Saturday, 23 July 2022

ಮನೆಯಿಂದ ಮನಕೆ.ಕನ್ನಡ ಭಾವಗೀತೆ

             *ಮನೆಯಿಂದ ಮನಕೆ*

                   ಕನ್ನಡ ಭಾವಗಿತೆ

   


ಎಲ್ಲ ನಮಗಿರುವಾಗ ಬಂದ ಸಂಬಂಧಗಳ

ಬೆಸೆವ ನೆಮ್ಮದಿ ತಾಣ ನಮ್ನ ಮನೆಯು

ಹುಟ್ಟು ಬಾಲ್ಯವು ಮುಪ್ಪು ನೋವು ನಲಿವುಗಳಲ್ಲಿ

ಮನೆಯಿಂದ ಮನಕೆ ಇಹದ ಹದವು


ಕಿಟಕಿ ಬಾಗಿಲು ವಸ್ತು ವಾಸ್ತುಗಳು ಮನೆಯಲ್ಲ

ಮಮತೆಯಿಲ್ಲದ ಒಡಲ ಬಂಧ ಮನೆಯಲ್ಲ

ಅಥಿತಿ ಅಭ್ಯಾಗತರು ಸೇರಿದರು ಮನೆಯಲ್ಲ

ಎಲ್ಲರೊಂದಾಗಿ ತಾ ಬಾಳುವುದು ಮನೆಯು


ಮುಳಿಹುಲ್ಲು ಸೋಗೆಗಳ ಛಾವಣಿಯು ಮನೆಯಲ್ಲ

ಹಂಚು ತಾರಸಿ ಡೇರೆ ಎಲ್ಲ ಮನೆಯಲ್ಲ

ಒಂದಕೊಂದು ಹೆಸರು ಕೋಣೆಗಳು ಮನೆಯಲ್ಲ

ಮಮತೆಯಾಧಾರದ ಕಂಬ ಮನೆಯು


ತಂದೆ ತಾಯಿಯು ಮಡದಿ ಮಕ್ಕಳು ಮನೆಯಲ್ಲ

ನೆಂಟರಿಷ್ಟರು ಬಂಧು ಬಳಗ ಮನೆಯಲ್ಲ

ಎಲ್ಲ ಸಂಬಂಧಗಳು ಕೂಡಿ ಬಾಳಲು ಮನೆಯು

ನೆನಪಿನಂಗಳದಲ್ಲಿ ನಮ್ಮ ಮನೆಯು


ಸರ್ವಾಂಗ ಸೇರಿರಲು ಸುಂದರವು ದೇಹವು

ದೇಹ ಉಸಿರದು ಕೂಡೆ ಅದು ಮನೆಯು ಅಲ್ಲ

ಉಸಿರು ನಿಂತರೆ ಅಲ್ಲಿ ಹೆಸರು ಹೇಳುವುದಿಲ್ಲ

ಅಳಿದರೂ ಹೆಸರುಳಿವ ನಮ್ಮ ಮನೆಯು


ಕವಿ-ಕೆ.ಮಹೇಂದ್ರನಾಥ್ ಸಾಲೆತ್ತೂರು.ಎಂ.ಎ

  -ಕಾವ್ಯಸುತ-

No comments:

Post a Comment