್ಷಿ .ಉತ್ತರ ಭಾರತದಲ್ಲಿ ಅಧಿಕವಾಗಿರುವ ಶೈವರು ಮೂಲದಲ್ಲಿ ಹಿಂದಿ ಭಾಷಿಗರು .ನಿಜವಾಗಿ ಜೋಗಿ ಸಮಾಜದ ನಮ್ಮ ಮೂಲ ಭಾಷೆ ಹಿಂದಿ .ಮತ್ಸ್ಯೇನ್ದ್ರ  ನಾಥರ ಅನುಯಾಯಿಗಳಾದ ನಾವು ಸಸ್ಯಾಹಾರಿಗಳಾಗಬೇಕಿತ್ತು.ಆದರೆ ಸಮಾಜ ,ಬದಲಾವಣೆ ,ಪ್ರಾದೆಶಿಕತೆಗಳನ್ನೊಳಗೊಂಡು ಅಲ್ಲಿನ ಬದುಕಿಗೆನಾವು ಹೊಂದಿಕೊಳ್ಳಬೇಕಾಯಿತು .    
          

ಕುದುರೆ ಮೇಲೆ ಕುಳಿತ ಜೋಗಿ ಅರಸರು,ಕದಿರೆ ಜೋಗಿ ಮಠ.ಚಿತ್ರ-ಧರ್ಮದೈವ

 ನಮಗೂ ಉಣ್ಣೆಯ ಪವಿತ್ರ ಜನಿವಾರವಿದೆ .ಶಿವನ ಆರಾಧಕರಲ್ಲಿ ಲಿಂಗಾಯತರು ಆಯತ ಲಿಂಗವನ್ನು ಧರಿಸಿದ್ದರೆ ಜೋಗಿ ಸಮಾಜದವರು ಸಿಂಗ್ನಾತವನ್ನು ಧರಿಸುತ್ತಾರೆ .ನಮ್ಮಲ್ಲಿ ಹುಟ್ಟಿನಿಂದ ಹಿಡಿದು ಸಾವಿನವರೆಗಿನ ಆಚರಣೆಗಳು ಕೂಡಾ ವೈಷ್ಣವ ಸಂಪ್ರದಾಯಕ್ಕಿಂತ ಭಿನ್ನವಾಗಿರುತ್ತವೆ .ಪ್ರಾದೇಶಿಕ ಅನಿವಾರ್ಯತೆಯನ್ನು ಅರಿತುಕೊಂಡ ಜೋಗಿ ಜನಾಂಗ ತಮ್ಮ ವೃತ್ತಿಯನ್ನು ಅಲ್ಲಿಗನುಗುಣವಾಗಿ ಆರಿಸಿಕೊಂಡಿತು .ಜೋಗಿ -ಯೋಗಿ ಅಂದರೆ ಅಲೆಮಾರಿ ,ಜೋಳಿಗೆ ಹಾಕಿ ಸುತ್ತುವವ ,ಮುಂದೆ ಭಕ್ತಿಯ ಪಾರಮ್ಯತೆಯಿಂದ ಜೋಗಿ ತ್ಯಾಗಿಯಾಗಿ ಯೋಗಿಯಾಗಿ ಜೀವನವನ್ನು ಸವೆಸುವವ.       

                                ಮತ್ಸ್ಯೇಂದ್ರ ನಾಥೆರ್          

            ವೃತ್ತಿಧರ್ಮಕ್ಕನುಗುಣವಾಗಿ ನೋಡುವುದಾದರೆ ಮೂಲದಲ್ಲಿ ಜೋಗಿ ಜನಾಂಗ ಬಡವರಾಗಿದ್ದರು  .ಅವರ ಐಡೆಂಟಿಟಿ ಕಾಣಸಿಗುವುದು [ಅನನ್ಯತೆ ] ಹೆಚ್ಚಾಗಿ ದೈವಾರಾಧನೆಗಳಲ್ಲಿ .ವೈಷ್ಣವ ಪರಂಪರೆಯಿಂದ ದೈವಾರಾಧನೆ ಸಂಪೂರ್ಣ ನೆಲ ಕಚ್ಚುವ ಹಂತದಲ್ಲಿರುವಾಗ ತಂತ್ರ ಮಂತ್ರ ಪ್ರವೀಣರಾದ ಶೈವ ಜೋಗಿಗಳು ದೈವಾರಾಧನೆಯನ್ನು ಪುನರುಜ್ಜೀವನಗೊಳಿಸಿದರು . ಆ ಗೌರವದಿಂದ ಮೂಲ ದೈವ ನರ್ತಕರು ಸೋಣಂದ ಜೋಗಿ ,ಕಾವೇರಿ ಪುರುಷೆ ,ಮಾಯಿದ ಪುರುಷೆರ್ ,ಪುರುಷ ವೇಷ ,ಜೋಗಿ ಪುರುಸೆರ್ ಎಂದು ಆಷಾಢ ಮಾಸದಲ್ಲಿ ನೆನಪಿಸಿಕೊಳ್ಳುತ್ತಾರೆ . ಪುರುಷರು ಅಜಲು ಪದ್ಧತಿ ಪ್ರಕಾರ ತುಳುನಾಡಿನಲ್ಲಿ ದೈವದ ಉಂಬಳಿ ಭೂಮಿ ಪಡೆದು ಕೊಂಬು ವಾದ್ಯಗಳ ಮೂಲಕ ದೈವದ ಚಾಕಿರಿ ಮಾಡುತ್ತಾರೆ . ಅದು ಅವರ ಮೂಲ ವೃತ್ತಿಯಲ್ಲದ ಕಾರಣ ವರ್ಷಕ್ಕೊಮ್ಮೆ ಮಠಕ್ಕೆ ಹೋಗಿ ತಪ್ಪು ಕಾಣಿಕೆಯನ್ನು ಹಾಕುತ್ತಾರೆ ಜೋಗಿಯವರನ್ನು ಅವರ ವೃತ್ತಿಗನುಗುಣವಾಗಿ ವಾದ್ಯದವರು ,ಪುರುಷರು ,ಜೋಗಿಲು ,ಪುರ್ಸೆರ್ ಎಂದೆಲ್ಲ ಕರೆಯುತ್ತಾರೆ.  .ಇನ್ನು ಮುಂದೆ ಉಡುಪಿ ತಾಲೂಕಿನತ್ತ ತೆರಳಿದರೆ ಬಳೆಗಾರ ವೃತ್ತಿ ಮಾಡುವವರನ್ನು ಬಳೆಗಾರ ಜೋಗಿ ಎಂದು ಕರೆಯುತ್ತಾರೆ .ವೃತ್ತಿಗನುಗುಣವಾಗಿ ಹೆಸರುಗಳು ಬೇರೆ ಬೇರೆಯಾದಾರೂ ಅವರೆಲ್ಲರೂ ಜೋಗಿಗಳೇ. ಅಧುನಿಕ ಯುಗದಲ್ಲಿ ಜೋಗಿಗಳ ವೃತ್ತಿಧರ್ಮ ಅತ್ಯಂತ ಕಡಿಮೆಯಾಗತೊಡಗಿದೆ .ಸರಕಾರದಿಂದ ಹಿಂದುಳಿದ ವರ್ಗ ಎಂದು ಗುರುತಿಸಲ್ಪಟ್ಟ ಜೋಗಿ ಸಮಾಜ ಈಗ ಮುಂದುವರಿದ ಜನಾಂಗ ಎಂದು ಗುರುತಿಸಲ್ಪಟ್ಟಿದೆ .ಮುಂದುವರಿಯುತ್ತಿರುವ ಆಧುನಿಕತೆಗೆ ತಕ್ಕಂತೆ ಉನ್ನತ ಉದ್ಯೋಗದಲ್ಲಿ ನಮ್ಮ ಸಮಾಜ ಬಾಂಧವರಿದ್ದಾರೆ .ಎಲ್ಲ ಕ್ಷೇತ್ರಗಳಲ್ಲೂ ಕೈಯಾಡಿಸುತ್ತಿರುವ ನಮ್ಮ  ಜೋಗಿ ಸಮಾಜದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರಂಥಹ ಅನೇಕ ರಾಜಕೀಯ ನೇತಾರರಿದ್ದಾರೆ,ಕದ್ರಿ ಗೋಪಾಲ ನಾಥರಂತಹ ಆಸ್ಥಾನ ವಿದ್ವಾಂಸರಿದ್ದಾರೆ,ಯಶು ವಿಟ್ಲ ರಂತಹ ಹಿರಿಯ ಪತ್ರಕರ್ತರಿದ್ದಾರೆ ,ಕಿರಣ್ ಜೋಗಿ ,ಪುರುಷೋತ್ತಮ್ ಜೋಗಿಯವರಂಥಹ ಸಂಘಟನಾ ಚತುರರಿದ್ದಾರೆ .          

