Saturday, 15 October 2011

ಹೆಣ್ಣನ್ನು ಮನೋದೌರ್ಬಲ್ಯದಿಂದ ದೂರವಿರಿಸಿ

          ಹೆಣ್ಣು ಕೇವಲ ಹೆರುವ ಯಂತ್ರವಲ್ಲ .ಆಕೆಗೂ ಒಂದು ಮನಸ್ಸಿದೆ .ಆದರೆ ಆಕೆಯ ಮನಸ್ಸು ಸೂಕ್ಷ್ಮವಾಗಿ ಭಾವನಾತ್ಮಕವಾಗಿರುತದೆ .ಆಕೆ ಆತ್ಮೀಯತೆಯನ್ನು ಬಯಸುತ್ತಾಳೆ, ಪ್ರೀತಿಯಿಂದ ಎಲ್ಲರನ್ನೂ ಗೌರವಿಸುತ್ತಾಳೆ . ತನ್ನ ಪೋಷಕರ ಆ ಮೇಲೆ ತನ್ನ ಗಂಡನ ತದನಂತರ ಮಕ್ಕಳ ಪ್ರೀತಿಗಾಗಿ ಹಂಬಲಿಸುತ್ತಾಳೆ .ಅವಳಿಗೆ ಐಶ್ವರ್ಯದ ಅಗತ್ಯವಿರುವುದಿಲ್ಲ ,ಹಣದ ಆಮಿಶವಿರುವುದಿಲ್ಲ ,ಆಕೆ ಬಯಸುವುದು ಮುಗ್ಧ ಪ್ರೀತಿಯನ್ನು.ಅವಳು ಸರ್ವಸ್ವವನ್ನೂ ಮರೆತು ಗಂಡ ಹಾಗೂ ತಾನು ಕಾಲಿಟ್ಟ ಮನೆ ಮಂದಿಯೆಲ್ಲ ತನ್ನವರೆಂದು ತಿಳಿದು ಬದುಕುತ್ತಾಳೆ.ಅವಳನ್ನು ಅರ್ಥೈಸಿ ಅವಳಿಗೆ ಧೈರ್ಯ ತುಂಬುವುದು ನಮ್ಮೆಲ್ಲೆರ ಆದ್ಯ ಕರ್ತವ್ಯವಾಗಿದೆ.ಯಾಕೆಂದೆ ತಂದೆ ತಾಯಿ ಕುಟುಂಬ ಸಂಸಾರವನ್ನು ತೊರೆದು ಆಕೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಬಹಳಷ್ಟು ಕಾಲ ಹಿಡಿಯುತ್ತದೆ.ತನ್ನ ಬಾಲ್ಯದ ಆ ಹಿಂದಿನ ಬದುಕಿನ ನೆನಪು ಅವಳ ಮನಸಲ್ಲಿ ಬಂದು ಹೋಗುತ್ತಿರುತ್ತದೆ.ಅಂತಹ ಒಳ್ಳೆಯ ಆರೋಗ್ಯಕರ ವಾತಾವರಣವನ್ನು ಗಂಡನ ಮನೆಯವರು ಕಲ್ಪಿಸಿಕೊಟ್ಟರೆ ಇಲ್ಲಿಗೆ ಹೊಂದಿಕೊಳ್ಳಲು ಆಕೆ ಪ್ರಯತ್ನಿಸುತ್ತಾಳೆ . ಅವಳ ಮನಸ್ಸಲ್ಲಿ ಶೂನ್ಯ ಭಾವನೆ ಬರಲು,ಏಕಾಂಗಿತನ ಕಾಡಲು ಗಂಡನ ಮನೆಯವರು ಬಿಡಬಾರದು .ಆಕೆ ಮಂಕಾಗಿರದಂತೆ ಅವಳನ್ನು ನೋಡಿಕೊಳ್ಳುವುದು ಆಕೆಯ ಮನೆಮಂದಿಯ ಆದ್ಯ ಕರ್ತವ್ಯ .                                              ಹೆಣ್ಣನ್ನು ಕನ್ಯಾದಾನ ಎಂದು ಧಾರೆಯೆರೆದು ಕೊಡುತ್ತಾರೆ.ದಾನ ಎಂಬುದಕ್ಕೆ ಅತ್ಯಂತ ಉನ್ನತವಾದ,ಉತ್ಕೃಷ್ಟವಾದ,ಸುಂದರವಾದ ಪವಿತ್ರವಾದ,ಸಂಭ್ರಮದ,ಸಂತೋಷದ ವಾತಾವರಣದ ಶ್ರೇಷ್ಠ ಅರ್ಥವಿದೆ.ಕನ್ಯಾದಾನವೆಂದರೆ ಹೆಣ್ಣಿಗೆ ಮಾಡುವ ದೊಡ್ಡ ಸನ್ಮಾನವೇ ಹೊರತು ಅವಮಾನವಲ್ಲ. ದಾನವನ್ನು ಒಂದು ವೃತದಂತೆ ನೋಡಿದವರು ಹಿರಿಯರು. ನಾವು ಏನ್ನಾದರೂ ದಾನವಾಗಿ ಕೊಟ್ಟು ಏನನ್ನಾದರೂ ಸ್ವೀಕರಿಸಿದಂತೆ ನಾವು ಕನ್ಯಾದಾನ ಮಾಡುವ ಮೂಲಕ ಹೊಸ ಸಂಬಂದಗಳನ್ನು ಸ್ವೀಕರಿಸೇಕು. ಮದುವೆ ಮಾಡಿಕೊಡುವಾಗ ಹೆಣ್ಣಿಗೆ,ಮದುವೆ ಮಾಡುವ ಮನೆ ಮಂದಿಗೆ,ಹೆಣ್ಣನ್ನು ಸ್ವೀಕಾರ ಮಾಡುವ ಗಂಡಿಗೆ,ಆತನ ಮನೆ ಮಂದಿಗೆ ಒಟ್ಟು ಎರಡು ಬಾಂಧವ್ಯಗಳು ಕೂಡಿದ ಮನೆ ಮಂದಿಗೆ ಸಂತೋಷದ ವಾತಾವರಣವೇರ್ಪಡುತ್ತದೆ.ಆಕೆಗೆ ಬಾಲ್ಯದಿಂದ ಸಂಸ್ಕಾರ,ನೈತಿಕ ಶಿಕ್ಷಣ ಕೊಟ್ಟು ಆಕೆಗೆ ಯೋಗ್ಯ ವರನನ್ನು ಆಯ್ಕೆ ಮಾಡಿ ಹೊಸ ಕುಟುಂಬಕ್ಕೆ ಸೊಸೆಯಾಗಿ ಕಳುಹಿಸಿಕೊಡುವದು ಜವಾಬ್ದಾರಿಯೊಂದಿಗೆ ಸಂತೋಷದಾಯಕವೂ ಆಗಿರುತ್ತದೆ..ದಾರೆ ಎರೆದು ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಂದು ಆಕೆಯನ್ನು ಬಿಟ್ಟು ಕೈತೊಳೆದು ಬಿಟ್ಟರೆ ಅದುವರೆಗಿನ ಆಕೆಯ ಸಂಸಾರ ಬಂಧನಕ್ಕೆ ಬೆಲೆಯೇ ಇಲ್ಲವೇ?.ಸ್ವಗೋತ್ರದಲ್ಲಿ ಮದುವೆಯಾದರೆ ಮುಂದೆ ವಂಶಾವಳಿ ಬೆಳೆಯಲು ಕಷ್ಟವಾಗುತ್ತದೆ .ಆದರೆ ರಕ್ತ ಸಂಬಂದ ಏಳೇಳು ಜನ್ಮ ಕಳೆದರೂ ಬಿಟ್ಟು ಹೋಗುವಂತದ್ದಲ್ಲ.  