Thursday, 29 September 2011

ಬಂಜೆತನ ಹೆಣ್ಣಿಗೆ ಶಾಪವೇ?

              ಬಂಜೆತನ ಹೆಣ್ಣಿಗೆ ಶಾಪವೇ?
  

     ಹೆಣ್ಣಿಗೆ ಸಮಾಜದಲ್ಲಿ ಬದುಕಲು ಪುರುಷನಷ್ಟೇ ಸ್ವಾತಂತ್ರ್ಯದ ಹಕ್ಕಿದೆ ಎಂದರೂ ಅವಳಿಗದು ಪೂರ್ಣ ಪ್ರಮಾಣದಲ್ಲಿ ಇನ್ನೂ ಲಭಿಸಿಲ್ಲ.ಮದುವೆಯ ಆಯ್ಕೆ ಬಂದಾಗಲೂ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಭಾಗ್ಯ ನೂರರಲ್ಲಿ ಒಂದೆರಡು ಶೇಕಡಾ ಹೆಣ್ಣು ಮಕ್ಕಳಿಗೆ ಇರಬಹುದಷ್ಟೆ.ಕೆಲವೊಮ್ಮೆ ಧೈರ್ಯದಿಂದ ಮನೆಯಲ್ಲಿ ಧ್ವನಿಯೆತ್ತಲು ಪ್ರಯತ್ನಿಸಿದರೂ ಅವಳ ಬಾಯಿ ಮುಚ್ಚಿಸುವವರೇ ಜಾಸ್ತಿ.ಮುಸ್ಸಂಜೆಯ ಬಳಿಕ ಹೆಣ್ಣೊಬ್ಬಳು ರಸ್ತೆಯಲ್ಲಿ ನಡೆದಾಡಲು ಹೆದರುತ್ತಾಳೆ ಎಂದರೆ ಎಲ್ಲಿ ಆಕೆಯ ಬದುಕಿಗೆ ಭದ್ರತೆ ದೊರಕಿದೆ?. ಹೆಣ್ಣೊಬ್ಬಳು ರಬ್ಬರಿನ ದಾರದಂತೆ ಆಕೆಯನ್ನು ಹೇಗೆ ಎಳೆದರೂ ಮತ್ತೆ ಸಂಕುಚಿತಗೊಳ್ಳುತ್ತಾಳೆ‌.ಹಾಗಾಗಿಯೇ ಪುರುಷ ಪ್ರಧಾನ ವ್ಯವಸ್ಥೆ ಆಕೆಯನ್ನು ಹೊಗಳಿ ಹೊನ್ನ ಶೂಲಕ್ಕೇರಿಸುವ ಮೂಲಕ ಸಂಕುಚಿತ ಮನೋಭಾವದಿಂದ ಆಕೆಯನ್ನು ನೋಡುವುದು ರೂಢಿಯಾಗಿ ಬಿಟ್ಟಿದೆ.ಉದ್ಯೋಗದ ಆಯ್ಕೆ ಮಾಡುವಾಗಲೂ ಮಗನ ಮತ್ತು ಮಗಳನ್ನು ಉದ್ಯೋಗಕ್ಕೆ ಸೇರಿಸುವಲ್ಲಿ ಕೆಲವೊಂದು ಚೌಕಟ್ಟುಗಳನ್ನು ಹಾಕುವವರೂ ಇದ್ದಾರೆ.ವಿದ್ಯಾಬ್ಯಾಸದ ಸಂದರ್ಭದಲ್ಲಿ ನೀನು ಓದಿ ಏನು ಸಾಧನೆ ಮಾಡುವುದಿದೆ,ಎಷ್ಟಾದರೂ ಅಡುಗೆ ಮನೆಯೇ ನಿನ್ನ ಸರ್ವಸ್ವ ಎನ್ನುವವರೂ ಇದ್ದಾರೆ.ಗಂಡು ಹೊರ ಹೋಗಿ ಕೆಲಸ ಮಾಡಿ ರಾತ್ರಿ ಬಂದರೂ ಕೇಳದವರು ಹೆಣ್ಣು ಮನೆಗೆ ಬರುವಾಗ ಸ್ವಲ್ಪ ತಡವಾದರೂ ಚಡಪಡಿಸುತ್ತಾರೆ.