ಬಿಲ್ಲವೆರೆ ಪದಿನಾಜಿ ಬರಿಕುಲು.ಬರವು-ಸಂಕೇತ್ ಪೂಜಾರಿ
ಬಿಲ್ಲವರ ಬಳಿ(ಬರಿ)ಕುಲು-ಕನ್ನಡ ಬರವು
ಬರಹ ✍ - ಸಂಕೇತ್ ಪೂಜಾರಿ
ತುಳುನಾಡಿನ ಸಂಸ್ಕ್ರತಿಯಲ್ಲಿ ಸಂಖ್ಯೆ ಹದಿನಾರಕ್ಕೆ ಬಹಳ ಪ್ರಾಶಸ್ತ್ಯವಿದೆ. ಹದಿನಾರಕ್ಕೆ ಸೇರಿಸುವುದು, ಹದಿನಾರು ಕಟ್ಟಳೆ, ಹದಿನಾರು ಕಳೆ ತುಂಬುವುದು. ಈ ರೀತಿಯ ಅರಾಧನ ಕ್ರಮಗಳು ಸಂಖ್ಯೆ ಹದಿನಾರಕ್ಕೆ ಬಹಳ ಒತ್ತು ನೀಡಿದಂತಹ ವಿಶಿಷ್ಟ ಪರಂಪರೆ. ತುಳು ಮೂಲ ನಿವಾಸಿಗಳ 16 ಕುಲಗಳು ಕ್ರಮೇಣ ವಿಭಜನೆಗೊಂಡು ದುಪ್ಪಟ್ಟುಗೊಂಡದ್ದು ಇತಿಹಾಸ. ಆದರೆ ಈ 16 ಸಂಖ್ಯೆಯ ಲೆಕ್ಕಾಚಾರ ಅನಾದಿಕಾಲದಿಂದಲೂ ಬಂದಂತದ್ದು. ದೈವಾರಾಧನೆಯಲ್ಲಿ 'ಪದಿನಾಜಿ ಕಳೆ ದಿಂಜಿದ್ ಬಲ' ಎಂದರೆ ಹದಿನಾರು ಕಳೆ ತುಂಬಿ ಬಾ ಎಂದು ಅಂದರೆ ಹುಣ್ಣಿಮೆಯ ಚಂದ್ರ ಹದಿನಾರನೆಯ ದಿನಕ್ಕೆ ಪರಿಪೂರ್ಣವಾಗಿ ಗೋಚರಿಸುತ್ತಾನೆ. ಇದೇ ತಾತ್ಪರ್ಯ ತುಳುವರ ಸಂಸ್ಕೃತಿಯ ಒಂದು ವಿಶೇಷ ಭಾಗ. ತುಳು ಮೂಲ ನಿವಾಸಿಗಳಲ್ಲಿ ಅಥವಾ ತುಳುನಾಡಿನ ಮೂಲ ಪರುಷ/ಮಹಿಳೆಯರಲ್ಲಿ ಬಿಲ್ಲವರಿಗೆ ಮತ್ತು ಮುಗೇರರಿಗೆ ಅಗ್ರಸ್ಥಾನ. ಇದೇ ನೆಲೆಗಟ್ಟಿನಲ್ಲಿ ಬಿಲ್ಲವರಿಗೆ 16 ಬಳಿಗಳು ಇದ್ದು ಈ ವ್ಯವಸ್ಥೆಯು ತುಳುನಾಡಿನ ಮೂಲ ಪರಂಪರೆಗೆ ಬಿಲ್ಲವರ ಅಡಿಪಾಯ ಇರುವುದನ್ನು ತೋರಿಸುತ್ತದೆ.
ಬಳಿ ಅಥವಾ ಬರಿ ಎಂದರೆ ವೈದಿಕ ಸಂಪ್ರದಾಯದ ಗೋತ್ರಕ್ಕೆ ಬಹಳಷ್ಟು ಸಮನಾದ ವ್ಯವಸ್ಥೆ. ಆದರೆ ಈ ವ್ಯವಸ್ಥೆಗೂ ವ್ಯತ್ಯಾಸಗಳಿವೆ. ಪ್ರಾಚೀನದಲ್ಲಿ ತುಳುನಾಡಿನಲ್ಲಿ ಜಾತಿ ವ್ಯವಸ್ಥೆಗೂ ಮೊದಲು ಬಳಿ ವ್ಯವಸ್ಥೆ ಇತ್ತು. ಈಗಲೂ ಜಾತಿ ಬೇರೆಯಾದರು ಬಳಿ ಒಂದೇ ಆದರೆ ಅವರು ಕೌಟುಂಬಿಕವಾಗಿ ಬಹಳ ಹತ್ತಿರವೆಂಬ ಮಾತಿದೆ. ಉದಾಹರಣೆಗೆ ಕೊರಗತನಿಯನ ಪಾರ್ದನದಲ್ಲಿ ತನಿಯನು ತನ್ನವರನ್ನೆಲ್ಲಾ ಕಳೆದುಕೊಂಡು ಅನಾಥನಾಗಿದ್ದಾಗ ಎಣ್ಸೂರ ಬಾರಿಕೆಯ ಮೈರಕ್ಕೆ ಬೈದೆದಿಯು ಆತನನ್ನು ಸಾಕಿ ಸಲಹುತ್ತಾಳೆ. ಆದರೆ ಅದಕ್ಕಿಂತಲೂ ಮುಂಚೆ ಅವನು ಪೊದೆಯ ಬಳಿ ಅಳುತ್ತಾ ಕುಳಿತಿರುವಾಗ ಆತನ ಬಳಿಗೆ ಹೋಗಿ ಆತನ ಜಾತಿ ಮತ್ತು ಬಳಿ ಯಾವುದೆಂದು ಕೇಳುತ್ತಾಳೆ. ಆಗ ಆತ ಜಾತಿಯಲ್ಲಿ ಕೊರಗ, ಬಳಿಯಲ್ಲಿ ಚೋಮನ ಬಳಿ(ಸೋಮಣ್ಣ, ಸುವರ್ಣ) ಎಂದು ಹೇಳುತ್ತಾನೆ. ಆಗ ಮೈರಕ್ಕೆಯು ನೀನು ನಮ್ಮ ಬಳಿಯವನೆ ಎಂದು ಹೇಳಿ ಅತನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಮಗನಂತೆ ಸಾಕುತ್ತಾಳೆ. ಇಂತಹ ಬಳಿ ಸಂಬಂಧಿಸಿದ ಹಲವು ಉದಾಹರಣೆಗಳು ತುಳು ಜಾನಪದ ಸಾಹಿತ್ಯಗಳಲ್ಲಿ ಸಿಗುತ್ತದೆ. ತುಳು ಮಾತೃ ಮೂಲ ಪದ್ದತಿ ಈಗಲೂ ಅರಾಧನ ಮತ್ತು ಪಟ್ಟದ ಅಧಿಕಾರ ವ್ಯವಸ್ಥೆಯಲ್ಲಿ ಇಂದಿಗೂ ತುಳುನಾಡಿನಲ್ಲಿ ಬಲವಾಗಿದ್ದರೂ ಪುರುಷ ಪ್ರಧಾನ ಸಮಾಜಕ್ಕೆ ಒಗ್ಗಿಕೊಂಡು ಇದ್ದು ಅಪ್ಪೆ(ತಾಯಿ) ಕಟ್ಟಿನಿಂದ ಅಳಿಯ ಕಟ್ಟಿಗೆ ಬದಲಾದದ್ದು ಮಾತ್ರ ಹೊರಜಗತ್ತಿಗೆ ಇಂದಿಗೂ ಮುಚ್ಚಿದ ಪರದೆಯಾಗಿದೆ. ಸ್ತ್ರೀ ಪುರುಷ ಸಮಾನ ಸಂಸ್ಕೃತಿ ತುಳುನಾಡಿನಲ್ಲಿ ಇದ್ದದ್ದು ಈಗ ಇತಿಹಾಸ. ಕಾಪಾಡ ಕಾಪಾಡ್ತಿ, ಕಲುರುಟಿ- ಕಲುಕುಡ, ಮುಕ್ಕಾರಿ-ಮುಕ್ಕಾಲ್ದಿ ವ್ಯವಸ್ಥೆ ಹಿಂದೆ ಸ್ತ್ರೀ ಪುರುಷ ಸಮಾನತೆಗೆ ತುಳುನಾಡಿನಲ್ಲಿದ್ದ ವ್ಯವಸ್ಥೆಯನ್ನು ಬೊಟ್ಟುಮಾಡಿ ತೋರಿಸುತ್ತದೆ. ಈ ವ್ಯವಸ್ಥೆಗೆ ಬಳಿ ಪದ್ದತಿ ಮುಖ್ಯವಾಗಿತ್ತು. ಆಯಾ ಬಳಿ ಅಥವಾ ಕುಲಕ್ಕೆ ಮುಖ್ಯವಾಗಿ ಕಾಪಾಡ ಕಾಪಾಡ್ತಿಯರಿದ್ದರು. ಆಲಡೆ ವ್ಯವಸ್ಥೆ ಈ ಬಳಿ ಪದ್ದತಿಗೆ ಅನುಗುಣವಾಗಿ ರೂಪುಗೊಂಡ ಮುಖ್ಯ ಆರಾಧನ ಕೇಂದ್ರ. ಈ ಅಲಡೆ ಈಗಿನ ಸಿರಿ ಆಲಡೆ ಅಲ್ಲ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. 16 ಬಳಿ ಅಥವಾ ಕುಲದವರು ತಮ್ಮ ಗತಿಸಿದ ಹಿರಿಯರನ್ನು ' ಕಂಚಿ ಕಲ್ಲಿನಲ್ಲಿ' ಆರಾಧಿಸುತ್ತಿದ್ದ ಪ್ರಾಚೀನ ವ್ಯವಸ್ಥೆಯನ್ನು ಮಹಾನ್ ಸಾಹಿತಿ ಮತ್ತು ಸೂಕ್ಷ್ಮ ಬಹರಗಾರ ದಿ|| ರವಿ .