ಹೆಚ್ಹಾಗಿ ಮದುವೆಯ ಹೊಸದರಲ್ಲಿ ಮನೆಯವರು ನಮ್ಮ ಭಾರ ಕಳೆಯಿತೆಂದು ಹೆಣ್ಣನ್ನು ಗಂಡನ ಮನೆಗೆ ಕಳಿಸಿ ಕೊಡುತ್ತಾರೆ .ಆದರೆ ಆಕೆ ಹೋಗುವುದು ಹೊಸ ಮನೆಗೆ .ಅಲ್ಲಿಗೆ ಹೊಂದಿಕೊಳ್ಳಲು ಆಕೆಗೆ ತುಂಬಾ ಕಾಲಾವಕಾಶ ಬೇಕಾಗುತ್ತದೆ .ಅಲ್ಲಿ ಎಷ್ಟೇ ಒಳ್ಳೆಯ ಅತ್ತೆ ಮಾವಂದಿರಿರಲಿ;ಗಂಡನಿರಲಿ ಆಕೆ ಪದೇ ಪದೇ ತವರನ್ನು ನೆನೆಯುತ್ತಿರುತ್ತಾಳೆ .ಆಗ ತಂದೆ ತಾಯಂದಿರು ಆಕೆಗೆ ಬಂದು ಸಮಾಧಾನ ಹೇಳಬೇಕಾಗುತ್ತದೆ .ಎಷ್ಟೇ ಸಿರಿವಂತ ಗಂಡ ಸಿಗಲಿ ಆಕೆ ಬಡ ತವರನ್ನು ಮರೆಯಲಾರಳು.ಅವಳಿಗೆ ಅತ್ತೆ  ಮಾವ ಎಷ್ಟೇ ಒಳ್ಳೆಯವರೇ ಸಿಗಲಿ  ಆಕೆ ತಂದೆ ತಾಯಿ,ಅಕ್ಕ ತಂಗಿ,ಅಣ್ಣ ತಮ್ಮಂದಿರನ್ನು ನೆನೆದು ಕೆಲವೊಮ್ಮೆ ಮಂಕಾಗಿ ಕೂರುವುದುಂಟು .ಕೆಲವು ಹೆಣ್ಣು ಮಕ್ಕಳು ತನ್ನ ನೋವನ್ನು ಇತರರಲ್ಲಿ ಹಂಚಿಕೊಂಡರೆ ಮತ್ತೆ ಕೆಲವು ಹೆಣ್ಣು ಮಕ್ಕಳು ಮನದಲ್ಲೇ  ಇಟ್ಟುಕೊಂಡು ಕೊರಗುತ್ತಿರುತ್ತಾರೆ .ಅದು ಅಪಾಯ .ಅಂತವರು ಮುಂದೆ ಮಾನಸಿಕ ಸ್ಥಿಮಿತ ಕಳಕೊಳ್ಳುವುದೂ ಇದೆ .ಹಾಗಾಗದಂತೆ ಮನೆಯವರು ಒಟ್ಟು ಕೂತು ಸಮಸ್ಯೆಯ ಪರಿಹಾರದ ಕಡೆ ಗಮನ ಹರಿಸಬೇಕು .                                                                                                                                                               ದಾನ ಎಂಬುದು ಸಂಸ್ಕೃತದ ಪದವಾದರೂ ಆ ಶಬ್ದಕ್ಕೆ ಒಂದು ಸಾಂಸ್ಕೃತಿಕ ಭವ್ಯ,ದಿವ್ಯ ಪರಂಪರೆಯಿದೆ.ಅದನ್ನು ಆಂಗ್ಲ ಬಾಷೆಯ ಗಿವಿಂಗ್ ಎವೇ ಎಂದರೆ ಸಾಗರವನ್ನು ಬಾವಿಯೊಳಗಿಳಿಸಿದಂತಾಗುತ್ತದೆ.  