Thursday, 13 October 2022

ಅಮ್ಮನೆಂದರೆ-ಕನ್ನಡ ಭಾವಗೀತೆ

                       "ಅಮ್ಮನೆಂದರೆ'

                        ಕನ್ನಡ ಭಾವಗೀತೆ

  


ಏಸು ಜನುಮವು ಜನಿಸಿ ಬಂದರು

ಋಣವ ತೀರಿಸಲಾದಿತೆ

ಒಂದೆ ಅಪ್ಪುಗೆ ಸಾಕು ಅಮ್ಮನ

ಜೀವ ಚೇತನವಾದಿತೆ

ಪ್ರಾಣ ಒತ್ತೆ ಇಟ್ಟು ಎನಗೆ

ಜನುಮ ನೀಡಿದ ಮಾತೆಯ

ಒಂದೆ ಮಡಿಲು ಸಾಕು ಅಮ್ಮನ

ಸತ್ಯ ಸುಂದರ ಶಾಂತಿಯ


ಅಮ್ಮನೆಂದರೆ ಅರಿವು ಗುರುವು

ಗುಡಿಯೆ ಇಲ್ಲದ ದೇವರು

ಅಂತರಂಗದಿ ಕಪಟವಿಲ್ಲದ

ಅಮ್ಮನಿಗೆ ಸಮ ಯಾವರು

ಅಮ್ಮ ಹಾಡಿದ ಲಾಲಿ ಹಾಡಲಿ

ಅಳುವ ಮರೆಸಿದ ನಗುವಿದೆ

ಅಮ್ಮ ಎಂದು ಕೂಗಿ ಕರೆಯಲು

ಹಾಲು ಜೇನಿನ ಸವಿಯಿದೆ


ನಡೆದರೆಡವಲು ಕೈಯ ಹಿಡಿದು

ನಡೆಸಿದಮ್ಮನ ಸಹನೆಯ

ಮರೆಯಲುಂಟೇ ನೋವಿನಲ್ಲೂ

ನಗುತ ಬಾಳಿದ ಮಾತೆಯ

ಕರುಳ ಬಳ್ಳಿಯ ಕಡಿದರೇನು

ಅಮ್ಮನುಸಿರೀ ದೇಹದೀ

ತನ್ನ ದೇಹದ ರಕುತವನ್ನು

ಕುಡಿಸಿ ಹಾಲಿನ ರೂಪದಿ


ಮುತ್ತು ಮಮತೆಗೆ ತುತ್ತು ಹಸಿವಿಗೆ

ಅಮ್ಮ ಒಬ್ಬಳು ಜೊತೆ ಇರೆ

ಜಗವು ನನ್ನನು ನೂಕಿ ಬಿಡಲಿ

ಅಮ್ಮ ನನಗೆ ಆಸರೆ

ತನಗೆ ಏನನು ಬಯಸಿ ಬೇಡದ

ಅಮ್ಮ ಕರುಣೆಯ ಸಾಗರ

ತನಗೆ ಇಲ್ಲ ಎಂದು ಕೊರಗದ

ಅಮ್ಮ ದೇವರ ಮಂದಿರ


ಸ್ವಾರ್ಥವಿಲ್ಲದ ಅರ್ಥ ಮೀರಿದ

ನಮಗೆ ಒಬ್ಬಳೆ ತಾಯಿಯು

ಸೋಲು ಗೆಲುವಲಿ ಜೊತೆಗೆ ನಿಂತ

ಅಮ್ಮ ಸಹನೆಯ ಮೂರ್ತಿಯು

ತಾಯಿ ಇಲ್ಲದೆ ಜನುಮವಿಲ್ಲ

ಜೀವ,ತುತ್ತನು ಕೊಟ್ಟಳು

ನನ್ನ ದೇಹವು ಮಣ್ಣಿಗಾದರು

ಉಸಿರು ಅಮ್ಮಗೆ ಮೀಸಲು.


ಕವಿ-ಕೆ.ಮಹೇಂದ್ರ ನಾಥ್ ಸಾಲೆತ್ತೂರು.ಎಂ.ಎ

-ಕಾವ್ಯಸುತ-

No comments:

Post a Comment