ಮದುವೆಯಾದ ಮೆಲೆ ಗಂಡ ಮನೆಯಲ್ಲಿದ್ದು ಹೆಂಡತಿ ಉದ್ಯೊಗದಲ್ಲಿದ್ದರೆ ಅವಳು ಮನೆ ಸೇರುವುದು ತಡವಾದರೆ ಅವಳ ನಡತೆಯ ಬಗೆಗೆ ಪ್ರಸ್ನಿಸುವವರೇ ತುಂಬಿಹೋಗಿದ್ದಾರೆ .ಒಬ್ಬಾಕೆ ಸ್ತ್ರೀಯನ್ನು ಯಾವುದೋ ಒಂದು ರೀತಿಯಿಂದ ತನ್ನ ಬಲೆಗೆ ಬೀಳಿಸಿ  ಆಕೆಯನ್ನು ದೈಹಿಕವಾಗಿ ಬಳಸಿ ಮುಂದೆ ಆಕೆಗೆ ಹಣದ ಆಮಿಷವೊಡ್ಡಿ ತಮ್ಮ ಗೆಳೆಯರಿಗೆ ಆಕೆಯನ್ನು ಬಲವಂತವಾಗಿ ಕೊಟ್ಟು ಕೊನೆಗೆ  ಆಕೆಗೆ ಕೊಡುವ ಬಿರುದು ವ್ಯಭಿಚಾರಿಯೆಂದು. ಇದು ಅವಳಾಗಿಯೇ ಮಾಡಿಕೊಂಡ ವ್ಯವಸ್ಥೆಯಲ್ಲ .ಪುರುಷ ಪ್ರಧಾನ ವ್ಯವಸ್ಥೆ ಆಕೆಯನ್ನು ನಂಬಿಸಿ ತನ್ನ ಬಲೆಗೆ ಬೀಳಿಸಿದ ಪರಿಯಿದು.ಇದರಲ್ಲಿ ಪರಿತಪಿಸುವುದು ಹೆಣ್ಣುಮಕ್ಕಳು.ಯಾವುದೇ ಕಡಿಮೆ ಉಡುಗೆ ತೊಡುಗೆ ತೊಟ್ಟ ಹೆಣ್ಣು ಮಕ್ಕಳಿಗಿಂತ ಸಂಪೂರ್ಣ ಮೈಮುಚ್ಚಿಕೊಂಡವರೆ ಕಾಮುಕರ ಬಲೆಗೆ ಬಿದ್ದು ಜೀವಂತ ಶವವಾಗಿರುವುದು.ಹಾಗಾಗದಂತೆ ಹೆಣ್ಣೊಬ್ಬಳು ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಎಚ್ಚರ ವಹಿಸಬೇಕಾದದ್ದು ಅನಿವಾರ್ಯ .ಯಾವ ಕ್ಷೇತ್ರದಲ್ಲೂ ಆಕೆ ಗಂಡಿಗಿಂತ ಕಡಿಮೆಯಿಲ್ಲ .ಆದರೆ ಪ್ರೀತಿಯ  ಭಾವನೆಯ ಸಂಕೋಲೆಯಲ್ಲಿ ಹಿಂದು ಮುಂದು ನೋಡದೆ ಮೈ ಮನಗಳನ್ನು ನೀಡಿ ಅಪಾಯಕ್ಕೆ ಸಿಲುಕಿಕೊಳ್ಳುವವಳು ಅವಳೇ.                                      ಹೀಗೆಲ್ಲ ಯಾತನೆಗಳನ್ನು ಅನುಭವಿಸಿರುವ ಹೆಣ್ಣಿಗೆ ಒಂದೊಮ್ಮೆ ಬಂಜೆತನವೂ ಬದುಕಲ್ಲಿ  ಕಾಡುವುದುಂಟು.ಕೆಲವೊಮ್ಮೆ ಬಂಜೆತನ ಆಕೆಯಲ್ಲಿದ್ದರೆ ಆಕೆಯನ್ನು ಯಾವುದಕ್ಕೂ ಉಪೊಗಕ್ಕಿಲ್ಲದವಳೆಂದು ಭಾವಿಸುವವರೇ ಜಾಸ್ತಿ .ಹೆಣ್ಣಿನಲ್ಲಿ ಯಾವುದೇ ದೋಷ ಇಲ್ಲದಿದ್ದರೂ ಗಂಡಿನಲ್ಲಿ ನ್ಯೂನತೆಯಿದ್ದರೂ ನೋವು,ಸಂಕಟ ,ಅಪಮಾನ ಎದುರಿಸುವವಳು ಹೆಣ್ಣೇ .