ಕೆಲವೊಂದು ಹೆಣ್ಣು ಮಕ್ಕಳನ್ನು ಹೊರತುಪಡಿಸಿ ಹೆಚ್ಹಿನ ಹೆಣ್ಣು ಮಕ್ಕಳು ಭಾವಜೀವಿಗಳೇ .ಇತರರ ನೋವನ್ನು ಕಂಡು  ಗಂಡಸರಿಗಿಂತ ಹೆಣ್ಣು ಮಕ್ಕಳೇ ಹೆಚ್ಚು ಕೊರಗುವುದು .ಹಿಂದಿನಂತೆ ಆಧುನಿಕ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಏಟು ಬೀಳುವುದು ಕಡಿಮೆ .ಆದರೂ ಮದುವೆಯಾದ ಹೊಸದರಲ್ಲಿ ಗಂಡ ತನ್ನಲ್ಲಿ ಅನ್ಯೋನ್ಯತೆಯಿಂದ ಇದ್ದು ಕೆಲ ದಿನ,ತಿಂಗಳಲ್ಲಿ  ಹೊರದೇಶಕ್ಕೆ ಹೋದರೆ ಏನೋ ಕಳಕೊಂಡಂತೆ ಆಕೆ ಮಂಕಾಗಿರುತ್ತಾಳೆ .ಅವಳಿಗೆ ಉದ್ಯೋಗವಿದ್ದರೆ ಅಷ್ಟು ಸಮಸ್ಯೆಯಾಗದು .ಹೋದ ಗಂಡ ದಿನಕ್ಕೆರಡು ಬಾರಿಯಾದರೂ ಫೋನಿನಲ್ಲಿ ಮಾತಾಡಿದರೆ ಸ್ವಲ್ಪ ನಿಟ್ಟುಸಿರು ಬಿಡುತ್ತಾಳೆ .ಆದರೆ ಗಂಡನ ಫೋನ್ ಬಾರದಿದ್ದರೆ ಮಂಕಾಗಿರುತ್ತಾಳೆ .ಮನೆಯಲ್ಲಿ ತಂದೆ ತಾಯಿಯ ಪ್ರೀತಿ ಪಡೆದ ಹೆಣ್ಣಿಗೆ ಅತ್ತೆ ಮನೆಯಲ್ಲಿ ಪ್ರೀತಿ ಸಿಗದಿದ್ದರೆ ಮನದಲ್ಲೇ ಕೊರಗುತ್ತಾ ಸಣ್ಣಗಾಗುತ್ತಾಳೆ .ಕೆಲವೊಮ್ಮೆ ದಾಂಪತ್ಯದಲ್ಲೂ ಹೆಣ್ಣಿಗೆ ಹೆಚ್ಚು ಅಂಜಿಕೆ ಇರುತ್ತದೆ. ಯಾಕೆಂದರೆ ಅವಳಿಗೆ ಬದುಕಲ್ಲಿ ಅದು ಹೊಸದು .ಆಕೆ ಹೊಂದಿಕೊಳ್ಳುವವರೆಗೆ ಗಂಡ ಆಕೆಯನ್ನು ಕಾಡದೆ ಕಾದು ಆಕೆಯೊಡನೆ ಸಂಸಾರ ಮಾಡಿದರೆ ಅಲ್ಲಿ ಮುಂದೆ ಪ್ರೀತಿಯ ಬಂಧ ಗಟ್ಟಿಯಾಗುತ್ತದೆ.  ಬಾಲ್ಯದಲ್ಲಿ ಅಣ್ಣ ತಮ್ಮಂದಿರೊಡನೆ  ಹಠಮಾರಿಯಾಗಿದ್ದ ಹೆಣ್ಣು  ಮದುವೆಯಾದ ನಂತರ ತುಂಬಾ ಮೃದುವಾಗುತ್ತಾಳೆ .