ರಾ ಅಂಚನ್ ಅವರು ಬಹಳ ವಿಸ್ತೃತವಾಗಿ ತಮ್ಮ "ತುಳುವರ ಯುಗಯಾತ್ರೆ" ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಹದಿನಾರು ಕುಲಕ್ಕೆ ಹದಿನಾರು ಬಳಿ ಪದ್ದತಿ ಯಾವ ಕಾಲ ಘಟ್ಟದಲ್ಲಿ ಬಂತು ಎಂಬುದು ಹೇಳುವುದು ಕಷ್ಟ. ಆದರೆ ಈ ಸಾಮ್ಯತೆಯ ಪದ್ಧತಿ ತುಳುವರಾದ ಬಿಲ್ಲವರಿಗೆ ಇರುವುದು ವಿಶೇಷ. ತುಳುನಾಡಿನಲ್ಲಿ ಅನೇಕ ಜಾತಿಗಳಿದ್ದು ಎಲ್ಲಾ ಜಾತಿಗಳಲ್ಲೂ ಈ 16 ಬಳಿಗಳು ಇಲ್ಲ. ಕೆಲವರಲ್ಲಿ 6, 8 ಅಥವಾ 10 ಇದೆ. ಕೆಲವು ಜಾತಿಯಲ್ಲಿ 50ಕ್ಕೂ ಮಿಗಿಲಾಗಿದೆ. ಆದರೆ ಹದಿನಾರು ಬಳಿ ಇರುವುದು ಬಿಲ್ಲವರಿಗೆ, ನಲಿಕೆ ಜನಾಂಗಕ್ಕೆ ಮತ್ತು ಕೆಲವು ಜಾತಿಗಳಿಗೆ ಮಾತ್ರ. 16 ಕುಲ ಮತ್ತು 16 ಬಳಿಗಳ ಪದ್ದತಿಯಲ್ಲಿ ಬಹಳಷ್ಟು ಸಾಮ್ಯತೆ ಇದ್ದರೂ ಕೂಡ ಸ್ತ್ರೀ ಪುರುಷ ಸಮಾನ ಸಂಸ್ಕೃತಿ ನಂತರದಲ್ಲಿ ಪುರುಷ ಪ್ರಧಾನ ಸಮಾಜಕ್ಕೆ ಪಲ್ಲಟಗೊಂಡಾಗ 16 ಬಳಿಗಳಲ್ಲಿ ಪುರುಷ ನಾಮಾರ್ಥಗಳು ಹೆಚ್ಚು ಕಾಣಿಸಿಕೊಂಡದ್ದು ಗಮನೀಯ.
ಬಳಿಯ ಉಗಮಕ್ಕೆ ಲೇಖಕರಾದ ಶ್ರೀಯುತ ರಾಮನಾಥ್ ಕೋಟೆಕಾರ್ ಅವರು ನೀಡುವ ವ್ಯಾಖ್ಯಾನವೆಂದರೆ ಅಯಾ ಕುಲದ ಹಿರಿಯ ವ್ಯಕ್ತಿಯ ಹೆಸರು ಅಯಾ ಬಳಿಗೆ ಹೆಸರಾಗಿ ಬಂದಿದೆ ಎಂಬುದು. ಬಹುಶಃ ಬಿಲ್ಲವರ ಗುತ್ತು ಬರ್ಕೆ ಮನೆತನಗಳಲ್ಲಿ ಇಂದಿಗೂ ನಡೆಯುತ್ತಿರುವ ಮನೆತನದ ಹಿರಿಯಾಯನ ಆರಾಧನೆಗೂ ಈ ಬಳಿ ಪದ್ದತಿಗೂ ಪಳೆಯಳಿಕೆ ರೀತಿಯಲ್ಲಿ ಒಂದು ಸಂಬಂಧ ಖಂಡಿತವಾಗಿಯೂ ಇದೆ. ಇದು ಕಾಲಾಂತರದ ಸ್ಥಾನ ಪಲ್ಲಟದ ಅರಾಧನೆಯಲ್ಲಿ ಬಳಿಯ ಹೆಸರು ಬರಲು ಕಾರಣನಾದ ಮೂಲ ವ್ಯಕ್ತಿಯ ಹೆಸರು ಮರೆಯಾಗಿ ಪಟ್ಟದ ಹೆಸರು ಶಾಶ್ವತವಾಗಿರುವ ಸಾಧ್ಯತೆ ಇದೆ. ಸದ್ಯಕ್ಕೆ ನಮಗೆ ಪಾಂಗಳಗುಡ್ಡೆಯಲ್ಲಿರುವ ಅಮ್ಮಣ್ಣ ಬನ್ನಾಯನ ಮೂರ್ತಿ ಅಮೀನ್ ಬಳಿಯ ಮೂಲ ಪುರುಷನಾಗಿ ಕಾಣುತ್ತದೆ. ಒಮ್ಮೆ ನಾನು ಬಾಷೆಲ್ ಮಿಷನ್ ಗೆ ಭೇಟಿಕೊಟ್ಟಾಗ ಅಲ್ಲಿ ಬಿಲ್ಲವ ಜಾತಿಯಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಒಬ್ಬರ ಪರಿಚಯವಾಗಿತ್ತು. ಅವರ ಹೆಸರಿನಲ್ಲಿ ಈಗಲೂ ಅಮ್ಮನ್ನ ಎಂಬ ಸರ್ ನೇಮ್ ಇದೆ. ಅವರು ಈ ಪಾಂಗಳಗುಡ್ಡೆಯ ಅಮ್ಮನ್ನ ಬನ್ನಾಯರ ಮೂರ್ತಿಯ ಬಗ್ಗೆ ಉಲ್ಲೇಖಿಸುತ್ತ ತಮ್ಮ ಮೂಲ ಪುರುಷ ಅಮ್ಮನ್ನ ಬನ್ನಾಯ ಎಂದೇ ಹೇಳಿದ್ದರು. ಇನ್ನು ಈ ಬಿಲ್ಲವರ ಬಳಿಗಳ ಮೂಲ ಹೆಸರನ್ನು ಗಮನಿಸಿದಾಗಲೂ ಅಮೀನ್ ಬಳಿಯ ಮೂಲ ಹೆಸರು ಅಮ್ಮನ್ನ ಬನ್ನಾಯ ಎಂದೂ ಕೋಟ್ಯಾನ್ ಕೊಟ್ಯನ್ನ ಬನ್ನಾಯ ವೆಂಬಂತೆ ಎಲ್ಲಾ ಹೆಸರುಗಳಲ್ಲಿ ಬನ್ನಾಯ ಎಂಬ ಪದ ಕಾಣುತ್ತದೆ. ಕುಂದರ್ ಬಳಿಗೆ ಮೂಲ ಪುರುಷ ಮೂಲ್ಕಿ ಸೀಮೆಯ ಅವಳಿ ವೀರರಾದ ಕಾಂತ ಬಾರೆ ಬೂದಬಾರೆಯ ತಂದೆ ಕುಂದಯ ಬಾರೆ ಎಂಬ ಮಾತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯವೆಂಬುದು ಹೆಚ್ಚಿನ ಅಧ್ಯಯನದಿಂದ ತಿಳಿಯಬೇಕಾಗಿದೆ. ಯಾಕೆಂದರೆ ಕುಂದರ್ ಬಳಿಯ ಮೂಲ ಹೆಸರು ಗುಂಡಣ್ಣ ಅಥವಾ ಗಿಂಡೇರಣ್ಣ ಎಂದು. ಹಾಗೇ ಕುಂದರಣ್ಣ ಎಂಬ ಹೆಸರೂ ಇದೆ. ಆದರೆ ಕುಂದಯ ಎಂಬ ಹೆಸರು ಹಲವರಿಗೆ ಇದೆ. ಅದ್ದರಿಂದ ಇಲ್ಲಿ ಗೊಂದಲ ನಿವಾರಣೆ ಅಗತ್ಯವಾಗಿದೆ.
ಬಿಲ್ಲವರ 16 ಬಳಿಗಳಲ್ಲದೆ ಕೆಲವು ಕೂಡು ಬಳಿಗಳೂ ಇದೆ. ಇದು ನಂತರದಲ್ಲಿ ಸೃಷ್ಟಿಯಾದ ಬಳಿ ಎಂದೂ ಅಥವಾ ಒಂದು ಬಳಿಯಿಂದ ವಿಭಜನೆಗೊಂಡ ಬಳಿ ಎಂದೂ ಹೇಳಲಾಗುತ್ತದೆ. ಈ ವಿಭಜನೆ ಅಥವಾ ಕೂಡು ಬಳಿಯ ರಚನೆಗೆ ಕಾರಣಗಳು ಹಲವಾರು ಇರಬಹುದು. ಪ್ರತಿಯೊಂದು ಬಳಿಗೂ ಅದರದೇ ಆದ ಮೂಲಸ್ಥಾನಗಳಿರುತ್ತವೆ. ಆದಿ ಆಲಡೆಯ ಕೂಡುವಿಕೆ ಸ್ಥಾನ ಪಲ್ಲಟಗೊಂಡು ಸಂಸ್ಕೃತಿಯ ಮೇಲೆ ನಾಮಾಂತರ ಹಲ್ಲೆಗಳಾದ ಕಾಲಘಟ್ಟದಲ್ಲಿ ಗ್ರಾಮ, ಮಾಗಣೆ, ಸೀಮೆ, ರಾಜ್ಯಗಳ ದರ್ಬಾರು ಹೆಚ್ಚಾಗಿ ಆದಿ ಆಲಡೆಗಳು ಪರಿವರ್ತನೆಗೊಂಡವು. ಕುಟುಂಬದ ಮನೆಗಳು 16 ಬಳಿಗಳಿಗನುಸಾರವಾಗಿ ಸೃಷ್ಟಿಗೊಂಡವು. ಆದರೆ ಕೌಟುಂಬಿಕ ಕಲಹಗಳು ಮತ್ತು ಕೆಲವೊಂದು ಕಾರಣಗಳಿಂದ ಒಂದೇ ಬಳಿಗೆ ಹಲವು ಮೂಲಸ್ಥಾನಗಳು ಹುಟ್ಡಿಕೊಂಡದ್ದು ಬಿಲ್ಲವರಲ್ಲೇ ಹೆಚ್ಚು. ಇದರಿಂದ ಮೂಲ ಬಳಿಯ ಮೂಲ ಮನೆ ಇಂದು ಪರಿಚಯವಾಗದಷ್ಷರ ಮಟ್ಟಿಗೆ ಗೊಂದಲಗಳಿಗೆ ಎಡೆಮಾಡಿದೆ. ಒಂದೇ ಬಳಿಯ ಕುಟುಂಬಕ್ಕೆ ಮೂಲದ ತಾಯಿ ಒಂದೇ. ಅದ್ದರಿಂದ ಅವರೆಲ್ಲರು ಒಂದೇ ತಾಯಿಯ ಮಕ್ಕಳು ಮತ್ತು ಕೌಟುಂಬಿಕವಾಗಿ ಅಣ್ಣ ತಮ್ಮ, ಅಕ್ಕ ತಂಗಿ, ಸೋದರ ಸೋಸೆ, ಸೋದರ ಮಾಮ, ಸೋದರ ಅಳಿಯ ಎಂಬ ಸಂಬಂಧವಿರುತ್ತದೆ. ಈ ಸಂಬಂಧಗಳ ಒಳಗೆ ವಿವಾಹ ನಿಷಿದ್ಧ. ಕುಟುಂಬ ಬೆಳೆದಂತೆ ಸದಸ್ಯರು ಹೆಚ್ಚಾಗುತ್ತಾರೆ. ಮತ್ತು ಕುಟುಂಬದ ಒಂದು ಕವಲು ಬೇರೆಡೆ ನೆಲೆಸುತ್ತದೆ. ಭವಿಷ್ಯದಲ್ಲಿ ಇವರ ಮಕ್ಕಳು ವೈವಾಹಿಕ ಜೀವನಕ್ಕೆ ಕಾಲಿಡುವಾಗ ತಮ್ಮ ಮೂಲ ತಾಯಿಯ ಸಂತತಿಯ ಮಕ್ಕಳನ್ನು ಮದುವೆಯಾಗುವ ಸಂದರ್ಭ ಎದುರಾಗುವುದನ್ನು ತಪ್ಪಿಸಲು ತುಳುವರ ಈ ಬಳಿ ವ್ಯವಸ್ಥೆ ಒಂದು ಅದ್ಭುತ ಪರಿಕಲ್ಪನೆ ಎಂದರೆ ತಪ್ಪಾಗಲಾರದು. ತಾಯಿಯ ಬಳಿ ಮಕ್ಕಳಿಗೆ ಬರುತ್ತದೆ. ಅಂದರೆ ಕೋಟ್ಯಾನ್ ಬಳಿಯ ತಾಯಿಯ ಮಕ್ಕಳಲ್ಲಿ ಹೆಣ್ಣು ಇದ್ದರೆ ಅಕೆ ಮುಖಾಂತರ ಬಳಿ ಮುಂದುವರಿಯುತ್ತದೆ. ಅಂದರೆ ಇಲ್ಲಿ ಸ್ತ್ರೀ ಪ್ರಧಾನವಾಗಿರುತ್ತಾಳೆ. ಅದರೆ ಇದು ಅಳಿಯ ಕಟ್ಟು ಎಂಬ ನಾಮಾಂಕಿತಕ್ಕೆ ಬಂದದ್ದು ಒಂದು ಕಾಲಾಂತರದಲ್ಲಿ ಆದ ಬದಲಾವಣೆ. ಇಂದಿಗೂ ತುಳುನಾಡಿನ ಹೆಣ್ಣಿಗೆ ತಮ್ಮ ಗಂಡನ ಮನೆಯಲ್ಲಿ ಯಾವುದೇ ಅಧಿಕಾರಿಗಳಿಲ್ಲ. ಹೊರ ಜಿಲ್ಲೆಗಳ ಪದ್ದತಿಯಾದ 'ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ' ಎಂಬ ಪದ್ಧತಿ ತುಳುನಾಡಿನಲ್ಲಿ ಇಲ್ಲ. ಇಲ್ಲಿ ಹೆಣ್ಣು ಮದುವೆಯಾಗಿ ಹೋದರೂ ಕೂಡ ಆಕೆಗೆ ತನ್ನ ತಾಯಿಯ ಮನೆಯಲ್ಲಿ ಅಧಿಕಾರವಿರುತ್ತದೆ. ಗಂಡನನ್ನು ಕಳೆದುಕೊಂಡ ಹೆಣ್ಣು ಮತ್ತೆ ತನ್ನ ತಾಯಿ ಮನೆಗೆ ಬರುವುದು ಇಲ್ಲಿನ ಪ್ರಾಚೀನ ಪದ್ದತಿ. ಇವೆಲ್ಲದಕ್ಕೆ ಬಳಿಪದ್ದತಿಯೇ ಮುಖ್ಯ ಸೂತ್ರ.
ಬಿಲ್ಲವರ 'ಬಳಿ' ಮೂಲಸ್ಥಾನಗಳು ಕಲಹ ಮತ್ತು ಅನ್ಯಕಾರಣಗಳಿಂದ ವಿಭಜನೆಗೊಂಡಿದ್ದಲ್ಲದೆ ಒಂದೇ ಬಳಿಗೆ ಬೇರೆ ಬೇರೆ ಹೆಸರುಗಳು ಸೃಷ್ಟಿಯಾಗಿ ಅನೇಕ ಗೊಂದಲಗಳು ಮತ್ತು ಚರ್ಚೆಗಳು ಉಂಟಾಗಿವೆ. ಇದಕ್ಕೆ ಒಂದು ವೇದಿಕೆ ಸೃಷ್ಟಿಯಾದರೆ ಇದರ ಬಗ್ಗೆ ಸರಿಯಾದ ನಿರ್ಧಾರಗಳು ಕೈಗೊಳ್ಳಲು ಸಾದ್ಯ. ಅದ್ದರಿಂದ ಈ ಬಗ್ಗೆ ಇಲ್ಲಿ ಹೆಚ್ಚಾಗಿ ಚರ್ಚೆಗೆ ಆಸ್ಸದ ಬೇಡ ಎಂಬ ನಿಟ್ಡಿನಲ್ಲಿ ಮುಂದುವರಿದು, ಬಿಲ್ಲವರ ಹದಿನಾರು ಬಳಿ,ಕೂಡು ಬಳಿ ಮತ್ತು ಅದಕ್ಕೆ ಸಂಬಂಧಿಸಿದ ನನಗೆ ಲಭ್ಯ ವಿರುವ ಕೆಲವು ಪ್ರಸಿದ್ಧ ಮೂಲಸ್ಥಾನಗಳನ್ನು ನೀಡಿದ್ದೇನೆ.