ಮದುವೆಯಾಗಿ ಕೆಲವರು  ಮೋಜಿಗಾಗಿ ಮಕ್ಕಳು ಸ್ವಲ್ಪ ನಿಧಾನ ಆಗಲಿ ಎಂದು ಅಸಡ್ಡೆ ಮಾಡ್ತಾರೆ.ಕೆಲವೊಮ್ಮೆ ಹೆಣ್ಣು ಗರ್ಭ ಧರಿಸಿದರೂ ಅವಳ ಗಂಡ ಮಗು ಈಗ ಬೇಡವೆಂದು ಹೇಳಿ ಬ್ರೂಣವನ್ನೇ ತೆಗೆಸುವುದೂ ಉಂಟು .ಕೆಲವೊಮ್ಮೆ ಲೋಕದ ದೃಷ್ಟಿಗೆ ಆತನಿಗೆ ಹೆಂಡತಿ ಹೆಸರಿಗೆ ಮಾತ್ರ ಇದ್ದು ಆತನಿಗೆ ಬೇರೆ ಹೆಣ್ಣಿನ ಸಂಪರ್ಕ ಇರುವುದೂ ಉಂಟು .ಅದನ್ನೂ ಪ್ರಸ್ನಿಸದೆ,ಸಮಾಜಕ್ಕೆ ಹೆದರಿ  ಮದುವೆಯಾದ ತಪ್ಪಿಗೆ ಇದನ್ನೆಲ್ಲಾ ಸಹಿಸಿಕೊಂಡು ಜೀವನ ಸವೆಸುವ ಹೆಣ್ಣು ಮಕ್ಕಳೂ ಇದ್ದಾರೆ. ಗಂಡಸರು ಹೊರಗಡೆ ಹೆಚ್ಹಾಗಿ ದುಡಿಯುತ್ತಿರುತ್ತಾರೆ.ಮದುವೆಯಾದ ಹೆಣ್ಣು ಮಕ್ಕಳು ಹೆಚ್ಹಾಗಿ ಮನೆಯಲ್ಲಿರುತ್ತಾರೆ.ಕೆಲವೊಮ್ಮೆ ಅತ್ತೆಯ ಸ್ಥಾನದಲ್ಲಿರುವ ಹೆಣ್ಣಿಗೆ ಎಲ್ಲವನ್ನೂ ತೊರೆದು ಗಂಡನ ಮನೆಯೇ ಸರ್ವಸ್ವವೆಂದು ನಂಬಿ ಬಂದ  ಹೆಣ್ಣಿನ ನೋವು ,ಸಂಕಟ ತಿಳಿಯದೆ ಸೊಸೆಗೆ ಹಿಂಸೆ ಕೊಡುವುದೂ ಇದೆ .ಮದುವೆಯಾಗಿ ಒಂದೆರಡು ವರ್ಷ ಮಕ್ಕಳು ಅಗದೆ ಆಕೆ ಬದುಕು ಕಳೆದರೆ ಸಾಕು ಮದುವೆಗೆ ಹೋದಲ್ಲಿ ಬಂದಲ್ಲಿ ಹೆಂಗಸರು,  "ಮದುವೆಯಾಗಿ ಎರಡು ವರ್ಷವಾದರು ಏನು ಹೊಟ್ಟೆಯಲ್ಲಿ ಒಂದು ಮಗು ಯಾಕೆ ಹುಟ್ಲಿಲ್ಲ ,ಏನು ಕತೆ ? "ಎಂದೆಲ್ಲ ಪ್ರಶ್ನಿಸಲು ಶುರು ಮಾಡ್ತಾರೆ ಆಗ ಆ ಹೆಣ್ಣಿನ ಸಂಕಟ ಎಷ್ಟಿರಬಹುದು ನೀವೇ ಊಹಿಸಿ .ವೈದ್ಯರಲ್ಲಿ ಹೋದಾಗ  ಮಗು ಆಗಲು ಹೆಣ್ಣಿಗೆ ತೊಂದರೆ  ಇಲ್ಲ  ಗಂಡನದೆ ತೊಂದರೆ ಎಂದು ತಿಳಿದರೂ ಆ ಹೆಣ್ಣು ಮಗಳು  ಯಾರಲ್ಲೂ ಏನನ್ನೂ ಬಾಯಿ ಬಿಡದೆ ನೋವನ್ನು ಮನದಲ್ಲೆ ಅದುಮಿಟ್ಟುಕೊಂಡಿರುತ್ತಾಳೆ.ಆಕೆಗೆ ಆತನ ಶ್ರೇಯಸ್ಸು ಮುಖ್ಯ .