ಯಾಕೆಂದರೆ ಆಕೆ ಎಷ್ಟೋ ವರ್ಷಗಳಿಂದ ತಂದೆ ತಾಯಿಯ ಬಳಿ ಇದ್ದವಳಲ್ಲವೇ?.                                                                                                                                                                   ಹೆಣ್ಣು ಕೆಲವೊಮ್ಮೆ ಗಂಡನನ್ನು ಅನಿವಾರ್ಯವಾಗಿ ಕಳಕೊಲ್ಲುವುದುಂಟು .ನಮ್ಮ ಗೆಳತಿ ಶಿಕ್ಷಕಿಯೊಬ್ಬರ ತಂದೆ ತಾಯಿ ಮಗಳಿಗೆ ಬರುವ ಗಂಡ ಶ್ರೀಮಂತನಾಗಬೇಕೆಂದು ಹಠ ಹಿಡಿದು ಒಬ್ಬ ಶ್ರೀಮಂತನನ್ನು ಮದುವೆ ಮಾಡಿದರು .ಆತ ಹಳದಿ ಕಾಯಿಲೆಯಿಂದ ನಾಲ್ಕೇ ತಿಂಗಳಲ್ಲಿ ಅಸು ನೀಗಿದ .ಆ ಹೆಣ್ಣು ಮಗಳು ಏನು ಮಾಡಬೇಕು ಹೇಳಿ ?.ಆಕೆ ಇಷ್ಟಪಟ್ಟ ಬಡ ಹುಡುಗ ಮದುವೆಯಾಗಿ ಚೆನ್ನಾಗಿದ್ದಾನೆ .ದುರಾದೃಷ್ಟವೆಂದರೆ ಇಬ್ಬರೂ ಒಂದೇ ಶಾಲೆಯಲ್ಲಿ ದುಡಿಯುವುದು .ಶಿಕ್ಷಕಿಯಾದ ಕಾರಣ  ತನ್ನ ನೋವನ್ನು ಶಾಲೆಯ ಮಕ್ಕಳ ಆಟಪಾಠಗಳನ್ನು ನೋಡಿ ಮರೆತರೆ ಹೆಚ್ಚಾಗಿ ರಜಾ ದಿನಗಳಲ್ಲಿ ಮಂಕಾಗಿರುತ್ತಾಳೆ .ಎಷ್ಟಾದರೂ ಹೆಣ್ಣು ಹೃದಯವಲ್ಲವೇ ?.ಬೇಕಾದಷ್ಟು ಆಸ್ಥಿಯಿದ್ದು ಗಂಡನ ಕಳಕೊಂಡ ಹೆಂಗಸಿನ  ನೋವು ಅದೆಷ್ಟು ಆಳ?.ಇಳಿವಯಸ್ಸಿನಲ್ಲಿ ಗಂಡ ಇಲ್ಲ ಎಂಬ ವ್ಯಥೆ ಒಂದೆಡೆಯಾದರೆ ,ಇದ್ದ ಮಗನೊಬ್ಬ ದೂರದಲ್ಲಿ  ಕೆಲಸಕ್ಕೆ ಹೋದರೆ ಆಕೆಯಲ್ಲಿ ಏಕಾಂಗಿತನ ಮನೆ ಮಾಡುತ್ತದೆ .ಆಕೆಗೆ ಯಾವುದರಲ್ಲೂ ಆಸಕ್ತಿ ಇರುವುದಿಲ್ಲ .ಕೆಲವೊಮ್ಮೆ ಬೇರೆಯವರನ್ನು ಕಂಡಾಗ ಹರಿ ಹಾಯುವುದೂ ಉಂಟು .                  ಹೆಣ್ಣಿಗೆ ಸ್ವಾತಂತ್ರ್ಯವಿದೆ ಎಂದು ಒಪ್ಪಬಹುದು ಆದರೆ ಎಷ್ಟರ ಮಟ್ಟಿಗೆ ಆಕೆಗೆ ಸ್ವಾತಂತ್ರ್ಯವಿದೆ?.