          
17ನೇ ಶತಮಾನದ ನಾಥ ಪಂಥದ ಯೋಗಿಗಳ  ತೈಲ ಚಿತ್ರ                                                                                                                       ಪುರುಷ -ಅಂದರೆ ವ್ಯಕ್ತಿ ,ಪುರುಷ ಎಂದರೆ ಅಭಿವ್ಯಕ್ತಿ .ಆತನೇ ಜೋಗಿ ಸಮಾಜದ ಅನನ್ಯತೆಯ ನೇತಾರ .ಪುರುಷರು ಎಂದಾಗ ಕೀಳರಿಮೆ ಇಟ್ಟುಕೊಳ್ಳಬಾರದು .ಏಕೆಂದರೆ ಶೈವಾರಾಧನೆಯಲ್ಲಿ  ಜೋಗಿ ಎಂದರೆ ಅಲೆಮಾರಿ ಎಂದರ್ಥ .ಬ್ರಹ್ಮ ಕಪಾಲ ಹಿಡಿದ ಶಿವ ಜೋಗಿಯಲ್ಲವೇ ?.ಭಸಿತ ಲೇಪಿತ ,ಭಸ್ಮಾಂಗ ಶಿವ ಜೋಗಿಯೋಪಾದಿಯಲ್ಲಿ "ಯೋಗಿ "ಯಾದವನಲ್ಲವೇ ?.ಅರ್ಜುನನನ್ನು ಜೋಗಿ ಎನ್ನುವವರಿದ್ದಾರೆ . ಇದನ್ನೆಲ್ಲಾ ನಾವು ಅರಿತುಕೊಳ್ಳಬೇಕು ."ನಾಥ "ಎಂದರೆ ಒಡೆಯ .ನವನಾಥರು  ನಾಥ ಸಂಪ್ರದಾಯದ  ಪ್ರಮುಖರು. ಬಾರಹ್ಪಂತ (೧೨ ಜಾತಿ )ದವರು ನಾಥ ಪಂಥದಲ್ಲಿದ್ದಾರೆ.ಈಗ ನಮ್ಮ ಜೋಗಿ ಮಠದಲ್ಲಿ ಆಡಳಿತ  ನಡೆಸುವ ಹೆಚ್ಚಿನ ಯೋಗಿಗಳು ನಾಥ ಸಂಪ್ರದಾಯದವರೇ .ಅವರು ಸಹ ಜೋಗಿಗಳೇ .ಅವರೇನು ಬೇರೆಯವರಲ್ಲ .        
   
                                 ಗೋರಕ್ಷ ನಾಥರು     
     ನಮ್ಮಲ್ಲಿ ಗೊರಕ್ಷನಾಥರು ನಮ್ಮ ಗುರುಗಳು .ಗೋರಕ್ಷ ಅಂದರೆ ಗೋವುಗಳ ರಕ್ಷಕ ಅಂದರೆ ಕಾಮಧೆನುವಿನಂಶ ಎಂದರ್ಥ .ನಮ್ಮಲ್ಲಿ ಗೋವುಗಳಿಗೆ ಅತ್ಯಂತ ಪ್ರಾಧಾನ್ಯತೆ ಇದೆ .ಗೋವುಗಳೆಂದರೆ ೩೩ ಕೋಟಿ ದೇವರುಗಳ ಜೀವಂತ ದೇವಾಲಯ ಎನ್ನಬಹುದು .ಗೊರಕ್ಷನಾಥರನ್ನು ಶಿವನಂಶ ಎಂದು ಕರೆಯುವುದುಂಟು .ಬದರಿ ನಾಥರಂಥಹ ಮೌನಿ ಜಟಾಧಾರಿ,ಮತ್ಸ್ಯೆಂದ್ರ ನಾಥರಂತಹ ಯೋಗ ರೂವಾರಿ ನಮ್ಮಲ್ಲಿರುವಾಗ ಶೈವಾರಾಧನೆಯ ಮಹತ್ವ ನಮಗೆ ತಿಳಿಯುತ್ತದೆ .ಜೋಗಿ ಮಠದಲ್ಲಿ ೧೨ ವರ್ಷಗಳಿಗೊಮ್ಮೆ ಆಯ್ಕೆಯಾಗುವ ಗುರುಗಳು ಹೆಚ್ಚಾಗಿ ಶಿವನಂತೆ ಜಟಾಧಾರಿಗಳು.ಅವರು ಮೃಗ ಚರ್ಮದ ಮೇಲೆ ಕುಳಿತು ರುದ್ರಾಕ್ಷಿ ಹಿಡಿದು ಶಿವನನ್ನು ಧ್ಯಾನಿಸುತ್ತಿರುತ್ತಾರೆ.ಮೈಯೆಲ್ಲಾ ಭಸಿತ ಲೇಪಿಸಿ ಶಿವನ ಧ್ಯಾನದಲ್ಲಿರುತ್ತಾರೆ .ಪ್ರತಿಯೊಂದು ಮಠದಲ್ಲೂ ಕಾಶಿ ಕಾಲಭೈರವನ ಆರಾಧನೆ ನಡೆಯುತ್ತದೆ .ಮಠಗಳಲ್ಲಿ ಯುಗಾದಿ ಪೂಜೆ ಹೆಚ್ಹು ಪ್ರಸ್ತುತವಾಗಿರುತ್ತದೆ .ಗುರುವಿನ ಬಳಿ ಧೀಕ್ಷೆ ತೆಗೆದುಕೊಳ್ಳಬೇಕಾದರೆ ಕರ್ಣವೇದ ಸಂಸ್ಕಾರ  ಪಠಣ ಗುರುಗಳಿಂದಾಗುತ್ತದೆ.ಅಂತೆಯೇ ಕರ್ಣ ಭೇದ ಸಂಸ್ಕಾರವಾಗಿ ಕುಂಡಲಗಳನ್ನು ಕಿವಿಗೆ ಧರಿಸಬೇಕಾಗುತ್ತದೆ .      
        