ಆದ್ರೆ ತನ್ನಲ್ಲಿ ಕೊರತೆಯಿದ್ದರೂ ತನ್ನ‌ ಹೆಂಡತಿಯಲ್ಲಿ ನ್ಯೂನತೆ ಇಲ್ಲದಿದ್ದರೂ ಅತ ಸರಿಯಾಗಿ ಅಕೆಯನ್ನು ಅರ್ಥ ಮಾಡಿಕೊಳ್ಳದೆ .ತನ್ನ ಗೆಳೆಯರಲ್ಲಿ " ಆಕೆ ಗೊಡ್ಡು  ಮಾರಾಯ ,ಯಾಕಾದ್ರೂ ಆಕೆಯನ್ನು ಮದುವೆಯಾದ್ನೋ " ಎಂದೆಲ್ಲಾ ಹೀಯಾಳಿಸುತ್ತಾನೆ.ಎಲ್ಲರೂ ಆಕೆಯನ್ನು "ನೀನು ಬಂಜೆ "ಎಂದು ಹೀಯಾಳಿಸಿದರೆ ತನ್ನದಲ್ಲದ ತಪ್ಪಿಗೆ ಆಕೆ ಹರಕೆಯ ಕುರಿಯಂತಾಗುವುದು ದುರಂತ .                                                               ಹೀಗಾದಾಗ ಕೆಲವೊಮ್ಮೆ ಆಕೆ ಮಾನಸಿಕ ಖಿನ್ನತೆಯಿಂದ ಬೇರೆಯವರ ಮಕ್ಕಳನ್ನು ನೋಡುವಾಗ  ಸಿಟ್ಟಾಗುವುದೂ ಇದೆ .ಕೆಲವೊಮ್ಮೆ ಅವಳ ಗೆಳತಿಯರು ತಾವು ಹೆತ್ತ ಮಕ್ಕಳನ್ನು ಮುತ್ತಿಟ್ಟು ಮುದ್ದಾಡುವಾಗ ಮನದೊಳಗೆ ನೋವನುಭವಿಸಿ ಕಣ್ಣೀರಿಡುವುದುಂಟು .ಮಾನಸಿಕವಾಗಿ ಕಿರಿಕಿರಿಯಾಗಿ ತನ್ನ ತಾಳ್ಮೆಯ ಕಟ್ಟೆಯೊಡೆದಾಗ ಹುಚ್ಚಿಯಂತೆ ವರ್ತಿಸುವುದೂ ಉಂಟು. .ಕೆಲವೊಮ್ಮೆ ನನ್ನಿಂದ ಯಾರಿಗೂ ಏನೂ ಪ್ರಯೋಜನ ಇಲ್ಲವೆಂಬ ಭಾವನೆ ಆಕೆಯಲ್ಲಿ ಮೂಡಿದಾಗ ಆಕೆ ಆತ್ಮ ಹತ್ಯೆಗೂ ಶರಣಾಗುವುದುಂಟು.ಹಾಗಾಗದಂತೆ ತಡೆಯಲು ಆಕೆಯ ಬದುಕಿನ ಸುತ್ತ ಮುತ್ತಲಿರುವ ಸ್ನೇಹಿತರು,ಬಂದು ಬಳಗದವರು ಆಕೆಯ ಮಾನಸಿಕ ನೋವನ್ನು ದೂರವಿರಿಸಲು ಮಾನವೀಯ ನೆಲೆಯಿಂದ ಪ್ರಯತ್ನಿಸಬೇಕು .ಹೆಣ್ಣಿಗೆ ಆದಷ್ಟು ತಾಳ್ಮೆಯ ಪಾಠವನ್ನು ನೀಡುವ ಮೂಲಕ ಆಕೆಯಲ್ಲಿ ಆತ್ಮಸ್ಥೈರ್ಯ ಮೂಡುವಂತೆ ಮಾಡಬೇಕು.ನೊಂದ ಒಡಲಿಗೆ ಮತ್ತೂ ನೋವನ್ನು ನೀಡದೆ ಆಕೆಗೆ ಸಾಂತ್ವಾನ ನೀಡಿ,ಧೈರ್ಯ ತುಂಬಿ ಸಮಾಜದಲ್ಲಿ ಬದುಕುವ ಅವಕಾಶ ಕೊಡಬೇಕು .