ಇದನ್ನು ನಾವು ಗಮನಿಸಬೇಕು .ಆಫೀಸುಗಳಲ್ಲಿ  ದುಡಿಯುವ ಹೆಣ್ಣು ಅವಸರವಸರವಾಗಿ ಮನೆಗೆ ಹೋಗುತ್ತಿದ್ದರೆ ಯಾಕಮ್ಮಾ ಇಷ್ಟು ತರಾತುರಿ ಎಂದು ಕೇಳಿದರೆ ಅವ್ರು ಬಯ್ತಾರೆ ತಡವಾದ್ರೆ ಎಂಬುತ್ತರ . ಮನೆಗೆ ಬರುವುದು ತಡವಾದರೆ ಈವತ್ತು ಯಾರೊಟ್ಟಿಗೆ ಹೋಗಿದ್ದಿ ಎಂಬ ಕೆಟ್ಟ ಯೋಚನೆಯ ಮಾತು .ಇದಕ್ಕಾಗಿ ಅವಸರವಸರವಾಗಿ ಮದುವೆಯಾದ ಹೆಚ್ಚಿನ ಹೆಣ್ಣು ಮಕ್ಕಳು ಮನೆಗೆ ಅವಸರವಸರವಾಗಿ ಹೋಗುತ್ತಾರೆ.ಒಬ್ಬಾಕೆ ಶಿಕ್ಷಕಿಯ ಕಷ್ಟಗಳನ್ನು ಒಬ್ಬಾತ ಶಿಕ್ಷಕನಿಗೆ ಮಾತ್ರ ಅರ್ಥೈಸಲು ಸಾಧ್ಯ.ಹಾಗಾಗಿ ಶಿಕ್ಷಕಿ ಆದಷ್ಟು ಶಿಕ್ಷಕರನ್ನು ಬಾಳ ಸಂಗಾತಿಯಾಗಿ ಆರಿಸಿದರೆ‌ಒಳಿತು .ಹೆಣ್ಣನ್ನು ಕೇವಲವಾಗಿ ನೋಡದೆ ಆಕೆಗೂ ಒಂದು ಹೃದಯವಿದೆ ಎಂಬುದನ್ನು ಅರ್ಥೈಸಬೇಕು .ಬಂಜೆತನ ಹೆಣ್ಣಿಗೆ ಶಾಪವಲ್ಲ .ಪ್ರತಿಯೊಬ್ಬ ಹೆಣ್ಣಿಗೂ ತಾಯಾಗಬೇಕೆಂಬ ಆಸೆ ಇರುತ್ತದೆ .ಆದರೆ ಗಂಡನಲ್ಲಿ ಸಮಸ್ಯೆ ಇದ್ದು ಮಕ್ಕಳಾಗದಿದ್ದರೂ ಅದನ್ನು ಹೆಣ್ಣಿಗೆ ಆರೋಪಿಸುತ್ತಾರೆ .ಉನ್ನತ ಸ್ಥಾನದಲ್ಲಿರುವ ಮಹಿಳೆಗೆ ಅಂಗರಕ್ಷಕರಿದ್ದರೆ ಜನಸಾಮಾನ್ಯ ಮಹಿಳೆ ಧೈರ್ಯದಿಂದ ಓಡಾಡುವುದೂ ಕಷ್ಟವಾಗುತ್ತಿದೆ .ಎಳೆಯ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಹಿಂಸಿಸುವುದು ,ಕೊಲ್ಲುವುದು ,ಅಪಹರಿಸಿ ಮಾರುವುದು ದಿನ ನಿತ್ಯ ಪತ್ರಿಕರ ಓದುವಾಗ ಕಾಣ ಸಿಗುತ್ತದೆ .ಹದಿಹರೆಯದ ಹೆಣ್ಣು ಮಕ್ಕಳು ಒಂದಲ್ಲ ಒಂದು ರೀತಿಯಿಂದ ಮಾನಸಿಕ ,ಲೈಂಗಿಕ ಹಿಂಸೆ ಅನುಭವಿರುತ್ತಾರೆ .