                               ಸುಂದರ ನಾಥರು
                               ಹುಟ್ಟಿನಿಂದ ಹಿಡಿದು ಮದುವೆಯಿಂದ  ,ಸೀಮಂತದಿಂದ   ,ನಾಮಕರಣದಿಂದ ಎಲ್ಲವೂ ಲೋಕರೂಡಿಯಂತೆ ನಡೆದರೆ ಸಾವಿನಲ್ಲಿ ಶೈವಾರಾಧಕರಾದ ನಮ್ಮಲ್ಲಿ ವಿಶೇಷತೆಯಿದೆ .ಸಾವಿನ ಮನೆಗೆ ಹೋಗುವ ಶರೀರಕ್ಕೆ ಚಿನ್ನದ ನೀರು ಬಾಯಿಗೆ ನೀಡಿದರೆ ಶಿವಲಿಂಗವನ್ನು ಜೋಳಿಗೆಗೆ ಹಾಕುತ್ತಾರೆ .ಹೂಳುವಾಗ ದ್ಯಾನಕ್ಕೆ ಕೂತಂತೆ ಅಟ್ಟೆ ಹಾಕಿ ಕೂತುಕೊಲ್ಳಿಸಿ ಹಣೆಗೆ ನಾಮ ಹಾಕಿರುತ್ತಾರೆ .ಇದು ನಮ್ಮ ಸಂಪ್ರದಾಯ .ಜೋಗಿ -ಯೋಗಿಯಾಗಲಿ ,ಪುರುಷ -ಪುರುಷ ನಾಥನಾಗಲಿ ,ನಾಥ -ಸನ್ನಾಥ-ಜಗನ್ನಾಥನಾಗಲಿ ನಾವೆಲ್ಲರೂ ಒಂದೇ ,ಜೋಗಿ ಸಮಾಜ ಬಾಂದವರೆಂದೆ ಭಾವಿಸಬೇಕು .         
     
  12ವರ್ಷಗಳಿಗೊಮ್ಮೆ ಬರುವ ಜುಂಡಿ
            ನಾವು ಹಿರಿಯರಾಗಿದ್ದರೂ  ಕಿರಿಯತೆಯ ಭಾವನೆ ನಮ್ಮಲ್ಲಿದ್ದಾಗ ಮಾತ್ರ ಸರ್ವಜ್ಞ ಸಾಮಾನ್ಯನಾಗುತ್ತಾನೆ .ನಮ್ಮ ಸಮಾಜ ಬಾಂದವರನ್ನು ಒಗ್ಗೂಡಿಸುತ್ತಿರುವ ನಮ್ಮ ಭ್ರಾತೃತ್ವ ಪ್ರೇಮ ಸಮಾಜಕ್ಕೆ ಮಾದರಿಯಾಗಬೇಕು .ಯೋಗ್ಯ ಗುರುವಿನ ಗರಡಿಯಲ್ಲಿ ಪಳಗಿರುವ ನಮ್ಮ ಜೋಗಿ ಸಮಾಜ ಮದ್ಯಪಾನ ಮುಕ್ತ ಸಮಾಜವಾಗಬೇಕು .ಬಡತನ ಇರಬಹುದು .ಆದರೆ ಹೃದಯದಲ್ಲಿ ಬಡತನ ಇರಬಾರದು .ನಾವು ಹಣದಿಂದ ನಮ್ಮ ಜೋಗಿ ಸಮಾಜವನ್ನು ಅಳೆಯಬಾರದು .ಗುಣದಿಂದ ಅಳೆಯಬೇಕು  ".ಹಣ ಹೆಣದ ತನಕ -ಗುಣ ನೆನಪಿನ ತನಕ "-ಕಾವ್ಯಸುತರ ವಾಣಿಯಂತೆ ಗುಣವಂತರಾದ ಯೋಗ್ಯ ಜೋಗಿ ಸಮಾಜದ ನಿರ್ಮಾಣದಲ್ಲಿ ನಾವು ಭಾಗಿಗಲಾಗೋಣ ಎಂಬುದೇ ನನ್ನ ಆಶಯ 
ವೀಡಿಯೋ ಲಿಂಕ್-