ಇಲ್ಲಿ ಆಕೆಗೆ ಸಮಾಜಕ್ಕಿಂತ ಗಂಡನ ಪ್ರೀತಿ ,ನೈತಿಕ ಬಲ,ಮನೆಯವರ ಪ್ರೀತಿ ಮುಖ್ಯವಾಗುತದೆ .                                             ಶಾರೀರಕವಾಗಿ ಗಂಡು ಹೆಣ್ಣಿನ ನಡುವೆ ವ್ಯತ್ಯಾಸವಗಳಿದ್ದರೂ ಮನೋ ಬಾವನೆಗಳು ಗಂಡು ಹೆಣ್ಣಿನಲ್ಲಿ ಸಮಾನವಾಗಿರುತ್ತವೆ. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ, ಹೆರುವ ಯಂತ್ರವಾಗಿ ನೋಡದೆ ಅಕೆಗೂ ಒಂದು ಮನಸ್ಸಿದೆ,ಆಕೆಯಲ್ಲೂ  ಭಾವನೆಗಳಿವೆ ಎಂಬುದನ್ನು ಅರ್ಥವಿಸಿ ನೋಡಿದಾಗ  ಆಕೆಗೆ ಗಂಡನೇ ಮಗುವಾಗುತ್ತಾನೆ ,ಗಂಡನಿಗೆ ಆಕೆ ಮಗುವಾಗುತ್ತಾಳೆ .ಆಗ ಅವರಿಬ್ಬರ ನಡುವೆ ವಿರಸ ಬರದು .ಶೂನ್ಯದಲ್ಲಿ ಹತಾಶೆ ಹುಟ್ಟಿಕೊಳ್ಳುವುದು , ಅಗಲೇ ಬದುಕಿನಿಂದ ಅಕೆ ವಿಮುಖಳಾಗಲು ಪ್ರಯತ್ನಿಸುವುದು. .ಹಾಗಾಗದಂತೆ
ಆಕೆಯನ್ನು ಉದ್ಯೋಗಕ್ಕೆ ಸೇರಿಸಿದಾಗ ಹೊಸ ವಾತಾವರಣದಲ್ಲಿ ಆಕೆ ಸ್ವಲ್ಪ ಚೆತರಿಸಿಕೊಳ್ಳುತಾಳೆ .ಮದುವೆಯಾಗಿ ಬಹಳಷ್ಟು ವರ್ಷಗಳಾದರೂ ಮಗುವಾಗದ ಹೆಣ್ಣೊಬ್ಬಳು ಮನೆ ಮುಂದೆ ಕುಳಿತಿದ್ದಾಗ ಭಿಕ್ಷುಕಿಯೊಬ್ಬಳು ಅಮ್ಮಾ ಎಂದು ಕರೆದಾಗ ಆಕೆಗಾಗುವ ಸಂತೋಷ ಅಷ್ಟಿಷ್ಟಲ್ಲ.ಅಮ್ಮಾಎಂಬ ಪದದ ಆಳವೇ ಅಷ್ಟು.ಹೆಣ್ಣೊಬ್ಬಳು ಮಗುವನ್ನು ದತ್ತು ತೆಗೆದುಕೊಳ್ಳುವ ಮೂಲಕ ತಾಯಿಯೆಂಬ ಪದಕ್ಕೆ ಪರಿಪೂರ್ಣತೆಯನ್ನು ಆಕೆ ಪಡೆಯುತ್ತಾಳಲ್ಲದೆ ಬಂಜೆ ಎನ್ನುವ ನೋವಿನಿಂದ ಮುಕ್ತಿ ಪಡೆಯಬಹುದು .ಒಟ್ಟಿನಲ್ಲಿ "ಯತ್ರ  ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಹ " ಎನ್ನುವಂತೆ ಹೆಣ್ಣನ್ನು ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ .

   




  
 hare 

No comments:

Post a Comment