ಹದಿನಾರು ಬಳಿಗಳು ಮತ್ತು ಅವುಗಳ ಮೂಲಸ್ಥಾನಗಳು
1. ಸೋಮ ಬನ್ನಾಯ, ಚೋಮಣ್ಣಾಯ = ಸುವರ್ಣ
ಏದೊಟ್ಟು ಬರ್ಕೆ, ಕದ್ದೇಲು ಗುತ್ತು, ಕುರ್ತೋಡಿ ಗುತ್ತು, ದಲ್ಕಾಜೆ ಗುತ್ತು, ಶಂಭೂರು ಬಾವ, ಪೇರಿ ಗುತ್ತು, ಮರೋಳಿ ನಟ್ಟಿಲ್ಲು ಇತ್ಯಾದಿ.
2. ಕೋಟಿ ಬನ್ನಾಯ, ಕೋಟ್ಯನ್ನ = ಕೋಟ್ಯಾನ್
ಪಡ್ಯೋಡಿ ಬರ್ಕೆ, ಪುತ್ತಿಲ ಬರ್ಕೆ, ಕೊರಂಟ ಬೆಟ್ಟು ಗುತ್ತು, ಪುಂಚಾಡಿ ಬರ್ಕೆ, ಬೈಂದೂರು ಗುತ್ತು, ಮುರ್ತೊಟ್ಟು ಗುತ್ತು, ಮಾಗಂದಡಿ ನಾಯ್ಗರ ಮನೆ ಇತ್ಯಾದಿ
3. ಅಮ್ಮನ್ನ ಬನ್ನಾಯ, ಅಮ್ಮಣ್ಣ = ಅಮೀನ್
ಪಟ್ಟೆ ಭಂಡಾರಮನೆ, ಚಿಪ್ಪಾರು ಭಂಡಾರಮನೆ, ಹಳೆಯಂಗಡಿ ಬಂಕಿ ನಾಯ್ಗರ ಮನೆ, ಕೊರಜಿ ಗುತ್ತು, ಇತ್ಯಾದಿ.
4. ಕುಕ್ಕು ಬನ್ನಾಯ = ಕುಕ್ಯಾನ್
ಕೋಟೆಕಾರು ಭಂಡಾರಮನೆ ಇತ್ಯಾದಿ.
5. ಕರ್ಂಬೆರಣ್ಣ, ಕರ್ಕ ಬನ್ನಾಯ, ಕರ್ಂಬೆರಣ್ಣಾಯ= ಕರ್ಕೇರ
ಕುತ್ತಿಲ ಬರ್ಕೆ, ಅದಮ್ಮ ಗುತ್ತು, ತಿಂಗಳಾಡಿ ಗುತ್ತು, ಶಿಬಾರ್ಲ ಗುತ್ತು, ಪಡೆಂಕಿಲಮಾರು ಗುತ್ತು, ಪೆರಂಪಾಡಿ ಗುತ್ತು, ಇತ್ಯಾದಿ.
6. ಮುಂಡ್ಯತ್ತಣ್ಣ, ಮುಂಡ್ಯತ್ತ ಬನ್ನಾಯ = ಮುಂಡನ್ ಮುಂಡೇರಣ್ಣ
ದೇರಾಜೆ ಗುತ್ತು, ನಾಯಿಲ ಗುತ್ತು ಇತ್ಯಾದಿ.
7. ಬಂಗೇರ ಬನ್ನಾಯ, ಬಂಗಾರಣ್ಣ = ಬಂಗೇರ
ಮುಗ್ಗ ಗುತ್ತು, ಶಾಂತಿಲ ಗುತ್ತು, ಅಗತ್ತಾಡಿ ದೋಲ ಬಾರಿಕೆ, ಅಂಬ್ಡೇಲು ಗುತ್ತು, ಸಾವ್ಯ ಬರ್ಕೆ, ಕೊಂಬೆಲ್ ಗುತ್ತು, ಪಂರ್ದ ಗುತ್ತು, ಮಾಣಿಂಜ ಗುತ್ತು, ಹೇರೋಡಿ ಗುತ್ತು, ಇತ್ಯಾದಿ.
8. ಅಲಂಕಣ್ಣ, ಅಲೆಂಕಣ್ಣ,ಅಲಂಕ ಬನ್ನಾಯ = ಅಂಚನ್
ತರೋಳಿಮಾರ್ ಗುತ್ತು, ಅಬ್ಬಣ ಗುತ್ತು, ಪಂಜಾಜೆ, ಮೂಡಾಯಿ ಬರ್ಕೆ, ಇತ್ಯಾದಿ.
9. ಕಬೇರಣ್ಣ, ಕಂರ್ಬೆರ್, ಕಬೇರ ಬನ್ನಾಯ = ಕಬೇರ, ಕಂರ್ಬೇರ.
ಅರುವೆ ಗುತ್ತು, ಇತ್ಯಾದಿ.
10. ಮೂಲ್ಯರಣ್ಣ, ಮೂಲ್ಯರಣ್ಣಾಯ = ಮೂಲ್ಯನ್
ಹಲವಾರು ಮೂಲಸ್ಥಾನಗಳಿದ್ದು ಸದ್ಯಕ್ಕೆ ಲಭ್ಯವಿಲ್ಲ.
11. ಗಿಂಡೇರಣ್ಣ, ಗುಂಡಣ್ಣ, ಗುಂಡೇರಣ್ಣಾಯ = ಕುಂದರ್
ಮರಕ್ಕೂರು ಜನನ, ನೆಕ್ಲಾಜೆ ಗುತ್ತು, ಗುಡ್ಡೆ ಸಾನ ಬರ್ಕೆ, ಇತ್ಯಾದಿ
12. ಚನಿಲಣ್ಣ, ಕುಂಡಚ್ಚಣ್ಣ, ಚನಿಲಣ್ಣಾಯ = ಸನಿಲ್.