ಮುಜುಗರದಿಂದ ಕೆಲವೊಮ್ಮೆ ಮನಸ್ಸಲ್ಲೇ ಅದುಮಿಟ್ಟು ಆತ್ಮ ಹತ್ಯೆ ಮಾಡಿ ಕೊಳ್ಳುವುದೂ ಇದೆ .ಸ್ತ್ರೀವಾದಿಗಳು ಎಂದು ಹೇಳಿಕೊಳ್ಳುತ್ತಿರುವವರಿಗೆ, ಮಹಿಳಾ ಸಂಘಟನೆಗಳಿಗೆ ಗಮನಕ್ಕೆ ಬರುವುದು ಹೆಣ್ಣಿನ ಬದುಕಿನ ದುರಂತವಾದ ಕೊನೆಯ ಕ್ಷಣದಲ್ಲಿ .ಆದರೆ ಮೊದಲೇ ಆಕೆಗೆ ಜಾಗೃತಿಯ ಪಾಠ ಹೇಳಿ ಕೊಟ್ಟರೆ ಹೆಣ್ಣೊಬ್ಬಳು ಮಾನಸಿಕವಾಗಿ ಸಮಾಜಕ್ಕೆ  ತೆರೆದುಕೊಳ್ಳಬಲ್ಲಳು.                                                                                                                                                                   ಹೆಣ್ಣಿಗೆ ಆಧುನಿಕ ಸಮಾಜದಲ್ಲಿ ಸಹನೆಗಿಂತ ಬದುಕುವ  ರೀತಿ ಮುಖ್ಯ .ಆಕೆಗೆ ಯೋಗ್ಯ ರೀತಿಯ ಶಿಕ್ಷಣ ನೀಡುವುದರ ಜೊತೆಗೆ ಸಂಘಜೀವಿಯಾಗಿ ಬದುಕಲು ಕಲಿಸಬೇಕು .ತಂದೆ ತಾಯಂದಿರು ಗಂಡು ಮಕ್ಕಳಂತೆ ಹೆಣ್ಣು ಮಗಳನ್ನೂ ಪ್ರೀತಿಸಬೇಕು .ಅಣ್ಣ ತಮ್ಮಂದಿರ ಜೊತೆ ,ನೆರೆಕರೆಯ ಸಭ್ಯ ವ್ಯಕ್ತಿಗಳ ಜೊತೆ ,ಗೆಳೆಯ ,ಗೆಳತಿಯರ ಜೊತೆ ಬೆರೆಯುವಂತೆ ಅವಕಾಶ ಮಾಡಿಕೊಡಬೇಕು .ಆಗ ಆಕೆ ಮನಸ್ಸು ಬಿಚ್ಚಿ ಮಾತನಾಡಬಲ್ಲಳು .ಆಕೆಗೆ ಎಂದೂ ಮನೋದೌರ್ಬಲ್ಯ ಬರದು .ಉತ್ತಮ ಶಿಕ್ಷಣದ ಜೊತೆಗೆ ,ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಆಕೆಯ ಬಂಧುಗಳು ,ಪರಿಸರ ಒದಗಿಸಬೇಕು .ಹೆಣ್ಣೊಬ್ಬಳು ಶಕ್ತಿಯುತಳಾಗಿ ಯೋಚಿಸುತಿದ್ದರೆ ಭವ್ಯ ಭಾರತ   ಸಂಕಷ್ಟದಿಂದ ದೂರವಾದೀತು .

No comments:

Post a Comment