ಹಲವಾರು ಮೂಲಸ್ಥಾನಗಳಿದ್ದು ಸದ್ಯಕ್ಕೆ ಲಭ್ಯವಿಲ್ಲ.
13. ಚಾಲ್ಯಣ್ಣ, ಪಾಲನ್, ಸಾಲನ್, ಪಾಲನಬನ್ನಾಯ = ಸಾಲ್ಯಾನ್
ಕೊಮ್ಮಡ ಗುತ್ತು, ಪಾಲೆತ್ತಾಡಿ ಗುತ್ತು, ಕೇಲ್ದೋಡಿ ಗುತ್ತು, ಏಳ್ಕಾಜೆ ಗುತ್ತು, ನಾಲ್ಕೂರು ಗುತ್ತು, ಬಾರ್ಯ ಗುತ್ತು, ಕಿನ್ನಿಂಜೆ ಗುತ್ತು, ಕಲಾಯ ದೊಡ್ಡ ಮನೆ, ಇತ್ಯಾದಿ
14. ಗುಜ್ಜರ ಬನ್ನಾಯ, ಗುಜರಣ್ಣ = ಗುಜರನ್
ಮುಡಾಲು ಗುತ್ತು, ಬಡಕೋಡಿ ದೇವಸ, ಇತ್ಯಾದಿ.
15. ಬೊಲ್ಲೆ ಐತಣ್ಣ , ಬೊಲ್ಲೊಟ್ಟ ಬನ್ನಾಯ = ಪುಲ್ಯಟನ್
ಕೊಡಂಗೆ ಗಿರಿ, ಇತ್ಯಾದಿ
16. ಉಪ್ಪಿಯಣ್ಣ, ಬಾಗ್ಯೊಟನ್ನ, ಮಾಬಣ್ಣ, ಕಿರೋಡಿ ಬನ್ನಾಯ = ಉಪ್ಪಿಯನ್/ ಕಿರೋಡಿಯನ್.
ಕಡಂಬಾರು ಭಂಡಾರಮನೆ, ಕಡಮಾಜೆ ಗುತ್ತು, ಸುಜೀರು ಕಿರೋಡಿ ಬನ್ನಾಯ ಬರ್ಕೆ(ದೇಯಿ ಬೈದ್ಯೆದಿ ಚಾವಡಿ), ಬೆಜ್ಜ ಭಂಡಾರ ಮನೆ, ಸುಣ್ಣಾರ ಬೀಡು, ಅರಿಯಾಲ ಭಂಡಾರಮನೆ, ಇತ್ಯಾದಿ.
ಕೂಡು ಬಳಿಗಳು :
ಪೆರ್ಗಡೆ ಬನ್ನಾಯ = ಪೆರ್ಗಡೆ - ಬದನೆ ಗುತ್ತು, ಇತ್ಯಾದಿ
ಬುನ್ನಾಲ್, ಬುನ್ನನ್ - ಸಾಂತ್ಯ ಗುತ್ತು, ಪನೆಕಲ ಗುತ್ತು, ಇತ್ಯಾದಿ
ಶಿರೋಡಿಯನ್ - ಪಿಲವೂರು ಕೊಟ್ಯ, ಮುಡಾಯಿ ಬೆಟ್ಟು, ಇತ್ಯಾದಿ
ಜತ್ತನ್ - ಹಲವಾರು ಮೂಲಸ್ಥಾನಗಳಿದ್ದು ಸದ್ಯಕ್ಕೆ ಲಭ್ಯವಿಲ್ಲ.
ಇನ್ನು ಹಲವಾರು ಕೂಡು ಬಳಿಗಳು ಬಿಲ್ಲವರಲ್ಲಿ ಇದೆ.
ಬಳಿಗಳಲ್ಲಿ ಉಪ್ಪಿಯನ್ ಬಳಿಗೆ ನಾಲ್ಕು ರೀತಿಯ ಹೆಸರುಗಳಿದ್ದು ಕೆಲವರು ಈ ನಾಲ್ಕು ಬಳಿಗಳು ಬೇರೆ ಎಂದೂ ಇನ್ನು ಕೆಲವರು ಒಂದೇ ಎಂದೂ ಹೇಳುತ್ತಾರೆ. ಬಾಗ್ಯೊಟ್ಟನ್ ಮತ್ತು ಉಪ್ಪಿಯನ್ ಬಳಿಗಳು ಕೆಲವು ಅನ್ಯ ಜಾತಿಗಳಲ್ಲಿ ಬೇರೆ ಬೇರೆಯಾಗಿ ಗುರುತಿಸಿಕೊಂಡಿದೆ. ಹಾಗೆ ಮಾಬಿಯನ್ ಬಳಿಯೂ ಬೇರೆಯೆ ಬಳಿ ಎಂದು ಕೆಲವರು ಹೇಳುತ್ತಾರೆ. ಬಾಗ್ಯೊಟ್ಟನ್ ಬಳಿ ಮತ್ತು ಸುವರ್ಣ ಬಳಿ ಒಂದೇ ಎಂಬ ಮಾತೂ ಇದೆ. ಆದರೆ ಹದಿನಾರು ಬಳಿಗಳಲ್ಲಿ ಮೇಲೆ ಕೊಟ್ಟಿರುವ ಬಳಿಗಳು ಬಹಳ ಮುಖ್ಯವಾಗಿ ಗುರುತಿಸಿಕೊಂಡಿದೆ. ಇನ್ನು ಬೈದೇರುಗಳ ತಾಯಿ ದೇಯಿ ಬೈದೆದಿಯ ಪಾರ್ದನದಲ್ಲಿ ಉಪ್ಪಿಯನ್ ಬಳಿಗೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಹೆಸರಿದೆ ಎಂಬ ಉಲ್ಲೇಖವನ್ನು ಶ್ರೀ ರಮಾನಾಥ್ ಕೋಟೆಕಾರ್ ಅವರ 'ತುಳುನಾಡಿನ ಬಿಲ್ಲವರು' ಕೃತಿಯಲ್ಲಿ ಗಮನಿಸಬಹುದು.
ಆ ಪಾರ್ದನದ ಭಾಗ :
ಮೂಡಾಯ ದೇಸೊಡು ಮಾಬು ಬನ್ನಾಲ್
ಪಡ್ಡಾಯಿ ದೇಸೊಡು ಉಪ್ಪಿ ಬನ್ನಾಲ್
ಬಡಕಾಯಿ ದೇಸೋಡು ಬಾಗೇಟ್ಟನ್ನಾಲ್
ತೆನ್ಕಾಯಿ ದೇಸೋಡು ಕಿರೋಡಿ ಬನ್ನಾಲ್
ಈ ಪಾರ್ದನದ ಸನ್ನಿವೇಶವು ದೇಯಿ ಬೈದೆತಿಗೆ ಕಾಂತನ ಬೈದ್ಯರೊಂದಿಗೆ ಮದುವೆ ಮಾಡುವ ಸಂದರ್ಭವಾಗಿದೆ.
ಆ ಸಮಯದಲ್ಲಿ ಆಕೆಯ ಬಳಿ ಯಾವುದೆಂದು ಕೇಳಿದಾಗ ಆಕೆ ಮೇಲಿನ ಸಾಲುಗಳನ್ನು ಹೇಳಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಹೆಸರನ್ನು ಪಡೆದಿರುವ ಉಪ್ಯಾನ್ ಅಥವಾ ಕಿರೋಡಿಯನ್ ಬಳಿಯೇ ನನ್ನ ಬಳಿ ಎಂದು ಹೇಳುತ್ತಾಳೆ. ಆಕೆ ಕಿರುಬೆರಳಿನಲ್ಲಿ(ಕಿನ್ನಿ ಬೆರೆಲ್) ನಲ್ಲಿ ನಾಲ್ಕು ಗೆರೆ ಹಾಕಿ ಹೇಳಿದ್ದರಿಂದ ಉಪ್ಯಾನ್ ಬಳಿಗೆ ಕಿರೋಡಿಯನ್ ಎಂಬ ಹೆಸರು ಬಂತು ಎಂಬ ಮಾತಿದೆ. ಒಟ್ಟಾರೆ ಬಿಲ್ಲವರ ಬಳಿಯ ಮೂಲ ಕೆದಕಿದಾಗ ಹಲವಾರು ಗೊಂದಲಗಳು ಎದುರಾಗುತ್ತದೆ. ಯಾವ ಇತಿಹಾಸ ಅತೀ ಪ್ರಾಚೀನವಾಗಿರುತ್ತದೊ ಅದರಲ್ಲಿ ಗೊಂದಲಗಳು ಸಹಜ ಅಂತೆಯೇ ಬಿಲ್ಲವ ಇತಿಹಾಸದಲ್ಲಿ ಬಳಿ ವ್ಯವಸ್ಥೆಯ ಮೂಲ ಬೇರು ತನ್ನ ಚಾಪನ್ನು ಹಲವೆಡೆ ಹರಡಿಕೊಂಡಿದ್ದು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳುವುದು ಅಸಾಧ್ಯ.
ಪರಾಮರ್ಶನ ಕೃತಿಗಳು -
ತುಳುವರ ಯುಗಯಾತ್ರೆ : ರವಿ. ರಾ ಅಂಚನ್
ತುಳುನಾಡ ಬಿಲ್ಲವರು : ರಮಾನಾಥ್ ಕೋಟೆಕಾರ್.
_____ _______________ ___________
ಕೆಲವು ಬರಿತ ಪೊಲಬು-ಚಂದು ಪೂಜಾರಿ
1.ಪೆರ್ಗಡೆಣ್ಣ,ಪೆರ್ಗಡೆ ಬರಿ:-
ಬಂಟ್ವಾಳ ತಾಲೂಕು:-
1.ಕರ್ಲ ಬೀಡು ಮತ್ತು
2.ಕೆರ್ಯಾ ಗುತ್ತು
( ಎರಡು ಕೂಡ ತೆಂಕ ಕಜೆಕಾರು ಗ್ರಾಮ ಪಾಂಡವರಕಲ್ಲು)
ಬೆಳ್ತಂಗಡಿ ತಾಲೂಕು:-
1.ಸುಣ್ಣಾಜೆ ಗುತ್ತು (ಬಾರ್ಯ ಗ್ರಾಮ)
2.ಕರಂಗೀಲು ಗುತ್ತು(ತಣ್ಣಿರುಪಂತ ಗ್ರಾಮ)
3.ಬಜಿರೆ ಗುತ್ತು(ಬಜಿರೆ ಗ್ರಾಮ)
ಕೆಲವು ಕೂಡು ಬರಿಕುಲ್ನ ಪೊಲಬು-ಜಾನು ಬಿರ್ವ
No comments:
Post a Comment